ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳತ್ತ ನೋಟ

ಮಳೆಯಿಂದ ನಾಲ್ಕು ಜಿಲ್ಲೆಗಳಲ್ಲಿ ೨೦೦ ಕೋಟಿ ರುಪಾಯಿ ನಷ್ಟ

ಮಳೆ ಹಾಗೂ ಪ್ರವಾಹದಿಂದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ಅಂದಾಜು ೨೦೦ ಕೋಟಿ ರುಪಾಯಿ ನಷ್ಟವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂದಾಜಿಸಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸಿದೆ. ಕೊಡಗು ಜಿಲ್ಲೆಯೊಂದರಲ್ಲೇ ಮಳೆ ಆರ್ಭಟದಿಂದ ೧೦೦ ಕೋಟಿ ರುಪಾಯಿಗೂ ಅಧಿಕ ನಷ್ಟವಾಗಿದೆ. ಗ್ರಾಮೀಣಾಭಿವೃದ್ಧಿ, ಇಂಧನ, ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಆಸ್ತಿಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಪರಿಸ್ಥಿತಿ ಸುಧಾರಿಸಲು ಕನಿಷ್ಠ ೫೨ ಕೋಟಿ ರುಪಾಯಿ ಅಗತ್ಯವಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಕಳೆದ ವಾರ ತಕ್ಷಣ ೨೦೦ ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು.

ಯುಎಇ ಸರ್ಕಾರ ಹಣ ನಿರಾಕರಿಸಿದರೆ ಕೇಂದ್ರವೇ ೨೬೦೦ ಕೋಟಿ ನೀಡಲಿ: ಸಿಪಿಐ

ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ 700 ಕೋಟಿ ಧನ ಸಹಾಯ ಮಾಡುವುದಾಗಿ ಯುಎಯಿ ಸರ್ಕಾರ ಮುಂದೆ ಬಂದಿದ್ದರೂ, ಕೇಂದ್ರ ಸರ್ಕಾರ ಕೆಲ ಕಾರಣಗಳನ್ನಿಟ್ಟುಕೊಂಡು ಯುಎಯಿ ಸರ್ಕಾರದ ಧನ ಸಹಾಯವನ್ನು ತಿರಸ್ಕರಿಸುತ್ತಿದೆ. ಯುಎಯಿ ಸರ್ಕಾರದ ಸಹಾಯವನ್ನು ಪಡೆಯುವುದಿಲ್ಲ ಎಂದಾದರೆ, ತಕ್ಷಣಕ್ಕೆ ಕೇಂದ್ರ ಸರ್ಕಾರ 2600 ಕೋಟಿ ರುಪಾಯಿಗಳ ಪರಿಹಾರ ನೀಡುವಂತೆ ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ ಒತ್ತಾಯಿಸಿದ್ದಾರೆ. ಯಾವುದೇ ದೇಶ ಪೃಕ್ರತಿ ವಿಕೋಪದಂತಹ ಸಮಸ್ಯೆಗಳು ಎದುರಾದಾಗ ನೆರೆಯ ರಾಷ್ಟ್ರಗಳು ಸಹಾಯಕ್ಕೆ ಧಾವಿಸುವುದು ಸಾಮಾನ್ಯ ಎಂದಿದ್ದಾರೆ ರೆಡ್ಡಿ.

ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯ 8 ಲಕ್ಷ ಕೋಟಿ!

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 8 ಲಕ್ಷ ಕೋಟಿ ರುಪಾಯಿ ದಾಟಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕಂಪನಿ ಇದು. ಈ ಮೊದಲು ಟಿಸಿಎಸ್ ನಂತರ 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ ಎರಡನೇ ಭಾರತದ ಕಂಪನಿಯಾಗಿತ್ತು. ಮೊದಲ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸತತ ಏರುಹಾದಿಯಲ್ಲಿದೆ. ಗುರುವಾರದ ವಹಿವಾಟಿಲ್ಲಿ ಶೇ.2ರಷ್ಟು ಏರಿದ್ದು, ಮಾರುಕಟ್ಟೆ ಬಂಡವಾಳ ಮೌಲ್ಯ 804,691.40 ಕೋಟಿ ರುಪಾಯಿಗೆ ಏರಿತು. ಈಗ ಎರಡನೇ ಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಮಾರುಕಟ್ಟೆ ಬಂಡವಾಳ ಮೌಲ್ಯ 779,287.34 ಕೋಟಿ ರುಪಾಯಿ.

ಹಿರಿಯ ಪತ್ರಕರ್ತ ಕುಲದೀಪ್ ನಾಯರ್ ವಿಧಿವಶ

ಹಿರಿಯ ಪತ್ರಕರ್ತ, ಅಂಕಣಕಾರ ಕುಲದೀಪ್ ನಾಯರ್ ದೆಹಲಿಯ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವಿಭಜಿತ ಭಾರತದ ಪಾಕಿಸ್ತಾನದಲ್ಲಿ ಜನಿಸಿದ ಕುಲದೀಪ್, ಉರ್ದು ಪತ್ರಿಕೆ ಮೂಲಕ ವೃತ್ತಿಜೀವನ ಆರಂಭಿಸಿದ್ದರು. ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದರು. ವಿಭಜನೆಯ ಸಂದರ್ಭದಲ್ಲಿನ ಅವರ ಅನುಭವ ಕಥನಗಳು ಚಾರಿತ್ರಿಕ ದಾಖಲೆಯಾಗಿ ಉಳಿದಿವೆ. ‘ಇಂಡಿಯನ್ ಎಕ್ಸ್‌ಪ್ರೆಸ್' ಮಾಜಿ ಸಂಪಾದಕರಾದ ಅವರು, 1990ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಭಾರತೀಯ ಹೈಕಮಿಶನರ್ ಆಗಿ ಸೇವೆ ಸಲ್ಲಿಸಿದ್ದರು. 1997ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಕಟುವಾಗಿ ವಿರೋಧಿಸಿದ್ದಕ್ಕಾಗಿ ನಯರ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. 'ಬಿಯಾಂಡ್ ದಿ ಲೈನ್ಸ್’, ‘ಇಂಡಿಯಾ ಆಫ್ಟರ್ ನೆಹರೂ’ ಹಾಗೂ ‘ಎಮರ್ಜೆನ್ಸಿ ರಿಟೋಲ್ಡ್’ ಸೇರಿದಂತೆ 15 ಪುಸ್ತಕಗಳನ್ನು ಬರೆದಿದ್ದಾರೆ.

ಮುಝಫರ್‌ಪುರ ಪ್ರಕರಣ; ಸಿಬಿಐ ಅನ್ನು ತರಾಟೆ ತೆಗೆದುಕೊಂಡ ಪಾಟ್ನಾ ಹೈಕೋರ್ಟ್‌

ಮುಝಫರ್‌ಪುರ ಆಶ್ರಯ ಗೃಹದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಹೈಕೋರ್ಟ್ ಇಂದು ವಿಚಾರಣೆ ಆರಂಭಿಸಿದ್ದು, ತನಿಖಾ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ. ವರದಿ ಸಲ್ಲಿಕೆಗೆ ಗಡುವು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿರುವ ಹೈಕೋರ್ಟ್, ಆ.27 ರ ಒಳಗೆ ಪ್ರಕರಣದ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳು ಬಹಿರಂಗಗೊಂಡು ಅಪರಾಧಿಗಳು ಸಾಕ್ಷಿ ನಾಶ ಅಥವಾ ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದ ಯಾವ ಮಾಹಿತಿಯನ್ನು ಬಿತ್ತರಿಸದಂತೆ ಹೈಕೋರ್ಟ್ ಮಾಧ್ಯಮಗಳಿಗೆ ಸೂಚಿಸಿದೆ.

ಟಿ೨೦ ಕ್ರಿಕೆಟ್‌ಗೆ ಜೂಲನ್ ಗೋಸ್ವಾಮಿ ವಿದಾಯ

ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಜೂಲನ್ ಗೋಸ್ವಾಮಿ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರತಿಭಾನ್ವಿತ ವೇಗದ ಬೌಲರ್ ಜೂಲನ್, ಭಾರತದ ಪರ ಇಲ್ಲೀವರೆಗೆ ೬೮ ಟಿ೨೦ ಪಂದ್ಯಗಳನ್ನಾಡಿದ್ದು ೫೬ ವಿಕೆಟ್ ಗಳಿಸಿದ್ದಾರೆ. ಈ ಪೈಕಿ ೨೦೧೨ರಲ್ಲಿ ಆಸ್ಟ್ರೇಲಿಯಾ ವಿರುದ್ಧ ೧೧ ರನ್‌ಗಳಿಗೆ ಗಳಿಸಿದ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ೩೫ರ ಹರೆಯದ ಜೂಲನ್, ೨೦೦೬ರ ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಪ್ರಥಮ ಟಿ೨೦ ಪಂದ್ಯವನ್ನಾಡಿದ್ದರು. ಅಂತೆಯೇ ಇದೇ ಜುಲೈನಲ್ಲಿ ಏಷ್ಯಾ ಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಪಂದ್ಯ ಕೊನೆಯದು. ಇದೇ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಜೂಲನ್ ಗೋಸ್ವಾಮಿ ಏಕದಿನ ಕ್ರಿಕೆಟ್‌ನಲ್ಲಿ ೨೦೦ನೇ ವಿಕೆಟ್‌ ಪಡೆದು ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬೌಲರ್ ಎನಿಸಿದ್ದರು. ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಟೆಸ್ಟ್ ಮತ್ತು ಏಕದಿನ ಪ್ರಕಾರಗಳಲ್ಲಿ ಜೂಲನ್ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಲಿಂಕ್ಡಿನ್ ಜಾಲತಾಣ ಬಳಕೆದಾರರ ಮಾಹಿತಿಯನ್ನು ಸಂಶೋಧನೆಗೆ ಬಳಸಲಾಗುವುದು ಎಂದ ಕಂಪನಿ

ಫೇಸ್‌ಬುಕ್ ಜಾಲತಾಣದ ಕೆಂಬ್ರಿಡ್ಜ್ ಅನಲಿಟಿಕಾ ಹಗರಣದ ಬಳಿಕ ಮೈಕ್ರೋಸಾಫ್ಟ್ ಒಡೆತನದ ವೃತ್ತಿಪರ ಸಾಮಾಜಿಕ ಜಾಲತಾಣದ ಬಳಕೆದಾರರ ಮಾಹಿತಿ ಕೂಡ ಹಂಚಿಕೆಯಾಗುತ್ತಿದೆ. ೫೦೦ ಮಿಲಿಯನ್ ಬಳಕೆದಾರರ ಮಾಹಿತಿಯನ್ನು ಶೈಕ್ಷಣಿಕ ಅಧ್ಯಯನಕ್ಕಾಗಿ ಕೊಡಲಾಗುವುದು ಎಂದು ಲಿಂಕ್ಡಿನ್ ಕಂಪನಿ ಅಧಿಕೃತವಾಗಿ ಗುರುವಾರ ಹೇಳಿಕೊಂಡಿದೆ. ಆದರೆ ಬಳಕೆದಾರರ ಮಾಹಿತಿಯನ್ನು ಸಂಶೋಧನಾಕಾರರು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಕೊಡಲಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕೇರಳ ಸಂತ್ರಸ್ತರಿಗಾಗಿ 51 ಲಕ್ಷ ರುಪಾಯಿ ನೀಡಿದ ಬಚ್ಚನ್‌

ಕೇರಳ ನಿರಾಶ್ರಿತರ ಪುನರ್ವಸತಿಗಾಗಿ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ 51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಹಣ ಮಾತ್ರವಲ್ಲದೆ ತಮ್ಮ ವೈಯಕ್ತಿಕ ವಾರ್ಡ್‌ರೋಬ್‌ ಸಂಗ್ರಹದ ಒಂದಷ್ಟು ಭಾಗವನ್ನೂ ಅವರು ಸಂತ್ರಸ್ತರಿಗೆ ಕಳುಹಿಸಿಕೊಟ್ಟಿದ್ದಾರೆ. 80 ಜಾಕೆಟ್, 25 ಪ್ಯಾಂಟ್‌, 20 ಶರ್ಟ್‌, 40 ಜೊತೆ ಶೂಗಳನ್ನು ಬಚ್ಚನ್ ನೀಡಿದ್ದಾರೆ ಎನ್ನುವ ಮಾಹಿತಿ ಇದೆ. ಕೇರಳದಲ್ಲಿ ಪ್ರವಾಹದಿಂದಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.

ಐಸಿಸಿ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ  ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ದಿನದ ಹಿಂದಷ್ಟೇ ಮುಗಿದ ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಭಾರತಕ್ಕೆ ೨೦೩ ರನ್ ಗೆಲುವು ತಂದೀಯುವಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಹೇಗೆ ಮಿಂಚು ಹರಿಸಿದ್ದರೋ ಅದೇ ರೀತಿ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ೯೩ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ೧೦೩ ರನ್ ಗಳಿಸಿದ್ದರು. ಭಾರತದ ಬೃಹತ್ ರನ್ ಗೆಲುವಿನಲ್ಲಿ ಕೊಹ್ಲಿ ಬ್ಯಾಟಿಂಗ್ ನಿರ್ಣಾಯಕವೆನಿಸಿತ್ತು. ಪ್ರಸ್ತುತ ಐದು ಪಂದ್ಯಗಳ ಸರಣಿಯಲ್ಲಿ ೪೪೦ ರನ್ ಪೇರಿಸಿರುವ ಕೊಹ್ಲಿ, ಎಂಆರ್‌ಎಫ್ ಟೈರ್ಸ್ ಐಸಿಸಿ ಟೆಸ್ಟ್ ಆಟಗಾರರ ಶ್ರೇಯಾಂಕಪಟ್ಟಿಯಲ್ಲಿ ೯೩೭ ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.

೭೫ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಎಲ್ಲ ಕುಟುಂಬಗಳಿಗೂ ಸ್ವಂತ ಮನೆ: ಮೋದಿ

ಭಾರತವು ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ೨೦೨೨ರಲ್ಲಿ ಆಚರಿಸಲಿದ್ದು, ಈ ಅವಧಿಯೊಳಗೆ ದೇಶದ  ಪ್ರತಿಯೊಂದು ಕುಟುಂಬಗಳು ಸ್ವಂತ ಮನೆ ಹೊಂದುವುದು ನನ್ನ ಕನಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಗುರುವಾರ ಗುಜರಾತ್ ಗೆ ಭೇಟಿ ನೀಡಿ ವಾಲ್ಸಾಡದ ಜುಜ್ವಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, “ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗುಣಮಟ್ಟದ ಮನೆಗಳನ್ನು ನಿರ್ಮಿಸಬಹುದಾಗಿದೆ. ಮನೆಗಳನ್ನು ನಿರ್ಮಿಸುವುದಕ್ಕೆ ನೀವು ಯಾವುದೇ ಆಮಿಷಗಳಿಗೆ ಒಳಗಾಗುವ ಅವಶ್ಯವಿಲ್ಲ,” ಎಂದಿದ್ದಾರೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More