ಬೆಂಬಲ ಕೋರಿ ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷ ಆರೋಪ ; ಎಸಿಬಿ ತನಿಖೆ ಆರಂಭ

ಅತಂತ್ರ ವಿಧಾನಸಭೆ ರಚನೆಗೊಂಡು, ಸರ್ಕಾರ ರಚನೆ ಕಸರತ್ತು ನಡೆಯುತ್ತಿದ್ದ ವೇಳೆ ಬಿಜೆಪಿ ಮುಖಂಡರು ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷ ಒಡ್ಡಿದ್ದ ಆರೋಪ ಮತ್ತೆ ಸದ್ದು ಮಾಡುತ್ತಿದೆ. ಪ್ರಕರಣ ತನಿಖೆ ನಡೆಸುತ್ತಿರುವ ಎಸಿಬಿ, ದೂರುದಾರರಿಂದ ಧ್ವನಿಮುದ್ರಿಕೆಗಳನ್ನು ಪಡೆದು ವಿಚಾರಣೆಯನ್ನು ತೀವ್ರಗೊಳಿಸಿದೆ

ಸರ್ಕಾರ ರಚನೆಗಾಗಿ ಕರ್ನಾಟಕ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯ ಪ್ರಮುಖರು ಹಣದ ಆಮಿಷ ಒಡ್ಡಿದ್ದರು ಎನ್ನಲಾದ ಪ್ರಕರಣ ಕುರಿತು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆ ಆರಂಭಗೊಳಿಸಿದೆ. ಈ ಸಂಬಂಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತರನ್ನು ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆಯಲಾರಂಭಿಸಿದೆ.

ಬಿಜೆಪಿಯ ಜನಾರ್ದನರೆಡ್ಡಿ, ಯಡಿಯೂರಪ್ಪ, ಶ್ರೀರಾಮುಲು, ಮುರುಳೀಧರರಾವ್ ಸೇರಿ ಇತರರು ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಿ ದೂರು ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ಆಗಸ್ಟ್ ೧೩,೨೦೧೮ರಂದು ವಿಚಾರಣೆಗೆ ಹಾಜರಾಗಿ ಸಂಗ್ರಹಿಸಿದ್ದ ಧ್ವನಿ ಮುದ್ರಿಕೆಗಳನ್ನು ಹಾಜರುಪಡಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ದಿನೇಶ್‌ ಕಲ್ಲಹಳ್ಳಿ ಅವರಿಗೆ ಆಗಸ್ಟ್‌ ೭,೨೦೧೨೮ರಂದು ಎಸಿಬಿ ಡಿವೈಎಸ್ಪಿ ನೋಟೀಸ್‌ ಜಾರಿಗೊಳಿಸಿದ್ದರು. “ಹಣದ ಆಮಿಷ ನೀಡಿರುವ ಕುರಿತಂತೆ ವಿವಿಧ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಧ್ವನಿ ಮುದ್ರಿಕೆಯ ವಿಡಿಯೋಗಳಿರುವ ಸಿ ಡಿ/ಡಿವಿಡಿ ಯೊಂದಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ದೂರಿನ ವಿಚಾರಣೆ ಸಂಬಂಧ ಧ್ವನಿ ಮುದ್ರಿಕೆಯ ಮೂಲ ಯಂತ್ರವನ್ನು ಹಾಜರುಪಡಿಸಬೇಕು,” ಎಂದು ಡಿವೈಎಸ್ಪಿ ವಜೀರ್‌ ಅಲಿಖಾನ್‌ ಅವರು ಸೂಚಿಸಿದ್ದರು.

ದೂರು ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತರ ವಿಚಾರಣೆ ಮತ್ತು ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣಗೊಂಡ ನಂತರ ಆರೋಪಿತರು ಹಾಗೂ ಕರೆ ಸ್ವೀಕರಿಸಿದ್ದ ಶಾಸಕರಿಗೂ ಎಸಿಬಿ ನೋಟೀಸ್‌ ಜಾರಿಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ ಅವರನ್ನು ಬಿಜೆಪಿಗೆ ಸೆಳೆಯಲು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ನೂರಾರು ಕೋಟಿ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿದ್ದರು ಎಂದು ಸುದ್ದಿವಾಹಿನಿಗಳು ಧ್ವನಿ ಮುದ್ರಿಕೆಯನ್ನು ಪ್ರಸಾರ ಮಾಡಿದ್ದವು.

ಇದನ್ನೂ ಓದಿ : ಬಿಜೆಪಿಯಿಂದ ಜೆಡಿಎಸ್‌ ಶಾಸಕರಿಗೆ ೧೦೦ ಕೋಟಿ ರುಪಾಯಿ ಆಮಿಷ: ಎಚ್‌ಡಿಕೆ ಆರೋಪ

ಅದೇ ರೀತಿ, ತಮ್ಮೊಂದಿಗೆ ಕೈಜೋಡಿಸುವ ಶಾಸಕರಿಗೆ ತಲಾ ರೂ.150 ಕೋಟಿ ನೀಡುವುದಾಗಿ ಹೇಳುತ್ತಿದೆ. ಈ ರೀತಿ ಆಮಿಷವೊಡ್ಡುವ ಕಾರ್ಯದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಆದಿಯಾಗಿ ಬಹುತೇಕ ಬಿಜೆಪಿಗರು ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಅಧ್ಯಕ್ಷ ಅಮಿತ್ ಆವರೂ ಕೂಡ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ನ ವಿ ಎಸ್‌ ಉಗ್ರಪ್ಪ ಅವರೂ ಆರೋಪಿಸಿದ್ದರು.

ಶಾಸಕ ಬಿ ಸಿ ಪಾಟೀಲ್‌ ಅವರಿಗೆ ಬಿ ಎಸ್‌ ಯಡಿಯೂರಪ್ಪ ಅವರು, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮತ್ತು ಬಿ ಜಿ ಪುಟ್ಟಸ್ವಾಮಿ ಅವರು ಕಾಂಗ್ರಸ್‌ ಶಾಸಕ ಶಿವರಾಮ್‌ ಹೆಬ್ಬಾರ್‌ ಅವರ ಪತ್ನಿಗೂ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತಲ್ಲದೆ, ಈ ಸಂಬಂಧ ಧ್ವನಿಮುದ್ರಿಕೆಯೂ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆದರೆ ಧ್ವನಿಮುದ್ರಿಕೆಗಳೆಲ್ಲವೂ ನಕಲಿ ಎಂದು ಬಿಜೆಪಿಯೂ ಆರೋಪವನ್ನು ತಳ್ಳಿ ಹಾಕಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More