ಭಾರತ-ಪಾಕ್ ಬಾಂಧವ್ಯ ಗಟ್ಟಿಗೊಳಿಸಲಿದೆ ಇಮ್ರಾನ್ ಖಾನ್ ಸಹಾಯಹಸ್ತ

ದುರಂತ ಸಂದರ್ಭದಲ್ಲಿ ಪರಸ್ಪರ ನೆರವು ನೀಡುವುದು ಎರಡೂ ದೇಶಕ್ಕೆ ಹೊಸತಲ್ಲ. ಪಾಕ್ ಪ್ರಧಾನಿ ಕೇರಳದ ಜನತೆಗೆ ಚಾಚಿರುವ ಸಹಾಯಹಸ್ತ ಕೇರಳ ಸಂತ್ರಸ್ತರಿಗೆ ಮಾತ್ರವಲ್ಲದೆ ಎರಡೂ ದೇಶಗಳ ಬಾಂಧವ್ಯ ವೃದ್ಧಿಗೂ ಸಹಕಾರಿ. ಈ ಕುರಿತು ‘ದಿ ವೈರ್’ ಪ್ರಕಟಿಸಿರುವ ವರದಿಯ ಭಾವಾನುವಾದ ಇಲ್ಲಿದೆ

ಅರಬ್ ಸಂಯುಕ್ತ ಸಂಸ್ಥಾನ ಮತ್ತು ಮಾಲ್ಡೀವ್ಸ್‌ನಿಂದ ಕೇರಳ ಸಂತ್ರಸ್ತರಿಗೆ ಬಂದಿದ್ದ ನೆರವನ್ನು ಕೇಂದ್ರ ತಿರಸ್ಕರಿಸಿದ ಒಂದು ದಿನದ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಅಗತ್ಯವಿದ್ದರೆ ತಾವು ಮಾನವೀಯ ನೆಲೆಯಲ್ಲಿ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವುದಾಗಿ ಹೇಳಿದ್ದಾರೆ.

ಕೇರಳದಲ್ಲಿ ಮಳೆ ಕಾರಣಕ್ಕೆ ಸಾವಿಗೀಡಾದವರ ಸಂಖ್ಯೆ 370ಕ್ಕೆ ಏರಿದ್ದು, ಗುರುವಾರ (ಆ.23) ನೆರವಿನ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, “ಕೇರಳ ಪ್ರವಾಹದಲ್ಲಿ ನೆಲೆ ಕಳೆದುಕೊಂಡವರಿಗಾಗಿ ನಾವು ಪಾಕಿಸ್ತಾನದ ಪರವಾಗಿ ಪ್ರಾರ್ಥಿಸುತ್ತೇವೆ. ಅವರಿಗೆ ಒಳ್ಳೆಯದಾಗಲಿ. ಮಾನವೀಯ ನೆಲೆಯಲ್ಲಿ ಏನಾದರೂ ಸಹಾಯ ಅಗತ್ಯವಿದ್ದರೆ ಅದಕ್ಕೆ ನಾವು ಸಿದ್ಧ,” ಎಂದು ಉಲ್ಲೇಖಿಸಿದ್ದಾರೆ.

ಯಾವುದೇ ದೇಶದಿಂದ ಸಹಾಯ ಪಡೆಯುವುದಿಲ್ಲ ಎಂದು ಬುಧವಾರ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. “ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ ದೇಶೀಯ ಯತ್ನಗಳ ಮೂಲಕ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಅರಬ್ ಮತ್ತು ಮಾಲ್ಡೀವ್ಸ್ ರಾಷ್ಟ್ರಗಳಿಂದ ಬಂದ ನೆರವನ್ನು ವಿನಯಪೂರ್ವಕವಾಗಿ ನಿರಾಕರಿಸಿದ್ದರು.

ದುರಂತ ಸಂದರ್ಭದಲ್ಲಿ ಪರಸ್ಪರ ನೆರವು ನೀಡುವುದು ಪಾಕಿಸ್ತಾನ ಮತ್ತು ಭಾರತಕ್ಕೆ ಹೊಸತೇನೂ ಅಲ್ಲ. 2001ರಲ್ಲಿ ಭೂಕಂಪದಿಂದ ಭುಜ್ ಹಾನಿಗೀಡಾಗಿದ್ದಾಗ 600 ಟೆಂಟ್ ಹಾಗೂ 7,000 ಹೊದಿಕೆಗಳನ್ನು ವಿಮಾನದ ಮೂಲಕ ಪಾಕ್‌ಗೆ ರವಾನಿಸಿತ್ತು. ನಾಲ್ಕು ವರ್ಷಗಳ ಬಳಿಕ ಕಾಶ್ಮೀರ ಭಾಗದಲ್ಲಿ ಭೂಕಂಪ ಸಂಭವಿಸಿ ಎರಡೂ ದೇಶಗಳ 90 ಸಾವಿರ ಮಂದಿ ಮೃತಪಟ್ಟಿದ್ದರು. ಅಧಿಕೃತ ಮಾಹಿತಿ ಪ್ರಕಾರ, ಪಾಕಿಸ್ತಾನವೊಂದರಲ್ಲೇ 87,000 ಮಂದಿ ಸಾವನ್ನಪ್ಪಿದ್ದರು. ತಕ್ಷಣ ಭಾರತ ಸಂತ್ರಸ್ತರಿಗೆ ನೆರವು ನೀಡುವಂತೆ ಕೋರಿತು. ಭಾರಿ ಹಾನಿಗೊಳಗಾಗಿದ್ದ ಪಾಕಿಸ್ತಾನವೂ ಅಂತಾರಾಷ್ಟ್ರೀಯ ಸಮುದಾಯದ ನೆರವು ಯಾಚಿಸಿತು. ಇದಕ್ಕೆ ಸಂಕಷ್ಟದಲ್ಲಿದ್ದ ಭಾರತವೂ ಸ್ಪಂದಿಸಿತ್ತು. 2005ರ ನವೆಂಬರ್‌ನಲ್ಲಿ 1,300 ಟನ್‌ನಷ್ಟು ಪರಿಹಾರ ಸಾಮಗ್ರಿಗಳನ್ನು ರಸ್ತೆ, ರೈಲು ಹಾಗೂ ವಾಯುಮಾರ್ಗದ ಮೂಲಕ ಪಾಕಿಸ್ತಾನಕ್ಕೆ ತಲುಪಿಸಿತು. ಪರಿಹಾರ ಸಾಮಗ್ರಿ ಸಾಗಿಸಲು ಗಡಿಯುದ್ದಕ್ಕೂ ಇದ್ದ ಐದು ಕ್ರಾಸಿಂಗ್ ಪಾಯಿಂಟ್‌ಗಳನ್ನು ತೆರೆದಿಡಲಾಯಿತು. ಅಲ್ಲದೆ, ಪಾಕ್ ಆಕ್ರಮಿತ ಪ್ರದೇಶದ ಸಂತ್ರಸ್ತರಿಗೆ ದೀರ್ಘಕಾಲೀನ ಪುನರ್ವಸತಿ ಮತ್ತು ಮರುನಿರ್ಮಾಣ ಕಾರ್ಯಕ್ಕಾಗಿ 2.5 ಕೋಟಿ ಡಾಲರ್ ಹಣ ಮೀಸಲಿರಿಸುವುದಾಗಿ ದಾನಿಗಳ ಸಮಾವೇಶದಲ್ಲಿ ಬದ್ಧತೆ ಪ್ರದರ್ಶಿಸಿತು.

ಪಾಕಿಸ್ತಾನ ನೆರವನ್ನು ಒಪ್ಪಿಕೊಂಡದ್ದು ತೀವ್ರವಾಗಿ ಜರ್ಜರಿತರಾಗಿದ್ದ ಸಂತ್ರಸ್ತರಿಗೆ ಮಾತ್ರ ಅನುಕೂಲವಾಗಲಿಲ್ಲ; ಬದಲಿಗೆ, ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿತು. 2005ರ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಕ್ರಿಕೆಟ್ ಪಂದ್ಯ ನೋಡಲು ಭಾರತಕ್ಕೆ ಬಂದಿದ್ದರು. ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಹೊತ್ತಿಗೆ ಎರಡೂ ದೇಶಗಳ ನಡುವೆ ಹಲವು ಉನ್ನತಾಧಿಕಾರಿಗಳ ಮಟ್ಟದ ಮಾತುಕತೆಗಳು ನಡೆದವು. ತೆರೆಮರೆಯಲ್ಲಿ ದ್ವಿಪಕ್ಷೀಯ ಮಾತುಕತೆಯ ವಿಚಾರಗಳೂ ಗರಿಗೆದರಿದವು. ಆದರೆ, 2008ರಲ್ಲಿ ನಡೆದ ಮುಂಬೈ ದಾಳಿ ಈ ಯತ್ನಗಳನ್ನೆಲ್ಲ ಹೊಳೆಯಲ್ಲಿ ಹುಣಸೆ ಹಿಂಡಿದಂತೆ ಮಾಡಿತು. ದ್ವಿಪಕ್ಷೀಯ ಮಾತುಕತೆ ವಿಚಾರವನ್ನು ಭಾರತ ಕೈಬಿಟ್ಟಿತು.

ಎರಡು ವರ್ಷಗಳ ಬಳಿಕವಷ್ಟೇ ಅಂದರೆ, 2010ರ ಏಪ್ರಿಲ್‌ನಲ್ಲಿ ಥಿಂಪುವಿನಲ್ಲಿ ಎರಡೂ ದೇಶಗಳ ಪ್ರಧಾನಿಗಳು ಮಾತುಕತೆ ನಡೆಸುವ ತೀರ್ಮಾನವಾಯಿತು. ಆದರೆ, ಪಾಕಿಸ್ತಾನದ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಷಾ ಮಹಮದ್ ಖುರೇಶಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯನ್ನು ಉಗ್ರಗಾಮಿ ನಾಯಕ ಹಫೀಜ್ ಸಯೀದ್‌ಗೆ ಹೋಲಿಸಿದ ಪರಿಣಾಮ, ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಎಂ ಕೃಷ್ಣ ಈ ಪೂರ್ವನಿಗದಿತ ಪ್ರವಾಸವನ್ನು ರದ್ದುಪಡಿಸಿದರು.

ಒಂದು ತಿಂಗಳು ಕಳೆಯುವುದರೊಳಗೆ ಪ್ರವಾಹಪೀಡಿತ ಭಾರತಕ್ಕೆ 50 ಲಕ್ಷ ಡಾಲರ್ ನೆರವು ನೀಡುವಂತೆ ಖುರೇಶಿ ಅವರನ್ನು ಎಸ್ ಎಂ ಕೃಷ್ಣ ಕೋರಿದರು. ಈ ಕರೆಯನ್ನು ಮನ್ನಿಸಿದ ಪಾಕಿಸ್ತಾನ, “ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯವನ್ನು ಪ್ರವಾಹದ ಸಂದಿಗ್ಧ ಸ್ಥಿತಿ ಹೋಗಲಾಡಿಸಿದೆ,” ಎಂದು ಬಣ್ಣಿಸಿದರು.

ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದಾಗಿ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ನೆರವು ನೀಡಲು ಮುಂದಾದರು. 2014ರ ಸೆಪ್ಟೆಂಬರ್‌ನಲ್ಲಿ ಈ ಸಂಬಂಧ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪತ್ರ ಬರೆದ ಮೋದಿ, “ಅಗತ್ಯ ನೆರವು ನೀಡುವುದಕ್ಕೆ ನಾವು ಸಿದ್ಧ,” ಎಂದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಷರೀಫ್, “ಸಂತ್ರಸ್ತರಿಗೆ ಸಹಾಯ ನೀಡಲು ಆದಷ್ಟೂ ಕೈಜೋಡಿಸಿ,” ಎಂಬರ್ಥದ ಮನವಿ ಮಾಡಿದ್ದರು.

ಇದನ್ನೂ ಓದಿ : ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್‍ ಎದುರಿನ ಮೊದಲ ಸವಾಲು ಆರ್ಥಿಕ ಬಿಕ್ಕಟ್ಟು

ಕಡೆಯ ಬಾರಿಗೆ ಭಾರತ ನೆರವಿನ ಹಸ್ತ ಚಾಚಿದ್ದು ಪಾಕ್ ಮತ್ತು ಆಫ್ಘಾನಿಸ್ತಾನದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದಾಗ. “ನಷ್ಟದ ತುರ್ತು ಅಂದಾಜನ್ನು ರವಾನಿಸಲು ಕೋರಿದ್ದೇನೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನೆರವಿಗೆ ನಾವು ಬದ್ಧರಾಗಿದ್ದೇವೆ,” ಎಂದು 2015ರ ಅಕ್ಟೋಬರ್‌ನಲ್ಲಿ ಮೋದಿ ಟ್ವೀಟ್ ಮಾಡಿದ್ದರು.

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಚಾಚಿರುವ ಸಹಾಯಹಸ್ತ ಎರಡೂ ದೇಶಗಳ ನಡುವೆ ರಚನಾತ್ಮಕ ಬಾಂಧವ್ಯ ವೃದ್ಧಿಗೆ ಸಹಾಯಕವಾಗಲಿದೆ. ಆದರೂ ಕಾಶ್ಮೀರದಲ್ಲಿ ಹಿಂಸಾಚಾರ ನಿಂತಿಲ್ಲ. ಬಕ್ರೀದ್ ವೇಳೆ ಶಂಕಿತ ಉಗ್ರರು, ಮೂವರು ಪಾಕಿಸ್ತಾನಿಯರು ಹಾಗೂ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More