ಕೇರಳ ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆಯೇ ಅನುದಾನ ಕೊರತೆ?

ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜನರು ೨೧೦ ಕೋಟಿ ಜಮೆ ಮಾಡಿದ್ದಾರೆ. ಜನತೆಯೇ ಇಷ್ಟೊಂದು ಉದಾರವಾಗಿ ದೇಣಿಗೆ ನೀಡುತ್ತಿರುವಾಗ ಕೇಂದ್ರದಿಂದಲೂ ನಿರೀಕ್ಷೆ ಹೆಚ್ಚಿತ್ತು. ಹೀಗಾಗಿ, ಅನುದಾನದ ಕೊರತೆಯು ಮೋದಿ ಸರ್ಕಾರದ ಮೇಲೆ ಕೇರಳದ ಅಸಮಾಧಾನಕ್ಕೆ ಕಾರಣವಾಗಿದೆ

ಕೇರಳ ಪ್ರವಾಹ ಪೀಡಿತರಿಗೆ ಪರಿಹಾರಕ್ಕಾಗಿ ವಿದೇಶಿ ನೆರವು ಪಡೆದುಕೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದೆ. ಬುಧವಾರ ಸಂಜೆ ಈ ಕುರಿತ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ, ವಿದೇಶಿ ನೆರವು ಪಡೆದುಕೊಳ್ಳುವುದಿಲ್ಲ ಎಂದು ಘೋಷಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರರು ನೀಡಿರುವ ಹೇಳಿಕೆಯಲ್ಲಿ, “ವಿಭಿನ್ನ ದೇಶಗಳು ಭಾರತಕ್ಕೆ ನೆರವು ನೀಡಲು ಬಯಸುತ್ತಿರುವುದಕ್ಕೆ ನಾವು ಆಭಾರಿಯಾಗಿದ್ದೇವೆ. ಆದರೆ, ಈಗಿನ ನಿಯಮಗಳ ಪ್ರಕಾರ ಆಂತರಿಕವಾಗಿಯೇ ಸರ್ಕಾರ ಸ್ವತಃ ಪರಿಹಾರ ಮತ್ತು ಮರುನಿರ್ಮಾಣ ಪ್ರಯತ್ನಗಳಿಗೆ ಸಂಪನ್ಮೂಲ ಹೊಂದಿಸಿಕೊಳ್ಳಲು ನಿರ್ಧರಿಸಿದೆ,” ಎಂದು ತಿಳಿಸಲಾಗಿದೆ. “ಯುಎಇ ಸರ್ಕಾರದಿಂದ ೭೦೦ ಕೋಟಿ ಹಣಕಾಸು ನೆರವು ಪಡೆಯಲು ಏನೇ ಸಮಸ್ಯೆಗಳಿದ್ದರೂ ಅಧಿಕೃತವಾಗಿಯೇ ನಿವಾರಿಸಲು ಪ್ರಯತ್ನಿಸುತ್ತೇನೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚರ್ಚಿಸಲೂ ಸಿದ್ಧನಿದ್ದೇನೆ,” ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ ನಂತರ ಕೇಂದ್ರದಿಂದ ಈ ಅಧಿಕೃತ ಹೇಳಿಕೆ ಬಂದಿದೆ.

ಇತರ ದೇಶಗಳಿಂದ ಹಣಕಾಸು ನೆರವನ್ನು ಪಡೆದುಕೊಳ್ಳದೆ ಇರುವ ಬಗ್ಗೆ ಭಾರತ ಸರ್ಕಾರ ೧೫ ವರ್ಷಗಳ ಹಿಂದೆಯೇ ತೆಗೆದುಕೊಂಡಿರುವ ನಿರ್ಧಾರದ ಹಿನ್ನೆಲೆಯಲ್ಲಿ ಈಗ ಮೋದಿ ಸರ್ಕಾರವೂ ಯುಎಇ ಮತ್ತು ಕತಾರ್ ದೇಶಗಳು ನೀಡಿರುವ ಸಹಾಯವನ್ನು ಸ್ವೀಕರಿಸಲು ನಿರಾಕರಿಸಿದೆ. ವಾಸ್ತವದಲ್ಲಿ ೧೫ ವರ್ಷಗಳ ಹಿಂದೆ ಭಾರತ ಒಂದು ಪ್ರಗತಿಪರ, ಬಲಿಷ್ಠ ರಾಷ್ಟ್ರವಾಗಿ ಜಾಗತಿಕ ವರ್ಚಸ್ಸು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನೆರವಿನ ಹಸ್ತಕ್ಕಾಗಿ ಕೈಚಾಚದೆ ಇರಲು ತೀರ್ಮಾನಿಸಿತ್ತು. ಜಾಗತಿಕ ಶಕ್ತಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಿದ್ದ ಭಾರತ ಸ್ವಯಂ ವರ್ಚಸ್ಸನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಆದರೆ, ಈಗ ಕೇರಳ ಸರ್ಕಾರ ಮತ್ತು ಆಡಳಿತರೂಢ ಸಿಪಿಐ(ಎಂ) ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರದ ಕಡೆಗೆ ನೆರವಿಗಾಗಿ ನೋಡುತ್ತಿದ್ದಾರೆ. ವಿದೇಶಿ ನೆರವನ್ನು ಪಡೆಯದೆ ಇರುವುದನ್ನು ಒಪ್ಪಿಕೊಳ್ಳಬಹುದಾದರೂ, ಕೇರಳ ಸರ್ಕಾರ ಪುನರ್ನಿರ್ಮಾಣಕ್ಕಾಗಿ ಅಂದಾಜಿಸಿರುವ ೨೦,೦೦೦ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂದು ಸಿಪಿಐ (ಎಂ) ಅಭಿಪ್ರಾಯಪಟ್ಟಿದೆ.

ಹೀಗಾಗಿ, ಈವರೆಗೆ ಪರಸ್ಪರ ಹೊಂದಾಣಿಕೆಯಿಂದ ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರದ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಅವರು ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿರುವ 500 ಕೋಟಿ ರು. ಪರಿಹಾರವನ್ನು ೨,೦೦೦ ಕೋಟಿಗೆ ಏರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸೀತಾರಾಂ ಯೆಚೂರಿ ಅವರು ಪ್ರಧಾನಿ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ, “ರಾಜ್ಯದಲ್ಲಿ ಲಕ್ಷಾಂತರ ಮಂದಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕಾಗಿದೆ. ಹಾನಿಗೊಂಡಿರುವ ಮೂಲಸೌಕರ್ಯಗಳನ್ನು ಸರಿಪಡಿಸಬೇಕಿದೆ,” ಎಂದು ಹೇಳಿದ್ದಾರೆ. ಕೇರಳದಲ್ಲಿ ಆಡಳಿತದಲ್ಲಿರುವ ಕಮ್ಯುನಿಸ್ಟ್ ಪಕ್ಷ ಇಂತಹ ಸಮಸ್ಯೆಯನ್ನು ಮೊದಲ ಬಾರಿ ಎದುರಿಸುತ್ತಿದ್ದು, ಅಧಿಕೃತವಾಗಿ ಅನುದಾನಕ್ಕಾಗಿ ಬೇಡಿಕೆ ಇಟ್ಟಿದೆ. ಈವರೆಗೆ ಕೇರಳ ಕೇಂದ್ರದ ಜೊತೆಗೆ ಸಂಘರ್ಷರಹಿತವಾಗಿ ಕೆಲಸ ಮಾಡುತ್ತಿತ್ತು. ಮೋದಿ ಸರ್ಕಾರ ಸಾಕಷ್ಟು ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನಾಗರಿಕ ಸಮುದಾಯಗಳು ಆರೋಪ ಹೊರಿಸುತ್ತಿದ್ದರೂ, ಅಧಿಕೃತವಾಗಿ ಕೇರಳ ಸರ್ಕಾರ ಕೇಂದ್ರದ ಮೇಲೆ ಅಸಮಾಮಧಾನ ತೋರಿಸಿರಲಿಲ್ಲ. ಆದರೆ, ನಷ್ಟದ ಪ್ರಮಾಣ ೩೦,೦೦೦ ಕೋಟಿಗೂ ಅಧಿಕವಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ೫೦೦ ಕೋಟಿಗಳನ್ನಷ್ಟೇ ತಕ್ಷಣದ ಪರಿಹಾರವಾಗಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

“ಹಿಂದೆಂದೂ ಕಾಣದೆ ಇರುವಂತಹ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ೫೦೦ ಕೋಟಿಗಳ ನೆರವಷ್ಟೇ ನೀಡಿದೆ. ಈ ಮೊತ್ತವನ್ನು ೨೦೦೦ ಕೋಟಿಗೆ ಏರಿಸುವಂತೆ ನಾನು ಕೋರಿಕೊಳ್ಳುತ್ತೇನೆ. ಸದ್ಯದ ತುರ್ತನ್ನು ಗಮನಿಸಿ ಕೇಂದ್ರ ಸರ್ಕಾರ ಶೀಘ್ರವೇ ಪ್ರತಿಕ್ರಿಯಿಸಲಿದೆ ಎನ್ನುವ ನಿರೀಕ್ಷೆ ಇದೆ,” ಎಂದು ಯೆಚೂರಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಈಗಾಗಲೇ ಮೊದಲ ಹಂತದ ರಕ್ಷಣಾ ಕಾರ್ಯಗಳು ಮುಗಿದಿರುವ ಕಾರಣ ರಾಜ್ಯ ಸರ್ಕಾರ ತಕ್ಷಣವೇ ಮೂರು ಲಕ್ಷ ಮಂದಿಗೆ ಪುನರ್ವಸತಿ ಕಲ್ಪಿಸಬೇಕಿದೆ. ಇದಕ್ಕಾಗಿ ವ್ಯಾಪಕ ಸಂಪನ್ಮೂಲಗಳ ಅಗತ್ಯವಿದೆ. ಅಲ್ಲದೆ, ರಾಜ್ಯದಲ್ಲಿ ಮೂಲಸೌಕರ್ಯಗಳನ್ನೂ ಮರುಸ್ಥಾಪಿಸಬೇಕಾಗಿದೆ. ರಸ್ತೆ ಮೊದಲಾದ ಸಂಪರ್ಕ ವ್ಯವಸ್ಥೆಯನ್ನು ಪುನರ್‌ ಸ್ಥಾಪಿಸುವ ಕೆಲಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಕೆಲಸ ಮಾಡುವ ಅಗತ್ಯವಿದೆ. ಇದೇ ಕಾರಣದಿಂದ ಯೆಚೂರಿ ಅವರು ತಮ್ಮ ಪತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಕೇಂದ್ರೀಯ ಸಂಸ್ಥೆಗಳ ನೆರವನ್ನು ಬಯಸಿದ್ದಾರೆ.

ಇದನ್ನೂ ಓದಿ : ವಿದೇಶಿ ನೆರವು ನಿರಾಕರಣೆಗೆ ಭಾವನಾತ್ಮಕ, ಧಾರ್ಮಿಕ ನೆಲೆಗಟ್ಟು ಕಾರಣವಾಗದಿರಲಿ

ಮತ್ತೊಂದೆಡೆ, ಕೇರಳದಲ್ಲಿ ಈಗಿನ ಪ್ರವಾಹವನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಈ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯ ಬೆಂಬಲಿಗರು, “ಕೇರಳಿಗರು ದನದ ಮಾಂಸ ತಿನ್ನುವುದಕ್ಕಾಗಿ ದೇವರು ಶಪಿಸಿದ್ದಾನೆ,” ಎನ್ನುವ ರೀತಿಯ ಸಂದೇಶ ಹರಡುತ್ತಿರುವುದು ಕೇರಳದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಕೇರಳದ ಆರ್‌ಎಸ್‌ಎಸ್‌ ವೆಬ್‌ತಾಣ ‘ಕೇಸರಿ’ಯಲ್ಲಿ ಬರೆದ ಸಂಪಾದಕೀಯದಲ್ಲಿ ಕೇರಳಕ್ಕೆ ವಿದೇಶಿ ನೆರವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಹೇಳಲಾಗಿದೆ. ಆದರೆ, ಆರ್‌ಎಸ್‌ಎಸ್‌ನ ಮುಖವಾಣಿ ಪತ್ರಿಕೆ ‘ಜನ್ಮಭೂಮಿ’ಯು, ವೆಬ್‌ತಾಣದಲ್ಲಿ ಕಿಡಿಗೇಡಿಗಳು ಈ ಸಂಪಾದಕೀಯವನ್ನು ತುರುಕಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಇಂತಹ ಗೊಂದಲದ ನಡುವೆ ಕೇಂದ್ರ ಸರ್ಕಾರ ವಿದೇಶಿ ನೆರವನ್ನೂ ನಿರಾಕರಿಸಿರುವುದು ಎಡಪಕ್ಷ ಆಡಳಿತದ ಕೇರಳ ಮತ್ತು ಬಲಪಂಥೀಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ರಾಜ್ಯದ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಕೇರಳ ಮುಖ್ಯಮಂತ್ರಿ ನಿಧಿಗೆ ಜನರು ೨೧೦ ಕೋಟಿ ರುಪಾಯಿಗಳನ್ನು ಈವರೆಗೆ ಜಮೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಜನತೆಯೇ ಇಷ್ಟೊಂದು ಉದಾರವಾಗಿ ದೇಣಿಗೆ ನೀಡುತ್ತಿರುವಾಗ ಸಹಜವಾಗಿಯೇ ಕೇಂದ್ರ ಸರ್ಕಾರದಿಂದ ನಿರೀಕ್ಷೆ ಹೆಚ್ಚಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More