ಟ್ವಿಟರ್ ಸ್ಟೇಟ್ | ಬಿಜೆಪಿಗೆ ಮಡಿಲ ಕೆಂಡವಾದ ಸ್ವಾಮಿ ‘ಹೇಳಿಕೆ’ ಅವಾಂತರಗಳು

ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ, ‘ಮಾಲ್ಡೀವ್ಸ್ ಮೇಲೆ ಭಾರತ ಆಕ್ರಮಣ ಮಾಡಬೇಕು’ ಎಂದು ಟ್ವೀಟ್ ಮಾಡಿರುವುದು ಗಂಭೀರ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರಾ ಅವರಿಗೆ ಮಾಲ್ಡೀವ್ಸ್ ಸಮನ್ಸ್ ಕಳುಹಿಸಿ ಅಸಮಾಧಾನ ವ್ಯಕ್ತಪಡಿಸಿದೆ

ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ಮಾಲ್ಡೀವ್ಸ್ ಕುರಿತಾಗಿ ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಸಮಸ್ಯೆ ಹುಟ್ಟುಹಾಕಿದೆ. ಆಗಸ್ಟ್ ೨೪ರಂದು ಸ್ವಾಮಿ ಟ್ವೀಟ್ ಮಾಡಿ, “ಮಾಲ್ಡೀವ್ಸ್ ಚುನಾವಣೆಯಲ್ಲಿ ಅಕ್ರಮ ಕಂಡುಬಂದಲ್ಲಿ ಭಾರತ ಮಾಲ್ಡೀವ್ಸ್ ಮೇಲೆ ಆಕ್ರಮಣ ನಡೆಸಬೇಕು,” ಎಂದು ಅಭಿಪ್ರಾಯಪಟ್ಟಿದ್ದರು. ಈ ಟ್ವೀಟ್ ಜೊತೆಗೆ ಸ್ವಾಮಿ ಅವರು, ತಾವು ಮಾಲ್ಡೀವ್ಸ್ ಅಧ್ಯಕ್ಷರಾದ ಮೊಹಮದ್ ನಶೀದ್ ಅವರನ್ನು ಕೊಲಂಬೋದಲ್ಲಿ ಭೇಟಿಯಾದ ಸುದ್ದಿ ಇರುವ ಲಿಂಕ್ ಅನ್ನು ಸೇರಿಸಿದ್ದರು.

ಮಾಲ್ಡೀವ್ಸ್‌ನಲ್ಲಿ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸ್ವಾಮಿ ಅವರ ಟ್ವೀಟ್ ನವದೆಹಲಿ ಮತ್ತು ಮಾಲೆ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಗಳ ಪ್ರಕಾರ, ಮಾಲ್ಡೀವ್ಸ್‌ನ ವಿದೇಶಾಂಗ ಕಾರ್ಯದರ್ಶಿ ಅಹಮದ್ ಸರೀರ್ ಅವರು ಮಾಲ್ಡೀವ್ಸ್‌ನ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರಾ ಅವರಿಗೆ ಸಮನ್ಸ್ ಕಳುಹಿಸಿ, ಸ್ವಾಮಿ ಅವರ ಟ್ವೀಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾಲ್ಡೀವ್ಸ್ ಸರ್ಕಾರ ಅಧಿಕೃತವಾಗಿ ಭಾರತಕ್ಕೆ, ಸ್ವಾಮಿ ಹೇಳಿಕೆ ಕುರಿತಾಗಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ. ಭಾರತ ಸರ್ಕಾರವು, “ಈ ಟ್ವೀಟ್ ಸ್ವಾಮಿ ಅವರ ಖಾಸಗಿ ಅಭಿಪ್ರಾಯವೇ ವಿನಾ ಸರ್ಕಾರದ ಅಭಿಪ್ರಾಯವಲ್ಲ,” ಎಂದು ಸ್ಪಷ್ಟನೆ ನೀಡಿದೆ. ಆಗಸ್ಟ್ ೨೨ರಂದು ಸ್ವಾಮಿ ಅವರು ಟ್ವೀಟ್ ಮಾಡಿ ಮಾಜಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಚುನಾವಣೆಯಲ್ಲಿ ಅಕ್ರಮವಾಗುವ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. “ಭಾರತ ಸರ್ಕಾರ ಕಾರ್ಯಸೂಚಿ ರೂಪಿಸಬೇಕು. ಈಗಿನ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಭಾರತೀಯರಿಗೆ ಅವಹೇಳನ ಮಾಡಿದ್ದಾರೆ,” ಎಂದೂ ತಮ್ಮ ಟ್ವೀಟ್‌ನಲ್ಲಿ ಸ್ವಾಮಿ ಬರೆದುಕೊಂಡಿದ್ದರು. ಕಳೆದ ಫೆಬ್ರವರಿಯಲ್ಲಿ ಯಾಮೀನ್ ಅವರು ತುರ್ತುಪರಿಸ್ಥಿತಿ ಘೋಷಿಸಿದಂದಿನಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸಂಬಂಧ ಹದಗೆಟ್ಟಿತ್ತು. ಮಾಲ್ಡೀವ್ಸ್‌ನಲ್ಲಿ ಪಾರದರ್ಶಕ ಚುನಾವಣೆ ನಡೆಯುವ ಸಾಧ್ಯತೆಯ ಬಗ್ಗೆ ಭಾರತ ಸಂಶಯ ವ್ಯಕ್ತಪಡಿಸಿರುವುದು ಮಾಲ್ಡೀವ್ಸ್ ಸರ್ಕಾರಕ್ಕೆ ಸಹ್ಯವಾಗಿರಲಿಲ್ಲ. ಇದೀಗ ಸ್ವಾಮಿ ಅವರ ಟ್ವೀಟ್ ಭಾರತ-ಮಾಲ್ಡೀವ್ಸ್ ಕುರಿತಾಗಿ ‘ಪ್ರಚೋದನೆ’ಯ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎನ್ನುವ ಅಸಮಾಧಾನಕ್ಕೆ ಕಾರಣವಾಗಿದೆ.

‘ಆಕ್ರಮಣ ಮಾಡಬೇಕು’ ಎನ್ನುವ ಟ್ವೀಟ್‌ಗೆ ಮಾಲ್ಡೀವ್ಸ್‌ನಲ್ಲಿ ವಿರೋಧ ವ್ಯಕ್ತವಾಗುತ್ತಿದ್ದರೂ, ಸ್ವಾಮಿ ಅವರು ಮಾಲ್ಡೀವ್ಸ್‌ ಕುರಿತಂತೆ ಟ್ವಿಟರ್‌ನಲ್ಲಿ ಬಹಿರಂಗ ಚರ್ಚೆಯನ್ನು ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಬರೆದ ಹಲವು ಟ್ವೀಟ್‌ಗಳು ಮತ್ತು ಅವರು ರಿಟ್ವೀಟ್ ಮಾಡಿರುವ ಟ್ವೀಟ್‌ಗಳು ಮಾಲ್ಡೀವ್ಸ್‌ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿರುವುದು ಸಹಜವೇ ಆಗಿದೆ. ಮಾಲ್ಡೀವ್ಸ್‌ ಹೊರತಾಗಿ ಸುಬ್ರಮಣಿಯನ್‌ ಸ್ವಾಮಿ ಅವರು ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ತಮ್ಮ ಟ್ವೀಟ್‌ಗಳ ಮೂಲಕ ಮುಜುಗರ ತಂದಿದ್ದಾರೆ. ಅಂತಹ ಕೆಲವು ವಿಚಾರಗಳು ಇಲ್ಲಿವೆ.

ಮೋದಿ ಸರ್ಕಾರದ ವಿಶ್ಲೇಷಣೆ

ಸುಬ್ರಮಣಿಯನ್‌ಸ್ವಾಮಿ ಅವರು ಬಿಜೆಪಿ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿರುವುದು ಇದೇ ಮೊದಲೇನಲ್ಲ. ಬಹಳಷ್ಟು ವಿಷಯಗಳಲ್ಲಿ ಅವರು ವಿರೋಧ ಪಕ್ಷದ ನಾಯಕನಂತೆಯೇ ಮೋದಿ ಸರ್ಕಾರವನ್ನು ವಿಶ್ಲೇಷಿಸುತ್ತ ಬಂದಿದ್ದಾರೆ. ಮುಖ್ಯವಾಗಿ, ವಿದೇಶಾಂಗ ವ್ಯವಹಾರ, ಹಣಕಾಸು ವ್ಯವಹಾರ ಮತ್ತು ಗೃಹ ಸಚಿವಾಲಯಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್‌ಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮುಜುಗರ ಆಗುವಂತೆ ಹಲವು ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ತೆರಿಗೆ ಸುಧಾರಣೆಗಳ ಬಗ್ಗೆ ಬಹಳಷ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಅವರದೇ ಪಕ್ಷದ ಮುಖಂಡರಾಗಿರುವ ಸ್ವಾಮಿ ಟ್ವೀಟ್ ಮಾಡಿ, “ಮೋದಿ ಸರ್ಕಾರ ತೆರಿಗೆ ಭಯೋತ್ಪಾದನೆಯನ್ನು ತಡೆಗಟ್ಟಲು ವಿಫಲವಾಗಿರುವುದೇ ಅವರ ಅತಿ ದೊಡ್ಡ ವೈಫಲ್ಯ,” ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ವಾಜಪೇಯಿ ಕುರಿತ ಸ್ವಾಮಿ ಮೌನವನ್ನು ಬಿಜೆಪಿ ಏಕೆ ಪ್ರಶ್ನಿಸಿಲ್ಲ?

ಆರ್ಥಿಕ ಸುಧಾರಣೆಗಳ ಬಗ್ಗೆ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ನೋಟು ಅಮಾನ್ಯ ನಿರ್ಧಾರವನ್ನು ಬಿಜೆಪಿಯು ಯಶಸ್ವಿ ಆರ್ಥಿಕ ಕ್ರಮ ಎಂದು ಹೇಳಿಕೊಳ್ಳುತ್ತದೆ. ಇದರಿಂದಾಗಿ ಕಪ್ಪುಹಣ ನಿಯಂತ್ರಿಸಲಾಗಿದೆ ಎನ್ನುವುದು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಪದೇಪದೇ ಮುಂದಿಡುತ್ತಿರುವ ನಿಲುವು. ಆದರೆ, ಸುಬ್ರಮಣಿಯನ್‌ ಸ್ವಾಮಿ ಟ್ವೀಟ್ ಮಾಡಿ, “ಪ್ರಧಾನಿ ಮೋದಿಯವರು ವಿದೇಶಗಳಲ್ಲಿರುವ ಭಾರತೀಯರ ಹಣವನ್ನು ಪತ್ತೆಹಚ್ಚಲು ಜಿಪಿಎಸ್ ಅಳವಡಿಸಿದ್ದಾರೆ,” ಎಂದು ವ್ಯಂಗ್ಯವಾಡಿದ್ದರು. “ನೋಟು ಅಮಾನ್ಯದ ವಿಚಾರದಲ್ಲಿ ಪಶ್ಚಿಮ ಬಂಗಾಳದ ಹಣಕಾಸು ಸಚಿವರ ಅಭಿಪ್ರಾಯ ನಿಜ. ಮೊದಲು ನೋಟು ಅಮಾನ್ಯವನ್ನು ಸಹಿಸುವ ಶಕ್ತಿಯನ್ನು ಭಾರತೀಯರು ಪಡೆದುಕೊಳ್ಳಬೇಕಿತ್ತು. ನಂತರ ಜಿಎಸ್‌ಟಿಯಂತಹ ಸುಧಾರಣೆಯ ಮೂಲಕ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬಹುದಾಗಿತ್ತು,” ಎಂದು ಎರಡೂ ಯೋಜನೆಗಳನ್ನು ತರಾತುರಿಯಲ್ಲಿ ಅಳವಡಿಸಿದ ಮೋದಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. “ಜಿಎಸ್‌ಟಿ ದೊಡ್ಡ ಕುಸಿತವನ್ನು ತಂದಿದೆ. ವ್ಯಾಪಾರಿಗಳು ರಸ್ತೆಗೆ ಬರುವ ಸಾಧ್ಯತೆ ಇದೆ. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಯಾಗುವ ಸಾಧ್ಯತೆ ಇಲ್ಲ,” ಎನ್ನುವ ಅಭಿಪ್ರಾಯವನ್ನೂ ಅವರು ಟ್ವೀಟ್ ಮಾಡಿದ್ದರು. ಭಾರತದ ಜಿಡಿಪಿ ದರವನ್ನು ವಿಶ್ವ ಹಣಕಾಸು ನಿಧಿ ಕಡಿತಗೊಳಿಸಿದಾಗಲೂ ಅವರು ನೋಟು ಅಮಾನ್ಯ ಮತ್ತು ಜಿಎಸ್‌ಟಿಯ ಫಲಶ್ರುತಿ ಎಂದು ಟೀಕಿಸಿದ್ದರು.

ಹಣಕಾಸು ಸಚಿವಾಲಯದ ಮೇಲೆ ಆಕ್ರೋಶ

ಸುಬ್ರಮಣಿಯನ್‌ ಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವಾಲಯದ ಬಗ್ಗೆ ಸಾಕಷ್ಟು ಟ್ವೀಟ್‌ಗಳನ್ನು ಮಾಡಿದ್ದಾರೆ. ಹಣಕಾಸು ಸಚಿವಾಲಯದ ಸಿಬ್ಬಂದಿ, ಸಚಿವರ ಕಾರ್ಯವೈಖರಿ ಅವರ ಟೀಕೆಗೆ ಗುರಿಯಾಗಿದ್ದವು. “ಹಣಕಾಸು ಸಚಿವಾಲಯದ ಅಧಿಕಾರಿಗಳು ಪಿ ಚಿದಂಬರಂ ಅವರ ರಕ್ಷಣೆಗೆ ಮುಂದಾಗಿದ್ದಾರೆ. ತನಿಖಾಧಿಕಾರಿಗಳಿಗೆ ತಡೆಯೊಡ್ಡುತ್ತಿದ್ದಾರೆ,” ಎಂದು ಸ್ವಾಮಿ ಟ್ವೀಟ್ ಮಾಡಿದ್ದರು. ನೀರವ್ ಮೋದಿ ಹಗರಣದ ವಿಚಾರವಾಗಿಯೂ ಅವರು ಹಣಕಾಸು ಸಚಿವಾಲಯದ ಕಾರ್ಯವೈಖರಿಯನ್ನು ಟೀಕಿಸಿದ್ದರು. ಟ್ವಿಟರ್‌ ಚರ್ಚೆಯೊಂದರಲ್ಲಿ ಅಭಿಪ್ರಾಯ ನೀಡುತ್ತ, “ಹಣಕಾಸು ಸಚಿವಾಲಯವನ್ನು ನನಗೆ ಕೊಡುವಂತೆ ಪ್ರಧಾನಿಗೆ ಹೇಳಿ. ಹೇಗೆ ಕಾರ್ಯನಿರ್ವಹಿಸಬೇಕೆಂದು ಹೇಳಿಕೊಡುತ್ತೇನೆ,” ಎಂದು ಟ್ವೀಟ್ ಮಾಡಿದ್ದರು. ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರ ಬಗ್ಗೆ ಹಲವು ಟೀಕೆಗಳನ್ನು ನಿತ್ಯವೂ ಅವರು ಮಾಧ್ಯಮಗಳಲ್ಲಿ ಮತ್ತು ಟ್ವಿಟರ್‌ನಲ್ಲಿ ಮಾಡುತ್ತಲೇ ಬಂದಿದ್ದಾರೆ. ಭ್ರಷ್ಟ ಬ್ಯಾಂಕರ್‌ಗಳ ವಿರುದ್ಧ ಕೆಲಸ ಮಾಡುತ್ತಿರುವ ಸಿಬಿಐ ಮತ್ತು ಪೊಲೀಸರ ಕಾರ್ಯದಲ್ಲಿ ಜೇಟ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿಯೂ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಹಣಕಾಸು ಇಲಾಖೆ ಸಿಬ್ಬಂದಿ ಮೇಲೆ ಆರೋಪ

ಸುಬ್ರಮಣಿಯನ್‌ ಸ್ವಾಮಿ ಅವರು ಹಣಕಾಸು ಇಲಾಖೆಯ ಸಿಬ್ಬಂದಿ ಬಗ್ಗೆಯೂ ಸಾಕಷ್ಟು ಟೀಕೆ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ಸ್ವಾಮಿ ಅವರ ಉಗ್ರ ಟ್ವೀಟ್‌ಗಳಿಗೆ ಸಿಲುಕಿದವರೆಂದರೆ, ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಹಶ್ಮುಖ್ ಅದ್ಹಿಯಾ. ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ನಿರ್ದೇಶಕರಾದ ರಾಜೇಶ್ವರ್ ಸಿಂಗ್ ಮತ್ತು ಹಶ್ಮುಖ್ ಅದ್ಹಿಯಾ ನಡುವೆ ಬಿಕ್ಕಟ್ಟು ತಲೆದೋರಿದಾಗ ಸ್ವಾಮಿ ಅವರು ಹಶ್ಮುಖ್ ಅವರನ್ನು ಟೀಕಿಸಿ ಹಲವು ಟ್ವೀಟ್‌ಗಳನ್ನು ಮಾಡಿದ್ದರು. ಜಿಎಸ್‌ಟಿ ಹಗರಣದಲ್ಲೂ ಹಶ್ಮುಖ್ ಅವರ ಕೈವಾಡವಿದೆ ಎಂದು ಅವರು ಆರೋಪಿಸಿದ್ದರು. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಹ್ಮಣಿಯನ್ ಮತ್ತು ಆರ್‌ಬಿಐ ಮಾಜಿ ಗವರ್ನರ್ ಬಗ್ಗೆಯೂ ಸಾಕಷ್ಟು ಟೀಕೆಗಳನ್ನು ಅವರು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದರು.

ಸರ್ಕಾರದ ಹಿರಿಯ ಸಿಬ್ಬಂದಿ ಮೇಲೆ ಆರೋಪ

ಬ್ಯಾಂಕ್ ಹಗರಣ ಮತ್ತು ಸಿಬಿಐ ಕಾರ್ಯವೈಖರಿ ವಿಚಾರದಲ್ಲಿಯೂ ಸ್ವಾಮಿ ಅವರು ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಟ್ವೀಟ್ ಮಾಡಿದ್ದಾರೆ. ಏರ್ ಇಂಡಿಯಾ ಮಾರಾಟದ ವಿಚಾರದಲ್ಲಿ ತಮ್ಮ ಟ್ವೀಟ್‌ಗಳ ಮೂಲಕ ಮೋದಿ ಸರ್ಕಾರಕ್ಕೆ ಮುಜುಗರ ತಂದಿದ್ದರು. ನೀರವ್ ಮೋದಿ ಪ್ರಕರಣದಲ್ಲಿ ಸಿಬಿಐ ಜಂಟಿ ನಿರ್ದೇಶಕರು ಪ್ರಕರಣವನ್ನು ಸಡಿಲಗೊಳಿಸುತ್ತಿದ್ದಾರೆ ಎಂದೂ ಅವರು ಟ್ವೀಟ್ ಮಾಡಿದ್ದರು. ಮೇಹುಲ್ ಚೋಕ್ಸಿ ಮತ್ತು ನೀರವ್ ಮೋದಿ ದೇಶ ಬಿಟ್ಟು ಪಲಾಯನಗೈಯಲು ಸರ್ಕಾರದ ಹಿರಿಯ ಅಧಿಕಾರಿಗಳು ಸಹಕಾರ ನೀಡಿದ್ದರು ಎಂದೂ ಅವರು ತಮ್ಮ ಟ್ವೀಟ್‌ಗಳ ಮೂಲಕ ಆರೋಪಿಸಿದ್ದರು.

ವಿದೇಶಾಂಗ ನೀತಿಯ ಅವಹೇಳನ

ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸ್ವಾಮಿ ಆಗಾಗ್ಗೆ ಟ್ವೀಟ್ ಮಾಡುತ್ತಾರೆ. ಮಾಲ್ಡೀವ್ಸ್‌ ಹೊರತಾಗಿ ಇತರ ನೆರೆಯ ದೇಶಗಳ ಜೊತೆಗಿನ ಭಾರತದ ಸಂಬಂಧದ ಬಗ್ಗೆಯೂ ಅವರು ವಿಶ್ಲೇಷಣಾ ಟ್ವೀಟ್‌ಗಳನ್ನು ಮಾಡಿದ್ದಾರೆ. ಮುಖ್ಯವಾಗಿ, ಶ್ರೀಲಂಕಾ ವಿಚಾರದಲ್ಲಿ ಅವರು ಸದಾ ತಮಿಳರ ವಿರೋಧಿಯಾಗಿಯೇ ವರ್ತಿಸಿದ್ದಾರೆ. ಎಲ್‌ಟಿಟಿಇ ಮತ್ತು ಅದರ ಬೆಂಬಲಿಗರ ಬಗ್ಗೆ ಸ್ವಾಮಿಗೆ ತೀವ್ರವಾದ ಅಸಮಾಧಾನವಿದೆ. “ಎಲ್‌ಟಿಟಿಇ ಬೆಂಬಲಿಗರು ಸರ್ವಾಧಿಕಾರಿ ಕಲ್ಪನೆಯನ್ನು ಒಪ್ಪದ ಶ್ರೀಲಂಕಾದ ಪ್ರಮುಖ ತಮಿಳು ನಾಯಕರನ್ನು ಕೊಲೆ ಮಾಡಿದ್ದಾರೆ,” ಎಂದು ಒಂದು ಟ್ವೀಟ್‌ನಲ್ಲಿ ಸ್ವಾಮಿ ವಿಶ್ಲೇಷಿಸಿದ್ದರು. ಎಲ್‌ಟಿಟಿಇಯನ್ನು ಭಯೋತ್ಪಾದಕ ಸಂಸ್ಥೆ ಎಂದು ಸದಾ ಅವರು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. “ಎಲ್‌ಟಿಟಿಇ ಮುಖ್ಯಸ್ಥನ ಸಾವಿನ ಸುದ್ದಿ ತಿಳಿದು ರಾಜೀವ್ ಗಾಂಧಿ ಅವರಿಗೆ ನಮನ ಸಲ್ಲಿಸಲು ಹೋಗಿದ್ದೆ,” ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದರು. ಎಲ್‌ಟಿಟಿಇ ಸಂಘಟನೆಯು ತಾಲಿಬಾನ್‌ಗಿಂತಲೂ ಕ್ರೂರ ಎಂದೂ ಅವರು ಹೇಳಿದ್ದರು.

ತಮಿಳು ವಿರೋಧಿ ನಿಲುವು

ಸ್ವತಃ ಚೆನ್ನೈ ಮೂಲದವರಾದರೂ ಸುಬ್ರಮಣಿಯನ್‌ ಸ್ವಾಮಿ ಅವರು ತಮ್ಮ ಟ್ವೀಟ್‌ಗಳಲ್ಲಿ ಸದಾ ತಮಿಳರನ್ನು ದ್ವೇಷಿಸುವ ನಿಲುವನ್ನೇ ಪ್ರಕಟಿಸುತ್ತ ಬಂದಿದ್ದಾರೆ. ಮಳೆಯಿಂದಾಗಿ ಚೆನ್ನೈ ಸಂಕಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಅವರು ಹಾಸ್ಯ ಮಾಡುವಂತಹ ಟ್ವೀಟ್ ಹಾಕಿದ್ದು ದೊಡ್ಡ ವಿವಾದವಾಗಿತ್ತು. “ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಅವರು ಕಣ್ಣೀರು ಸುರಿಸುತ್ತಿರುವ ಕಾರಣವೇ ಚೆನ್ನೈ ನೀರಿನಿಂದ ತುಂಬಿಕೊಂಡಿದೆ,” ಎಂದು ಅವರು ಹಾಸ್ಯ ಮಾಡಿ ಟ್ವೀಟ್ ಮಾಡಿದ್ದರು. ಮತ್ತೊಂದು ಟ್ವೀಟ್‌ನಲ್ಲಿ, ಕೇರಳ ಮತ್ತು ಪೂರ್ವ ಶ್ರೀಲಂಕಾಗಳಿಂದ ಐಎಸ್‌ಐಎಸ್‌ ಚೆನ್ನೈಗೆ ಬರುವ ಸಾಧ್ಯತೆಯನ್ನು ತನಿಖೆ ಮಾಡುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸೂಚಿಸಿದ್ದರು. “ಚೆನ್ನೈ ಮೂಲದವರಾದ ನೀವು ಏಕೆ ಚೆನ್ನೈನ ದುಃಖವನ್ನು ಅರ್ಥಮಾಡಿಕೊಳ್ಳುವುದಿಲ್ಲ?” ಎಂದು ಟ್ವೀಟಿಗರೊಬ್ಬರು ಸ್ವಾಮಿ ಅವರನ್ನು ಒಮ್ಮೆ ಪ್ರಶ್ನಿಸಿದ್ದರು. ಆದರೆ, ಸ್ವಾಮಿ ಅವರು ಪ್ರಶ್ನಿಸಿದವರಿಗೇ ತಮಿಳುನಾಡಿನ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದ್ದರು!

ವಾಜಪೇಯಿ ಕುರಿತ ವಿರೋಧ

ಮೋದಿ ಸರ್ಕಾರ ಮಾತ್ರವಲ್ಲ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಬಗ್ಗೆಯೂ ಸ್ವಾಮಿ ಸದಾ ಕಟು ಟೀಕಾಕಾರರಾಗಿದ್ದರು. ವಾಜಪೇಯಿ ಅವರ ಕುರಿತಂತೆ ಸ್ವಾಮಿ ಅವರು ಸದಾ ಟ್ವಿಟರ್‌ನಲ್ಲಿ ಹರಿತವಾದ ಮಾತುಗಳನ್ನು ಹರಿಬಿಡುತ್ತ ಬಂದಿದ್ದಾರೆ. ವಾಜಪೇಯಿ ಅವರನ್ನು ಮಹಾನ್ ನಾಯಕರೆಂದು ಕಾಣುತ್ತಿರುವ ಬಿಜೆಪಿಗೆ ಇಂತಹ ಟೀಕೆಗಳು ಸದಾ ಮುಜುಗರ ತರುತ್ತಿವೆ.

ಸ್ವಾಮಿ ಅವರು ತಮ್ಮ ಟ್ವೀಟ್‌ಗಳ ವಿಚಾರದಲ್ಲಿ ಪಕ್ಷದ ನಿಲುವುಗಳಿಗೆ ಎಂದೂ ಬದ್ಧರಾಗಿಲ್ಲ. ತಮಗೆ ಸರಿ ಕಂಡದ್ದನ್ನು, ತಮಗೆ ಹೇಳಬೇಕು ಎಂದು ಅನಿಸಿದ್ದನ್ನು ಮತ್ತೊಮ್ಮೆ ಆಲೋಚಿಸದೆ ಟ್ವೀಟ್ ಮಾಡುವುದು ಅವರ ಅಭ್ಯಾಸ. ಹೀಗಾಗಿ, ಬಿಜೆಪಿ ಪಾಲಿಗೆ ಅವರು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವಾಗಿ ಬದಲಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More