ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ 5ಸುದ್ದಿಗಳು  

ಇಂದು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು  

ಜರ್ಮನಿಯಲ್ಲಿ ರಾಹುಲ್ ಗಾಂಧಿ ಭಾಷಣ ಇಂದು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರದಿಂದ ಶನಿವಾರದ ವರೆಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಬುಧವಾರ ಮತ್ತು ಗುರುವಾರ ಜರ್ಮನಿ ಪ್ರವಾಸ ಕೈಗೊಳ್ಳುವ ಅವರು ಅನಿವಾಸಿ ಭಾರತೀಯರು, ಚಿಂತಕರು, ಶೈಕ್ಷಣಿಕ ವಲಯದ ಪ್ರಮುಖರು, ಪತ್ರಕರ್ತರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಜರ್ಮನಿಯಲ್ಲಿ ರಾಹುಲ್ ಕಾರ್ಯಕ್ರಮ ಆರಂಭವಾಗಲಿದೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಭೇಟಿ ಮಾಡಲಿರುವ ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕೊಡಗು ನೆರೆಹಾವಳಿ ಕುರಿತು ಚರ್ಚಿಸಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಮೋದಿ ಅವರಲ್ಲಿ ಮನವಿ ಮಾಡುವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಪ್ರಧಾನಿ ಮೋದಿಯವರು ಇದಾಗಲೇ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇಂದಿನಿಂದ ಕೊಡಗಿನಲ್ಲಿ ಡ್ರೋನ್ ಕಾರ್ಯಾಚರಣೆ

ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮಂಗಳವಾರ ಸಂಜೆ ಅಂತ್ಯಗೊಂಡಿದ್ದು, ಇಂದಿನಿಂದ ಡ್ರೋನ್ ಕಾರ್ಯಾಚರಣೆ ನಡೆಯಲಿದೆ. ನಾಪತ್ತೆಯಾದವರ ಪತ್ತೆಗಾಗಿ ಡ್ರೋನ್ ಕಾರ್ಯಾಚರಣೆ ನಡೆಸಲು ರಕ್ಷಣಾ ತಂಡ ನಿರ್ಧರಿಸಿದ್ದು, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ರಾಜು ನಿರ್ದೇಶನದಂತೆ 8 ಡ್ರೋನ್ ಗಳ ಮೂಲಕ ಕಾರ್ಯಾಚರಣೆ ನಡೆಯಲಿದ್ದು, ಸಂಪರ್ಕ ಕಳೆದುಕೊಂಡಿರುವ ಕೆಲವು ಗ್ರಾಮಗಳ ಮೇಲೆ ಡ್ರೋನ್ ಹಾರಿಸಿ ಅಲ್ಲಿನ ನೈಜ ಸ್ಥಿತಿಯನ್ನು ಅರಿಯುವುದಾಗಿ ಎಡಿಜಿಪಿ ಭಾಸ್ಕರ್ ತಿಳಿಸಿದ್ದಾರೆ

ಎಡಿನ್ ಬರ್ಗ್ ನಲ್ಲಿ ಇಂದಿನಿಂದ ಜಾಗತಿಕ ಸಾಂಸ್ಕೃತಿಕ ಸಮಾವೇಶ

ಎಡಿನ್ ಬರ್ಗ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಾಗತಿಕ ಸಾಂಸ್ಕೃತಿಕ ಸಮಾವೇಶ ನಡೆಯಲಿದ್ದು ವಿಶ್ವದ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.  ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ಸಹಯೋಗದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಸಂಸ್ಕೃತಿಯ ಉಳಿವು, ಪರಸ್ಪರ ಉತ್ತಮ ಬಾಂಧವ್ಯ ಸೇರಿದಂತೆ ಪ್ರಮುಖ ಮೂರು ವಿಚಾರಗಳ ಕುರಿತು ಚರ್ಚಿಸಲು ತೀರ್ಮಾನಿಸಲಾಗಿದೆ.  ಸಮಾವೇಶದಲ್ಲಿ ಭಾರತ, ರೊಮೇನಿಯಾ, ಅಮೆರಿಕ, ಸೌದಿ ಅರೇಬಿಯಾ ಹಾಗೂ ಸಿಂಗಪುರ್ ದೇಶಗಳೂ ಸೇರಿದಂತೆ ಹಲವಾರು ದೇಶಗಳು ಭಾಗವಹಿಸಲಿವೆ.

ಕುಸ್ತಿಯಲ್ಲಿ ಇನ್ನಷ್ಟು ಪದಕಗಳ ನಿರೀಕ್ಷೆ

ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಈಗಾಗಲೇ ಎರಡು ಚಿನ್ನ, ಒಂದು ಕಂಚು ಸಹಿತ ಮೂರು ಪದಕಗಳನ್ನು ಜಯಿಸಿರುವ ಭಾರತ, ಇಂದು ಮತ್ತಷ್ಟು ಪದಕಗಳನ್ನು ನಿರೀಕ್ಷಿಸುತ್ತಿದೆ. ಗ್ರಿಕೊ ರೋಮನ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ (೭೭ ಕೆಜಿ), ಹರ್‌ಪ್ರೀತ್ ಸಿಂಗ್ (೮೭ ಕೆಜಿ), ನವೀನ್ (೧೩೦ ಕೆಜಿ) ಮೊದಲ ಸುತ್ತಲ್ಲಿ ಸೆಣಸಲಿದ್ದರೆ, ೯೭ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಹರ್‌ದೀಪ್ ಅಖಾಡಕ್ಕಿಳಿಯಲಿದ್ದಾರೆ. ಸ್ಪರ್ಧೆಗಳು ಮಧ್ಯಾಹ್ನ ೧.೩೦ರ ನಂತರದಲ್ಲಿ ನಡೆಯಲಿವೆ. ಇನ್ನು, ವುಶು ವಿಭಾಗದಲ್ಲಿ ಈಗಾಗಲೇ ಪದಕ ಖಚಿತಪಡಿಸಿರುವ ಸಂತೋಷ್ ಕುಮಾರ್, ಮೆನ್ಸ್ ಸಾಂಡಾ ಹಂತದ ಸೆಮಿಫೈನಲ್‌ನಲ್ಲಿ ಬೆಳಿಗ್ಗೆ ೯.೩೦ರ ನಂತರ ಕಣಕ್ಕಿಳಿಯಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More