ವಿದೇಶಿ ನೆರವು ನಿರಾಕರಣೆಗೆ ಭಾವನಾತ್ಮಕ, ಧಾರ್ಮಿಕ ನೆಲೆಗಟ್ಟು ಕಾರಣವಾಗದಿರಲಿ

ಗಲ್ಫ್‌ ರಾಷ್ಟ್ರಗಳಲ್ಲಿ ನೆಲೆಸಿರುವ ಕಾರ್ಮಿಕರು ಒಂದೇ ಧರ್ಮದವರು ಆಗಿರಲು ಸಾಧ್ಯವಿಲ್ಲ ಅಲ್ಲವೆ? ಈ ವಲಸೆ ಕಾರ್ಮಿಕರಲ್ಲಿ ಹಿಂದೂಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ರಾಷ್ಟ್ರಗಳಿಂದ ನೆರವು ಪಡೆದ ಮಾತ್ರಕ್ಕೆ ಭಾರತ ಧಾರ್ಮಿಕವಾಗಿ ದುರ್ಬಲವಾಗುತ್ತದೆ ಎನ್ನುವುದು ಅತೀ ರೋಚಕ ಆಲೋಚನೆ

ಕೇರಳ ಪ್ರವಾಹ ಪೀಡಿತರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಬಹುತೇಕ ಮುಗಿಯುತ್ತಾ ಬಂದಿವೆ. ಇದೀಗ ರಾಜ್ಯ ಸರ್ಕಾರ ನಿರಾಶ್ರಿತರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಮತ್ತು ಮಳೆ ಮತ್ತು ಪ್ರವಾಹದಿಂದ ನಾಶವಾದ ಪ್ರದೇಶಗಳ ಮೂಲ ಸೌಕರ್ಯವನ್ನು ಮರು ನಿರ್ಮಿಸುವ ಕಡೆಗೆ ಗಮನಕೊಟ್ಟಿದೆ. ಕೇಂದ್ರ ಸಚಿವ ಕೆ ಜೆ ಅಲ್ಫೋನ್ಸ್ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಗಳ ಪ್ರಕಾರ ಕೇರಳ ಸರ್ಕಾರ ಒಟ್ಟಾರೆ ಮರುನಿರ್ಮಾಣದ ವೆಚ್ಚವನ್ನು ರು. ೪೦,೦೦೦ ಕೋಟಿಗಳೆಂದು ಅಂದಾಜು ಮಾಡಿದೆ. ಇದೀಗ ಕೇರಳ ಸರ್ಕಾರ, ಕೇಂದ್ರಕ್ಕೆ ರು. ೨೦,೦೦೦ ಕೋಟಿ ನೆರವಿನ ಬೇಡಿಕೆ ಇಟ್ಟಿದೆ. ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರ ರು. ೬೦೦ ಕೋಟಿ ನೆರವನ್ನು ಘೋಷಿಸಿದೆ. ಹಲವು ರಾಜ್ಯಗಳು ತಮ್ಮದೇ ಅಂದಾಜಿನ ಮೇಲೆ ಕೆಲವು ಕೋಟಿ ರು.ಗಳ ನೆರವನ್ನು ಘೋಷಿಸಿವೆ. ಆದರೆ ಒಟ್ಟಾರೆಯಾಗಿ ಈ ಮೊತ್ತ ಒಂದು ಸಾವಿರ ಕೋಟಿ ರುಪಾಯಿ ಮೀರುವುದಿಲ್ಲ.

ಈ ನಡುವೆ ಕೇರಳಕ್ಕೆ ಕೆಲವು ಗಲ್ಫ್ ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ನಾಯಕರು ನೆರವನ್ನು ಘೋಷಿಸಿರುವುದು ಸದ್ಯ ವಿವಾದದ ವಿಷಯವಾಗಿದೆ. ವಿದೇಶಗಳಿಂದ ಹಣಕಾಸು ನೆರವು ಪಡೆಯಲು ರಾಜ್ಯ ಸರ್ಕಾರ ಬಹಳ ಉತ್ಸುಕವಾಗಿದೆ ಮತ್ತು ಮರುನಿರ್ಮಾಣದ ಹಿನ್ನೆಲೆಯಲ್ಲಿ ಇದು ಅನಿವಾರ್ಯವೂ ಹೌದು. ಹೀಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಕೇರಳಕ್ಕೆ ಘೋಷಿಸಿದ ರು.೭೦೦ ಕೋಟಿ ಹಣಕಾಸು ನೆರವನ್ನು ಸ್ವೀಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆದರೆ ಯುಎಇ ಹಣಕಾಸು ನೆರವು ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳಲ್ಲಿ ವ್ಯತಿರಿಕ್ತವಾದ ಸುದ್ದಿಗಳು ಪ್ರಕಟವಾಗತೊಡಗಿದವು. “ಕೇಂದ್ರ ಸರ್ಕಾರ ವಿದೇಶಿ ನೆರವನ್ನು ಬಯಸುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ” ಎನ್ನುವಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಚಿವರು ಅಥವಾ ಬಿಜೆಪಿ ವಕ್ತಾರರು ಅಧಿಕೃತವಾಗಿ ಯಾವುದೇ ಘೋಷಣೆಯನ್ನು ಮಾಡಲಿಲ್ಲ. ಆದರೆ ಬಹುತೇಕ ಎಲ್ಲ ರಾಷ್ಟ್ರೀಯ ಮಾಧ್ಯಮಗಳು ಮತ್ತು ಸ್ಥಳೀಯ ಮಾಧ್ಯಮಗಳು “ವಿದೇಶಿ ನೆರವು ಪಡೆಯುವುದಿಲ್ಲ” ಎನ್ನುವ ರೀತಿಯ ಸುದ್ದಿಗಳನ್ನು ಪ್ರಕಟಿಸಿದವು. ಒಟ್ಟಾರೆಯಾಗಿ ಹೇಳಬೇಕೆಂದರೆ ಕೇಂದ್ರ ಸರ್ಕಾರ ಮಾಧ್ಯಮಗಳ ಮೂಲಕ ವಾತಾವರಣ ಹೇಗಿದೆ ಎನ್ನುವ ಪರೀಕ್ಷೆ ನಡೆಸಿದೆಯೇ ಎನ್ನುವ ಅನುಮಾನ ಮೂಡುವಂತಾಗಿದೆ.

ಕೇಂದ್ರದ ವಕ್ತಾರರು ಅಧಿಕೃತವಾಗಿ ಈ ಬಗ್ಗೆ ಯಾವುದೇ ಚರ್ಚೆ ಮಾಡದೇ, ಪರಿಸ್ಥಿತಿಯನ್ನು ವಿಶ್ಲೇಷಿಸಲು ಮಾಧ್ಯಮಗಳ ಮೂಲಕ ಗಾಸಿಪ್ ಹರಡಿವೆ. ಇದೇ ಕಾರಣದಿಂದ ಮಾಧ್ಯಮದಲ್ಲಿ ಪ್ರಕಟವಾದ ಪ್ರತೀ “ಕೇಂದ್ರ ಸರ್ಕಾರ ವಿದೇಶಿ ನೆರವು ಪಡೆಯಲು ಬಯಸುತ್ತಿಲ್ಲ” ಎನ್ನುವ ಪ್ರತಿ ಸುದ್ದಿಯಲ್ಲೂ “ಮೂಲಗಳು ತಿಳಿಸಿವೆ” ಎಂದಷ್ಟೇ ಮಾಹಿತಿಯಿದೆ. ಆದರೆ ಆ ಮೂಲಗಳು ಯಾವುವು ಎನ್ನುವುದನ್ನು ಊಹಿಸುವುದು ಕಷ್ಟವೇನಲ್ಲ.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅತಿಯಾಗಿ ಹಾನಿ ಸಂಭವಿಸಿದಾಗ ಮರುನಿರ್ಮಾಣಕ್ಕಾಗಿ ವಿದೇಶಿ ನೆರವು ಪಡೆಯುವುದು ಹೊಸತೇನಲ್ಲ. ೧೯೯೩ರ ಲಾಥೂರ್ ಭೂಕಂಪದ ಸಂದರ್ಭದಲ್ಲಿ ವಿದೇಶಿ ನೆರವನ್ನು ಪಡೆದುಕೊಳ್ಳಲಾಗಿತ್ತು. ಆದರೆ ಸುನಾಮಿ ಸಂದರ್ಭದಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿದೇಶಿ ನೆರವು ಬೇಡ ಎಂದು ನಿರಾಕರಿಸಿದ್ದರು. ಇದೀಗ ಕೆಲವು ವರ್ಷಗಳಿಂದ ಅದೇ ನೀತಿಯನ್ನು ಮುಂದುವರಿಸಲಾಗಿದೆ. ವಾಸ್ತವದಲ್ಲಿ ರಕ್ಷಣೆಯ ವಿಚಾರದಲ್ಲಿ ಅತೀ ಸೂಕ್ಷ್ಮ ಪ್ರದೇಶಗಳಾಗಿರುವ ಅಂಡಮಾನ್ ನಿಕೋಬಾರ್ ದ್ವೀಪಗಳಂತಹ ಪ್ರದೇಶದಲ್ಲಿ ವಿದೇಶಿ ಸಮೂಹ ಪ್ರವೇಶಿಸಲು ಅವಕಾಶ ನೀಡಬಾರದು ಎನ್ನುವುದೂ ಈ ನಿರ್ಧಾರದ ಹಿಂದೆ ಇದ್ದ ಕಾರಣವಾಗಿತ್ತು. ಹಾಗೆಯೇ ರಾಷ್ಟ್ರೀಯ ಹೆಮ್ಮೆಯೂ ಮತ್ತೊಂದು ಕಾರಣ. ಆದರೆ ಆ ವರ್ಷ ಸುನಾಮಿಯಲ್ಲಿ ಹಾನಿಗೀಡಾದ ಇತರ ದೇಶಗಳು ವಿದೇಶಿ ನೆರವನ್ನು ಪಡೆದುಕೊಂಡಿದ್ದವು. ವಿದೇಶಿ ನೆರವು ಪಡೆದುಕೊಂಡಾದ ಅದರ ಜೊತೆಗೇ ಬರುವ ವಿದೇಶಿಯರು ಹಲವು ಸಮಸ್ಯೆಗಳನ್ನು ಒಡ್ಡಿದ್ದು ಮಹಾರಾಷ್ಟ್ರದ ಗ್ರಾಮಗಳು ಮತ್ತು ನೇಪಾಲದ ಭೂಕಂಪ ಸಂದರ್ಭದಲ್ಲಿ ಗಮನಿಸಲಾಗಿರುವುದು ನಿಜ. ಆದರೆ ಎಲ್ಲಾ ದೇಶಗಳೂ ಅಂತಹ ಸಮಸ್ಯೆಗಳನ್ನು ಎದುರಿಸಿವೆ ಎಂದು ಹೇಳಲಾಗದು.

ಕೇರಳ ಸರ್ಕಾರದ ಸಚಿವರು ಮತ್ತು ಶಾಸಕರು ಈಗಾಗಲೇ ಕೇಂದ್ರ ಸರ್ಕಾರ ವಿದೇಶಿ ನೆರವನ್ನು ನಿರಾಕರಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ವಿದೇಶಿ ನೆರವು ಬೇಕು ಎಂದು ಹೇಳಿದ್ದಾರೆ. ಹಾಗೆಯೇ ಕೇರಳದ ವಿಪಕ್ಷ ನಾಯಕರೂ ವಿದೇಶಿ ನೆರವು ಬಯಸಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಏಕಮುಖವಾಗಿ ನಿರ್ಧಾರ ಕೈಗೊಳ್ಳುವ ಬದಲಾಗಿ ಕೇರಳ ಸರ್ಕಾರದ ಜೊತೆಗೆ ಚರ್ಚಿಸಿ ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವುದು ಉತ್ತಮ ಕಾರ್ಯ ಯೋಜನೆಯಾಗಲಿದೆ.

ಹಾಗೆ ನೋಡಿದರೆ ಯುಎಇ ಭಾರತಕ್ಕೆ ಹಣಕಾಸು ನೆರವು ನೀಡುವುದನ್ನು ವಿರೋಧಿಸಲು ವಿಶೇಷ ಕಾರಣಗಳೂ ಇಲ್ಲ ಎನ್ನಬಹುದು. ಯುಎಇ ದಶಕಗಳಿಂದ ಭಾರತಕ್ಕೆ ಅತೀ ಆಪ್ತ ಸ್ನೇಹಿತ. ಭಾರತ ಇಂಧನ ಸಮಸ್ಯೆ ಎದುರಿಸುತ್ತಿದ್ದಾಗ ನೆರವಾಗಿದ್ದು ಇರಾನ್, ಕತಾರ್ ಮೊದಲಾದ ಇಸ್ಲಾಮಿಕ್ ದೇಶಗಳೇ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮುಖ್ಯವಾಗಿ ಯುಎಇಯಲ್ಲಿ ನೆಲೆಸಿರುವ ವಿದೇಶಿ ಕಾರ್ಮಿಕರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು ಭಾರತೀಯರೇ. ಮುಖ್ಯವಾಗಿ ಕೇರಳಿಗರು ಯುಎಇಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಕಾರಣ ಸಹಜವಾಗಿ ಯುಎಇ ಹಣಕಾಸು ನೆರವಿಗೆ ಮುಂದೆ ಬಂದಿದೆ.

ಇಸ್ಲಾಮಿಕ್ ದೇಶಗಳು, ಕ್ರಿಶ್ಚಿಯನ್ ದೇಶಗಳು ಹಣಕಾಸು ನೆರವು ನೀಡುವ ನೆಪದಲ್ಲಿ ರಾಷ್ಟ್ರದಲ್ಲಿ ಧಾರ್ಮಿಕ ಪರಿವರ್ತನೆಗಳು ಮತ್ತು ಮತಾಂತರದಂತಹ ಕೆಲಸಗಳನ್ನೂ ಮಾಡುತ್ತವೆ ಎಂದು ಸಂಘಪರಿವಾರ ಮತ್ತು ಬಿಜೆಪಿಯ ಪ್ರಮುಖ ನಾಯಕರು ಹಾಗೂ ಬೆಂಬಲಿಗರು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರ ವಿದೇಶಿ ನೆರವು ಸ್ವೀಕರಿಸದೆ ಇರಲು ಇದೇ ಕಾರಣವಾಗಿದ್ದರೆ ಯುಎಇಯಂತಹ ರಾಷ್ಟ್ರಗಳಲ್ಲಿ ಭಾರತೀಯರ ಸಂಖ್ಯೆಯೇ ಅತ್ಯಧಿಕವಿದೆ ಎನ್ನುವುದನ್ನು ನಾವು ಮರೆಯಬಾರದು. ಆದರೆ ಪ್ರವಾಹದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಧರ್ಮವನ್ನು ಮಧ್ಯೆ ತರುವುದು ಸರಿಯೆ?

ಇದನ್ನೂ ಓದಿ : ಗುಡ್ ನ್ಯೂಸ್ | ರಾಜಕೀಯಕ್ಕಿಂತ ರಾಜ್ಯದ ಜನ ಮುಖ್ಯವೆಂದು ಸಾರಿದ ಕೇರಳ ಜನನಾಯಕರು

ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ೬ ದಶಲಕ್ಷ ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಯುಎಇಯ ಒಟ್ಟು ಜನಸಂಖ್ಯೆಯಲ್ಲಿ ಶೇ. ೨೭ರಷ್ಟು ಭಾರತೀಯರಿದ್ದಾರೆ. ಗಲ್ಫ್ ದೇಶದಲ್ಲಿರುವ ಭಾರತೀಯ ವಲಸೆ ಕಾರ್ಮಿಕರಲ್ಲಿ ಶೇ. ೪೦ರಷ್ಟು ಕೇರಳಿಗರು ಎಂದು ದಾಖಲೆಗಳೇ ಹೇಳುತ್ತವೆ. ಯುಎಇಯಲ್ಲಿಯೇ ಸುಮಾರು ೨೨ ಭಾರತೀಯ ಕಾರ್ಮಿಕರಿದ್ದಾರೆ. ಕೇರಳ ಮಾತ್ರವಲ್ಲ, ಭಾರತದ ಎಲ್ಲಾ ರಾಜ್ಯಗಳಿಂದಲೂ ಅರಬ್ ದೇಶಗಳಿಗೆ ಕಾರ್ಮಿಕರು ವಲಸೆ ಹೋಗುತ್ತಾರೆ. ಅಂಕಿ ಅಂಶಗಳ ಪ್ರಕಾರ ತೆಲಂಗಾಣದಿಂದ ಪ್ರತೀ ವರ್ಷ ಸುಮಾರು ೧೦,೦೦೦ ಮಂದಿ ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗುತ್ತಾರೆ. ತಮಿಳುನಾಡು ಮತ್ತು ಒಡಿಶಾಗಳಿಂದಲೂ ಗಲ್ಫ್ ರಾಷ್ಟ್ರಗಳಿಗೆ ಪ್ರತೀ ವರ್ಷ ಸಾವಿರಾರು ಮಂದಿ ವಲಸೆ ಹೋಗುತ್ತಾರೆ.

ಸುಮಾರು ೩ ಲಕ್ಷಗಳಷ್ಟು ಭಾರತೀಯ ಕಾರ್ಮಿಕರು ಗಲ್ಫ್ ದೇಶಗಳಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಕೆಲಸ ಮಾಡುತ್ತಿದ್ದಾರೆ ಎಂದೂ ಅಂಕಿ ಅಂಶಗಳು ಹೇಳುತ್ತವೆ. ೧೯೬೦ರಿಂದಲೇ ಭಾರತೀಯರು ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಿಂದ ಬಹಳಷ್ಟು ಮಂದಿ ಅರಬ್ ದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ೧೯೬೦ರಲ್ಲಿಯೇ ಯುಎಇನಲ್ಲಿ ಮೊದಲ ಹಿಂದೂ ದೇಗುಲ ಮತ್ತು ಮೊದಲ ಭಾರತೀಯ ಶಾಲೆಯೂ ವಲಸಿಗ ಕುಟುಂಬಗಳಿಗಾಗಿ ನಿರ್ಮಾಣವಾಗಿತ್ತು. ನಂತರದ ವರ್ಷಗಳಲ್ಲಿ ಯುಎಇಗೆ ತೆರಳುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ.

ಬಹರೇನ್, ಕುವೈತ್, ಕತಾರ್, ಸೌದಿ ಅರೆಬಿಯ, ಯುಎಇ ಮತ್ತು ಓಮನ್ ರಾಷ್ಟ್ರಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯ ಮೂಲದ ಕಾರ್ಮಿಕರು ಮುಸ್ಲಿಮರೇ ಆಗಿರಲು ಸಾಧ್ಯವಿಲ್ಲ. ಈ ವಲಸೆ ಕಾರ್ಮಿಕರಲ್ಲಿ ಹಿಂದೂಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ರಾಷ್ಟ್ರಗಳಿಂದ ನೆರವು ಪಡೆದ ಮಾತ್ರಕ್ಕೆ ಭಾರತ ದುರ್ಬಲವೂ, ಅಶಕ್ತವೂ ಆಗುತ್ತದೆ ಎನ್ನುವ ಭಾವನೆಯಲ್ಲಿ ಹುರುಳಿಲ್ಲ. ಮುಖ್ಯವಾಗಿ ಬಿಜೆಪಿಯ ಪ್ರಯೋಗಶಾಲೆ ಎಂದೇ ಕರೆಸಿಕೊಳ್ಳುವ ಮಂಗಳೂರಿನಿಂದಲೇ ಗಲ್ಫ್ ರಾಷ್ಟ್ರಗಳಿಗೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ಉದ್ಯೋಗ ಅರಸಿ ಹೋಗಿದ್ದಾರೆ. ಗಲ್ಫ್ನಲ್ಲಿ ಉದ್ಯೋಗದಲ್ಲಿರುವ ಮಂಗಳೂರಿಗರಲ್ಲಿ ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಮೊದಲಾಗಿ ಎಲ್ಲಾ ಧರ್ಮದ ಜನರೂ ಸೇರಿದ್ದಾರೆ. ಹೀಗಾಗಿ ಕೇವಲ ಧರ್ಮದ ಕಾರಣಕ್ಕೆ ಅಥವಾ ರಾಷ್ಟ್ರೀಯ ಹೆಮ್ಮೆಯ ಕಾರಣಕ್ಕೆ ವಿದೇಶಿ ನೆರವನ್ನು ಸ್ವೀಕರಿಸದೆ ಇರುವುದು ಸೂಕ್ತ ನಿರ್ಧಾರವಾಗಲಾರದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More