ಮಹಾರಾಷ್ಟ್ರ ಪೊಲೀಸರಿಗೆ ಮುಖಭಂಗ; ಸಾಮಾಜಿಕ ಕಾರ್ಯಕರ್ತರಿಗೆ ಕೇವಲ ಗೃಹಬಂಧನ

ಬಂಧಿಸಲಾಗಿದ್ದ ಐವರು ಸಾಮಾಜಿಕ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್, ಗೃಹಬಂಧನಕ್ಕೆ ಸೂಚಿಸಿದೆ. ಅಗತ್ಯ ದಾಖಲೆ, ವಿವರವಾದ ಆರೋಪಪಟ್ಟಿ ಮಂಡಿಸಲು ವಿಫಲವಾದ ಪುಣೆ ಪೊಲೀಸರು ಕೋರ್ಟ್‍ನಿಂದ ಟೀಕೆಗೊಳಗಾದರು

ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ ವಿಚಾರದಲ್ಲಿ ಮಹಾರಾಷ್ಟ್ರ ಪೊಲೀಸರು ಸುಪ್ರೀಂ ಕೋರ್ಟಿನಿಂದ ಮುಖಭಂಗಕ್ಕೆ ಈಡಾಗಿದ್ದಾರೆ. ಅಗತ್ಯ ದಾಖಲೆಗಳು, ವಿವರವಾದ ಆರೋಪಪಟ್ಟಿ ಮಂಡಿಸಲು ವಿಫಲವಾದ ಮಹಾರಾಷ್ಟ್ರ ಪೊಲೀಸರು, ಬುಧವಾರ ಕೋರ್ಟ್‍ನಿಂದ ತೀವ್ರ ಟೀಕೆಗೆ ಗುರಿಯಾದರು. ಬಂಧನಕ್ಕೆ ನಿಖರ ಕಾರಣಗಳನ್ನು ಕೇಳಿದ ನಂತರ, ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠ, ಈ ಪ್ರಕರಣದ ವಿಚಾರಣೆಯನ್ನು ಸೆ.6ಕ್ಕೆ ಮುಂದೂಡಿ, ಅಲ್ಲಿವರೆಗೆ ಆರೋಪಿಗಳನ್ನು ಗೃಹಬಂಧನದಲ್ಲಿ ಇಡಲು ಆದೇಶ ನೀಡಿತು.

“ಭಿನ್ನಮತ ಎನ್ನುವುದು ಪ್ರಜಾತಂತ್ರಕ್ಕೆ ಸೇಫ್ಟಿ ವಾಲ್ವ್ ಇದ್ದಂತೆ. ಸೇಫ್ಟಿವಾಲ್ವ್‌ಗೆ ಅವಕಾಶ ನೀಡದಿದ್ದರೆ ಫ್ರೆಶರ್ ಕುಕ್ಕರ್ ಬಸ್ರ್ಟ್ ಆಗುತ್ತದೆ,” ಎಂದು ಪ್ರಕರಣದ ವಿಚಾರಣೆ ನಡೆಸಿದ ಪೀಠದ ಪರವಾಗಿ ಆದೇಶ ನೀಡಿದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಹೇಳಿದ ಮಾತು, ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆಯಂತಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.

ಇದನ್ನೂ ಓದಿ : ಪುಣೆ ಪೊಲೀಸರಿಂದ ಬಂಧಿತರಾದ ಮಾನವ ಹಕ್ಕುಗಳ ಕಾರ್ಯಕರ್ತರ ಹಿನ್ನೆಲೆ

ಪ್ರಕರಣ ಕುರಿತ ಮುಖ್ಯಾಂಶಗಳು

  • “ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲರಾದ ಸುಧಾ ಭಾರದ್ವಾಜ್, ಮಾವೋವಾದಿ ಸಿದ್ಧಾಂತದ ಸಮರ್ಥಕ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೇರಾ, ಗೌತಮ್ ನವ್ಲಾಖಾ ಮತ್ತು ವೇಮನ್ ಗೋನ್ಸಾಲ್ವೇಸ್ ಅವರ ಬಂಧನದ ಹಿಂದಿರುವ ಉದ್ದೇಶ ಭಿನ್ನಾಭಿಪ್ರಾಯವನ್ನು ದಮನ ಮಾಡುವುದಾಗಿದೆ,” ಎಂದು ಬಂಧನವನ್ನು ಪ್ರಶ್ನಿಸಿದ್ದ ಅರ್ಜಿದಾರರ ಪರವಾಗಿ ವಕೀಲರು ವಾದ ಮಾಡಿದರು. ಈ ಕಾರಣದಿಂದಾಗಿಯೇ ಬಂಧನಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟನ್ನು ಕೋರಿದ್ದರು.
  • “ದೊಂಬಿ ಹತ್ಯೆಗಳ ಮೂಲಕ ಸಮಾಜದಲ್ಲಿ ಭಯ ಹುಟ್ಟಿಸುವವರನ್ನು ಬಂಧಿಸಬೇಕೇ ಹೊರತು ಸಾಮಾನ್ಯ ಜನರ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿರುವವರನ್ನಲ್ಲ. ಈ ಬಂಧನಗಳನ್ನು ನೋಡಿದರೆ, ದೇಶದ ನಾಗರಿಕ ಪ್ರಜಾತಂತ್ರದ ಹಕ್ಕುಗಳನ್ನು ನಾಶ ಮಾಡಿದಂತಾಗಿದೆ,” ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ಪ್ರಖ್ಯಾತ ಇತಿಹಾಸ ತಜ್ಞೆ ರೊಮಿಲಾ ಥಾಪರ್ ತಿಳಿಸಿದ್ದಾರೆ.
  • “ಈ ಸಾಮಾಜಿಕ ಕಾರ್ಯಕರ್ತರು ಮಾವೋವಾದಿ ನಕ್ಸಲೀಯರ ಜೊತೆ ಸಂಪರ್ಕ ಪಡೆದಿದ್ದಾರೆ. ದೇಶದ ಪ್ರಸ್ತುತ ರಾಜಕೀಯ ವ್ಯವಸ್ಥೆ ಬಗ್ಗೆ ಇವರಿಗೆ ಅಸಹನೆ ಇದೆ. ದೊಡ್ಡದೊಂದು ಸಂಚಿನಲ್ಲಿ ಇವರ ಪಾತ್ರ ಇದೆ ಎನ್ನುವ ಬಗ್ಗೆ ಇತ್ಯರ್ಥವಾಗಿ ಹೇಳಬಹುದಾದ ಸಾಕ್ಷ್ಯಗಳಿವೆ. ತಮ್ಮ ಉದ್ದೇಶಿತ ಸಂಚನ್ನು ಜಾರಿಗೆ ತರುವ ಉದ್ದೇಶದಿಂದ 35 ಕಾಲೇಜುಗಳಿಂದ ಯುವಕರನ್ನು ನೇಮಿಸಿಕೊಳ್ಳಲು ಅವರು ಯೋಜಿಸುತ್ತಿದ್ದರು,” ಎಂದು ಪೊಲೀಸರು ಕೋರ್ಟಿಗೆ ತಿಳಿಸಿದರು.
  • ಸಾಮಾಜಿಕ ಕಾರ್ಯಕರ್ತರನ್ನು ಪುಣೆ ಪೊಲೀಸರು ವಿವಾದಾಸ್ಪದವಾದ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯ ಅನ್ವಯ ಬಂಧಿಸಿದ್ದಾರೆ. ಭಯೋತ್ಪಾದಕರಿಗೆ ಬೆಂಬಲ ನೀಡುವ ಅಥವಾ ಅಕ್ರಮ ಚಟುವಟಿಕೆ ನಡೆಸುವ ಸಂಶಯವಿರುವರ ವಿರುದ್ಧ ಬಳಸಬೇಕಾದ ಈ ಕಾನೂನು ಅತ್ಯಂತ ಭೀಕರವಾದುದು. ಈ ಕಾನೂನಿನ ಅನ್ವಯ ಪೊಲೀಸರು ವಾರೆಂಟ್ ಇಲ್ಲದೆ ಯಾರ ಮನೆಯ ಮೇಲಾದರೂ ದಾಳಿ ಮಾಡಬಹುದು, ಬಂಧಿಸಬಹುದು. ಬಂಧನಕ್ಕೆ ಒಳಗಾದವರು 180 ದಿನಗಳ ಕಾಲ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ.
  • “ಬಂಧಿಸಲಾದ ಸಾಮಾಜಿಕ ಕಾರ್ಯಕರ್ತರು ಕಳೆದ ಡಿಸೆಂಬರ್‌ನಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಮತ್ತು ಅದರಿಂದಾಗಿ ನಂತರ ಆ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು,” ಎಂದು ಪೊಲೀಸರು ಆರೋಪಿಸಿದ್ದಾರೆ.
  • ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸುಧಾ ಭಾರದ್ವಾಜ್ ಅವರನ್ನು ಈ ತಿಂಗಳ 30ರವರೆಗೆ ಗೃಹಬಂಧನದಲ್ಲಿ ಇಡಬೇಕೆಂದು ನಿನ್ನೆಯೇ ಆದೇಶ ನೀಡಿತ್ತು. ಇದನ್ನು ಉಲ್ಲಂಘಿಸಿ ಅವರನ್ನು ಫರೀದಾಬಾದ್ ಕೋರ್ಟ್‍ಗೆ ಹಾಜರುಪಡಿಸಿ, ಬಂಧನಕ್ಕೆ ಅನುಮತಿ ಪಡೆಯಲು ಪೊಲೀಸರು ಯತ್ನಿಸಿದರಾದರೂ ನ್ಯಾಯಾಧೀಶರು ಅದಕ್ಕೆ ಅವಕಾಶ ನೀಡದೆ ಹೈಕೋರ್ಟ್ ಆದೇಶ ಪಾಲಿಸಬೇಕೆಂದು ಸೂಚನೆ ನೀಡುವ ಮೂಲಕ ಯಾವುದೇ ಅಕ್ರಮಕ್ಕೆ ಅವಕಾಶ ನೀಡಲಿಲ್ಲ.
  • ಬಂಧನದ ವಿರುದ್ಧ ಪ್ರಸಿದ್ಧ ಇತಿಹಾಸ ತಜ್ಞೆ ರೊಮಿಲ್ಲಾ ಥಾಪರ್, ಪ್ರಖ್ಯಾತ ಆರ್ಥಿಕ ತಜ್ಞೆ ದೇವಕಿ ಜೈನ್, ಆರ್ಥಿಕ ಮತ್ತು ಯೋಜನಾ ತಜ್ಞ ಪ್ರಭಾತ್ ಪಟ್ನಾಯಕ್, ಮಾನವ ಹಕ್ಕುಗಳ ಹೋರಾಟಗಾರರಾದ ಸತೀಶ್ ದೇಶಪಾಂಡೆ ಹಾಗೂ ಮಾಜಾ ದಾರೂವಾಲಾ ಅವರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯೆ, ಸಾಮಾಜಿಕ ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ವಿವರಣೆ ಕೋರಿದೆ. ಕಾನೂನುಬದ್ಧವಾಗಿ ಬಂಧನ ನಡೆಸಿಲ್ಲದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More