ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

೨೨೨ ಶಾಸಕರು, ೬೪ ವಿಧಾನ ಪರಿಷತ್‌ ಸದಸ್ಯರಿಗೆ ಅನುದಾನ ಬಿಡುಗಡೆ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ೨೦೧೮-೧೯ನೇ ಸಾಲಿನಲ್ಲಿ ಮೊದಲ ಕಂತಿನಲ್ಲಿ ಶಾಸಕರ ಪ್ರದೇಶ ಕ್ಷೇತ್ರ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರವು ೧೪೩.೪೬ ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ೨೨೨ ವಿಧಾನಸಭಾ ಸದಸ್ಯರು ಹಾಗೂ ೬೪ ವಿಧಾನ ಪರಿಷತ್‌ ಸದಸ್ಯರಿಗೆ ತಲಾ ೫೦,೧೬,೨೫೦ ಬಿಡುಗಡೆ ಮಾಡಲಾಗಿದೆ.

೨೦೨೨ಕ್ಕೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದು ಗುರಿ: ಜಮೀರ್‌

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ೨೦೨೨ಕ್ಕೆ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್‌ ಖಾನ್‌ ಹೇಳಿದ್ದಾರೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕುವವರು ಮುಸ್ಲಿಮರೇ ಅಲ್ಲ ಎಂದು ಜಮೀರ್‌ ಹೇಳಿದ್ದಾರೆ.

ಬಿಜೆಪಿಗರಿಂದ ಟ್ರೋಲ್; ಸರ್‌ನೇಮ್ ತೆಗೆದುಹಾಕಿದ ಆಪ್ ಅಭ್ಯರ್ಥಿ ಅತಿಶಾ ಮರ್ಲೆನಾ

ಬಿಜೆಪಿ ಬಲಪಂಥೀಯ ಸಂಘಟನೆಗಳ ಟ್ರೋಲ್‌ಗೆ ಗುರಿಯಾಗಿ ಆಪ್‌ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಹೆಸರಿನ ಜೊತೆಗಿದ್ದ ಸರ್‌ನೇಮ್ ತೆಗೆದುಹಾಕಿದ್ದಾರೆ. ಮುಂಬರುವ ೨೦೧೯ರ ಲೋಕಸಭಾ ಚುನಾವಣೆಗೆ ದೆಹಲಿ ಪೂರ್ವ ಕ್ಷೇತ್ರದಿಂದ ನಿಂತಿರುವ ಆತಿಶಾ ಮರ್ಲೆನಾ ಅವರನ್ನು ಹೆಸರಿನ ಕಾರಣದಿಂದಾಗಿ ಆಕೆ ಕ್ರಿಶ್ಚಿಯನ್ ಎಂದು ಟೀಕಿಸಲಾಗುತ್ತಿತ್ತು. ದೆಹಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರ ತಂದೆ ಕಮ್ಯುನಿಸ್ಟ್. ಹೀಗಾಗಿ, ಮಾರ್ಕ್ಸ್ ಹಾಗೂ ಲೆನಿನ್ ಅವರ ಮೇಲಿನ ಗೌರವಾರ್ಥವಾಗಿ ಇಬ್ಬರು ಹೆಸರಿನ ಮೊದಲ ಅಕ್ಷರವನ್ನು ತೆಗೆದು ಆತಿಶಾ ಮರ್ಲೆನಾ ಎಂದು ಆಕೆಯ ಪೋಷಕರಾದ ವಿಜಯ್ ಸಿಂಗ್ ಹಾಗೂ ತೃಪ್ತಿ ವಹಿ ನಾಮಕರಣ ಮಾಡಿದ್ದರು. ಇದೀಗ ಟ್ರೋಲ್‌ಗೆ ಬೇಸತ್ತು ಆತಿಶಾ ತಮ್ಮ ಹೆಸರಿನಲ್ಲಿರುವ ಸರ್‌ನೇಮ್ ಅನ್ನು ಅಧಿಕೃತವಾಗಿ ಪಕ್ಷದ ದಾಖಲೆಗಳಿಂದ ಮತ್ತು ಟ್ವಿಟರ್ ಖಾತೆಯಿಂದ ತೆಗೆದುಹಾಕಿದ್ದಾರೆ.

ರೈಲು ನಿಲ್ದಾಣಗಳಲ್ಲಿ ಶೀಘ್ರವೇ ವೈಫೈ ಸೌಲಭ್ಯ: ಪಿಯೂಷ್ ಗೋಯಲ್

ದೇಶದಲ್ಲಿರುವ 60 ಸಾವಿರಕ್ಕೂ ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ಶೀಘ್ರವೇ ವೈಫೈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಮತ್ತು ಬಯೋ ವ್ಯಾಕ್ಯೂಮ್ ಟಾಯ್ಲೆಟ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಾಗುವ ಈ ಸೌಲಭ್ಯಗಳಿಂದ ಪ್ರಯಾಣಿಕರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ, ರೈತರಿಗೆ ನೆರವಾಗಲಿದೆ ಎಂದು ವಿವರಿಸಿದರು. ವಿಮಾನದಲ್ಲಿ ಅಳವಡಿಸಲಾಗಿರುವಂತೆ ರೈಲುಗಳಲ್ಲಿಯೂ ಶೀಘ್ರವೇ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ವ್ಯವಸ್ಥೆಯನ್ನು ಕಲ್ಪಿಸಲು ಚಿಂತನೆ ನಡೆದಿದೆ ಎಂದವರು ವಿವರಿಸಿದರು

ಕೇರಳ ಸ್ವಚ್ಛತೆಗೆ ಕೈಜೋಡಿಸಿದ ೭೦ ಸಾವಿರ ಜನ

ಮಳೆ ಪ್ರವಾಹದಿಂದಾಗಿ ತತ್ತರಿಸಿರುವ ಕೇರಳವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದ್ದು, ೭೦ ಸಾವಿರ ಜನರು ಸ್ವಚ್ಛತೆ ಕಾರ್ಯಗಳಿಗೆ ಸ್ವಇಚ್ಛೆಯಿಂದ ಪಾಲ್ಗೊಂಡಿದ್ದಾರೆ. ಕುಟ್ಟನಾಡ ಪ್ರದೇಶ ಅಪಾರ ಪ್ರಮಾಣದ ಹಾನಿಗೆ ಒಳಗಾಗಿ ಹೆಚ್ಚು ಕಲುಷಿತಗೊಂಡಿದೆ. ಸುಮಾರು ಒಂದು ಲಕ್ಷ ಮನೆಗಳಲ್ಲಿ ಕೆಸರು ಆವರಿಸಿದೆ. ಪಾಲ್ಗೊಂಡಿರುವ ಸ್ವಯಂಸೇವಕರು ಆ.೩೦ರೊಳಗೆ ಕೇರಳ ಸ್ವಚ್ಚ ಮಾಡುವ ಗುರಿ ಹೊಂದಿದ್ದಾರೆ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಿದ್ದರಾಮಯ್ಯ ಯುರೋಪ್ ಪ್ರವಾಸದ ಬಳಿಕ ಮೈತ್ರಿ ಸರ್ಕಾರ ಖತಂ: ಜಗದೀಶ್ ಶೆಟ್ಟರ್

ಈಗಾಗಲೇ ಮೈತ್ರಿಪಕ್ಷ ಜೆಡಿಎಸ್- ಕಾಂಗ್ರೆಸ್‌ನಲ್ಲಿ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಅವರ ಯುರೋಪ್ ಪ್ರವಾಸದ ಬಳಿಕ ಸರ್ಕಾರದ ಮುರಿದುಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸಿದ್ದರಾಮಯ್ಯ ಜೊತೆ ಕಂದಾಯ ಸಚಿವರಾದ ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್ ಸೇರಿ 30-40 ಶಾಸಕರು ಯುರೋಪ್ ಪ್ರವಾಸಕ್ಕೆ ಹೊರಟಿದ್ದು ಇಂದು ರಾಜ್ಯದಲ್ಲಿ ನಡೆದಿರುವುದು ಆಪರೇಶನ್ ಕಮಲ ಅಲ್ಲ. ಆಪರೇಶನ್ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಕೊಡಗು ಜಿಲ್ಲೆಯ ಪ್ರವಾಹ, ಉತ್ತರ ಕರ್ನಾಟಕದ ಬರಗಾಲದ ನಡುವೆ ಕಂದಾಯ ಸಚಿವರು ವಿದೇಶ ಪ್ರವಾಸ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸೈಫ್‌ ಅಲಿ ಖಾನ್‌ 'ಹಂಟರ್‌’ ಲುಕ್‌

ನವ್‌ದೀಪ್‌ ಸಿಂಗ್ ನಿರ್ದೇಶನದ ‘ಹಂಟರ್‌’ ಹಿಂದಿ ಚಿತ್ರದಲ್ಲಿನ ನಟ ಸೈಫ್ ಅಲಿ ಖಾನ್ ಲುಕ್‌ ಹೊರಬಿದ್ದಿದೆ. ಚಿತ್ರದಲ್ಲಿ ಅವರು ನಾಗಾ ಸಾಧು ಪಾತ್ರ ನಿರ್ವಹಿಸುತ್ತಿದ್ದಾರೆ. ನಟ ಸೈಫ್‌ ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಸ್ಟ್ರೀಮ್‌ ಆದ ‘ಸೇಕ್ರೆಡ್‌ ಗೇಮ್ಸ್‌’ ವೆಬ್‌ ಸರಣಿಯಲ್ಲಿ ಸರ್ತಾಜ್‌ ಸಿಂಗ್‌ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಮನೋರಮಾ ಸಿಕ್ಸ್‌ ಫೀಟ್‌ ಅಂಡರ್‌’ ಮತ್ತು ‘ಎನ್‌ಎಚ್‌10’ ಯಶಸ್ವೀ ಹಿಂದಿ ಚಿತ್ರಗಳ ನಿರ್ದೇಶಕ ನವ್‌ದೀಪ್‌ ಅವರ ‘ಹಂಟರ್‌’ ಕುರಿತು ನಿರೀಕ್ಷೆಯಿದೆ.

ವಿಮಾನ ನಿಲ್ದಾಣದಲ್ಲೇ ಮದುವೆ ನಿಶ್ಚಿತಾರ್ಥ ಮುಗಿಸಿದ ವಿನೇಶ್ ಫೋಗಟ್!

ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ವಿಮಾನ ನಿಲ್ದಾಣದಲ್ಲೇ ಮದುವೆ ನಿಶ್ಚಯ ಮಾಡಿಕೊಂಡದ್ದು ವಿಶೇಷ. ಶನಿವಾರ (ಆ.೨೫) ಜಕಾರ್ತದಿಂದ ಹಿಂದಿರುಗುತ್ತಿದ್ದಂತೆಯೇ ತನ್ನ ಸುದೀರ್ಘ ಕಾಲದ ಗೆಣೆಕಾರ ಸೋಮ್‌ವೀರ್ ರಾಥಿ ಜೊತೆ ವಿವಾಹ ನಿಶ್ಚಯ ಮಾಡಿಕೊಂಡರು. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ತಮ್ಮ ಕುಟುಂಬ ವರ್ಗ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಅದಲು-ಬದಲು ಮಾಡಿಕೊಂಡರು. ಏಷ್ಯಾಡ್‌ನಲ್ಲಿ ಸ್ವರ್ಣ ಗೆದ್ದ ಭಾರತದ ಮೊಟ್ಟಮೊದಲ ಮಹಿಳಾ ರೆಸ್ಲರ್ ಎನಿಸಿರುವ ವಿನೇಶ್ ಹೆಸರು, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜೊತೆಗೆ ತಳಕುಹಾಕಿಕೊಂಡಿತ್ತು. ಆದರೆ, ಇಬ್ಬರೂ ಇದನ್ನು ಅಲ್ಲಗಳೆದಿದ್ದರು. "ಕಳೆದ ಏಳೆಂಟು ವರ್ಷಗಳಿಂದಲೂ ನಾನು ಹಾಗೂ ಸೋಮ್‌ವೀರ್ ಪರಸ್ಪರ ಪ್ರೇಮಿಸುತ್ತಿದ್ದು, ನೀರಜ್ ಮತ್ತು ನನ್ನ ನಡುವೆ ಪತ್ರಿಕೆಯಲ್ಲಿ ಬಂದಿರುವ ವರದಿ ಕೇವಲ ಕಲ್ಪಿತವಷ್ಟೆ,'' ಎಂದು ಬಂಗಾಳಿ ಪತ್ರಿಕೆಯೊಂದಕ್ಕೆ ವಿನೇಶ್ ಪ್ರತಿಕ್ರಿಯಿಸಿದ್ದರು.

ಶ್ರೀಜೇಶ್ ಪಡೆಗೆ ಸೆಮಿಯಲ್ಲಿ ಮಲೇಷ್ಯಾ ಸವಾಲು

ಪ್ರಸ್ತುತ ಇಂಡೋನೇಷ್ಯಾದ ಜಕಾರ್ತ ಮತ್ತು ಪಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ ಹದಿನೆಂಟನೇ ಏ‍ಷ್ಯಾ ಕ್ರೀಡಾಕೂಟದಲ್ಲಿ ಅಜೇಯ ಓಟ ಮುಂದುವರೆಸಿರುವ ಭಾರತ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಸವಾಲನ್ನು ಎದುರಿಸಲಿದೆ. ಇಂದು ನಡೆದ ಶ್ರೀಲಂಕಾ ವಿರುದ್ಧದ ಗುಂಪು ಹಂತದ ಕೊನೇ ಪಂದ್ಯದಲ್ಲಿ ೨೦-೦ ಗೋಲುಗಳಿಂದ ವಿಜೃಂಭಿಸಿದ ಶ್ರೀಜೇಶ್ ಪಡೆ, ಗುರುವಾರ (ಆ.೩೦) ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಲೇಷ್ಯಾ ಮಣಿಸುವ ವಿಶ್ವಾಸದಲ್ಲಿದೆ. ಅಂದಹಾಗೆ, ಶ್ರೀಲಂಕಾ ವಿರುದ್ಧದ ಅಧಿಕಾರಯುತ ಗೆಲುವಿಗೆ ಆಕಾಶ್‌ದೀಪ್ ಸಿಂಗ್ (೯, ೧೧, ೧೭, ೨೨, ೩೨, ೪೨ನೇ ನಿ.) ಒಟ್ಟು ಆರು ಗೋಲು ದಾಖಲಿಸಿ ವಿಜೃಂಭಿಸಿದರೆ, ೨೦೦ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ರೂಪೀಂದರ್ ಸಿಂಗ್ (೧, ೫೨, ೫೩ನೇ ನಿ.) ಹರ್ಮನ್‌ಪ್ರೀತ್ ಸಿಂಗ್ (೫, ೨೧, ೩೩ನೇ ನಿ.) ಮತ್ತು ಮನ್‌ದೀಪ್ ಸಿಂಗ್ (೩೫, ೪೩, ೫೯ನೇ ನಿ.) ತಲಾ ಮೂರು ಗೋಲು ದಾಖಲಿಸಿದರು. ಇವರೊಂದಿಗೆ ಲಲಿತ್ ಉಪಾಧ್ಯಾಯ್ (೫೭, ೫೮ನೇ ನಿ.), ವಿವೇಕ್ ಸಾಗರ್ ಪ್ರಸಾದ್ (೩೧ನೇ ನಿ.), ಅಮಿತ್ ರೋಹಿದಾಸ್ (೩೮ನೇ ನಿ.) ಮತ್ತು ದಿಲ್ಪ್ರೀತ್ ಸಿಂಗ್ (೫೩ನೇ ನಿ.) ಒಂದು ಗೋಲು ಹೊಡೆದರು.

ಆರ್ಬಿಐ ಉದ್ಯೋಗಿಗಳಿಂದ ಎರಡು ದಿನ ಮುಷ್ಕರ; ಬ್ಯಾಂಕಿಂಗ್ ವಹಿವಾಟಿಗೆ ಅಡ್ಡಿ ನಿರೀಕ್ಷೆ

ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳ ಏಕೀಕೃತ ವೇದಿಕೆ (ಯುಎಫ್ಬಿಒಇ) ಸೆ.4 ಮತ್ತು 5ರಂದು ಮುಷ್ಕರಕ್ಕೆ ಕರೆ ನೀಡಿದೆ. ತತ್ಪರಿಣಾಮ, ಈ ಎರಡೂ ದಿನ ಬ್ಯಾಂಕಿಂಗ್ ವಹಿವಾಟು ಅಸ್ತವ್ಯಸ್ತಗೊಳ್ಳುವ ನಿರೀಕ್ಷೆ ಇದೆ. ಭವಿಷ್ಯನಿಧಿ ಪಾವತಿ ಮಾಡುವವರು ಪಿಂಚಣಿ ಯೋಜನೆಗೆ ಕಡ್ಡಾಯವಾಗಿ ಒಳಪಡಬೇಕೆಂಬ ನಿಯಮವನ್ನು ಐಚ್ಛಿಕವನ್ನಾಗಿ ಮಾಡಬೇಕು. 2012ರ ನಂತರ ನೇಮಕಗೊಂಡ ಉದ್ಯೋಗಿಗಳಿಗೆ ಹೆಚ್ಚುವರಿ ಭವಿಷ್ಯ ನಿಧಿ ನೀಡಬೇಕು ಎಂಬುದು ಯುಎಫ್ಬಿಒಇ ಪ್ರಮುಖ ಬೇಡಿಕೆಗಳಾಗಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More