ಹೊರಗುತ್ತಿಗೆ ವಾಹನಗಳಿಗೆ ಬ್ರೇಕ್‌; ಸರ್ಕಾರಿ ಅಧಿಕಾರಿಗಳಿಗಿನ್ನು ಓಲಾ, ಉಬರ್‌ ಸೇವೆ?

ಸರ್ಕಾರಿ ಕೆಲಸಗಳಿಗೆ ಅಧಿಕಾರಿಗಳು ಬಳಸುತ್ತಿರುವ ಹೊರಗುತ್ತಿಗೆ ವಾಹನಗಳಿಗೆ ಬ್ರೇಕ್‌ ಬೀಳುವ ಸಂಭವವಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಸಿಎಂ ಎಚ್‌ಡಿಕೆ ಸೂಚನೆ ಬೆನ್ನಲ್ಲೇ, ಇದೀಗ ಸರ್ಕಾರಿ ಅಧಿಕಾರಿಗಳಿಗೆ ಖಾಸಗಿ ಟ್ಯಾಕ್ಸಿ ಸೇವೆ ಒದಗಿಸುವ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ

ಸರ್ಕಾರದ ಬಹಳಷ್ಟು ಅಧಿಕಾರಿಗಳು ದೈನಂದಿನ ಸರ್ಕಾರಿ ಕೆಲಸಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಪಡೆಯುತ್ತಿರುವ ವಾಹನಗಳ ಬದಲಿಗೆ ನಗರ ಪ್ರದೇಶಗಳಲ್ಲಿನ ಖಾಸಗಿ ಟ್ಯಾಕ್ಸಿ ಸೇವೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಆಲೋಚಿಸುತ್ತಿದೆ. ಕಾರ್ಯಸಾಧ್ಯ ವರದಿ ಸ್ವೀಕೃತವಾದ ಬಳಿಕ ಖಾಸಗಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಹೊರಗುತ್ತಿಗೆ ವಾಹನಗಳಿಂದ ಸರ್ಕಾರಕ್ಕೆ ಆಗುತ್ತಿರುವ ಹೆಚ್ಚಿನ ಆರ್ಥಿಕ ಹೊರೆಯನ್ನು ತಪ್ಪಿಸುವುದು ಈ ಆಲೋಚನೆಯ ಉದ್ದೇಶವಾಗಿದೆ.

ಹೊಸ ವಾಹನಗಳ ಖರೀದಿಯೂ ಸೇರಿದಂತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಈ ಹಿಂದೆಯೇ ಸೂಚಿಸಿದ್ದರು. ಇದರ ಮುಂದುವರಿಕೆಯಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಕುರಿತಾಗಿ ಸರಣಿ ಸಭೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಹೊಸ ವಾಹನ ಖರೀದಿಸುವ ಸಂಬಂಧ ನಿಗದಿಪಡಿಸಿರುವ ಆರ್ಥಿಕ ಮಿತಿಯನ್ನು ಪರಿಷ್ಕರಿಸುವ ಕುರಿತು ೨೦೧೮ರ ಆಗಸ್ಟ್‌ ೨೫ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಮುಂದುವರಿದ ಸಭೆಯಲ್ಲಿ ಹೊಸ ಪ್ರಯೋಗದ ಬಗ್ಗೆ ಚರ್ಚಿಸಲಾಗಿದೆ. ೨೦೧೭ರ ಡಿಸೆಂಬರ್ ‌೧೪ರಂದು ನಡೆದಿದ್ದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಭಾ ನಡವಳಿಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ನಗರ ಪ್ರದೇಶಗಳಲ್ಲಿ ಖಾಸಗಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಸೇವೆಗಳನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಹೆಚ್ಚು ಆಸಕ್ತಿ ವಹಿಸಿದೆ. ಹೊರಗುತ್ತಿಗೆ ಆಧಾರದ ವಾಹನಗಳ ಬದಲಿಗೆ ಓಲಾ, ಉಬರ್‌ ಸೇರಿದಂತೆ ಇನ್ನಿತರ ಖಾಸಗಿ ಟ್ಯಾಕ್ಸಿ ಸೇವೆಗಳನ್ನು ಬಳಕೆ ಮಾಡುವ ಸಂಬಂಧ ಸಾಧಕ-ಬಾಧಕಗಳನ್ನು ಪರಿಶೀಲಿಸಿ ವರದಿ ನೀಡಲು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿರುವುದು ಸಭಾ ನಡವಳಿಯಿಂದ ಗೊತ್ತಾಗಿದೆ.

ಖಾಸಗಿ ಟ್ಯಾಕ್ಸಿ ಸೇವೆ ಬಳಸಿಕೊಳ್ಳಲು ಸಭೆ ಕೈಗೊಂಡಿದ್ದ ನಿರ್ಣಯದ ಪ್ರತಿ

“ಬಹಳಷ್ಟು ಅಧಿಕಾರಿಗಳು ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಪಡೆಯುತ್ತಿದ್ದು, ವಾಹನಗಳು ಚಲಿಸುವ ಕಿ.ಮೀ. ಮತ್ತು ಅದಕ್ಕೆ ಕೊಡುತ್ತಿರುವ ಹಣವನ್ನು ನೋಡಿದಾಗ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಆಗುತ್ತಿದೆ. ಖಾಸಗಿ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಉಬರ್ ಸೇವೆಗಳ ಬಳಕೆಯಿಂದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು. ಕೇಂದ್ರ ಸರ್ಕಾರದಲ್ಲಿಯೂ ಈ ಸೇವೆ ಉಪಯೋಗವಾಗುತ್ತಿದೆ,” ಎಂದು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ಸಭೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ : ಜಡ್ಡುಗಟ್ಟಿದ ಸರ್ಕಾರಿ ಆಡಳಿತ; ಇಲಾಖೆಗಳಲ್ಲಿ ಬಾಕಿ ಉಳಿದಿವೆ 1.25 ಲಕ್ಷ ಕಡತ!

ಆದರೆ, ಖಾಸಗಿ ಟ್ಯಾಕ್ಸಿ ಸೇವೆಗಳನ್ನು ಬಳಕೆ ಮಾಡಿದಲ್ಲಿ ವಿಧಾನಸೌಧ, ವಿಕಾಸಸೌಧ ಕಚೇರಿಗಳಿಗೆ ಪ್ರವೇಶ ಮಾಡಲು ಭದ್ರತಾ ದೃಷ್ಟಿಯಿಂದ ತೊಂದರೆಯಾಗಲಿದೆ ಎಂಬ ಅಭಿಪ್ರಾಯವನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಓಲಾ ಮತ್ತು ಉಬರ್‌ ಟ್ಯಾಕ್ಸಿ ಸೇವೆ ಬಳಕೆಯಾದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಅವರ ಮನೆಯಿಂದ ಕಚೇರಿಗೆ, ಕಚೇರಿಯಿಂದ ಸರ್ಕಾರಿ ಕೆಲಸಗಳಿಗೆ ಹಾಗೂ ಕಚೇರಿಯಿಂದ ಮನೆಗೆ ಬಿಡಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಶೇ.೫೦ರಷ್ಟು ಹಣ ಉಳಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

ಸದ್ಯಕ್ಕೆ ಉಪ ಕಾರ್ಯದರ್ಶಿ ಶ್ರೇಣಿ ಮೇಲ್ಪಟ್ಟ ಅಧಿಕಾರಿಗಳಿಗೆ ಖಾಸಗಿ ಟ್ಯಾಕ್ಸಿ ಸೇವೆ ನೀಡಲು ಸರ್ಕಾರ ಉದ್ದೇಶಿಸಿದೆ. ಆ ನಂತರ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ಈ ಸೇವೆಯನ್ನು ಹಂತಹಂತವಾಗಿ ವಿಸ್ತರಿಸಲು ಚಿಂತಿಸುತ್ತಿದೆ ಎಂದು ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಕಾರ್ಮಿಕ, ಮೀನುಗಾರಿಕೆ, ಆರೋಗ್ಯ, ಲೋಕೋಪಯೋಗಿ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸರ್ಕಾರಿ ಕೆಲಸಗಳಿಗೆ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ಒಂದೊಂದು ಇಲಾಖೆಯಲ್ಲಿ ವಾರ್ಷಿಕ ೪೨.೦೦ ಲಕ್ಷ ರು.ಗಳಿಗೂ ಹೆಚ್ಚು ಅನುದಾನ ಮಂಜೂರಾಗುತ್ತಿದೆ. ಹವಾನಿಯಂತ್ರಣ ರಹಿತ ವಾಹನಗಳ ಮಾಸಿಕ ೨,೫೦೦ ಕಿಮೀ ಅಥವಾ ೩೦೦ ಗಂಟೆಗಳಿಗೆ ಒಟ್ಟು ಸಾರಿಗೆ ವೆಚ್ಚವೆಂದು ೨೫,೦೦೦ ರು.ಗಳಿಗೆ ಮೀರದಂತೆ ಭರಿಸಲಾಗುತ್ತಿದೆ. ಇದು ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತಿರುವುದರಿಂದ ಖಾಸಗಿ ಟ್ಯಾಕ್ಸಿ ಸೇವೆ ಬಳಸಿಕೊಂಡಲ್ಲಿ ಕಿಮೀಗೆ ೧೦ರಿಂದ ೧೨ ರು.ದರದಲ್ಲಿ ಅದರ ವೆಚ್ಚವನ್ನು ತಿಂಗಳಿಗೆ ೭,೫೦೦ ರು.ಗೆ ಮಿತಿಗೊಳಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

ವಿವಿಧ ಇಲಾಖೆಗಳ ವಿಸ್ತರಣಾ ಚಟುವಟಿಕೆ, ನಿಗದಿತ ಕ್ಷೇತ್ರವ್ಯಾಪ್ತಿಗೆ, ನ್ಯಾಯಾಲಯದ ಕೆಲಸಗಳಿಗೆ, ಸರ್ಕಾರದ ವಿವಿಧ ಇಲಾಖೆಗಳ ಸಭೆಗಳಿಗೆ, ತನಿಖೆ ಮತ್ತಿತರ ಕಾರ್ಯಗಳಿಗೆ ವಿವಿಧ ಶ್ರೇಣಿಯ ಅಧಿಕಾರಿಗಳು ಟ್ರಾವೆಲ್‌ ಏಜೆನ್ಸಿಯಿಂದ ವಾಹನಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಕೆಲವೆಡೆ ದರ ಪಟ್ಟಿಯನ್ನು ಪಡೆಯದೆ, ಹೆಚ್ಚಿನ ದರದಲ್ಲಿ ಬಾಡಿಗೆ ಪಡೆದು ಸಾರಿಗೆ ವೆಚ್ಚದ ಅನುದಾನದ ಮೊತ್ತವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸರ್ಕಾರದ ಕೆಲಸಕ್ಕಷ್ಟೇ ವಾಹನಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಷರತ್ತು ವಿಧಿಸಿದ್ದರೂ ಸ್ವಂತ ಕೆಲಸಗಳಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More