ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ೫ ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ದಸರಾ ಆಚರಣೆ: ಸಿಎಂ ಎಚ್ಡಿಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಆಚರಣೆ‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಮೈಸೂರಿನ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಮೈಸೂರು, ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ಜನರು ತತ್ತರಿಸಿರುವ ಹಿನ್ನೆಲೆಯಲ್ಲಿ ದಸರಾವನ್ನು ಅದ್ಧೂರಿಯಾಗಿ ಆಚರಿಸಬೇಕೇ ಬೇಡವೇ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.‌ ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿಂಧುಗೆ ಫೈನಲ್ ಸವಾಲು ಮೆಟ್ಟಿ ನಿಲ್ಲಲಾದೀತೇ?

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸೇರಿದಂತೆ ಈ ಋತುವಿನ ಪ್ರಮುಖ ಟೂರ್ನಿಗಳ ಫೈನಲ್‌ನಲ್ಲಿ ಎಡವಿರುವ ಪಿ ವಿ ಸಿಂಧುಗೆ ಮತ್ತೊಮ್ಮೆ ಫೈನಲ್ ಸತ್ವಪರೀಕ್ಷೆ ಎದುರಾಗಿದೆ. ಇಂದು ಮಧ್ಯಾಹ್ನ ೧೧.೪೫ಕ್ಕೆ ನಡೆಯಲಿರುವ ಏಷ್ಯಾಡ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ತಾಯ್ ಟ್ಸು ಯಿಂಗ್ ಎದುರಿನ ಕಾದಾಟಕ್ಕೆ ಅಣಿಯಾಗಿರುವ ಆಕೆ ಚಾರಿತ್ರಿಕ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಸೈನಾ ನೆಹ್ವಾಲ್ ಕಂಚಿಗೆ ತೃಪ್ತಿಪಟ್ಟರೆ, ಸಿಂಧು ಮತ್ತೊಂದು ಹೆಜ್ಜೆ ಮುಂದೆ ಹೋಗಿರುವುದು ಎಲ್ಲರ ಕಣ್ಣು ಆಕೆಯ ಮೇಲೆ ನೆಟ್ಟಿದೆ. ಇನ್ನು, ಹತ್ತನೇ ದಿನವಾದ ಇಂದು ಭಾರತದ ಪಾಲಿಗೆ ಮತ್ತೊಂದು ಮಹತ್ವಪೂರ್ಣ ಸ್ಪರ್ಧೆಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಬಿಲ್ಗಾರಿಕೆ ಸ್ಪರ್ಧೆಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು ಎದುರುಗೊಳ್ಳಲಿವೆ. ವೈಯಕ್ತಿಕ ಮತ್ತು ರಿಕರ್ವ್ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲವಾಗಿರುವ ಆರ್ಚರಿ (ಬಿಲ್ಗಾರಿಕೆ) ವಿಭಾಗದಲ್ಲಿ ಭಾರತಕ್ಕೆ ಈಗಾಗಲೇ ಬೆಳ್ಳಿ ಖಚಿತವಾಗಿದೆ. ಆದಾಗ್ಯೂ ಚಿನ್ನಕ್ಕಾಗಿ ನಡೆಯುವ ಬಾಣ ಬಿಡುವ ಸ್ಪರ್ಧೆ ಬೆಳಿಗ್ಗೆ ೧೧.೧೫ರಿಂದ ಶುರುವಾಗಲಿದೆ. ಇನ್ನುಳಿದಂತೆ ಅಥ್ಲೆಟಿಕ್ಸ್ ವಿಭಾಗದ ಸ್ಪರ್ಧೆಗಳು ಸಂಜೆ ೫.೦೦ರ ನಂತರ ಆರಂಭವಾಗಲಿದೆ.

ಕೇರಳದ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ರಾಹುಲ್ ಗಾಂಧಿ

ಅತಿಯಾದ ಮಳೆಯಿಂದ ತತ್ತರಿಸಿದ ಕೇರಳ ರಾಜ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ಕೊಚ್ಚಿ ತಲುಪಲಿದ್ದು, ಅಳುವಾ, ಪರವೂರ್, ಚಾಲಕುಡಿಗೆ ಇಂದು ಭೇಟಿ ನೀಡಿ; ಬುಧವಾರ ತಿರುವನಂತಪುರ, ಚೆಂಗನೂರ್, ಅಲೆಪ್ಪಿ ಹಾಗೂ ವಯನಾಡು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಡಿಎಂಕೆ ಪಕ್ಷಕ್ಕೆ ನೂತನ ಅಧ್ಯಕ್ಷ ನೇಮಕ ಸಾಧ್ಯತೆ

ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷ ಡಿಎಂಕೆಗೆ ಮಂಗಳವಾರ ನೂತನ ಅಧ್ಯಕ್ಷರ ನೇಮಕವಾಗುವ ನಿರೀಕ್ಷೆ ಇದೆ. ಗಮನಾರ್ಹ ಸಂಗತಿ ಎಂದರೆ, 50 ವರ್ಷಗಳ ನಂತರ ಹೊಸ ಅಧ್ಯಕ್ಷರೊಬ್ಬರ ಆಗಮನವಾಗುತ್ತಿದೆ. ಪಕ್ಷದ ಹಿಂದಿನ ಅಧ್ಯಕ್ಷ ಕರುಣಾನಿಧಿ ನಿಧನದ ನಂತರ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಅವರ ಪುತ್ರ ಸ್ಟಾಲಿನ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಸುತ್ತೂರಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ೧೦೩ನೇ ಜಯಂತಿಯ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More