ಹೈಕೋರ್ಟ್ ಛೀಮಾರಿಗೆ ಬೆದರಿದ ರಾಜ್ಯ ಸರ್ಕಾರ; ದಕ್ಷತೆ ಹೆಚ್ಚಿಸಲು ಸುತ್ತೋಲೆ

ಸಮ್ಮಿಶ್ರ ಸರ್ಕಾರ ಟೇಕಾಫ್‌ ಆಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಬಿಬಿಎಂಪಿ ಪ್ರಕರಣದಲ್ಲಿ ಮುಖ್ಯವಾಗಿ ಅಧಿಕಾರಿಗಳ ತಾತ್ಸಾರವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಇದೀಗ ಸಚಿವಾಲಯದ ಇಲಾಖೆಗಳಲ್ಲಿ ದಕ್ಷತೆ ಹೆಚ್ಚಿಸಲು ಮುಖ್ಯ ಕಾರ್ಯದರ್ಶಿ ಮುಂದಾಗಿದ್ದಾರೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಬ್ಯಾನರ್‌, ಫ್ಲೆಕ್ಸ್‌, ಹೋರ್ಡಿಂಗ್ಸ್‌ ಗಳ ತೆರವಿಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬೆವರಿಳಿಸಿತ್ತು. ಅಧಿಕಾರಿಗಳ ಉದಾಸಿನತೆ, ತಾತ್ಸಾರ ಧೋರಣೆ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ಮುಚ್ಚಳಿಕೆಯ ಪ್ರಮಾಣಪತ್ರದ ಬಗ್ಗೆಯೂ ಕಿಡಿಕಾರಿತ್ತಲ್ಲದೆ, “ಕಣ್ಣೊರೆಸುವ ತಂತ್ರಗಳನ್ನು ಬಿಡಿ.” ಎಂದು ಕಟುವಾಗಿ ನುಡಿದಿತ್ತು.

ಈ ಪ್ರಕರಣ ಇದೇ ಆಗಸ್ಟ್ ೩೧ರಂದು ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರು, ಸಚಿವಾಲಯದ ಇಲಾಖೆಗಳಲ್ಲಿ ದಕ್ಷತೆ ಹೆಚ್ವಿಸಲು ಮುಂದಾಗಿದ್ದಾರೆ. ಈ ಸಂಬಂಧ ಆಗಸ್ಟ್‌ ೧೩,೨೦೧೮ರಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯ ಪ್ರತಿ

ಇಂತಹ ಪ್ರಕರಣಗಳು ಮರುಕಳಿಸುವುದಕ್ಕೆ ಅವಕಾಶ ನೀಡದಂತೆ ಹಾಗೂ ಸರ್ಕಾರಕ್ಕೆ ಮುಜುಗರವಾಗದಂತೆ ಜಾಗರೂಕವಾಗಿರಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಲಾಗಿದೆ.

“ಇಂತಹ ಪ್ರಕರಣಗಳು ಆಗಾಗ್ಗೆ ಮರುಕಳಿಸುವುದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಸರ್ಕಾರದ ಎಲ್ಲ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿ, ಜಂಟಿ, ಉಪ, ಅಧೀನ ಕಾರ್ಯದರ್ಶಿಗಳು ಇಂತಹ ಪ್ರಕರಣಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ತಮ್ಮ-ತಮ್ಮ ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ಅಧಿಕಾರಿ, ಸಿಬ್ಬಂದಿ ಜಾಗರೂಕತೆಯಿಂದ ಅವರವರಿಗೆ ವಹಿಸಲಾದ ವಿಷಯಗಳನ್ನು ನಿಯತಕಾಲಿಕವಾಗಿ ಮುತುವರ್ಜಿ ವಹಿಸಬೇಕು,” ಎಂದು ಸುತ್ತೋಲೆಯಲ್ಲಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಅಲ್ಲದೆ, ೭ ದಿವಸಗಳಿಗಿಂತ ಹೆಚ್ಚಿನ ಅವಧಿ ನಿರ್ವಹಿಸದೆ ಇರುವ ಪತ್ರಗಳು, ೧೫ ದಿವಸಗಳಿಗಿಂತ ಹೆಚ್ಚಿನ ಅವಧಿ ನಿರ್ವಹಿಸದೆ ಇರುವ ಕಡತಗಳ ಬಾಕಿ ಕುರಿತು ಪ್ರತಿದಿನ ಸರ್ಕಾರದ ಎಲ್ಲ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಎಸ್‌ ಎಂ ಎಸ್‌ ಮೂಲಕ ಎಚ್ಚರಿಸಲಾಗುತ್ತಿದೆ. ೧೫ ದಿನಗಳಿಗೊಮ್ಮೆ ಖುದ್ದು ಪರಿಶೀಲನೆ ಸಭೆ ನಡೆಸಿ ವಿಲೇವಾರಿ ಕುರಿತು ಕ್ರಮ ಜರುಗಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಜಾಗರೂಕರಾಗಿರಲು ಸೂಚಿಸಿರುವ ಸುತ್ತೋಲೆಯ ಪ್ರತಿ
ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಆರ್ಥಿಕ ಸ್ಥಿತಿ ಅಧೋಗತಿ; ಹಣಕಾಸು ಸಚಿವಾಲಯ ಖಾಲಿ ಖಾಲಿ

ನ್ಯಾಯಾಲಯ ಪ್ರಕರಣಗಳಲ್ಲಿ ಮಾಹಿತಿ ಒದಗಿಸಲು ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಅಧಿಕಾರಿಗಳ ಅನಗತ್ಯ ವಿಳಂಬ ಧೋರಣೆ ಕುರಿತು ಹೈಕೋರ್ಟ್‌ ಮಾಡಿದ್ದ ಗಂಭೀರ ಅವಲೋಕನಗಳನ್ನು ಸುತ್ತೋಲೆಯಲ್ಲಿ ಪ್ರಸ್ತಾಪಿಸಿರುವ ಮುಖ್ಯ ಕಾರ್ಯದರ್ಶಿ, ಇನ್ನು ಮುಂದೆ ಈ ವಿಷಯದಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಗಳ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಬ್ಯಾನರ್‌, ಫ್ಲೆಕ್ಸ್‌, ಹೋರ್ಡಿಂಗ್ಸ್‌ ಹಾವಳಿ ಕುರಿತಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ವೇಳೆಯಲ್ಲಿ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಅಧಿಕಾರಿಗಳು ಸೂಕ್ತ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದರು. ಅಧಿಕಾರಿಗಳ ಈ ಧೋರಣೆಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿ ಇದನ್ನು ಗಂಭೀರವಾಗಿ ಪರಿಗಣಿಸಿತ್ತಲ್ಲದೆ, ಅನಗತ್ಯ ವಿಳಂಬಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂಬ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More