ಮಡಿಕೇರಿ-ಜೋಡುಪಾಲ ‘ದುರ್ಗಮ’ ಹೆದ್ದಾರಿ ನಡಿಗೆಯಲ್ಲಿ ಕಂಡ ಕಾಡುವ ದೃಶ್ಯಗಳು

ಈಗ ಶಿರಾಡಿ ಮತ್ತು ಸಂಪಾಜೆ ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ಮೂಲಕವೇ ಬೆಂಗಳೂರು-ಮಂಗಳೂರು ಸಂಚಾರ ನಡೆದಿದೆ. ಸಂಪಾಜೆ ಘಾಟಿ ಸರಿಯಾಗಲು ಕನಿಷ್ಟ ವರ್ಷವಾದರೂ ಬೇಕೆನ್ನುವ ಜನ, ಸದ್ಯ ಸುಳ್ಯ ಕಡೆಯಿಂದ ಕೊಡಗನ್ನು ಸಂಪರ್ಕಿಸುವ ಕಚ್ಚಾ ರಸ್ತೆಗಳನ್ನೇ ಆಶ್ರಯಿಸಿದ್ದಾರೆ

ಐದಾರು ದಿನಗಳಿಂದ ಧಾರಾಕಾರ ಅಪ್ಪಳಿಸಿ, ಕೊಡಗಿನ ಚಹರೆಯ ಮೇಲೆ ಸದ್ಯಕ್ಕೆ ಮಾಯಲಾರದಂತಹ ಗಾಯಗಳನ್ನು ಮೂಡಿಸಿರುವ ಮಳೆ, ಗಾಳಿ ಬುಧವಾರ ಬೆಳಗ್ಗೆ ತುಸು ಬಿಡುವು ನೀಡಿತ್ತು. ಕಳೆದ ಶುಕ್ರವಾರ ಹಲವೆಡೆ ಸಂಭವಿಸಿದ ಭಾರೀ ಭೂಕುಸಿತಗಳಿಂದ ಮನೆ ತೊರೆದು ನಿರಾಶ್ರಿತರ ಶಿಬಿರ ಮತ್ತು ಸಂಬಂಧಿಕರ ಮನೆ ಸೇರಿದ್ದ ಜನರು ತಮ್ಮ ಮನೆ,ಜಮೀನು ಮತ್ತು ಸಾಕುಪ್ರಾಣಿಗಳ ಸ್ಥಿತಿ ಏನಾಗಿದೆ ಎನ್ನುವುದನ್ನರಿಯಲು ಮಳೆಯ ಬಿಡುವಿನಲ್ಲಿ ಭಯದ ನಡುವೆಯೇ ಮನೆಗಳತ್ತ ದೌಡಾಯಿಸುತ್ತಿದ್ದರು. ಮನೆ, ಜಮೀನನ್ನು ನೋಡಿ, ಪ್ರಾಣಿಗಳಿಗೆ ಊಟ ಹಾಕಿ ಸಂಜೆಯೊಳಗೆ ನಿರಾಶ್ರಿತರ ಶಿಬಿರ ಅಥವಾ ಸಂಬಂಧಿಕರ ಮನೆ ಸೇರಿಕೊಳ್ಳುವ ಧಾವಂತ ಹಲವರದ್ದು. ಕೆಲವರು,“ಮುಂದೆ ಏನಾದರಾಗಲಿ ಇಲ್ಲೇ ಉಳಿಯುತ್ತೇವೆ,’’ಎನ್ನುವ ನಿಶ್ಚಯದೊಂದಿಗೇ ಮನೆಯ ದಾರಿ ಹಿಡಿದಿದ್ದರು. ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರೂ, ಸೊಪ್ಪುಹಾಕದೆ ಊರಿನಲ್ಲೇ ಉಳಿದವರೂ ಇದ್ದರು. ಮಡಿಕೇರಿಯಿಂದ ಮೇಕೇರಿ-ತಾಳತ್ತಮನೆ-ಕಾಟಕೇರಿ-ಮದೆನಾಡು -೨ನೇ ಮೊಣ್ಣಂಗೇರಿ - ಜೋಡಿಪಾಲ ದುರ್ಗಮ ಮಾರ್ಗದಲ್ಲಿ ಸಾಗಿದ “ದಿ ಸ್ಟೇಟ್’’ ಗೆ ಮಳೆ ವಿಕೋಪ ಸೃಷ್ಟಿತ ದುರಂತಗಳ ಜೊತೆಗೆ ಇಂಥ ಹಲವು ದೃಶ್ಯಗಳು ಕಾಣಿಸಿದವು.

ದುರ್ಗಮ “ಹೆದ್ದಾರಿ’’ಯಲ್ಲಿ ಕಂಡ ನೋಟಗಳು

  • ಮಡಿಕೇರಿಯಿಂದ ಜೋಡುಪಾಲಕ್ಕೆ ಹೆಚ್ಚೆಂದರೆ ಅರ್ಧ ತಾಸಿನ ದಾರಿ. ಆದರೆ, ಶುಕ್ರವಾರದಿಂದ ಈಚೆಗೆ ಸರಣಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಈ ಹೆದ್ದಾರಿ “ದುರ್ಗಮ ಮಾರ್ಗ’’ವಾಗಿ ರೂಪಾಂತರಗೊಂಡಿದೆ. ಮಡಿಕೇರಿಯಿಂದ ಮುಂಗಳೂರು ಮಾರ್ಗದಲ್ಲಿ ನಾಲ್ಕೈದು ಕಿಮೀ ಸಾಗುತ್ತಿದ್ದಂತೆ ರಸ್ತೆ ಪೂರ್ತಿ ಕುಸಿದು ಹೋಗಿದೆ. ವಾಹನಗಳಲ್ಲ, ಜನರೂ ಅಲ್ಲಿ ಹೆಜ್ಜೆ ಊರಲಾಗದ ಸ್ಥಿತಿ.
  • ವೀರಾಜಪೇಟೆ ಮಾರ್ಗದಲ್ಲಿ ಸಾಗಿ, ಮೇಕೇರಿ ಬಳಿ ಬಲಕ್ಕೆ ಹೊರಳಿ ಮತ್ತೆ ಮಂಗಳೂರು ಹೆದ್ದಾರಿಯನ್ನು ಸೇರಿಕೊಂಡರೆ ಅಲ್ಲಿಂದ ಮದೆನಾಡುವರೆಗೆ ವಾಹನ ಸಂಚಾರ ಸಾಧ್ಯವಿದೆ. ಆದರೆ, ಅಲ್ಲಿಂದ ನಾಲ್ಕೈದು ಕಿಮೀ ದೂರದ ಜೋಡು ಪಾಲದ ವರೆಗೆ ಹತ್ತಾರು ಕಡೆ ಬೆಟ್ಟಗಳು ಹೆದ್ದಾರಿಯ ಮೇಲೆ ಕುಸಿದಿವೆ. ಎರಡನೇ ಮೊಣ್ಣಂಗೇರಿ ದಾಟಿದ ಬಳಿಕ ಮತ್ತೆರಡು ಕಡೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
  • ಇದರಿಂದಾಗಿ ಮಡಿಕೇರಿಯಿಂದ ಹತ್ತು ಹನ್ನೆರಡು ಕಿಮೀ ದೂರದಲ್ಲಿರುವ ತಮ್ಮ ಊರು,ಮನೆಗಳನ್ನು ಸೇರಲು ಜನ ಹರಸಾಹಸ ಪಡಬೇಕು. ನೆಲೆ ತಪ್ಪಿ ಬಿದ್ದಿರುವ ಬೃಹತ್‌ ಮರಗಳು, ಕುಸಿದ ಮಣ್ಣು ಸೃಷ್ಟಿಸಿರುವ ಕೆಸರು ಮತ್ತು ಜಾರುವಿಕೆ. ಮಾತ್ರವಲ್ಲ, ಮಾರ್ಗದುದ್ದಕ್ಕೂ ಅಲ್ಲಲ್ಲಿ ಕುಸಿದ ಬೆಟ್ಟಗಳು; ನೆಲಸಮವಾದ ತೋಟ, ಜಮೀನುಗಳು, ಎಲ್ಲವನ್ನೂ ಕೊಚ್ಚಿಕೊಂಡು ಹೋಗಿರುವ ಹೊಳೆ ಈಗಲೂ “ಅಪಾಯ’’ದ ಆತಂಕವನ್ನು ಒಡ್ಡುತ್ತಲೇ ಇವೆ.
  • ಮದೆಯಲ್ಲಿ ನದಿ ಪಕ್ಕದಲ್ಲೇ ಇದ್ದ “ಮದೆ ರಿವರ್‌ ಸೈಡ್ ರೆಸಾರ್ಟ್’’ ಮಾಯವಾಗಿದ್ದು, ಮಣ್ಣಿನಡಿ ಸಿಲುಕಿದ್ದ ಕಟ್ಟಡ ಮತ್ತು ಎರಡು ಜೀಪ್‌ಗಳ ಅವಶೇಷಗಳು ಈಗೀಗ ಗೋಚರಿಸುತ್ತಿವೆ. ದಾರಿಯುದ್ದಕ್ಕೂ ಹಲವು ತೋಟ, ಮನೆಗಳು ವರುಣ ಪ್ರತಾಪಕ್ಕೆ ಸಿಲುಕಿವೆ. “ಅಲ್ಲಿ ನೋಡಿ ಹತ್ತು ಎಕರೆ ತೋಟ ಕಾಣದಂತಾಗಿದೆ. ಅಲ್ಲೊಂದು ಮನೆ ಇತ್ತು; ಈಗ ಅದರ ಚಹರೆಯೂ ಇಲ್ಲ; ಈ ಮನೆಯಲ್ಲಿದ್ದವರನ್ನು ಕೊನೆಯ ಕ್ಷಣದಲ್ಲಿ ರಕ್ಷಿಸಿ, ನಿರಾಶ್ರಿತರ ಶಿಬಿರಕ್ಕೆ ಸೇರಿಸಲಾಗಿದೆ,’’ಹೀಗೆ ಎದುರು ಸಿಕ್ಕವರೆಲ್ಲ ಒಂದೊಂದು ಭೀಕರ “ದೃಶ್ಯ’’ಗಳತ್ತ ಬೆರಳು ಮಾಡುತ್ತಾರೆ. ಬೃಹತ್ ಬೆಟ್ಟಗಳು ಜರಿದು ಹಳ್ಳ ಸೇರಿದ್ದು, ಹಳ್ಳದ ಹರಿವು ಪಥ ಬದಲಿಸಿದ್ದು ಉದ್ದಕ್ಕೂ ಕಾಣುತ್ತಿದೆ.
  • ಇತ್ತ ಮಡಿಕೇರಿ ಮತ್ತು ಮದೆನಾಡು ಬಳಿ ರಸ್ತೆಗೆ ಬಿದ್ದ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಎಲ್ಲವೂ ಸರಿಯಾಗಿ,ಸಂಚಾರ ಸಹಜ ಸ್ಥಿತಿಗೆ ಬರಲು ಹಲವು ತಿಂಗಳು ಅಥವಾ ವರ್ಷವೇ ಬೇಕಾಗಬಹುದು ಎಂದು ಸ್ಥಳೀಯರೇ ಅಂದಾಜಿಸುತ್ತಿದ್ದಾರೆ. ಮಳೆ ಮತ್ತೂ ಮುಂದುವರಿದರೆ ಧರೆ ಕುಸಿತ ಹೆಚ್ಚುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. “ಇಂಥ ಸ್ಥಿತಿಯಲ್ಲಿ ಈ ಮಾರ್ಗದಲ್ಲಿ ನಡೆದು ಸಾಗುವುದು ಹೆಚ್ಚು ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಸುತ್ತಿದ್ದರೂ, ಮನೆ ಮತ್ತು ಸಾಕು ಪ್ರಾಣಿಗಳೆಡೆಗಿನ ಜನರ ಸೆಳೆತವೇ ಮೇಲುಗೈ ಪಡೆಯುತ್ತಿದೆ.

ಸಾಕು ಪ್ರಾಣಿಗಳಿಗೆ ಊಟ ಹಾಕಲು ಮನೆಗಳತ್ತ ದೌಡು

ಮಡಿಕೇರಿಯ ಚೌಡೇಶ್ವರಿ ದೇವಾಲಯದ ನಿರಾಶ್ರಿತರ ಶಿಬಿರದಲ್ಲಿ ಕುಟುಂಬ ಸಮೇತ ಆಶ್ರಯ ಪಡೆದಿರುವ ಗೋಪಾಲ ಪೈಕೇರಾ ಬುಧವಾರ ಬೆಳಗ್ಗೆ ೧೧ರ ಸುಮಾರಿಗೆ ತಮ್ಮೂರು ಕಾಟಕೇರಿಗೆ ಆಟೋದಲ್ಲಿ ಬಂದಿಳಿದರು. ಇಲ್ಲಿಂದ ಅವರ ಮನೆಗೆ ಮೂರ್ನಾಲ್ಕು ಕಿಮೀ ನಡೆದು ಹೋಗಬೇಕಿತ್ತು. ಈ ಭಾಗದಲ್ಲಿ ಹಲವೆಡೆ ಭೂಕುಸಿತ ಸಂಭವಿಸಿದ್ದರಿಂದ ಸುತ್ತಲಿನ ಎಲ್ಲರನ್ನೂ ಮನೆ ಖಾಲಿ ಮಾಡಿಸಿ; ನಿರಾಶ್ರಿತರ ಶಿಬಿರ ಮತ್ತು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಪಕ್ಕದ ಬೆಟ್ಟ ಕುಸಿದಿದ್ದರಿಂದ ಗೋಪಾಲ ಅವರ ಬತ್ತದ ಗದ್ದೆಗಳು ಮಣ್ಣುಪಾಲಾಗಿವೆ. ಗೋಪಾಲರ ಮನೆ ಪಕ್ಕದಲ್ಲೇ ಇರುವ ಅಚ್ಚಲ್‌ ಪಾಡಿ ಕುಟುಂಬದ ಮೂವರು (ವೆಂಕಟರಮಣ, ವಿನಯ್, ಪಾವನ) ಕುಸಿದ ಬೆಟ್ಟದಡಿ ಸಿಲುಕಿ ಮೃತಪಟ್ಟಿದ್ದು, ಬುಧವಾರವಷ್ಟೆ ಪಾವನಾರ ಶವ ಪತ್ತೆಯಾಗಿದೆ. ಈ ಪರಿಸರದಲ್ಲಿ ಇನ್ನೂ ಆತಂಕ ಇದ್ದಾಗಲೂ ೬೪ ವಯಸ್ಸಿನ ಗೋಪಾಲ್‌ ಜಾನುವಾರುಗಳಿಗೆ ಮೇವು ಮತ್ತು ನಾಯಿಗಳಿಗೆ ಊಟ ಹಾಕಲೆಂದು ಊರಿಗೆ ದೌಡಾಯಿಸಿದ್ದರು. ಇದೇ ವೇಳೆ ರಕ್ಷಣಾ ಪಡೆ ಮತ್ತು ಊರಿನವರು ಸೇರಿ ಪಾವನಾ ಶವವನ್ನು ಪತ್ತೆ ಹಚ್ಚಿದರು. ದುರಂತದ ಬಳಿಕ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ ವೆಂಕಟರಮಣರ ಪತ್ನಿ ಮತ್ತು ಕುಟುಂಬ ಸದಸ್ಯರು ಇದೇ ವೇಳೆ ಊರಿಗೆ ಮರಳಿದರು. “ನಾಳೆ ತಿಥಿ ಕಾರ್ಯವಿದೆ. ನಂತರ ಅಲ್ಲೇ ಉಳಿಯಬೇಕೋ, ಬೇರೆಡೆ ಹೋಗಬೇಕೋ ನಿರ್ಧರಿಸುತ್ತೇವೆ,’’ಎಂದು ಸಂಬಂಧಿಯೊಬ್ಬರು ಹೇಳಿದರು.

ಮೊಣ್ಣಂಗೇರಿ ಮತ್ತು ಜೋಡುಪಾಲದ ಮಧ್ಯೆ ತೋಟವನ್ನು ಹೊಂದಿರುವ ಅಬೂಬಕರ್‌ ಬಾಷಾ (೮೦) ಮತ್ತು ಅವರ ಮಗ ಇಬ್ರಾಹಿಂ ಕೆಸರು, ಮಣ್ಣು,ಬಂಡೆ ಮತ್ತು ಮರದ ರಾಶಿಗಳನ್ನು ದಾಟಿ ಊರಿನತ್ತ ಹೊರಟಿದ್ದರು. “ಕುಟುಂಬದ ಉಳಿದವರು ಮಡಿಕೇರಿಯ ಸಂಬಂಧಿಕರ ಮನೆಯಲ್ಲಿದ್ದಾರೆ. ನಮಗೆ ಹೇಗೋ ಆಗುತ್ತದೆ. ಸಾಕು ಪ್ರಾಣಿಗಳಿಗೆ ಊಟ ಹಾಕಬೇಕಲ್ಲ. ಅದಕ್ಕೆ ಹೊರಟಿದ್ದೇವೆ,’’ಎಂದರು ಇಬ್ರಾಹಿಂ. ಅವರ ಐವತ್ತು ಎಕರೆ ಕಾಫಿ ತೋಟದಲ್ಲಿ ಸುಮಾರು ೧೦ ಎಕರೆಯಷ್ಟು ತೋಟ ಹೆದ್ದಾರಿ ಮೇಲೆ ಜರಿದು ಬಿದ್ದಿದೆ. ಮದೆನಾಡು ಮೋಹನ್ ಮತ್ತು ೨ನೇ ಮೊಣ್ಣಂಗೇರಿಯ ಪುರುಷೋತ್ತಮ್ ಸಹಿತ ಹಲವು ಯುವಕರು, ಕುಟುಂಬಗಳು ಮನೆ ಮತ್ತು ನಾಯಿಗಳಿಗೆ ಊಟ ಹಾಕಲು ಹೊರಟಿದ್ದರು. ಸಂಪಾಜೆ ಸಮೀಪದ ಕಲ್ಲುಗುಂಡಿ ನಿರಾಶ್ರಿತರ ಶಿಬಿರದಲ್ಲಿದ್ದ ಮೊಣ್ಣಂಗೇರಿಯ ಜಿ.ಎಸ್‌.ಪಳಂಗಪ್ಪ ಕೂಡ ಹೆದ್ದಾರಿಯ ಆ ಬದಿಯಲ್ಲಿದ್ದ ಅಧಿಕಾರಿಗಳಿಂದ ಅನುಮತಿ ಪಡೆದು, ಬಹುದೂರ ನಡೆದೇ ಹೊರಟಿದ್ದರು.

ಇದನ್ನೂ ಓದಿ : ಕೊಡಗು ಪ್ರವಾಹ| ಅತಂತ್ರ, ಅನಿಶ್ಚಿತತೆ ನಡುವೆ ಮಂದಹಾಸ ಮೂಡಿಸಿದ ಬಕ್ರೀದ್

ನಿರಾಶ್ರಿತರ ಶಿಬಿರ ಮತ್ತು ಸಂಬಂಧಿಕರ ಮನೆಗಳಲ್ಲಿದ್ದ ಮದೆನಾಡಿನ ಹಲವು ಕುಟುಂಬಗಳು ಊರಿಗೆ ಮರಳಿವೆ. “ನಮ್ಮೂರಿನ ಸುತ್ತ ಹೆಚ್ಚೇನೂ ಆತಂಕವಿಲ್ಲ. ಆದರೂ ಅಧಿಕಾರಿಗಳು ಹೆದರಿಸಿ ಊರು ಬಿಡುವಂತೆ ಮಾಡಿದರು’’ ಎನ್ನುವುದು ಕೆಲವು ಯುವಕರ ಆರೋಪ. “ನನ್ನ ಜಮೀನು,ತೋಟ ಕುಸಿದು ಹೋಗಿದೆ. ಹೊಸದಾಗಿ ಬುದುಕು ಕಟ್ಟಿಕೊಳ್ಳಬೇಕು. ಅದಕ್ಕೆ ಮರಳಿ ಬಂದೆ. ಏನಾದರೂ ಸರಿ,ಇಲ್ಲಿಯೇ ಇರುತ್ತೇನೆ,’’ ಎಂದರು ಸುಜ್ಯೋತಾ ಲಕ್ಷ್ಮಣ. ಅಧಿಕಾರಿಗಳು ಎಷ್ಟೆ ಎಚ್ಚರಿಕೆ ನೀಡಿದರೂ ಮದೆ ಗ್ರಾಮದ ಗಣಪತಿ ಅವರ ಕುಟುಂಬ ಸಹಿತ ಏಳೆಂಟು ಕುಟುಂಬಗಳು ಇಲ್ಲಿಯೇ ಇದ್ದವು. “ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದರು. ಜಮೀನು,ಮನೆ, ಕೋಣ, ನಾಯಿಗಳನ್ನು ಬಿಟ್ಟು ನಾನಂತೂ ಊರು ಬಿಡಲು ಒಪ್ಪಲಿಲ್ಲ. ಈಗ ಉಳಿದವರೂ ಮನೆಗೆ ಮರಳುತ್ತಿದ್ದಾರೆ,’’ ಎಂದರು ಮುದ್ಯನಾ ಕುಟುಂಬದ ಗಣಪತಿ. “ದೂರದ ಉತ್ತರಾ ಖಂಡದಲ್ಲೋ ಮತ್ತೆಲ್ಲೋ ಇಂಥದು ನಡೆದಿದ್ದನ್ನು ಟೀವಿಯಲ್ಲಿ ನೋಡಿದ್ದೆವು. ಈಗ ನಮ್ಮ ಸುತ್ತಲೇ ಕಣ್ಣಾರೆ ನೋಡುತ್ತಿದ್ದೇವೆ,’’ಎಂದವರು ನಕ್ಕರು. ಆ ನಗುವಿನಲ್ಲಿ ವಿಷಾದವೂ ಇತ್ತು. ಆತಂಕ; ನೋವು; ತಳಮಳ;ಮುಂದೆ ಹೇಗೋ ಎನ್ನುವ ಚಿಂತೆ ಇದ್ದರೂ ದೈನಂದಿನ ಬದುಕಿಗೆ ಮುಖಾಮುಖಿಯಾಗುವುದು ಇವರಿಗೆ ಅನಿವಾರ್ಯ. “ಎಷ್ಟು ದಿನ ಅಂತ ಸರ್ಕಾರ ಆಶ್ರಯ;ಪರಿಹಾರ ನೀಡುತ್ತೆ ಹೇಳಿ? ಮಳೆ ನಿಂತು, ಬಿಸಿಲು ಬಂದಿತೆಂದರೆ ರಾಜಕಾರಣಿಗಳಿಗೆ ಎಲ್ಲ ಮರೆತುಹೋಗುತ್ತೆ. ಆದ್ದರಿಂದ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕಲ್ಲ, ’’ಎನ್ನುವ ವಾಸ್ತವವನ್ನು ತೆರೆದಿಟ್ಟವರು ಕಾಟಕೇರಿಯ ಬೈರೇಟಿರ ಗಣೇಶ್. ಈ ಮಧ್ಯೆ, ಬುಧವಾರ ಸಂಜೆ ವೇಳೆಗೆ ಕೊಡಗಿನ ನಾನಾ ಕಡೆ ಮತ್ತೆ ಸುರಿಯಲಾರಂಭಿಸಿದ ಮಳೆ ಆತಂಕವನ್ನು ಮುಂದುವರಿಸಿತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More