ಕೊಡಗಿನ ಶ್ರೇಯಕ್ಕೆ ಹೊಡೆತ; ಭೂಮಿ ಕುಸಿದೆಡೆ ೩೦ ವರ್ಷ ಕಾಫಿ ಬೆಳೆ ಅಸಾಧ್ಯ!

ಭಾರತದಲ್ಲೇ ಅತಿ ಹೆಚ್ಚು ಭೂಪ್ರದೇಶದಲ್ಲಿ ಕಾಫಿ ಬೆಳೆಯುತ್ತಿದ್ದ ಕೊಡಗಿಗೆ ಮಹಾಮಳೆ ಮರ್ಮಾಘಾತ ನೀಡಿದೆ. ಈ ಮಧ್ಯೆ, ಭೂಕುಸಿತ ಸಂಭವಿಸಿದ ಮಡಿಕೇರಿ, ಸೋಮವಾರಪೇಟೆ, ಸಕಲೇಶಪುರದ ವಿವಿಧೆಡೆ ಕನಿಷ್ಠ ೩೦ ವರ್ಷ ಕಾಫಿ ಬೆಳೆಯುವುದು ಅಸಾಧ್ಯ ಎಂದಿದ್ದಾರೆ ತಜ್ಞರು

ಕೊಡಗು, ಸೋಮವಾರಪೇಟೆ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಿವಿಧೆಡೆ ಶೇ.೩೦ರಷ್ಟು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿದಿದ್ದು, ಮುಂದಿನ ೨೦-೨೫ ವರ್ಷಗಳ ಕಾಲ ಅಲ್ಲಿ ಕಾಫಿ ಬೆಳೆಯಲಾಗದು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಜೋಡುಪಾಲ, ಮಕ್ಕಂದೂರು, ಮುಕ್ಕೊಡ್ಲು, ಎಮ್ಮೆತ್ತಾಳ, ತಂತಿಪಾಲ, ಮದೆನಾಡು, ಅರೆಕಲ್ಲು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಇಜನಳ್ಳಿ, ಪಟ್ಲ, ಚಾವಳ್ಳಿ ಮತ್ತು ಮಾಯನೂರು ಸೇರಿದಂತೆ ಹಲವು ಕಡೆ ಭೂಕುಸಿತ ಸಂಭವಿಸಿದೆ. “ಭೂಮಿ ಕುಸಿದಿರುವುದರಿಂದ ಮೇಲ್ಪದರದ ಮಣ್ಣು ಸಂಪೂರ್ಣ ಕೊಚ್ಚಿಹೋಗಿದ್ದು, ಕಾಫಿ ಗಿಡ ಬೆಳೆಯಲು ಹದವಾದ ವಾತಾವರಣ ನಿರ್ಮಾಣವಾಗಲು ಕನಿಷ್ಠ ೨೩-೩೦ ವರ್ಷ ಹಿಡಿಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ,” ಎಂದು ಭಾರತೀಯ ಕಾಫಿ ಬೋರ್ಡ್‌ ಅಧ್ಯಕ್ಷ ಎಂ ಎಸ್‌ ಭೋಜೇಗೌಡ ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

“ಮಳೆಯಿಂದಾಗಿ ಕಾಫಿ ಗಿಡದಲ್ಲಿನ ಶೇ.೮೦ರಷ್ಟು ಕಾಯಿ ಉದುರಿಹೋಗಿದೆ. ಕಾಫಿ ಬೋರ್ಡ್‌ನ ವಿಸ್ತರಣಾ ಕೇಂದ್ರಗಳಲ್ಲಿನ ಅಧಿಕಾರಿಗಳು ಈಗಾಗಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿನ ಬೆಳೆ ನಷ್ಟ ದಾಖಲೆ ಆರಂಭಿಸಿದ್ದಾರೆ. ೨೦ಕ್ಕೂ ಹೆಚ್ಚು ತಂಡಗಳನ್ನು ರಚಿಸಿ ವಿವಿಧೆಡೆ ನಷ್ಟದ ವಾಸ್ತವಿಕ ವರದಿ ಸಿದ್ಧಪಡಿಸಬೇಕಿರುವುದರಿಂದ ಕಾಫಿ ಬೋರ್ಡ್‌ನಲ್ಲಿ ವಾಹನ, ಮಾನವ ಸಂಪನ್ಮೂಲದ ಕೊರತೆಯಿದೆ. ಇದಕ್ಕೆ ರಾಜ್ಯ ಸರ್ಕಾರ ಸೌಲಭ್ಯ ಕಲ್ಪಿಸಬೇಕಿದೆ. ಸರ್ಕಾರವು ಕಾಫಿ ಬೋರ್ಡ್ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದು, ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕೆ ಕಾಫಿ ಬೋರ್ಡ್ ಎದುರು ನೋಡುತ್ತಿದೆ,” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಜನರ ರಕ್ಷಣೆಗೆ ಮುಂದಾಗಿದೆ. ಇದಾದ ತಕ್ಷಣ ಬೆಳೆ ನಷ್ಟದ ಅಧ್ಯಯನಕ್ಕೆ ಮುಂದಾಗಲಿದೆ. ಈ ಭಾಗದಲ್ಲಿ ಕಾಫಿ ಪ್ರಮುಖ ಬೆಳೆಯಾದರೂ ವಿವಿಧ ಜಾತಿಯ ಮರ, ಕಾಳುಮೆಣಸು ನಾಶವಾಗಿದೆ. ಈ ನಷ್ಟದ ವರದಿಯನ್ನು ಕಾಫಿ ಬೋರ್ಡ್‌ ಅಧಿಕಾರಿಗಳು ಮಾಡಲಾಗದು. ಇದಕ್ಕೆ ಕಂದಾಯ, ತೋಟಗಾರಿಕೆ ಅಧಿಕಾರಿಗಳು ಮುಖ್ಯ. ಇವರೆಲ್ಲರ ಜೊತೆ ಕಾಫಿ ಬೋರ್ಡ್‌ ಅಧಿಕಾರಿಗಳು ವಸ್ತುಸ್ಥಿತಿ ವರದಿ ಅಧ್ಯಯನ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. “ತಂಡ ರಚನೆಯಾದ ಒಂದೆರಡು ವಾರದಲ್ಲಿ ವರದಿ ಸಿದ್ಧಪಡಿಸಲಾಗುವುದು. ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್‌) ಪ್ರತಿ ಎಕರೆ ಕಾಫಿ ಬೆಳೆ ನಷ್ಟಕ್ಕೆ ೯ ಸಾವಿರ ರುಪಾಯಿ ನೀಡುತ್ತದೆ. ಆದರೆ, ಕೊಡಗಿನಲ್ಲಿ ಸಂಪೂರ್ಣ ಬೆಳೆ ಕೊಚ್ಚಿಹೋಗಿರುವುದರಿಂದ ಪರಿಹಾರದ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ. ಇದೆಲ್ಲವೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯದ ಮೇಲೆ ನಿರ್ಧಾರವಾಗಲಿದೆ,” ಎನ್ನುತ್ತಾರೆ ಕಾಫಿ ಬೋರ್ಡ್ ಅಧಿಕಾರಿಯೊಬ್ಬರು.

ಇದನ್ನೂ ಓದಿ : ಕೊಡಗು ಪ್ರವಾಹ| ಅತಂತ್ರ, ಅನಿಶ್ಚಿತತೆ ನಡುವೆ ಮಂದಹಾಸ ಮೂಡಿಸಿದ ಬಕ್ರೀದ್

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ, ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒಡಿಶಾದ ಅಲ್ಪಭಾಗ ಸೇರಿದಂತೆ ೩.೧೬ ಲಕ್ಷ ಹೆಕ್ಟೇರ್‌ ಭೂಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ಈ ಪೈಕಿ, ಕರ್ನಾಟಕದಲ್ಲೇ ೨.೨೨ ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭೂಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ಈ ಪೈಕಿ, ಪ್ರಸಕ್ತ ವರ್ಷದಲ್ಲಿ ಕೊಡಗಿನಲ್ಲಿ ೭೮,೯೬೪ ಹೆಕ್ಟೇರ್‌ನಲ್ಲಿ ರೋಬೋಸ್ಟಾ ಹಾಗೂ ೨೮,೧೪೦ ಹೆಕ್ಟೇರ್‌ ಭೂಪ್ರದೇಶದಲ್ಲಿ ಅರೇಬಿಕಾ ಕಾಫಿ ಬೆಳೆ ಇತ್ತು. ಉಳಿದಂತೆ ಚಿಕ್ಕಮಗಳೂರಿನಲ್ಲಿ ೭೫ ಸಾವಿರ ಹೆಕ್ಟೇರ್‌ ಹಾಗೂ ಹಾಸನದಲ್ಲಿ ೩೧ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ಇದೆ. ಕೇರಳದ ವಯನಾಡ್‌, ತಿರುವಾಂಕೂರ್‌ ಮತ್ತು ನೆಲ್ಲಿಯಾಂಬದಿ ಸೇರಿದಂತೆ ಸುಮಾರು ೬೬ ಸಾವಿರ ಹೆಕ್ಟೇರ್‌ನಲ್ಲಿ ರೋಬೋಸ್ಟಾ ಮತ್ತು ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ತಮಿಳುನಾಡಿನ ಪುಲ್ನೇಯಿಸ್‌, ನೀಲಗಿರೀಸ್‌, ಸೇಲಂ ಹಾಗೂ ಕೊಯಮತ್ತೂರಿನ ಸುಮಾರು ೧೮ ಸಾವಿರ ಹೆಕ್ಟೇರ್‌ನಲ್ಲಿ ಕಾಫಿ ಉತ್ಪಾದಿಸಲಾಗುತ್ತಿದೆ. ದೇಶದ ಎಲ್ಲ ಕಾಫಿ ಬೆಳೆಯುವ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಕೊಡಗಿನಲ್ಲಿ ಹೆಚ್ಚು ಭೂಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ವಿಶಿಷ್ಟ ಶ್ರೇಯ ಹೊಂದಿರುವ ಕೊಡಗಿಗೆ ಪ್ರಕೃತಿ ಭಾರಿ ಪೆಟ್ಟು ನೀಡಿದೆ.

“ಕರ್ನಾಟಕದ ಕಾಫಿಯು ಇಟಲಿ, ರಷ್ಯಾಗಳಿಗೆ ಯಥೇಚ್ಚವಾಗಿ ರಫ್ತಾಗುತ್ತದೆ. ಈ ಬಾರಿ ಮಳೆಯಿಂದಾಗಿ ಸಾಕಷ್ಟು ಬೆಳೆ ನಷ್ಟ ಆಗಿರುವುದರಿಂದ ಬೇಡಿಕೆ ಪೂರೈಸುವುದು ಕಷ್ಟವಾಗಬಹುದು. ಕೊಡಗಿನ ಜನರ ಪ್ರಮುಖ ಬೆಳೆಗೆ ಹೊಡೆತ ಬಿದ್ದಿರುವುದರಿಂದ ಜಿಲ್ಲೆ ಎಂದಿನ ಲಯ ಕಳೆದುಕೊಳ್ಳಲಿದೆ. ಕಳೆದ ಮೂರು ವರ್ಷಗಳಿಂದ ತೀವ್ರ ಬರ ಕಾಫಿ ಬೆಳಗಾರರಿಗೆ ನಷ್ಟ ಉಂಟುಮಾಡಿತ್ತು. ಈ ಬಾರಿ ಭಾರಿ ಮಳೆ ಬೆಳೆಯನ್ನು ನಾಶಪಡಿಸಿದೆ. ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಉದ್ದೇಶದಿಂದ ಶೀಘ್ರದಲ್ಲೇ ಕಾಫಿ ಬೆಳಗಾರರ ಜೊತೆ ಸಭೆ ನಡೆಸಲಾಗುವುದು,” ಎಂದು ಭೋಜೇಗೌಡ ತಿಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More