ನ್ಯಾಯಕ್ಕಾಗಿ ಹೋರಾಡುವವರನ್ನೇ ಸುಖಾಸುಮ್ಮನೆ ಜೈಲಿಗೆ ಕಳಿಸಿದರೆ ನ್ಯಾಯದ ಕತೆ?

ವಕೀಲರು, ಮಾನವ ಹಕ್ಕುಗಳ ಹೋರಾಟಗಾರರ ಬಂಧನ ಹೆಚ್ಚುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದೇನು ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಈ ಕುರಿತು ‘ದಿ ಲೀಫ್ ಲೆಟ್’ ಜಾಲತಾಣಕ್ಕೆ ಸುಪ್ರೀಂ ಕೋರ್ಟ್‌ ವಕೀಲೆ ಇಂದಿರಾ ಜೈಸಿಂಗ್ ಬರೆದಿರುವ ಲೇಖನದ ಭಾವಾನುವಾದ ಇಲ್ಲಿದೆ

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಸಿಲುಕಿಕೊಂಡ ತಮ್ಮ ಕಕ್ಷಿದಾರರ ಪರ ವಾದಿಸುತ್ತಿದ್ದ ಸುರೇಂದ್ರ ಗದ್ಲಿಂಗ್ ಅವರನ್ನು ಜೂನ್ 6ರಂದು ಬಂಧಿಸಲಾಯಿತು. ಸುರೇಂದ್ರರ ಪರ ಪುಣೆಯಲ್ಲಿ ವಾದಿಸುತ್ತಿದ್ದ ವಕೀಲೆ ಸುಸಾನ್ ಅಬ್ರಾಹಂ ಅವರ ಮುಂಬೈ ಮನೆ ಮೇಲೆ ಈಗ ಪೊಲೀಸರು ದಾಳಿ ನಡೆಸಿದ್ದು, ಅವರ ಪತಿ ವರ್ನನ್ ಗೋನ್ಸಾಲ್ವೇಸ್ ಅವರನ್ನು ಬಂಧಿಸಿದ್ದಾರೆ. ಯುಎಪಿಎ ಕಾಯ್ದೆಯಡಿ ವಿಚಾರಣೆ ಎದುರಿಸಿದ್ದ ವರ್ನನ್ ಅವರನ್ನು ಈ ಹಿಂದೆ ಐದು ವರ್ಷಗಳ ಕಾಲ ಜೈಲಿಗೆ ತಳ್ಳಲಾಗಿತ್ತು. ಇಂದು ಮತ್ತೆ ಅವರನ್ನು ಬಂಧಿಸಲಾಗಿದೆ. ಇತ್ತೀಚಿನ ವರದಿ ಪ್ರಕಾರ, ಕಾರ್ಮಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರನ್ನೂ ಬಂಧಿಸಲಾಗಿದ್ದು, ಪುಣೆಗೆ ಕರೆದೊಯ್ಯಲು ಯತ್ನಿಸಲಾಗುತ್ತಿದೆ. ಅವರ 20 ವರ್ಷದ ಮಗಳ ಫೇಸ್ಬುಕ್ ಖಾತೆಯನ್ನು ನಿರ್ಬಂಧಿಸಲಾಗಿದ್ದು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯಲಾಗಿದೆ.

ರಾಂಚಿಯಲ್ಲಿ ಸ್ಟಾನ್ ಸ್ವಾಮಿ, ಮುಂಬೈನಲ್ಲಿ ಅರುಣ್ ಫೆರೇರಾ, ದೆಹಲಿಯಲ್ಲಿ ಗೌತಮ್ ನವಲ್ಖಾ, ಗೋವಾದಲ್ಲಿ ಲೇಖಕ ಆನಂದ್ ತೇಲ್ತುಂಬೆ ಹಾಗೂ ಹೈದರಾಬಾದ್‌ನಲ್ಲಿ ಲೇಖಕ ವರವರರಾವ್, ಪುತ್ರಿ ಅನಲಾ, ಅಳಿಯ ಕಮಲನಾಥ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಅವರಲ್ಲಿ ಕೆಲವರನ್ನು ಬಂಧಿಸಿರುವ ಸಾಧ್ಯತೆಗಳೂ ಇವೆ.

ಸುಸಾನ್, ಶೋಮಾ (ಸೇನ್) ಹಾಗೂ ಸುಧಾ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ತಾಯಂದಿರು. ಅವರು ವೃತ್ತಪರ ಕೆಲಸಗಳಲ್ಲಿ ತೊಡಗಿದ್ದ ಮಹಿಳೆಯರಾಗಿದ್ದು, ಸಂವಿಧಾನದ ಘನತೆಯನ್ನು ಕೊನೆವರೆಗೂ ಎತ್ತಿಹಿಡಿಯುವ, ಕಾನೂನು ಪಾಲಿಸುವ ನಾಗರಿಕರು. ಇಂದು ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿರುವುದು ವಿಪರ್ಯಾಸ.

ಯಾಕೆ? ಅವರು ಮಾಡಿದ ತಪ್ಪೇನು? ಅವರು ದಲಿತರು, ಮುಸಲ್ಮಾನರು, ಆದಿವಾಸಿಗಳು, ಮಹಿಳೆಯರು, ತುಳಿತಕ್ಕೊಳಗಾದವರು, ಬಹಿಷ್ಕೃತರ ಪರ ಧ್ವನಿ ಎತ್ತಿದ್ದೇ? ಹೀಗೆ ಮಾಡಲೆಂದೇ ಟಿವಿ ಮಾಧ್ಯಮಗಳು ಹಾಗೂ ರಾಜಕಾರಣಿಗಳ ಒಂದು ವರ್ಗ ಅವರನ್ನು ‘ನಗರದ ನಕ್ಸಲರು’, ‘ಅರ್ಧ ಮಾವೋವಾದಿಗಳು’ ಎಂದು ಹಣೆಪಟ್ಟಿ ಕಟ್ಟಿತೇ? ಹೀಗೆ ಮಾಡಲೆಂದೇ ಅವರ ವಿರುದ್ಧ ಇಂತಹ ಪದಪ್ರಯೋಗಗಳನ್ನು ಟಿವಿ ಪ್ರೈಂ ಟೈಂ ಹೊತ್ತಿನಲ್ಲಿ ಪ್ರಸಾರ ಮಾಡಲಾಯಿತೇ?

ಅಭಿಷೇಕ್ ಮನುಸಾಂಘ್ವಿ ಅವರ ತಂದೆ ದಿವಂಗತ ಎಲ್ ಎಂ ಸಾಂಘ್ವಿ ಅವರ ಪುಸ್ತಕವೊಂದನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ್ದು, ಅದರ ಬಿಡುಗಡೆಗೆಂದು ಆ.14ರಂದು ನಾನು ಹೋಗಿದ್ದೆ. ಅತಿಥಿಗಳಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಖ್ಯಾತ ಪತ್ರಕರ್ತ ಕರಣ್ ಥಾಪರ್ ಕಾರ್ಯಕ್ರಮ ನಿರೂಪಿಸುತ್ತಿದ್ದರು. “ದೊಂಬಿ, ದಾಳಿಯಲ್ಲಿ ಭಾಗವಹಿಸಿದ್ದ ಕೆಲವರಿಗೆ ಕೇಂದ್ರ ಸಚಿವ ಜಯಂತ್ ಸಿನ್ಹಾ ಸನ್ಮಾನಿಸಿದ ಕುರಿತಂತೆ ಗಡ್ಕರಿ ಅವರ ಪಕ್ಷ ಬಿಜೆಪಿ ಏನು ಹೇಳಲು ಇಚ್ಛಿಸುತ್ತದೆ?” ಎಂಬ ಪ್ರಶ್ನೆಯನ್ನು ಥಾಪರ್ ಕೇಳಿದರು. ಅದಕ್ಕೆ ಗಡ್ಕರಿ ಅವರು, “ಪಕ್ಷಕ್ಕೆ ಯಾರು ಯಾರಿಗೆ ಹೂಮಾಲೆ ಹಾಕುತ್ತಾರೆ ಎಂದು ಗೊತ್ತಿರುವುದಿಲ್ಲ,” ಎಂಬ ಪ್ರತಿಕ್ರಿಯೆ ನೀಡಿದರು. “ಆದರೆ, ಅವರು ನಮ್ಮ ಸಚಿವರು,” ಎಂದು ಥಾಪರ್ ಒತ್ತಿ ಹೇಳಿದಾಗ ಗಡ್ಕರಿ, “ಈ ದೇಶದಲ್ಲಿ ಹಾಗೆ ಒಗ್ಗೂಡುವುದು ಅಪರಾಧವಲ್ಲ,” ಎಂದು ಹೇಳುತ್ತ ಸಿನ್ಹಾರ ನಡೆಯನ್ನು ಸಮರ್ಥಿಸಿಕೊಂಡರು.

ಯಾರೂ ತುಟಿ ಬಿಚ್ಚಲಿಲ್ಲ. ಅವರನ್ನು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ. ವಿಪರ್ಯಾಸ ಎಂದರೆ ಜನ ಚಪ್ಪಾಳೆ ಹೊಡೆದು, “ಅವರೆಷ್ಟು ಚಂದ ಮಾತನಾಡಿದರು!” ಎಂದರು. ನನ್ನ ಸರದಿ ಬಂದಾಗ ಕೈಯೆತ್ತಿ ನಾನು ಕೇಳಿದೆ: “ಹಾಗೆ ಒಗ್ಗೂಡುವುದು ತಪ್ಪಲ್ಲ ಎಂದು ನೀವೇನೋ ಹೇಳುತ್ತೀರಿ. ಆದರೆ, ನಿಮ್ಮ ಸಹೋದ್ಯೋಗಿಗಳು ನಮ್ಮನ್ನು ಅರ್ಧ ಮಾವೋವಾದಿಗಳು ಎನ್ನುತ್ತಾರೆ. ನಮಗಿದು ಹೊಸ ಪದ ಮತ್ತು ಹಾಗೆ ಒಗ್ಗೂಡಿದ್ದರಿಂದ ತಪ್ಪಿತಸ್ಥರೆಂದು ಕರೆಸಿಕೊಳ್ಳುತ್ತಿದ್ದೇವೆ. ಇದಕ್ಕೆ ಏನು ಹೇಳುತ್ತೀರಿ?” ಆಗ ಗಡ್ಕರಿ, “ಹೌದು, ನಾಗಪುರದಲ್ಲಿ ಏನು ನಡೆದಿದೆ ಎಂದು ಗೊತ್ತು. ಅಲ್ಲಿ ಕೆಲವರ ಬಂಧನವಾಗಿದೆ. ಕೇವಲ ಒಗ್ಗೂಡಿದ್ದೇ ಆಗಿದ್ದರೆ ಬಂಧನ ಆಗಬಾರದಿತ್ತು,” ಎಂದರು.

ಇದನ್ನೂ ಓದಿ : ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಬೆರಳು ತೋರುತ್ತಿರುವುದು ಯಾರೆಡೆಗೆ?

ಈಗ ಅವರ ಮಾತುಗಳು ಒಳ್ಳೆಯದನ್ನು ಹೇಳಲಿಲ್ಲ ಅನ್ನಿಸುತ್ತಿದೆ. ಮೊದಲು ಸೆರೆಹಿಡಿದ ಕ್ರಮ ಸರಿ ಎಂದು ಬಿಂಬಿಸಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆಯೇ? ನಾವೆಲ್ಲಿಗೆ ಬಂದಿದ್ದೇವೆ? ತಮ್ಮ ಕಕ್ಷಿದಾರರ ಪರ ವಾದಿಸುವ ಮೊದಲೇ ಬಂಧನಕ್ಕೆ ಒಳಗಾಗುವ ದೇಶದಲ್ಲಿ ನಾವಿದ್ದೇವೆಯೇ?

ಪ್ರತಿಯೊಬ್ಬ ಮನುಷ್ಯನಿಗೂ ಕಾನೂನು ರಕ್ಷಣೆಯ ಹಕ್ಕಿದೆ. ಕುಖ್ಯಾತ ಪ್ರಕರಣಗಳಲ್ಲಿ ತಮ್ಮ ಕಕ್ಷಿದಾರರ ಪರ ವಾದ ಮಂಡಿಸುವವರ ಮೇಲೆ ದಾಳಿ ನಡೆಸುವ, ಬಂಧಿಸುವ ಅಥವಾ ಅವರನ್ನು ಕೊಂದೇಬಿಡುವ ಕಾಲದಲ್ಲಿ ನಾವಿದ್ದೇವೆ. ಇದು ನಿಲ್ಲದೆಹೋದರೆ ಮುಂದೊಂದು ದಿನ ಕಾನೂನನ್ನು ರಕ್ಷಿಸಲು ಯಾರೊಬ್ಬರೂ ಇರುವುದಿಲ್ಲ, ಏಕೆಂದರೆ, ರಕ್ಷಿಸಲು ಕಾನೂನಿನ ನಿಯಮಗಳೇ ಇರುವುದಿಲ್ಲ.

ಚಿತ್ರ: ಕಾರ್ಮಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More