ಮೆಕ್ಕೆಜೋಳದ ಮೇಲೆ ಸೈನಿಕ ಹುಳಗಳ ದಾಳಿ, ರೈತರು ಎಚ್ಚೆತ್ತುಕೊಳ್ಳುವುದು ಅವಶ್ಯ

ಮೆಕ್ಕೆಜೋಳ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ತಿನ್ನುವ ಚಿಟ್ಟೆಹುಳು ರೂಪದ ಕೀಟವೊಂದು ಕಳೆದ ತಿಂಗಳು ಭಾರತಕ್ಕೆ ಪ್ರವೇಶಿಸಿದೆ. ಇದನ್ನು ಸೈನಿಕ ಹುಳು ಎಂದು ಕರೆಯಲಾಗುತ್ತಿದ್ದು, ರಾತ್ರೋರಾತ್ರಿ ಮೆಕ್ಕೆಜೋಳದ ಹೊಲಕ್ಕೆ ದಾಳಿ ಮಾಡಿ ಇಡೀ ಹೊಲದ ಬೆಳೆಯನ್ನು ತಿಂದುಹಾಕುತ್ತದೆ ಎನ್ನಲಾಗಿದೆ

ಮೆಕ್ಕೆಜೋಳ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ತಿನ್ನುವ ಚಿಟ್ಟೆಹುಳು ರೂಪದ ಕೀಟವೊಂದು ಕಳೆದ ತಿಂಗಳು ಭಾರತಕ್ಕೆ ಪ್ರವೇಶಿಸಿದೆ. ಸೈನಿಕ ಹುಳು ಎಂದು ಇದನ್ನು ಕರೆಯಲಾಗುತ್ತಿದ್ದು, ದೇಶದ ಕೃಷಿ ಅಧಿಕಾರಿಗಳು ಈ ಕೀಟಗಳ ನಾಶ ಹಾಗೂ ಮೆಕ್ಕೆಜೋಳ ಬೆಳೆ ನಿರ್ವಹಣೆ ಬಗ್ಗೆ ರೈತರಲ್ಲಿ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ.

ಉತ್ತರ ಹಾಗೂ ದಕ್ಷಿಣ ಅಮೆರಿಕದಲ್ಲಿ ಸ್ಥಳೀಯವಾಗಿ ಈ ಕೀಟಗಳು ವೇಗವಾಗಿ ಹರಡುತ್ತಿವೆ ಎಂದು ಗುರುತಿಸಲಾಗಿದೆ. ೨೦೧೬ರ ಜನವರಿಯಲ್ಲಿ ಈ ಕೀಟವನ್ನು ಮೊದಲು ಆಫ್ರಿಕಾದಲ್ಲಿ ಪತ್ತೆಹಚ್ಚಲಾಯಿತು. ಸೈನ್ಯದ ರೀತಿಯಲ್ಲಿ ದಾಳಿ ಮಾಡುವ ಈ ಕೀಟಗಳು, ಆಫ್ರಿಕಾದ ಸಬ್ ಸಹರನ್ ಪ್ರದೇಶದಲ್ಲಿ ಸುಮಾರು ೨೨ ಮಿಲಿಯನ್ ಚದರ ಕಿಮೀಗಳಷ್ಟು ವ್ಯಾಪಕವಾಗಿ ಸದ್ಯ ಹರಡಿಕೊಂಡಿವೆ.

ಈ ಚಿಟ್ಟೆಹುಳ ಲಕ್ಷಣಗಳು ಬೆಳೆಯ ಆರಂಭಿಕ ಹಂತಗಳಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಬೆಳೆ ತನೆ ಬಿಟ್ಟ ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ಸೈನಿಕರಂತೆ ಒಮ್ಮಿಲೇ ಇಡೀ ಹೊಲದ ಜೋಳವನ್ನು ತಿನ್ನುತ್ತವೆ ಎನ್ನಲಾಗಿದೆ. ಮೆಕ್ಕೆಜೋಳ ಅಲ್ಲದೆ ಹತ್ತಿ, ಭತ್ತ, ಕಡಲೆಕಾಯಿ, ಸೇಬು, ಹಾಗೂ ಕಿತ್ತಳೆಗಳಂಥ ವಿವಿಧ ವಾಣಿಜ್ಯ ಬೆಳೆಗಳಿಗೂ ಇವು ರಾತ್ರಿ ಸಮಯದಲ್ಲಿ ದಾಳಿ ಮಾಡುತ್ತವೆ ಎಂದು ತಜ್ಞರು ಗುರುತಿಸಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ ಈ ಚಿಟ್ಟೆಹುಳುಗಳ ಬಗ್ಗೆ ಜುಲೈ ೩೦ರಂದು ಎಚ್ಚರಿಕೆ ಸಂದೇಶ ಹೊರಡಿಸಿದ್ದು, ಆಗಸ್ಟ್ ನಲ್ಲಿ ನಡೆಸಲಾದ ಸಮೀಕ್ಷೆಗಳ ಪ್ರಕಾರ, ರಾಜ್ಯದ ಚಿಕ್ಕಬಳ್ಳಾಪುರದ ಸುತ್ತಮುತ್ತ ಶೇ.೭೦ರಷ್ಟು ಮೆಕ್ಕೆಜೋಳ ಈ ಚಿಟ್ಟೆಹುಳುಗಳಿಗೆ ತುತ್ತಾಗಿದೆ. ಈ ಕುರಿತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರದ ಪ್ರಾಧ್ಯಾಪಕ ಮುರಳಿ ಮೋಹನ ಹಾಗೂ ಈ ಚಿಟ್ಟೆಹುಳುಗಳ ಉಪಸ್ಥಿತಿ ಕುರಿತು ಪರಿಶೀಲಿಸುವ ವಿಜ್ಞಾನಿಯೊಬ್ಬರು ‘ಸೈ ಡೇವ್’ ವೆಬ್‌ಸೈಟ್‌ ಗೆ ಪ್ರತಿಕ್ರಿಯಿಸಿ, “ಎಲ್ಲ ರಾಜ್ಯಗಳಿಗೆ ಈ ಚಿಟ್ಟೆಹುಳುಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮೆಕ್ಕೆಜೋಳ ಬೆಳೆಯ ಸುರಕ್ಷಿತ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಈವರೆಗೂ ನಮ್ಮಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ, ಇದೀಗ ಚಿಟ್ಟೆ ಹುಳುಗಳ ಲಕ್ಷಣಗಳು ನಮ್ಮಲ್ಲಿ ಕಂಡುಬಂದಿವೆ,” ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಈ ಕೀಟಗಳ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳದೆ ಹೋದರೆ ಏಷ್ಯಾದ ಉದ್ದಗಲಕ್ಕೂ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಕೃಷಿ ಹಾಗೂ ಜೈವಿಕ ವಿಜ್ಞಾನ ಅಂತಾರಾಷ್ಟ್ರೀಯ ಕೇಂದ್ರ (ಸಿಎಬಿಐ) ಎಚ್ಚರಿಸಿದೆ. ಲ್ಯಾಟಿನ್ ಅಮೆರಿಕ, ಆಫ್ರಿಕಾದಲ್ಲಿ ಈ ಕೀಟಗಳ ನಿಯಂತ್ರಣ ಮಾಡಲಾಗಿದೆ. ಆಫ್ರಿಕಾದೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಆಸ್ಟ್ರೇಲಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಮಲೇಷಿಯಾ, ಫಿಲಿಪ್ಪೀನ್ಸ್ ಹಾಗೂ ಥಾಯ್ಲೆಂಡ್ ದೇಶಗಳು ಈ ಕುರಿತು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಸಿಎಬಿಐ ಸಲಹೆ ನೀಡಿದೆ.

ಇದನ್ನೂ ಓದಿ : ಮಹಿಳೆಯರ ಆರ್ಥಿಕ ಪ್ರಗತಿಗೆ ಸಹಾಯಕವಾದ ಮನೆಯಂಗಳದ ಡೇರೆ ಕೃಷಿ

ಸಿಎಬಿಐನ ಮಾಳವಿಕ ಚೌಧರಿ ಅವರು ‘ಸೈ ಡೇವ್’ ವೆಬ್‌ಸೈಟ್ ಗೆ ಪ್ರತಿಕ್ರಿಯಿಸುತ್ತ, “ಈ ಕೀಟ ಸುಲಭವಾಗಿ ನೆರೆಹೊರೆಯ ರಾಷ್ಟ್ರಗಳಿಗೆ ಹಾರಲು ಸಾಧ್ಯವಿದೆ. ಇವು ವ್ಯಾಪಕವಾಗಿ ದಾಳಿ ಮಾಡಿದರೆ ಭಾರತದಿಂದ ಮೆಕ್ಕೆಜೋಳ ಇತರ ರಾಷ್ಟ್ರಗಳಿಗೆ ರಫ್ತು ಆಗುವುದು ಕಷ್ಟ,” ಎಂದಿದ್ದಾರೆ. ಈ ಕೀಟ ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳು ಹಾಗೂ ಚೀನಾದತ್ತ ಹೋಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳುತ್ತಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಮೆಕ್ಕೆಜೋಳ ಬೆಳೆಯುವ ವಿಶ್ವದ ಅತಿದೊಡ್ಡ ಎರಡನೇ ರಾಷ್ಟ್ರವಾಗಿದೆ ಚೀನಾ.

ಬೆಂಗಳೂರಿನ ಕೃಷಿ ಕಾರ್ಯಕರ್ತೆ ಕವಿತಾ ಕುರುಗುಂಟಿ ಅವರ ಪ್ರಕಾರ, “ಮೆಕ್ಕೆಜೋಳವನ್ನು ಹೆಚ್ಚಾಗಿ ಪ್ರಾಣಿಗಳ ಆಹಾರಕ್ಕಾಗಿ ಬಳಸಲಾಗುತ್ತಿದೆ. ಈ ಕೀಟದಿಂದಾಗಿ ಮೆಕ್ಕೆಜೋಳದ ಉತ್ಪಾದನೆ ಕಡಿಮೆಯಾದರೆ ರೈತರು ಅಪಾರ ಪ್ರಮಾಣದ ಆರ್ಥಿಕ ನಷ್ಟ ಎದುರಿಸಲಿದ್ದಾರೆ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More