ಟೀಕೆ, ವಿರೋಧ ಬಗ್ಗುಬಡಿಯುವಲ್ಲಿನ ಪ್ರಭುತ್ವದ ಹಳೇ ತಂತ್ರ ‘ನಕ್ಸಲ್’ ಹಣೆಪಟ್ಟಿ

ದಲಿತರು ಮತ್ತು ಆದಿವಾಸಿಗಳ ಹೋರಾಟ ಮತ್ತು ವಿರೋಧದ ದನಿಗಳನ್ನು ಮಾವೋವಾದಿ ಹಣೆಪಟ್ಟಿಯ ಮೂಲಕ ಹೇಗೆ ದಮನ ಮಾಡಲಾಗುತ್ತಿದೆ ಎಂಬುದನ್ನು ಚರ್ಚಿಸುತ್ತದೆ ಆನಂದ್ ತೇಲ್ತುಂಬ್ದೆ ಅವರ ಪುಸ್ತಕ. ಆ ಕೃತಿಯ ಆಯ್ದಭಾಗ ‘ಸ್ಕ್ರಾಲ್‌’ನಲ್ಲಿ ಪ್ರಕಟವಾಗಿದ್ದು, ಅದರ ಭಾವಾನುವಾದ ಇಲ್ಲಿದೆ

ನಕ್ಸಲ್ ಹೋರಾಟವನ್ನು ಚಳವಳಿಯ ಅಭಿವ್ಯಕ್ತಿಯ ಆಚೆಗೂ ನೋಡುವುದಾದಲ್ಲಿ, ಅದು ಕೂಡ ತೀವ್ರ ಭಿನ್ನಾಭಿಪ್ರಾಯದ, ಸಾರ್ವಜನಿಕ ಪ್ರತಿಭಟನೆಯ ಒಂದು ವರಸೆ ಎಂಬುದನ್ನು ಸ್ವತಃ ಸರ್ಕಾರಗಳೇ ತಮ್ಮ ವ್ಯತಿರಿಕ್ತ ನಡವಳಿಕೆಯ ಹೊರತಾಗಿಯೂ ಹಲವು ಬಾರಿ ಒಪ್ಪಿಕೊಂಡಿವೆ. ಆದರೆ, ತನ್ನ ನಡತೆಯಲ್ಲಿ ಸರ್ಕಾರ ನಕ್ಸಲೀಯರನ್ನು ಯಾವಾಗಲೂ ಅಪರಾಧಿಗಳನ್ನಾಗಿಯೇ ಚಿತ್ರಿಸಿದೆ. ಅದು ಎಷ್ಟರಮಟ್ಟಿಗೆ ಎಂದರೆ, ನಕ್ಸಲೀಯರ ವಿರುದ್ಧದ ಹೋರಾಟದ ಹೆಸರಿನಲ್ಲಿ ಬುಡಕಟ್ಟು ಜನರ ವಿರುದ್ಧ ನಿರಂತರ ಯುದ್ಧವನ್ನೇ ಜಾರಿಯಲ್ಲಿಟ್ಟಿದೆ.

ಇದೀಗ, ಸರ್ಕಾರದ ನಾಗರಿಕ ಹಕ್ಕುಗಳ ದಮನ ನೀತಿಯ ವಿರುದ್ಧ ದನಿ ಎತ್ತುವವರ ವಿರುದ್ಧವೂ ಇದೇ ಅಸ್ತ್ರ ಝಳಪಿಸಲಾಗುತ್ತಿದೆ. ಅಂತಹವರಿಗೆ ನಕ್ಸಲೀಯರು/ ಮಾವೋವಾದಿಗಳು ಎಂಬ ಹಣೆಪಟ್ಟಿ ಹಚ್ಚಿ, ಅವರ ದನಿ ಮತ್ತು ಹೋರಾಟವನ್ನು ದಮನ ಮಾಡಲಾಗುತ್ತಿದೆ. ವಾಸ್ತವವಾಗಿ ನಕ್ಸಲೀಯರ ವಿರುದ್ಧ ಸರ್ಕಾರಗಳು ಮಾಡುವ ಆರೋಪಗಳ ಕುರಿತು ಈಗಿರುವ ಸಾಮಾನ್ಯ ಕಾನೂನುಗಳನ್ನೇ ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯವಿದೆ ಎಂಬುದು ಹಲವು ನಾಗರಿಕ ಹಕ್ಕು ಹೋರಾಟಗಾರರ ವಾದ. ಆದರೆ, ಸರ್ಕಾರ ನಕ್ಸಲೀಯರ ವಿರುದ್ಧದ ಅಸ್ತ್ರವಾಗಿ ಬಳಸಲು ಹೊಸ ಕಠಿಣ ಕಾನೂನುಗಳನ್ನು ರೂಪಿಸಿದೆ. ಆದರೆ, ಅಂತಹ ಕಾನೂನುಗಳು ಭದ್ರತೆಯ ಕುರಿತ ಗ್ರಹಿಕೆಯನ್ನು, ಜನರ ಸುರಕ್ಷತೆಗಿಂತ ಪ್ರಭುತ್ವದ ಸುರಕ್ಷತೆಯೇ ಮುಖ್ಯ ಎಂಬ ಕಡೆಗೆ ವಾಲಿಸಿದ್ದನ್ನು ಬಿಟ್ಟು ಇನ್ನೇನನ್ನೂ ಸಾಧಿಸಿದ್ದು ವಿರಳ. ನಿರಾಯುಧ ಜನರ ವಿರುದ್ಧದ ಬ್ರಹ್ಮಾಸ್ತ್ರಗಳಾಗಿ ಆ ಕಠಿಣ ಕಾನೂನುಗಳು ಬಳಕೆಯಾಗುತ್ತಿವೆ ಮತ್ತು ಯಾವುದನ್ನು ಪರಿಹರಿಸಬೇಕಿತ್ತೋ ಆ ಸಮಸ್ಯೆಗೆ ಇನ್ನಷ್ಟು ನೀರೆರೆಯುತ್ತಿವೆ ಎಂಬುದು ವಾಸ್ತವ.

ಸುಧೀರ್ ಧವಳೆ ಎಂಬ ಮಹಾರಾಷ್ಟ್ರದ ಜನಪ್ರಿಯ ಸಾಮಾಜಿಕ ಕಾರ್ಯಕರ್ತರನ್ನು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ ಮೇಲಿನ ಎಲ್ಲ ಆರೋಪಗಳು ನಿರಾಧಾರವೆಂದು ಸಾಬೀತಾದ ಹಿನ್ನೆಲೆಯಲ್ಲಿ ೨೦೧೪ರ ಮೇನಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಆದಾಗ್ಯೂ ಅವರು ವಿಚಾರಾಣಾಧೀನ ಕೈದಿಯಾಗಿ ಸುಮಾರು ೪೦ ತಿಂಗಳು ಜೈಲಿನಲ್ಲಿ ಕೊಳೆಯಬೇಕಾಯಿತು. ಅವರೊಂದಿಗೆ ಅವರ ಎಂಟು ಮಂದಿ ಆಪ್ತ ಸಾಮಾಜಿಕ ಹೋರಾಟಗಾರರನ್ನೂ ನ್ಯಾಯಾಲಯ ನಿರ್ದೋಷಿಗಳೆಂದು ಘೋಷಿಸಿತು.

ದಲಿತ ಕವಿ ಶಂತನು ಕಾಂಬ್ಳೆ ಅವರನ್ನು ೨೦೦೫ರಲ್ಲಿ ಅದೇ ರೀತಿಯ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಅವರಿಗೆ ಜಾಮೀನು ಸಿಗುವುದರೊಳಗೆ ಸುಮಾರು ೧೦೦ಕ್ಕೂ ಹೆಚ್ಚು ದಿನಗಳ ಕಾಲ ನಿರಂತರವಾಗಿ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಯಿತು. ಈಗ ಅವರ ವಿರುದ್ಧದ ಎಲ್ಲ ಆರೋಪಗಳಿಂದ ನ್ಯಾಯಾಲಯ ಮುಕ್ತಗೊಳಿಸಿದೆ. ರಾಜಕೀಯ ಹೋರಾಟಗಾರ ಅರುಣ್ ಪೆರೈರಾ ಅವರನ್ನು ಕೂಡ ಇಂತಹದ್ದೇ ಆರೋಪ ಹೊರಿಸಿ ಸುಮಾರು ನಾಲ್ಕು ವರ್ಷ ಜೈಲಿನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ೨೦೧೨ರಲ್ಲಿ ಅವರು ಅಂತಿಮವಾಗಿ ಎಲ್ಲ ಆರೋಪಗಳಿಂದ ಮುಕ್ತರಾಗುವವರೆಗೆ, ಒಂದೊಂದು ಆರೋಪದಿಂದ ಮುಕ್ತರಾಗಿ ಹೊರಬಂದಂತೆ ಮತ್ತೆ-ಮತ್ತೆ ಹೊಸ-ಹೊಸ ಆರೋಪ ಹೊರಿಸಿ ಜೈಲಿಗೆ ಅಟ್ಟಲಾಗುತ್ತಿತ್ತು.

ಇವು ಇದೀಗ ತತಕ್ಷಣಕ್ಕೆ ನೆನಪಾಗುವ ಕೆಲವು ಪ್ರಮುಖ ಪ್ರಕರಣಗಳು ಮಾತ್ರ. ತೀರಾ ಅರಣ್ಯದಂಚಿನ ಕುಗ್ರಾಮಗಳಲ್ಲಿ ಇಂತಹ ನೂರಾರು ಪ್ರಕರಣಗಳು ಸಿಗುತ್ತವೆ. ಬುಡಕಟ್ಟು ಮಹಿಳೆಯರು ಮತ್ತು ಯುವಕರ ವಿರುದ್ಧ ಪೊಲೀಸರು ಮಾವೋವಾದಿಗಳು ಎಂಬ ಹಣೆಪಟ್ಟಿ ಹಚ್ಚಿ ಅಥವಾ ಕೆಲವೊಮ್ಮೆ ಅಂತಹ ಯಾವುದೇ ಬಗೆಯ ಆರೋಪ ಇಲ್ಲದೆಯೂ ವರ್ಷಗಟ್ಟಲೆ ಜೈಲುಗಳಲ್ಲಿಟ್ಟು ದೌರ್ಜನ್ಯ ಎಸಗುವ ಸಾಲು-ಸಾಲು ಪ್ರಕರಣಗಳು ಇವೆ.

ತನ್ನದೇ ಜನರ ವಿರುದ್ಧವೇ ಪ್ರಭುತ್ವ ಯುದ್ಧ ಸಾರಿರುವಾಗ, ಆ ಸಮರವನ್ನು ಸಮರ್ಥಿಸಿಕೊಳ್ಳಲು ಕಂಡುಕೊಂಡ ಮತ್ತೊಂದು ಹುನ್ನಾರ ಮತ್ತು ಹೊಸ ಪ್ರತಿಪಾದನೆಯೇ, ‘ನಕ್ಸಲೀಯರು ನಗರ ಪ್ರದೇಶದಲ್ಲಿ ತಮ್ಮ ಜಾಲ ವಿಸ್ತರಿಸಿದ್ದಾರೆ’ ಎಂಬುದು. ಆ ಮೂಲಕ, ನಕ್ಸಲೀಯರ ವಿರುದ್ಧದ ಸರ್ಕಾರದ ಯಾವುದೇ ಕ್ರಮವನ್ನು ಪ್ರಶ್ನಿಸುವ, ಟೀಕಿಸುವ ಜನರನ್ನು ‘ನಗರವಾಸಿ ನಕ್ಸಲೀಯರು’ ಅಥವಾ ‘ನಕ್ಸಲ್ ಬೆಂಬಲಿಗರು’ ಎಂಬ ಹಣೆಪಟ್ಟಿ ಹಚ್ಚಿ, ದಮನಕಾರಿ ಕ್ರಮಗಳನ್ನು ಅನುಸರಿಸಲು ದಾರಿ ಸುಗಮಗೊಳಿಸಲಾಯಿತು.

ನಕ್ಸಲೀಯರ ವಿರುದ್ಧದ ಸರ್ಕಾರದ ಯಾವುದೇ ಕ್ರಮವನ್ನು ಟೀಕಿಸುವುದು ಅಥವಾ ಆ ಬಗ್ಗೆ ವಿರೋಧ ವ್ಯಕ್ತಪಡಿಸುವುದು ನಕ್ಸಲೀಯರಿಗೆ ನೀಡುವ ಬೆಂಬಲ ಎಂದು ಮತ್ತು ಸರ್ಕಾರ ಅಂತಹ ಬೆಂಬಲಿಗರ ವಿರುದ್ಧ ಬಲಪ್ರಯೋಗಿಸಲಿದೆ ಎಂದೂ ಅರ್ಥೈಸಲಾಯಿತು. ೨೦೦೭ರಲ್ಲಿ ಜನಪ್ರಿಯ ವೈದ್ಯ ಮತ್ತು ಸಮಾಜ ಸೇವಕ ವಿನಾಯಕ ಸೇನ್ ವಿರುದ್ಧ ಸರ್ಕಾರ ಪ್ರಯೋಗಿಸಿದ್ದು ಕೂಡ ಇದೇ ಅಸ್ತ್ರವನ್ನು. ಸದ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಜಾಮೀನಿನ ಮೇಲೆ ಹೊರಬಂದಿರುವ ಸೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಚತ್ತೀಸಗಢ ಸರ್ಕಾರ ಬುಡಕಟ್ಟು ಜನರ ವಿರುದ್ಧ ಅನುಸರಿಸಿದ ಸಂವಿಧಾನಬಾಹಿರ ದಮನಕಾರಿ ಕ್ರಮಗಳನ್ನು ಪ್ರಶ್ನಿಸಿದ್ದೇ ಅವರ ಅಪರಾಧವಾಗಿತ್ತು.

ದೇಶದ ನಗರವಾಸಿ ಎಡಪಂಥೀಯ, ಜನಪರ, ಉದಾರವಾದಿ ನಿಲುವಿನ ನಾಗರಿಕ ಹಕ್ಕು ಹೋರಾಟಗಾರರ ವಿರುದ್ಧ ದೇಶವಿರೋಧಿಗಳೆಂಬ ಹಣೆಪಟ್ಟಿ ಹಚ್ಚುವ ಹೊಸ ವರಸೆ ಜೋರಾಗಿರುವ ನಡುವೆಯೇ; ಇನ್ನೊಂದೆಡೆ, ಅಂತಹ ಆರೋಪಗಳ ಹೊರತಾಗಿಯೂ ಸರ್ಕಾರದ ವಿರುದ್ಧ ಜನಪರವಾಗಿ ನಿಲ್ಲುವವರ ವಿರುದ್ಧ ಇದೀಗ ‘ನಗರ ನಕ್ಸಲೀಯರು’ ಎಂಬ ಹೊಸ ಹಣೆಪಟ್ಟಿ ಜಾರಿಗೆ ತರಲಾಗಿದೆ.

ಮಹಾರಾಷ್ಟ್ರದಲ್ಲಿ ನಕ್ಸಲೀಯರ ಹಣೆಪಟ್ಟಿಯಲ್ಲಿ ಬಂಧಿತರಾಗಿರುವವರೆಲ್ಲ ಬಹುತೇಕ ದಲಿತರು ಮತ್ತು ಆದಿವಾಸಿಗಳೇ. ಜಾತಿಯ ಕಾರಣಕ್ಕೆ ಈಗಾಗಲೇ ದುರ್ಬಲರಾಗಿರುವ ಅವರ ಮೇಲೆ ಮಾವೋವಾದಿ ಎಂಬ ಹಣೆಪಟ್ಟಿ ಮತ್ತೊಂದು ಸುತ್ತಿನ ಗದಾಪ್ರಹಾರವಾಗಿದೆ.

ಇದನ್ನೂ ಓದಿ : ಮಹಾರಾಷ್ಟ್ರ ಪೊಲೀಸರಿಗೆ ಮುಖಭಂಗ; ಸಾಮಾಜಿಕ ಕಾರ್ಯಕರ್ತರಿಗೆ ಕೇವಲ ಗೃಹಬಂಧನ

ಇಂತಹ ದಮನಕಾರಿ ತಂತ್ರಗಳ ಮೂಲಕ ಅಧಿಕಾರ ಮತ್ತು ಆಡಳಿತಾರೂಢ ವರ್ಗಗಳು ದಲಿತ ಹೋರಾಟವನ್ನು ಸಾಕಷ್ಟು ಹತ್ತಿಕ್ಕಿದ್ದರೂ ದಲಿತರ ನಡುವೆ ಹಾಸುಹೊಕ್ಕಾಗಿರುವ ಅಂಬೇಡ್ಕರ್ ಪ್ರಜ್ಞೆ ಇನ್ನೂ ಜೀವಂತವಿದೆ. ಕೈರ್ಲಾಂಜಿ ಹತ್ಯಾಕಾಂಡದಂತಹ ಘಟನೆಗಳು ನಡೆದಾಗ ದಲಿತರ ಎದೆಯಾಳದ ಅಂತಹ ಪ್ರಜ್ಞೆ ವ್ಯವಸ್ಥೆಯ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ಲಾವಾರಸದಂತೆ ಸ್ಪೋಟಿಸದೆ ಇರದು. ಉತ್ತರ ಪ್ರದೇಶದ ಶಹರಾಂಪುರ ದಲಿತರ ಮೇಲಿನ ದೌರ್ಜನ್ಯ ಘಟನೆ ಕೂಡ ಅಂತಹ ಮತ್ತೊಂದು ಆಕ್ರೋಶಕ್ಕೆ, ಸಂಘಟಿತ ಹೋರಾಟಕ್ಕೆ ಕಾರಣವಾಯಿತು. ಆದರೆ, ಆಳುವ ವರ್ಗದ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ಸಿಡಿದೇಳುವ ಇಂತಹ ದಲಿತ ಮತ್ತು ಆದಿವಾಸಿ ಪ್ರಜ್ಞೆಯನ್ನು ಬಗ್ಗುಬಡಿಯಲು, ಆಮೂಲಾಗ್ರ ಕಿತ್ತುಹಾಕಲು ಇದೀಗ ಸರ್ಕಾರಗಳು ಬಳಸುತ್ತಿರುವುದು ಮಾವೋವಾದಿ ಅಥವಾ ನಕ್ಸಲ್‌ವಾದಿ ಎಂಬ ಹಣೆಪಟ್ಟಿಯನ್ನು! ಜೈಲಿನಿಂದ ಬಿಡುಗಡೆಯಾದ ಬಳಿಕ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಬರೆದ ಲೇಖನದಲ್ಲಿ ಸುಧೀರ್ ಧವಳೆ ಅವರು ಇದೇ ವಾದವನ್ನು ಮುಂದಿಟ್ಟಿದ್ದಾರೆ: “ವಿರೋಧದ ದನಿಗಳನ್ನು ಅಡಗಿಸಲಾಗುತ್ತಿದೆ. ದಮನಿತರು ದೌರ್ಜನ್ಯದ ವಿರುದ್ಧ ಮತ್ತೆ-ಮತ್ತೆ ಸಿಡಿದೇಳುವುದು ವಿರಳ. ಕೈರ್ಲಾಂಜಿ ಘಟನೆಯ ಬಳಿಕ ನಡೆದ ನಿರಂತರ ಪ್ರತಿಭಟನೆಯಂತಹ ಹೋರಾಟಗಳು ಇನ್ನು ಸಾಮಾನ್ಯವಾಗಿ ಕಾಣಲಾರವು. ಏಕೆಂದರೆ, ಅಂದಿನ ಆ ಹೋರಾಟದಲ್ಲಿ ಭಾಗಿಯಾಗಿದ್ದ ನನ್ನಂಥ ಹಲವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದೆ. ಈಗ ನಮಗೆ ‘ನಕ್ಸಲ್’ ಎಂಬ ಹಣೆಪಟ್ಟಿ ಕಟ್ಟಲಾಗಿದೆ.”

೧೯೯೭ರ ಜುಲೈ ೧೧ರಂದು ರಮಾಬಾಯಿ ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತರ ಮೇಲೆ ಬಾಂಬೆ ಪೊಲೀಸರು ನಡೆಸಿದ ಗೋಲಿಬಾರಿಗೆ ಹತ್ತು ಮಂದಿ ದಲಿತರು ಬಲಿಯಾಗಿದ್ದರು. ಆ ಘಟನೆಯನ್ನು ಖಂಡಿಸಿ ನ್ಯಾಯಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ನಡೆದ ಹೋರಾಟದ ನೇತೃತ್ವ ವಹಿಸಿದ್ದವರಲ್ಲಿ ಧವಳೆ ಕೂಡ ಒಬ್ಬರಾಗಿದ್ದರು. ೨೦೦೭ರ ಡಿ.೬ರಂದು (ಅಂಬೇಡ್ಕರ್ ಪರಿನಿರ್ವಾಣ ದಿನ) ರಿಪಬ್ಲಿಕನ್ ಪ್ಯಾಂಥರ್ ಸಂಘಟನೆ ಕಟ್ಟುವಲ್ಲಿಯೂ ಅವರದ್ದು ಪ್ರಮುಖ ಪಾತ್ರವಾಗಿತ್ತು. ಜಾತಿ ವಿನಾಶವೇ ತನ್ನ ಗುರಿಯಾಗಿಸಿಕೊಂಡಿದ್ದ ಆ ಸಂಘಟನೆಯಷ್ಟೇ ಅಲ್ಲದೆ, ಧವಳೆ ಅವರು ಕೈರ್ಲಾಂಜಿ ದಲಿತ ದೌರ್ಜನ್ಯ ಪ್ರಕರಣ ಖಂಡಿಸಿ ನಡೆದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಆ ಹೋರಾಟಗಾರರನ್ನು ಅಂದಿನ ಮಹಾರಾಷ್ಟ್ರ ಗೃಹಸಚಿವ ಆರ್ ಆರ್ ಪಾಟೀಲ್ ನಕ್ಸಲೀಯರು ಎಂದು ಕರೆದಿದ್ದರು. ಆ ಬಳಿಕವೇ ಧವಳೆ ಅವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.

ಬಳಿಕ ೨೦೧೧ರ ಜ.೨ರಂದು ಧವಳೆ ಅವರನ್ನು ವಾರ್ಧಾ ರೈಲು ನಿಲ್ದಾಣದಲ್ಲಿ ಸಾದಾ ಉಡುಪಿನಲ್ಲಿದ್ದ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ದೇಶದ್ರೋಹ ಮತ್ತು ಪ್ರಭುತ್ವದ ವಿರುದ್ಧದ ಪಿತೂರಿ ಆರೋಪಗಳನ್ನು ಅವರ ಮೇಲೆ ಹೊರಿಸಲಾಯಿತು. ಅವರ ಬಂಧನವನ್ನು ಪ್ರಶ್ನಿಸಿದವರಿಗೆ ಪೊಲೀಸರು ನೀಡಿದ ಸಮಜಾಯಿಷಿ, ಅವರ ಮನೆಯಲ್ಲಿ ಪ್ರಚೋದನಕಾರಿ ಸಾಹಿತ್ಯ ಕೃತಿಗಳಿವೆ ಮತ್ತು ಶಂಕಿತ ಮಾವೋವಾದಿ ಭೀಮರಾವ್ ಭೋಯ್ಟೆ ಎಂಬಾತ ಇವರ ಹೆಸರನ್ನು ಹೇಳಿದ್ದಾನೆ ಎಂಬುದು! ಪೊಲೀಸರು ಪ್ರಸ್ತಾಪಿಸಿದ ಆ ಸಾಹಿತ್ಯ ಕೃತಿಗಳು, ಅಂಬೇಡ್ಕರ್, ಮಾರ್ಕ್ಸ್, ಲೆನಿನ್ ಮತ್ತು ಅರುಂಧತಿ ರಾಯ್ ಅವರ ಒಟ್ಟು ೮೪ ಕೃತಿಗಳಾಗಿದ್ದವು. ಅವರ ಇಬ್ಬರು ಅಪ್ರಾಪ್ತ ಮಕ್ಕಳಷ್ಟೇ ಮನೆಯಲ್ಲಿರುವಾಗ ದಾಳಿ ನಡೆಸಿದ ಪೊಲೀಸರು, ಅವರ ಕಂಪ್ಯೂಟರ್‌ ಸಹಿತ ಈ ಕೃತಿಗಳೆಲ್ಲವನ್ನೂ ವಶಪಡಿಸಿಕೊಂಡಿದ್ದರು.

ಧವಳೆ ಅವರ ಈ ಪ್ರಕರಣ ಸಾವಿರಾರು ದಲಿತ ಮತ್ತು ಆದಿವಾಸಿಗಳು ಎದುರಿಸುತ್ತಿರುವ ದಮನದ ಒಂದು ಮಾದರಿಯಷ್ಟೇ. ದಲಿತ ಮತ್ತು ಆದಿವಾಸಿಗಳ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನವೇ ಖಾತ್ರಿಪಡಿಸಿದ ಸಾಲು-ಸಾಲು ಕಾಯ್ದೆ, ಕಾನೂನುಗಳಿವೆ. ಆದರೆ, ಅವು ಯಾವುವೂ ಇಂತಹ ದಮಿತರ ನೆರವಿಗೆ ಬರಲಾರವು. ಏಕೆಂದರೆ, ಅವರಿಗೆ ‘ನಕ್ಸಲೀಯರು’ ಎಂಬ ಹಣೆಪಟ್ಟಿ ಹಚ್ಚಲಾಗಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತನ್ನೇ ಉಲ್ಲೇಖಿಸುವುದಾದರೆ, ದೇಶದ ಭದ್ರತೆಗೆ ದೊಡ್ಡ ಅಪಾಯ ತರುವ ಗಂಭೀರ ಅಪರಾಧವಾಗಿ ನಕ್ಸಲ್ ಚಟುವಟಿಕೆಯನ್ನು ಪರಿಗಣಿಸಲಾಗುತ್ತಿದೆ. ಆದರೆ, ವಾಸ್ತವಾಂಶ ಬೇರೆಯೇ ಇದೆ. ತಮ್ಮ ಎಡವಟ್ಟುಗಳನ್ನು ಮುಚ್ಚಿಕೊಳ್ಳಲು ಬಡವರು, ದಲಿತರು, ಆದಿವಾಸಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ನಡೆಸಿ, ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ನಡೆಸುವ ಪೊಲೀಸರೇ ನಿಜವಾದ ನಕ್ಸಲೀಯರ ಉತ್ಪಾದಕರು. ಅಂತಹ ಪೊಲೀಸರ ಅಪರಾಧಗಳಿಗೆ ಬೆನ್ನೆಲುಬಾಗಿ ನಿಲ್ಲುವ ರಾಜಕಾರಣಿಗಳು ನಿಜವಾಗಿಯೂ ದೇಶದ ಆಂತರಿಕ ಭದ್ರತೆಗೆ ಇರುವ ದೊಡ್ಡ ಅಪಾಯ.

ಕಾನೂನು ಮತ್ತು ಸುವ್ಯವಸ್ಥೆ ಕಾಯುವ ತಮ್ಮ ಅಧಿಕಾರವನ್ನು ಪೊಲೀಸರು ಹೀಗೆ ದುರುಪಯೋಗ ಮಾಡಿಕೊಂಡಾಗ ಅದನ್ನು ಪ್ರಶ್ನಿಸುವ ಮತ್ತು ಅಂತಹ ದುರ್ಬಳಕೆಗೆ ಕಡಿವಾಣ ಹಾಕುವ ವ್ಯವಸ್ಥೆ ಅಗತ್ಯ ಬೀಳುತ್ತದೆ. ಆದರೆ, ಸದ್ಯ ಅಂತಹ ಯಾವುದೇ ಪರಿಣಾಮಕಾರಿ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ತಮಗೆ ಕಣ್ಣಿಗೆ ಕಂಡ ವ್ಯಕ್ತಿಯ ಮೇಲೆ ಪೊಲೀಸರು ಮಾವೋವಾದಿ ಅಥವಾ ನಕ್ಸಲ್ ಹಣೆಪಟ್ಟಿ ಕಟ್ಟಿ, ಆತನ ವಿರುದ್ಧ ಸಾಲು-ಸಾಲು ಪ್ರಕರಣ ದಾಖಲಿಸಿ ಚಿತ್ರಹಿಂಸೆ ನೀಡಿ ವರ್ಷಗಟ್ಟಲೆ ಜೈಲಿಗೆ ಅಟ್ಟಬಹುದು. ಪೊಲೀಸರು ಹೊರಿಸಿದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗದೆ ಹೋದಲ್ಲಿ ಆತ ಶಿಕ್ಷೆಯಿಂದ ಮುಕ್ತನಾಗುವ ಹೊತ್ತಿಗೆ ಅರ್ಧ ಜೀವನವೇ ಮುಗಿದಿರುತ್ತದೆ. ಬಹುತೇಕ ನಕ್ಸಲ್‌ ಸಂಬಂಧಿತ ಪ್ರಕರಣಗಳಲ್ಲಿ ಪೊಲೀಸರ ಇಂತಹದ್ದೇ ವರ್ತನೆಯನ್ನು ಯಾರು ಬೇಕಾದರೂ ಗುರುತಿಸಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More