ಸುಧಾ ಭಾರದ್ವಾಜ್, ವರವರ ರಾವ್ ಬಂಧನಕ್ಕೆ ತೀವ್ರ ಖಂಡನೆ, ಪ್ರತಿಭಟನೆ

ದೇಶದ ವಿವಿಧ ನಗರಗಳಲ್ಲಿರುವ ಮಾನವ ಹಕ್ಕು ಹೋರಾಟಗಾರರು ಮತ್ತು ವಕೀಲರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಜನಸಾಮಾನ್ಯರ ಹಕ್ಕಿಗಾಗಿ ಹೋರಾಟ ಮಾಡುವವರನ್ನು ಹತ್ತಿಕ್ಕುತ್ತಿರುವ ಕುರಿತು ಆಕ್ರೋಶ ಕಂಡುಬಂದಿದೆ

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಮಾವೋವಾದಿ ನಕ್ಸಲೀಯರ ಪರವಾದಿ, ಕ್ರಾಂತಿಕಾರಿ ತೆಲುಗು ಲೇಖಕ ವರವರ ರಾವ್ ಅವರ ಹೈದರಾಬಾದ್ ಮನೆಯ ಮೇಲೆ ಪುಣೆ ಪೊಲೀಸರು ಮಂಗಳವಾರ ದಾಳಿ ಮಾಡಿ ಶೋಧ ನಡೆಸಿ ಅವರನ್ನು ಬಂಧಿಸಿದ್ದಾರೆ. ವರವರ ರಾವ್ ಅವರ ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರು ಹಾಗೂ ಒಬ್ಬ ಪತ್ರಕರ್ತರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಕಳೆದ ಜೂನ್‌ನಲ್ಲಿ ಐವರನ್ನು ಬಂಧಿಸಿದ್ದರು. ಬಂಧಿತರೊಬ್ಬರ ಲ್ಯಾಪ್‌ಟಾಪ್‌ನಲ್ಲಿ ಈ ಸಂಚಿನ ಬಗ್ಗೆ ಮಾಹಿತಿ ಹಾಗೂ ಆ ಸಂಬಂಧವಾದ ಪತ್ರವೊಂದು ಕಂಡುಬಂದಿದ್ದು, ಅದರಲ್ಲಿ ವರವರ ರಾವ್ ಅವರ ಹೆಸರಿದ್ದ ಆಧಾರದ ಮೇಲೆ ಅವರ ಬಂಧನವಾಗಿದೆ. ಈ ಆರೋಪವನ್ನು ವರವರ ರಾವ್ ಅವರು ಈ ಹಿಂದೆಯೇ ನಿರಾಕರಿಸಿದ್ದರಲ್ಲದೆ, ತಮ್ಮನ್ನು ಜೈಲಿಗೆ ತಳ್ಳಲು ಪೊಲೀಸರು ನಕಲಿ ಪತ್ರ ಸೃಷ್ಟಿಸಿದ್ದಾರೆ ಎಂದಿದ್ದರು.

“ರಾಜೀವ್‌ ಗಾಂಧಿಯವರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ಮೋದಿಯವರನ್ನು ಮುಗಿಸಬೇಕು,” ಎಂಬ ಪ್ರಸ್ತಾಪವಿರುವ ಆ ಪತ್ರದಲ್ಲಿ (ಪತ್ರ ಬರೆದವರ ಹೆಸರು ಆರ್ ಎಂದು ಉಲ್ಲೇಖಿಸಲಾಗಿದೆ), ಆ ಉದ್ದೇಶಕ್ಕಾಗಿ ೮ ಕೋಟಿ ಹಣ, ಎಂ-೪ ರೈಫಲ್ ಮತ್ತು ಹಲವು ಸುತ್ತು ಗುಂಡು ಬೇಕಾಗಬಹುದುದೆಂದು ಲೆಕ್ಕಾಚಾರ ಮಾಡಲಾಗಿದೆ ಎಂದು ಉಲ್ಲೇಖಿಸಿರುವುದಾಗಿ ಹೇಳಲಾಗಿದೆ.

ಅರುಂಧತಿ ರಾಯ್‌ ಖಂಡನೆ

“ಮಾನವ ಹಕ್ಕುಗಳ ಹೋರಾಟಗಾರರ ಮನೆಗಳ ಮೇಲೆ ಪೊಲೀಸರು ಮಂಗಳವಾರ ದಾಳಿ ಮಾಡಿ ಶೋಧ ನಡೆಸಿರುವುದನ್ನು ನೋಡಿದರೆ, ಮರಳಿ ತುರ್ತುಪರಿಸ್ಥಿತಿಯ ಘೋಷಣೆಯ ದಿನಗಳಿಗೆ ಹತ್ತಿರ ಬಂದಂತಾಗಿದೆ,” ಎಂದು ಲೇಖಕಿ ಅರುಂಧತಿ ರಾಯ್‌ ಅವರು ಪ್ರತಿಕ್ರಿಯಿಸಿದ್ದಾರೆ. ಪೊಲೀಸರ ಈ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಹಿಂದೂ ಬಹುಸಂಖ್ಯಾತವಾದದ ವಿರುದ್ಧ ಮಾತನಾಡಿದವರೆಲ್ಲರನ್ನೂ ಅಪರಾಧಿಗಳಂತೆ ನೋಡಲಾಗುತ್ತಿರುವುದು ಖಂಡನೀಯ ಎಂದೂ ಅರುಂಧತಿ ಕಿಡಿಕಾರಿದ್ದಾರೆ. “ದೊಂಬಿಹತ್ಯೆ ಮಾಡಿದವರು ಮತ್ತು ಹಾಡುಹಗಲೇ ಕೊಲೆ ಮಾಡಿದವರ ಬಂಧನ ಆಗುವುದರ ಬದಲಾಗಿ ಮಾನವ ಹಕ್ಕುಗಳ ಹೋರಾಟಗಾರರು, ಕವಿಗಳು, ಬುದ್ಧಿಜೀವಿಗಳು, ವಕೀಲರ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಿರುವುದನ್ನು ನೋಡಿದರೆ ಭಾರತ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ,” ಎಂದು ಅವರು ಆತಂಕ ವ್ಯಕ್ತಮಾಡಿದ್ದಾರೆ.

“ಈ ಬೆಳವಣಿಗೆಗಳು ನಿಜವಾಗಿಯೂ ಅಪಾಯಕಾರಿ. ಇದೊಂದು ರೀತಿಯಲ್ಲಿ, ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ಆಡಳಿತಾರೂಢರು ನಡೆಸುತ್ತಿರುವ ಸಿದ್ಧತೆ. ಹೀಗಾಗಲು ನಾವು ಬಿಡಬಾರದು. ನಾವೆಲ್ಲ ಒಂದಾಗಬೇಕು. ಇಲ್ಲದಿದ್ದರೆ ನಾವು ಕಷ್ಟಪಟ್ಟು ಗಳಿಸಿ ಪೋಷಿಸಿಕೊಂಡು ಬಂದಿರುವ ಸ್ವಾತಂತ್ರವನ್ನು ಕಳೆದುಕೊಳ್ಳುತ್ತೇವೆ,” ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಎಟಿಎಸ್ ಬಂಧಿತ ಆರೋಪಿಗಳ ಬಳಿ ಪಿಸ್ತೂಲುಗಳು ಪತ್ತೆ; ಗೌರಿ ಹತ್ಯೆಯಲ್ಲಿ ಕೈವಾಡ ಶಂಕೆ

“ಮಹಾತ್ಮ ಗಾಂಧಿ ಅವರು ಇಂದು ಬದುಕಿದ್ದಿದ್ದರೆ ಮತ್ತು ಅವರನ್ನು ಮೋದಿ ಸರ್ಕಾರ ಇನ್ನೂ ಬಂಧಿಸಿರದಿದ್ದರೆ ಅವರು ಮತ್ತೆ ವಕೀಲರ ಕೋಟನ್ನು ಧರಿಸಿ ಸುಧಾ ಭಾರದ್ವಾಜ್‌ ಅವರ ಪರವಾಗಿ ಕೋರ್ಟಿನಲ್ಲಿ ವಾದ ಮಾಡುತ್ತಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ,” ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ಕ್ರಮ ಬರ್ಬರ, ಸರ್ವಾಧಿಕಾರಿ, ದಮನಕಾರಿ, ಸ್ವೇಚ್ಛಾಚಾರ ಮತ್ತು ಕಾನೂನು ಬದ್ದವಾದುದಲ್ಲ ಎಂದು ಗುಹಾ ಖಂಡಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More