ಟ್ವಿಟರ್ ಸ್ಟೇಟ್ | ವಾಜಪೇಯಿ ಕುರಿತ ಸ್ವಾಮಿ ಮೌನವನ್ನು ಬಿಜೆಪಿ ಏಕೆ ಪ್ರಶ್ನಿಸಿಲ್ಲ?

ಸದಾ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಸುಬ್ರಮಣಿಯನ್ ಸ್ವಾಮಿ ಅವರು ವಾಜಪೇಯಿ ಅವರು ನಿಧನರಾದ ಬಗ್ಗೆ ಒಂದು ಟ್ವೀಟ್ ಕೂಡ ಮಾಡಲಿಲ್ಲ. ಮಾಧ್ಯಮಗಳಿಂದ ದೂರವೇ ಉಳಿದರು. ಆದರೆ ಬಿಜೆಪಿಗೆ ಮಾತ್ರ ಸ್ವಾಮಿ ಅವರ ಮೌನವೇ ಬಹಳ ಸಮಾಧಾನ ತಂದಿದೆ. ಏಕೆ?

ಕಳೆದ ವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾದಾಗ ಭಾರತದಾದ್ಯಂತ ಜನರು ಶೋಕಾಚರಣೆ ಮಾಡಿದರು. ಬಿಜೆಪಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ವ್ಯಕ್ತಿಗಳೂ ವಾಜಪೇಯಿ ಅವರ ಬಗ್ಗೆ ಉತ್ತಮ ಮಾತುಗಳನ್ನು ಹೇಳುತ್ತಾ ಅವರನ್ನು ಕಳೆದುಕೊಂಡಿರುವ ಬಗ್ಗೆ ತಮ್ಮ ನೋವನ್ನು ಪರಸ್ಪರರ ಜೊತೆಗೆ ಮತ್ತು ಮಾಧ್ಯಮಗಳಲ್ಲಿ ಹಂಚಿಕೊಂಡರು. ಆದರೆ ಬಿಜೆಪಿಯ ಪ್ರಮುಖ ರಾಜಕಾರಣಿಯೊಬ್ಬರು ಒಂದು ಶಬ್ದವನ್ನೂ ಆಡದೆ ಮೌನವಾಚರಿಸಿದ್ದು ಮಾತ್ರ ವಾಜಪೇಯಿ ಅವರ ನಿಧನ ಮತ್ತು ಅಂತ್ಯಕ್ರಿಯೆಯ ಚಟುವಟಿಕೆಗಳ ನಡುವೆ ಸುದ್ದಿಯಾಗದೇ ಹೋಯಿತು. ಹೌದು, ಹೀಗೆ ಮೌನವಾಗಿದ್ದು ವಾಜಪೇಯಿ ಅವರಿಗೆ ನಮನ ಸಲ್ಲಿಸಿದವರು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ. ಸದಾ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಸುಬ್ರಮಣಿಯನ್ ಸ್ವಾಮಿ ಅವರು ವಾಜಪೇಯಿ ಅವರು ನಿಧನರಾದ ಬಗ್ಗೆ ಒಂದು ಟ್ವೀಟ್ ಕೂಡ ಮಾಡಲಿಲ್ಲ. ಪ್ರತೀ ಪ್ರಮುಖ ರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಸದಾ ಮೀಡಿಯಾ ಬೈಟ್ ಕೊಡುವ ಸ್ವಾಮಿ, ವಾಜಪೇಯಿ ನಿಧನರಾದಾಗ ಮಾಧ್ಯಮಗಳಿಂದ ದೂರವೇ ಉಳಿದರು. ವಾಜಪೇಯಿ ಅವರ ಅಂತ್ಯಕ್ರಿಯೆಯ ಕಾರ್ಯಕ್ರಮಗಳಿಂದಲೂ ದೂರ ಉಳಿದರು.

ಸುಬ್ರಮಣಿಯನ್ ಸ್ವಾಮಿ ಅವರು ಏನೂ ಹೇಳದೆ ಮೌನವಾಗಿರುವುದೇ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅವರು ಸಲ್ಲಿಸಬಹುದಾದ ಅತ್ಯುತ್ತಮ ಅಶ್ರುತರ್ಪಣವಾಗಿರುತ್ತದೆ ಎನ್ನುವುದು ಅವರನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಜೀವಂತವಾಗಿರುವವರೆಗೂ ಸ್ವಾಮಿ ಅವರ ಬಗ್ಗೆ ದ್ವೇಷವನ್ನೇ ಕಾರುತ್ತಿದ್ದರು. ಸ್ವಾಮಿ ಅವರ ಆತ್ಮಚರಿತ್ರೆ ಮತ್ತು ಸ್ವಾಮಿ ಪತ್ನಿ ರೋಕ್ಸ್ನಾ ಸ್ವಾಮಿ ಅವರ ಪುಸ್ತಕಗಳಲ್ಲೂ ವಾಜಪೇಯಿ ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಟೀಕೆಗಳನ್ನು ಕಂಡಿದ್ದೇವೆ.

ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಅವರ ದ್ವೇಷಕ್ಕೆ ಮುಖ್ಯ ಕಾರಣವೇನು ಎನ್ನುವುದು ಅವರಿಬ್ಬರ ನಡುವೆಯೇ ಹುದುಗಿ ಹೋಗಬಹುದಾದ ನಿಗೂಢ ರಹಸ್ಯ. ಆದರೆ ಮೇಲ್ನೋಟಕ್ಕೆ ಮತ್ತು ಮಾಧ್ಯಮಗಳಲ್ಲಿ ಸ್ವಾಮಿ ಅವರು ವಾಜಪೇಯಿ ಅವರ ಕೆಲವು ರಾಜಕೀಯ ನಿರ್ಧಾರಗಳು ಮತ್ತು ಕಟು ಹಿಂದುತ್ವದ ಬಗ್ಗೆ ಅವರಿಗೆ ಒಲವಿಲ್ಲದೆ ಇರುವುದನ್ನೇ ಕಾರಣವಾಗಿ ನೀಡುತ್ತಾರೆ. ಮುಖ್ಯವಾಗಿ ತುರ್ತುಪರಿಸ್ಥಿತಿಯ ನಿಜವಾದ ಹೀರೋ ಆಗಿರುವ ಕಾರಣದಿಂದಲೇ ತಮ್ಮನ್ನು ವಾಜಪೇಯಿ ಬದಿಗಿಟ್ಟಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ತಮಿಳು ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದರು. “ಮೊರಾರ್ಜಿ ದೇಸಾಯಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಆಯ್ಕೆಯಾಗುವ ಅವಕಾಶ ನನಗಿತ್ತು. ಆದರೆ ಅಟಲ್ ಬಿಹಾರಿ ವಾಜಪೇಯಿ ಅದನ್ನು ತಪ್ಪಿಸಿದರು” ಎಂದು ಸ್ವಾಮಿ ಹಿಂದೆ ಆರೋಪಿಸಿದ್ದರು. ವಿದೇಶಾಂಗ ಸಚಿವರಾಗಿದ್ದಾಗಲೂ ವಾಜಪೇಯಿ ಅವರು ತಮ್ಮನ್ನು ಚೀನಾಗೆ ಭೇಟಿ ನೀಡುವುದನ್ನು ತಡೆದಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು. ಅಲ್ಲದೆ ವಾಜಪೇಯಿ ಅವರ ಚೀನಾ ನೀತಿಗಳನ್ನು ಇಂದಿಗೂ ಅವರು ವಿರೋಧಿಸುತ್ತಾ ಬಂದಿದ್ದಾರೆ. ಈ ಸಂಬಂಧ ಟ್ವಿಟರ್‌ನಲ್ಲಿ ಅವರು ಸದಾ ಟೀಕೆಗಳನ್ನು ಹರಿಯಬಿಡುತ್ತಲೇ ಇದ್ದಾರೆ.

ಇದನ್ನೂ ಓದಿ : ಜಿಡಿಪಿಯ ಅಂಕಿ-ಅಂಶ ಸುಳ್ಳು; ರಹಸ್ಯ ಬಿಚ್ಚಿಟ್ಟ ಸುಬ್ರಮಣಿಯನ್ ಸ್ವಾಮಿ

ರೋಕ್ಸ್ನಾ ಸ್ವಾಮಿ ಅವರ ಪುಸ್ತಕದಲ್ಲಿ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭಾ ಸದಸ್ಯತ್ವ ಸ್ಥಾನದಿಂದ ಉಚ್ಛಾಟನೆಗೊಂಡ ಬಗ್ಗೆ ಸಾಕಷ್ಟು ವಿವರಣೆಗಳಿವೆ. “ವಾಜಪೇಯಿ ಅವರು ಸ್ವಾಮಿ ಮೇಲೆ ಕ್ಷುಲ್ಲಕ ಕಾರಣಗಳನ್ನು ಹೇರಿ ಉಚ್ಛಾಟನೆ ಮಾಡಿದ್ದಾರೆ” ಎನ್ನುವುದು ಒಟ್ಟಾರೆ ಅಧ್ಯಾಯದ ಸಾರವಾಗಿತ್ತು. ಸ್ವಾಮಿ ಅವರು ತಮಗೆ ಅತೀ ಪ್ರಬಲ ಪ್ರತಿಸ್ಪರ್ಧಿ ಎನ್ನುವುದು ತಿಳಿದಿರುವ ಕಾರಣದಿಂದಲೇ ವಾಜಪೇಯಿ ಅವರನ್ನು ತಡೆದಿದ್ದಾರೆ ಎಂದು ರೋಕ್ಸ್ನಾ ಸ್ವಾಮಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಸುಬ್ರಹ್ಮಣ್ಯ ಸ್ವಾಮಿ ಅವರು ವಾಜಪೇಯಿ ಸರ್ಕಾರದ ವಿರುದ್ಧ ಸಾಕಷ್ಟು ಕೆಲಸಗಳನ್ನು ಮಾಡಿರುವುದನ್ನೂ ಸ್ವತಃ ಒಪ್ಪಿಕೊಂಡಿದ್ದಾರೆ. ಟ್ವಿಟರ್ ಚರ್ಚೆಯೊಂದರ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೊತೆಗೂಡಿ ವಾಜಪೇಯಿ ಸರ್ಕಾರವನ್ನು ಕಳೆಗಿಳಿಸಲು ತಾವು ಯೋಜನೆ ರೂಪಿಸಿರುವುದು ಮತ್ತು ಆ ಮೂಲಕ ಆಗಿನ ಕಾಂಗ್ರಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೆರವಾಗಿರುವುದನ್ನೂ ಅವರು ಟ್ವಿಟರ್ ಚರ್ಚೆಯಲ್ಲಿ ಒಪ್ಪಿಕೊಂಡಿದ್ದರು.

ವಾಜಪೇಯಿ ಕುರಿತಂತೆ ಸುಬ್ರಮಣಿಯನ್ ಸ್ವಾಮಿ ಕಳೆದ ಕೆಲವು ವರ್ಷಗಳಲ್ಲಿ ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಆದರೆ ಪ್ರತೀ ಟ್ವೀಟ್‌ನಲ್ಲೂ ಅವರು ವಾಜಪೇಯಿ ಅವರ ವ್ಯಕ್ತಿತ್ವ ಮತ್ತು ನಿರ್ಧಾರಗಳನ್ನು ವಿರೋಧಿಸಿದ್ದಾರೆ. ವಾಜಪೇಯಿ ಅವರು ಒಂದು ಟ್ವೀಟ್‌ನಲ್ಲಿ, “ಗಾಂಧಿವಾದಿ ಸಮಾಜವಾದಿಯೇ ವಿನಾ ಹಿಂದುತ್ವದ ನಾಯಕನಲ್ಲ” ಎಂದು ಅವರು ಆರೋಪಿಸಿದ್ದಾರೆ. “ನಾನು ಕಟ್ಟರ್ ಹಿಂದುತ್ವವನ್ನು ಬಯಸುವ ನಾಯಕ. ಹೀಗಾಗಿ ವಾಜಪೇಯಿ ಅವರ ಗಾಂಧೀವಾದ ಹಿಡಿಸಲಿಲ್ಲ. ಇದೇ ಕಾರಣದಿಂದ ಬಿಜೆಪಿಯಿಂದ ಬಹುಕಾಲ ದೂರವೇ ಉಳಿದಿದ್ದೆ” ಎಂದು ಸ್ವತಃ ಅವರು ಹೇಳಿಕೊಂಡಿದ್ದಾರೆ. ಆದರೆ ಮತ್ತೊಂದು ಟ್ವೀಟ್‌ನಲ್ಲಿ ಅವರು, “ವಾಜಪೇಯಿ ಅವರೇ ನನ್ನನ್ನು ಬಿಜೆಪಿಯಿಂದ ಹೊರಗಿಟ್ಟಿದ್ದರು” ಎಂದು ಹೇಳಿದ್ದಾರೆ. ಹೀಗೆ ವಾಜಪೇಯಿ ಅವರನ್ನು ಟೀಕಿಸುವ ವಿಚಾರದಲ್ಲೂ ಸ್ವಾಮಿ ಅವರು ಏಕಾಭಿಪ್ರಾಯ ತೋರಿಸಿಲ್ಲ. ಇದರ ಹೊರತಾಗಿಯೂ ವಾಜಪೇಯಿ ಅವರ ಮೇಲೆ ಅವರು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಸೇತು ವಿಚಾರವಾಗಿ ಎನ್‌ಡಿಎ ನಿರ್ಧಾರ, ಎನ್‌ಡಿಎ ಸರ್ಕಾರ ಅಮರ್ತ್ಯ ಸೇನ್ ಅವರಿಗೆ ಭಾರತ ರತ್ನ ಗೌರವ ನೀಡಿರುವುದನ್ನೂ ಅವರು ವಿರೋಧಿಸಿದ್ದಾರೆ.

ವಾಜಪೇಯಿ ನಿಧನದ ಕಾರ್ಯಕ್ರಮಗಳಿಂದ ಸುಬ್ರಮಣಿಯನ್ ಸ್ವಾಮಿ ಅವರು ದೂರವಾಗಿದ್ದ ಸಂದರ್ಭದಲ್ಲಿ ಬಿಜೆಪಿ ಪ್ರಶ್ನೆ ಮಾಡದೆ ಇರಲು ಅವರ ಇಂತಹ ಧೋರಣೆಗಳೇ ಕಾರಣವಾಗಿರಬಹುದು. ವಾಜಪೇಯಿ ಕುರಿತಾಗಿ ಸದಾ ಟೀಕೆಗಳನ್ನು ಹರಿಯಬಿಡುವ ಮತ್ತು ಅವರ ಪ್ರತೀ ನಿರ್ಧಾರಗಳನ್ನೂ ಪ್ರಶ್ನಿಸುವ ಸುಬ್ರಮಣಿಯನ್ ಸ್ವಾಮಿ ಮೌನವಾಗಿರುವುದೇ ಬಿಜೆಪಿಗೆ ದೊಡ್ಡ ಸಮಾಧಾನವಾಗಿರಬಹುದು. ಬಿಜೆಪಿ ತನ್ನ ಪಕ್ಷದ ಇತಿಹಾಸವನ್ನು ಹುಡುಕಿದರೆ ಸಿಗುವ ಏಕೈಕ ಮುತ್ಸದ್ದಿ ನಾಯಕ ವಾಜಪೇಯಿ. ತಮ್ಮ ಪಕ್ಷ ದೇಶಕ್ಕೆ ಉತ್ತಮ ಆಡಳಿತ ನೀಡುವ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಸಾಬೀತು ಮಾಡಲು ಇತಿಹಾಸವನ್ನು ಕೆದಕಿದರೆ ಬಿಜೆಪಿಗೆ ಸಿಗುವ ಹೆಸರು ‘ವಾಜಪೇಯಿ’ ಮಾತ್ರ. ಹೀಗಾಗಿ ತಮ್ಮ ಬಳಿ ಇರುವ ಒಬ್ಬ ಹಿರಿಯ ನಾಯಕನ ವರ್ಚಸ್ಸನ್ನೂ ಕಡಿಮೆಗೊಳಿಸುವ ಸ್ವಾಮಿ ಅವರು ಮೌನವಾಗಿರುವುದನ್ನೇ ಬಿಜೆಪಿ ಬಯಸುವುದರಲ್ಲಿ ತಪ್ಪಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More