ಗಾಂಧಿ ಹತ್ಯೆ ಸಂಚು | ಕಂತು 16 | ಹಂತಕರನ್ನು ವೈಭವೀಕರಿಸುವ ಬಗ್ಗೆ ವ್ಯಾಪಕ ಖಂಡನೆ

ಸದನದ ಹಲವು ಸದಸ್ಯರು ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ಹಂತಕರನ್ನು ವೈಭವೀಕರಿಸುವ ಹೀನ ಕೃತ್ಯವನ್ನು ಕಟು ಮಾತುಗಳಲ್ಲಿ ಖಂಡಿಸಿದ್ದರು. ಆ ವ್ಯಾಪಕ ಖಂಡನೆ ಮತ್ತು ಉನ್ನತ ಮಟ್ಟದ ತನಿಖೆಯ ಆಗ್ರಹದ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ, ತನಿಖಾ ಆಯೋಗವನ್ನು ರಚಿಸಿತ್ತು

ಗಾಂಧಿ ಹಂತಕರನ್ನು ಸನ್ಮಾನಿಸಿದ ಘಟನೆ ಸಂಸದರ ಅಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಸಭೆಯಲ್ಲಿ ಗಮನ ಸೆಳೆಯುವ ನಿಲುವಳಿ ಸೂಚನೆಯನ್ನೂ ಮಂಡಿಸಲಾಗಿತ್ತು. ಆ ಮೂಲಕ, ಸದನದ ವ್ಯಾಪಕ ಚರ್ಚೆಗೆ ಆ ಸಂಗತಿ ಕಾರಣವಾಗಿತ್ತು. ಸದನದಲ್ಲಿ ಆ ಬಗ್ಗೆ ವಿವರಣೆ ನೀಡಿದ್ದ ಗೃಹ ಸಚಿವ ಗುಲ್ಜಾರಿ ಲಾಲ್ ನಂದಾ ಅವರು, ಕೇತ್ಕರ್ ಅವರು ಗೋಡ್ಸೆಯ ಸಂಚಿನ ಬಗ್ಗೆ ಬಾಲುಕಾಕಾ ಮೂಲಕ ಖೇರ್ ಅವರಿಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ಆದರೆ, ಬಾಲುಕಾಕಾ ಮತ್ತು ಖೇರ್ ಈಗ ಜೀವಂತವಿಲ್ಲ. ಹಾಗಾಗಿ, ಮಹಾರಾಷ್ಟ್ರ ಸರ್ಕಾರಿ ದಾಖಲೆಗಳಲ್ಲಿ ಈ ಅಂಶ ದಾಖಲಾಗಿದೆಯೇ ಎಂಬ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದರು.

ಸಂಸದರಾದ ಎ ಡಿ ಮಣಿ ಮತ್ತು ಭೂಪೇಶ್ ಗುಪ್ತಾ ಅವರುಗಳು, ಕೇತ್ಕರ್ ಬಹಿರಂಗಪಡಿಸಿದ ಸಂಗತಿಗಳ ಕುರಿತು ಉನ್ನತ ಮಟ್ಟದ ತನಿಖೆ ಆಗಬಾರದೇಕೆ? ಕೇತ್ಕರ್ ಅವರಿಗೆ ನಾಥೂರಾಮ್‌ ಗೋಡ್ಸೆ ನಡೆಸಿದ ಸಂಚಿನ ಮಾಹಿತಿ ಹೇಗೆ ತಿಳಿಯಿತು? ಅದನ್ನು ಅವರು ಯಾರಿಗೆ ಹೇಳಿದ್ದರು? ಅವರು ಆ ಬಗ್ಗೆ ಯಾವ ಕ್ರಮ ಕೈಗೊಂಡರು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಗಾಂಧಿ ಹತ್ಯೆಯ ತನ್ನ ಸಂಚಿನ ಬಗ್ಗೆ ಗೋಡ್ಸೆ, ಕೇತ್ಕರ್ ಬಳಿ ಮಾತನಾಡಿದ್ದ ಎಂದರೆ ಅದೊಂದು ಸಂಚಿನ ಭಾಗವೇ ಆಗಿದೆ ಎಂದರ್ಥ. ಇಂತಹ ಸಂಚು ಅಷ್ಟೊಂದು ರಾಜಾರೋಷವಾಗಿ ನಡೆಯುತ್ತಿರುವಾಗ ಬಾಂಬೆ ಸರ್ಕಾರ, ಅಂದಿನ ಭಾರತ ಸರ್ಕಾರ ಮತ್ತು ಗುಪ್ತಚರ ಇಲಾಖೆಗಳು ಏನು ಮಾಡುತ್ತಿದ್ದವು? ಯಾಕೆ ಅವುಗಳು ಅಂತಹ ಅಗಾಧ ಅಪಾಯವನ್ನು ಊಹಿಸುವಲ್ಲಿ ವಿಫಲವಾದವು? ಎಂಬ ಬಗ್ಗೆ ತನಿಖೆಯಾಗಬೇಕು. ಅತ್ಯಂತ ಮಹತ್ವದ ಈ ವಿಷಯದಲ್ಲಿ ಯಾವುದೇ ಬಗೆಯ ನಿರ್ಲಕ್ಷ್ಯ ಮಾಡಕೂಡದು ಎಂದು ಆಗ್ರಹಿಸಿದ್ದರು.

ಮತ್ತೊಬ್ಬ ಸಂಸದ ತೆಂಗರಿ ಎಂಬುವವರು ಕೂಡ ಕಾನಿಟ್ಕರ್ ತಮಗೆ ತಿಳಿದ ವಿಷಯವನ್ನು ಸರ್ಕಾರಕ್ಕೆ ಮುಂಚಿತವಾಗಿ ಮಾಹಿತಿ ನೀಡಿದ್ದರೇ ಎಂಬ ಪ್ರಶ್ನೆ ಹಾಕಿದ್ದರು. ಕೇತ್ಕರ್ ಸ್ವತಃ ಹಂತಕರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮತ್ತು ಗಾಂಧಿ ವಿರುದ್ಧದ ದ್ವೇಷ ಕಾರುವ ಬರಹ ಸೇರಿದಂತೆ ಹಲವು ಲೇಖನಗಳನ್ನೂ ಬರೆದಿರುವ ಹಿನ್ನೆಲೆಯಲ್ಲಿ, ಅವರು ಹೇಳಿಕೊಂಡಷ್ಟು ಅಮಾಯಕರಲ್ಲ ಎಂದು ಪ್ರೊ.ಎಂ ಬಿ ಲಾಲ್ ಅಭಿಪ್ರಾಯಪಟ್ಟಿದ್ದರು. ಅವರೊಂದಿಗೆ ದನಿಗೂಡಿಸಿದ್ದ ಸದನದ ಹಲವು ಸದಸ್ಯರು, ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ಹಂತಕರನ್ನು ವೈಭವೀಕರಿಸುವ ಹೀನಕೃತ್ಯವನ್ನು ಕಟುಮಾತುಗಳಲ್ಲಿ ಖಂಡಿಸಿದ್ದರು. ಆ ವ್ಯಾಪಕ ಖಂಡನೆ ಮತ್ತು ಉನ್ನತ ಮಟ್ಟದ ತನಿಖೆಯ ಆಗ್ರಹದ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರವು ತನಿಖಾ ಆಯೋಗವನ್ನು ರಚಿಸಿತ್ತು.

೧೯೬೫ರ ಮಾರ್ಚ್ ೨೨ರಂದು ತನಿಖಾ ಆಯೋಗದ ಅಧಿಸೂಚನೆ ಹೊರಡಿಸಿದ ಸರ್ಕಾರ, ಸಾರ್ವಜನಿಕ ಮಹತ್ವದ ಹಿನ್ನೆಲೆಯಲ್ಲಿ ಗಾಂಧಿ ಹತ್ಯೆ ಸಂಚಿನ ಕುರಿತು ತನಿಖೆಗೆ ನಿರ್ದೇಶನ ನೀಡಿತು. ಹಾಗೆಯೇ, ತನಿಖೆಯ ವ್ಯಾಪ್ತಿಯನ್ನು ಕೂಡ ನಿಗದಿ ಮಾಡಿದ ಸರ್ಕಾರ ಮೂರು ವಿಷಯಗಳ ಕುರಿತು ತನಿಖೆಗೆ ಸೂಚಿಸಿತ್ತು:

  1. ಮಹಾತ್ಮ ಗಾಂಧಿ ಹತ್ಯೆಯ ನಾಥೂರಾಂ ವಿನಾಯಕ ಗೋಡ್ಸೆ ಮತ್ತು ಆತನ ಸಹಚರರ ಸಂಚಿನ ಬಗ್ಗೆ ಪೂನಾದ ಜಿ ವಿ ಕೇತ್ಕರ್ ಸೇರಿದಂತೆ ಯಾವುದೇ ವ್ಯಕ್ತಿಗೆ ಪೂರ್ವಮಾಹಿತಿ ತಿಳಿದಿತ್ತೇ?
  2. ಅಂತಹ ಸಂಚಿನ ಮಾಹಿತಿ ತಿಳಿದ ಆ ವ್ಯಕ್ತಿಗಳು ಆ ಬಗ್ಗೆ ಬಾಂಬೆ ಸರ್ಕಾರ ಅಥವಾ ಭಾರತ ಸರ್ಕಾರದ ಯಾವುದಾದರೂ ಅಧಿಕೃತ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದರೇ? ನಿರ್ದಿಷ್ಟವಾಗಿ, ಮೇಲೆ ಹೇಳಲಾದ, ಕೇತ್ಕರ್ ಅಂತಹ ಮಾಹಿತಿಯನ್ನು ಸರ್ಕಾರಗಳೊಂದಿಗೆ ಹಂಚಿಕೊಂಡಿದ್ದರೇ? ಅದರಲ್ಲೂ ಅಂದಿನ ಬಾಂಬೆ ಪ್ರೀಮಿಯರ್ ಆಗಿದ್ದ ದಿವಂಗತ ಬಾಲ ಗಂಗಾಧರ ಖೇರ್ ಅವರಿಗೆ, ದಿವಂಗತ ಬಾಲುಕಾಕ ಕಾನಿಟ್ಕರ್ ಮೂಲಕ ಮಾಹಿತಿ ನೀಡಿದ್ದರೇ?
  3. ಹಾಗೊಂದು ವೇಳೆ ಮಾಹಿತಿ ದೊರೆತಿದ್ದರೆ, ಆ ಕುರಿತು ಬಾಂಬೆ ಸರ್ಕಾರ, ನಿರ್ದಿಷ್ಟವಾಗಿ ಬಾಲ ಗಂಗಾಧರ ಖೇರ್ ಹಾಗೂ ಭಾರತ ಸರ್ಕಾರ ಯಾವ ಕ್ರಮ ಕೈಗೊಂಡಿದ್ದವು?

ಸುಪ್ರೀಂ ಕೋರ್ಟಿನ ಹಿರಿಯ ವಕೀಲರೂ ಆಗಿದ್ದ ಸಂಸದ ಗೋಪಾಲ ಸ್ವರೂಪ್ ಪಾಠಕ್ ಅವರನ್ನು ಆಯೋಗಕ್ಕೆ ನೇಮಕ ಮಾಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅವರನ್ನು ಕೇಂದ್ರ ಸಚಿವರಾಗಿ ಹಾಗೂ ಬಳಿಕ ಮೈಸೂರು ರಾಜ್ಯದ ಗವರ್ನರ್ ಆಗಿ ನೇಮಕ ಮಾಡಲಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾ.ಕಪೂರ್‌ ಅವರನ್ನು ನೇಮಿಸಲಾಗಿತ್ತು.

ತನಿಖೆಯ ವ್ಯಾಪ್ತಿಯನ್ನು ನಿಗದಿಗೊಳಿಸಿದ್ದ ಅಂಶಗಳಲ್ಲಿ ಕೊನೆಯದ್ದಕ್ಕೆ 'ಸಂಬಂಧಪಟ್ಟ ಸರ್ಕಾರಗಳ ಅಧಿಕಾರಿಗಳು' ಎಂಬುದನ್ನು ಸೇರಿಸುವ ಮೂಲಕ, ತನಿಖಾ ಆಯೋಗದ ರಚನೆಯ ಕುರಿತ ಅಧಿಸೂಚನೆಗೆ ೧೯೬೮ರ ಅಕ್ಟೋಬರ್ ೨೮ರಂದು ಒಂದು ತಿದ್ದುಪಡಿ ಮಾಡಲಾಯಿತು. ಆ ಮೂಲಕ, ಬಾಂಬೆ ಪ್ರೀಮಿಯರ್ ಮತ್ತು ಕೇಂದ್ರ ಸರ್ಕಾರದ ಜೊತೆಗೆ ಆ ಎರಡೂ ಸರ್ಕಾರಗಳ ಅಧಿಕಾರಿಗಳು, ಗಾಂಧಿ ಹತ್ಯೆಯ ಸಂಚಿನ ಕುರಿತು ಮಾಹಿತಿ ಲಭ್ಯವಾಗಿದ್ದರೆ, ಆ ಬಗ್ಗೆ ಯಾವ ಕ್ರಮ ಕೈಗೊಂಡಿದ್ದರು ಎಂಬುದನ್ನು ತನಿಖೆ ನಡೆಸುವುದು ಆಯೋಗದ ವ್ಯಾಪ್ತಿಗೆ ಸೇರಿಸಲಾಯಿತು.

ಒಟ್ಟಾರೆ, ಗೋಡ್ಸೆಯ ಸಹಚರರು ಅಥವಾ ಶಿಷ್ಯರ ಗುಂಪು ನಡೆಸಿದ ಸಂಚು ಏನಾಗಿತ್ತು? ನಾಥೂರಾಂ ಗೋಡ್ಸೆ ಮತ್ತು ಆತನ ಸಹಚರರ ಗಾಂಧಿ ಹತ್ಯೆಯ ಸಂಚಿನ ಬಗ್ಗೆ ಯಾರಿಗೆಲ್ಲ ಪೂರ್ವಮಾಹಿತಿ ಇತ್ತು? ಆ ಮಾಹಿತಿ ಹೊಂದಿದವರಿಗೂ ಹಂತಕರಿಗೂ ಇರುವ ನಂಟು ಎಂಥದ್ದು? ಆ ಸಂಚಿನ ಮಾಹಿತಿಯನ್ನು ಈ ವ್ಯಕ್ತಿಗಳು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದರೇ? ಹಂಚಿಕೊಂಡಿದ್ದರೆ, ಆ ಮಾಹಿತಿ ಪಡೆದ ಸರ್ಕಾರ ಮತ್ತು ಅಧಿಕಾರಿಗಳು ಸಂಚು ವಿಫಲಗೊಳಿಸುವ ನಿಟ್ಟಿನಲ್ಲಿ ಏನಾದರೂ ಪ್ರಯತ್ನ ಮಾಡಿದ್ದರೇ? ಎಂಬ ಅಂಶಗಳು ನ್ಯಾ.ಕಪೂರ್ ಅವರ ನೇತೃತ್ವದ ತನಿಖಾ ಆಯೋಗದ ಮುಂದಿನ ಸವಾಲಾಗಿದ್ದವು.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | 15 | ಕೇತ್ಕರ್ ಮಾತುಗಳಿಂದ ಸಂಸತ್ತಿನಲ್ಲಿ ಕೋಲಾಹಲ

ಅಷ್ಟರಲ್ಲಾಗಲೇ, ಗಾಂಧಿ ಹತ್ಯೆಯ ಸಂಚಿನ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಮತ್ತು ಆ ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕೂಡ, ಸಂಚು ಯಾವಾಗ ಹುಟ್ಟಿಕೊಂಡಿತ್ತು ಎಂಬ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದವು. ವಿಶೇಷ ನ್ಯಾಯಾಧೀಶ ಆತ್ಮ ಚರಣ್ ಅವರ ಪ್ರಕಾರ, ೧೯೪೮ರ ಜ.೯ರ ಹೊತ್ತಿಗೇ ಅಂತಹದ್ದೊಂದು ಸಂಚು ಜೀವ ಪಡೆದಿತ್ತು! ಅವರ ಮಾತುಗಳನ್ನೇ ಉಲ್ಲೇಖಿಸುವುದಾದರೆ: “ಪ್ಯಾಸಿಕ್ಯೂಷನ್ ಎದುರು ‘ಸಂಚು’ ನಿರ್ದಿಷ್ಟವಾಗಿ ಯಾವಾಗ ಮತ್ತು ಯಾರ ಮೂಲಕ ಹಾಗೂ ಎಲ್ಲಿ ಮೊದಲು ರೂಪುಗೊಂಡಿತು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳು ಲಭ್ಯವಿಲ್ಲ. ಆದರೆ, ಆರೋಪಿಗಳ ಚಲನವಲನ ಮತ್ತು ಅವರ ನಡವಳಿಕೆಯ ಹಿನ್ನೆಲೆಯಲ್ಲಿ ‘ಸಂಚು’ ೧೯೪೮ರ ಜನವರಿ ೯ರ ಹೊತ್ತಿಗೆಲ್ಲ ಚಾಲನೆ ಪಡೆದಿತ್ತು ಎಂಬುದನ್ನು ಊಹಿಸಬಹುದು. ಆ ಹೊತ್ತಿಗೆ, ನಾರಾಯಣ ಡಿ ಅಪ್ಟೆ ಎಂಬಾತ ವಿಷ್ಣು ಆರ್ ಕರ್ಕರೆ ಮತ್ತು ಮದನ್‌ಲಾಲ್ ಕೆ ಪವ್ಹಾ ಸೇರಿದಂತೆ ಇನ್ನಿಬ್ಬರನ್ನು ದಿಗಂಬರ್ ಆರ್ ಬಾಡ್ಗೆ ಮನೆಗೆ ಕಳಿಸಿ, ಅಲ್ಲಿ ಇಟ್ಟಿದ್ದ ‘ಸಾಮಗ್ರಿ’ಯನ್ನು ಪರಿಶೀಲಿಸಲು ಕಳಿಸಿದ್ದ. ಅಂದರೆ, ಅಷ್ಟರಲ್ಲಾಗಲೇ ನಾರಾಯಣ ಡಿ ಆಪ್ಟೆ, ವಿಷ್ಣು ಆರ್ ಕರ್ಕರೆ ಮತ್ತು ಮದನ್ ಲಾಲ್ ಕೆ ಪವ್ವಾ ಅವರುಗಳು ಆ ‘ಸಂಚಿ’ನ ಭಾಗವಾಗಿದ್ದರು. ಎರಡು ಗನ್ ಕಾಟನ್ ಸ್ಲಾಬ್ ಮತ್ತು ಐದು ಕೈಬಾಂಬುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ದಿಗಂಬರ್ ಆರ್ ಬಾಡ್ಗೆಗೆ ಸೂಚಿಸುವ ಮೂಲಕ ೧೯೪೮ರ ಜನವರಿ ೧೦ರಂದು ನಾಥೂರಾಂ ವಿ ಗೋಡ್ಸೆ ಮೊದಲ ಬಾರಿಗೆ ಈ ‘ಸಂಚಿ’ನಲ್ಲಿ ಕಾಣಿಸಿಕೊಂಡಿದ್ದ. ಬಹುಶಃ ನಾಥೂರಾಂ ಗೋಡ್ಸೆ ಆ ಹೊತ್ತಿಗಾಗಲೇ ‘ಸಂಚಿ’ನ ಭಾಗವಾಗಿರಲೇಬೇಕು. ನಾರಾಯಣ ಡಿ ಆಪ್ಟೆ ಮತ್ತು ನಾಥೂರಾಂ ಗೋಡ್ಸೆಯ ಜೊತೆ ದೆಹಲಿಗೆ ಹೊರಡಲು ಒಪ್ಪುವ ಮೂಲಕ ದಿಗಂಬರ್ ಆರ್ ಬಾಡ್ಗೆ ೧೯೪೮ರ ಜನವರಿ ೧೫ರಂದು ‘ಸಂಚಿ’ನಲ್ಲಿ ಸಕ್ರಿಯನಾಗುತ್ತಾನೆ. ಏಳು ದಿನಗಳ ಕಾಲ ಸಾಂದರ್ಭಿಕ ರಜೆಗೆ ಅರ್ಜಿ ಸಲ್ಲಿಸುವ ಮೂಲಕ ಗೋಪಾಲ್‌ ಗೋಡ್ಸೆ ಕೂಡ ೧೯೪೮ರ ಜನವರಿ ೧೪ರಂದು ಈ ಸಂಚಿನ ಭಾಗವಾಗುತ್ತಾನೆ. ಬಿರ್ಲಾ ಹೌಸಿನ ತಮ್ಮ ಭೇಟಿಯ ಉದ್ದೇಶವನ್ನು ದಿಗಂಬರ್ ಆರ್ ಬಾಡ್ಗೆ ಮೂಲಕ ಕೇಳಿಸಿಕೊಂಡ ಬಳಿಕ, ೧೯೪೮ರ ಜನವರಿ ೨೦ರಂದು ಶಂಕರ್ ಕಿಸ್ತಯ್ಯಾ ‘ಸಂಚಿ’ನ ಪಾಲುದಾರನಾಗುತ್ತಾನೆ. ನಾಥೂರಾಂ ವಿ ಗೋಡ್ಸೆ ಮತ್ತು ನಾರಾಯಣ ಡಿ ಆಪ್ಟೆ ಅವರಿಗೆ ಪಿಸ್ತೂಲ್ ದೊರಕಿಸಿಕೊಡಲು ಒಪ್ಪುವ ಮೂಲಕ ೧೯೪೮ರ ಜನವರಿ ೨೭ರಂದು ದತ್ತಾತ್ರೇಯ ಎಸ್ ಪಾರ್ಚುರೆ ‘ಸಂಚಿ’ನ ಪಾಲುದಾರನಾಗುತ್ತಾನೆ.”

ಸಂಚು ಹೇಗೆ ರೂಪುಗೊಂಡಿರಬಹುದು ಎಂಬ ಕುರಿತ ವಿಶೇಷ ನ್ಯಾಯಾಧೀಶರ ಈ ವಿವರಣೆಯನ್ನು ಪೂರ್ವ ಪಂಜಾಬ್ ಹೈಕೋರ್ಟ್ ಒಪ್ಪಿಕೊಂಡಿತು. ಅಲ್ಲದೆ, ಈ ವಿವರಣೆಗೆ ಪೂರಕವಾಗಿ ೩೩ನೇ ಸಾಕ್ಷಿಯಾದ ಗೋಪಾಲ ಗೋಡ್ಸೆಯ ಹೇಳಿಕೆ ಕೂಡ ದಾಖಲಾಗಿತ್ತು. ಗಾಂಧಿ ೧೯೪೮ರ ಜನವರಿ ೧೩ರಂದು ಕೋಮು ಸೌಹಾರ್ದತೆಗೆ ಒತ್ತಾಯಿಸಿ ನಡೆಸಿದ ತಮ್ಮ ಉಪವಾಸದ ನಿರ್ಧಾರವನ್ನು ಸಮರ್ಥಿಸಿಕೊಂಡ ಬಳಿಕ ಅವರನ್ನು ಮುಗಿಸಲು ನಾಥೂರಾಂ ಗೋಡ್ಸೆ ಅಂತಿಮವಾಗಿ ನಿರ್ಧರಿಸಿದ್ದ ಎಂದು ಗೋಪಾಲ್ ಗೋಡ್ಸೆ ಹೇಳಿದ್ದ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More