ಪುಣೆ ಪೊಲೀಸರಿಂದ ಬಂಧಿತರಾದ ಮಾನವ ಹಕ್ಕುಗಳ ಕಾರ್ಯಕರ್ತರ ಹಿನ್ನೆಲೆ

ಮಂಗಳವಾರ ( ಆ.28) ಮಹಾರಾಷ್ಟ್ರ ಪೊಲೀಸರು ದೇಶದ ಆರು ನಗರಗಳಲ್ಲಿ ದಾಳಿ ನಡೆಸಿ ಐವರು ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ ವಿಚಾರ ದೇಶಾದ್ಯಂತ ತಲ್ಲಣ ಉಂಟುಮಾಡಿದೆ. ಬಂಧಿತ ಎಡಪಂಥೀಯ ವಿಚಾರವಾದಿಗಳ ವ್ಯಕ್ತಿ ಚಿತ್ರಣ ಮತ್ತು ಹಿನ್ನೆಲೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ

ವರವರ ರಾವ್‌

ಕ್ರಾಂತಿಕಾರಿ ಕವಿ, ಸಾಹಿತ್ಯ ವಿಮರ್ಶಕ, ಮಾನವ ಹಕ್ಕುಗಳ ಹೋರಾಟಗಾರ ಮತ್ತು ಮಾವೋವಾದಿ ಚಿಂತಕರೆಂದು ಪ್ರಸಿದ್ಧಿ ಆದವರು 78 ವರ್ಷದ ವರವರ ರಾವ್‌. ಎಡಪಂಥೀಯ ವಿಚಾರಧಾರೆಗಳ ಮೂಲಕ ಗುರುತಿಸಿಕೊಂಡಿರುವ‌ ಅವರು, ನಕ್ಸಲ್‌ ಹೋರಾಟಗಾರರು ಹಾಗೂ ಸರ್ಕಾರದ ನಡುವೆ ಶಾಂತಿ ಮಾತುಕತೆ ಏರ್ಪಡಿಸುವ ಮೂಲಕ ಆಂಧ್ರಪ್ರದೇಶದಲ್ಲಿ ತೀವ್ರಗೊಂಡಿದ್ದ ಹಿಂಸಾತ್ಮಕ ಹೋರಾಟಕ್ಕೆ ವಿರಾಮ ಹಾಡಿದ್ದರು. ವಿಪ್ಲವ ರಚಯಿತಲ ಸಂಘಮ್‌ (ಕಾಂತ್ರಿಕಾರಿ ಬರಹಗಾರರ ಸಂಘ) ಸ್ಥಾಪಿಸುವ ಮೂಲಕ ವರವರ ರಾವ್‌ ಅವರು ಹೊಸ ಹಾಗೂ ಹಳೆ ತಲೆಮಾರಿನ ಕ್ರಾಂತಿಕಾರಿ ಕವಿತೆಗಳು ಹಾಗೂ ನಕ್ಸಲ್‌ ಸಿದ್ಧಾಂತ ಒಳಗೊಂಡ ಸಾಹಿತ್ಯವನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿದ್ದರು. ವರವರ ರಾವ್‌ ಅವರು ಪ್ರಕಟಿಸಿರುವ 15 ಕವನ ಸಂಕಲನಗಳು ಭಾರತದ 20 ಭಾಷೆಗಳಲ್ಲಿ ಅನುವಾದಿಸಲ್ಪಟ್ಟಿವೆ.

ಈಗಿನ ತೆಲಂಗಾಣದ ವಾರಂಗಲ್‌ ಜಿಲ್ಲೆಯ ಚಿನ್ನ ಪೆಂಡ್ಯಾಲದ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1940ರ ನ.3ರಂದು ವರವರ ರಾವ್‌ ಜನಿಸಿದರು. ತಮ್ಮ ಹುಟ್ಟೂರು ಚಿನ್ನ ಪೆಂಡ್ಯಾಲ, ವಾರಂಗಲ್‌ ಹಾಗೂ ಹೈದ್ರಾಬಾದಿನಲ್ಲಿ ಶಿಕ್ಷಣ ಪಡೆದ ಅವರು, 1960ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ತೆಲುಗು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆ ಮೂಲಕ, ತೆಲುಗು ಸಾಹಿತ್ಯ ಹಾಗೂ ಸಾಹಿತ್ಯ ವಿಮರ್ಶೆಗಳಿಗೆ ತೆಗೆದುಕೊಂಡ ವರವರ ರಾವ್, ದೆಹಲಿಯ ಜಾಹಿರಾತು ನಿರ್ದೇಶನಾಲಯದ ಪ್ರಕಟಣಾ ವಿಭಾಗದಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರು. ಸಾಹಿತ್ಯದೆಡೆಗೆ ಹೆಚ್ಚು ಆಕರ್ಷಿತರಾಗಿದ್ದ ಅವರು, ದೆಹಲಿಯಲ್ಲಿನ ಕೆಲಸಕ್ಕೆ ರಾಜಿನಾಮೆ ನೀಡಿ ಹೈದ್ರಾಬಾದಿಗೆ ವಾಪಸಾದರು. ಆ ಮೂಲಕ, ಸಾಹಿತ್ಯ ಕೃಷಿಯಲ್ಲಿ ತೊಡಗಿದ ಅವರು ಕಾಲಕ್ರಮೇಣ ನಕ್ಸಲ್‌ವಾದಿ ಚಳವಳಿಯೊಂದಿಗೆ ಗುರುತಿಸಿಕೊಂಡರು. ಮೌನಂ ಒಕಾ ಯುದ್ಧನೇರಂ, ಆ ರೋಜುಲು, ಚಾಲಿ ನೇಗಲ್ಲು, ಮುಕ್ತ ಕಂಠಮ್, ಬೀಜ ಭೂಮಿ ಸೇರಿದಂತೆ ಹಲವು ಸಾಹಿತ್ಯ ಕೃತಿಗಳು ವರವರ ರಾವ್‌ ಅವರಿಗೆ ಖ್ಯಾತಿ ತಂದುಕೊಟ್ಟಿವೆ.

1974ರ ಮೇ ತಿಂಗಳಲ್ಲಿ ಆಂಧ್ರಪ್ರದೇಶ ಸರ್ಕಾರ ವರವರ ರಾವ್‌ ಹಾಗೂ ಅವರ ನಿಟಕವರ್ತಿಗಳಾಗಿದ್ದ 40 ಜನ ಕ್ರಾಂತಿಕಾರಿ ಕವಿಗಳ ಮೇಲೆ ಮೊಕದ್ದಮೆ ದಾಖಲಿಸಿತು. ‘ಸಿಕಂದರಾಬಾದ್‌ ಪಿತೂರಿ’ ಎಂದೇ ಕರೆಯಲಾಗುವ ಆ ಘಟನೆಯಲ್ಲಿ ಮೊದಲ ಬಾರಿಗೆ ವರವರ ರಾವ್‌ ಅವರು ಜೈಲು ಕಂಡರು. ಒಂದೂವರೆ ತಿಂಗಳ ಕಾಲ ಜೈಲುವಾಸ ಅನುಭವಿಸಿದ ಅವರು, 1975-77ರ ನಡುವಿನ ತುರ್ತುಪರಿಸ್ಥಿತಿ ವೇಳೆ ಮತ್ತೆ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದರು. ಸಿಕಂದರಾಬಾದ್‌ ಪಿತೂರಿ ಕೇಸಿನಲ್ಲಿ ವರವರ ರಾವ್‌ ಅವರನ್ನು ಅಪರಾಧಿಯನ್ನಾಗಿ ಮಾಡಲಾಯಿತು. ಆ ಮೂಲಕ, 1985 ರಿಂದ 89ರ ನಡುವೆ ವರವರ ರಾವ್‌ ಅವರು ಜೈಲುವಾಸ ಅನುಭವಿಸಬೇಕಾಯಿತು. ಮುಂದೆ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದ ಸುದೀರ್ಘ ಹೋರಾಟದಲ್ಲಿಯೂ ಅವರು ಗುರುತಿಸಿಕೊಂಡಿದ್ದರು.

ಗೌತಮ್‌ ನೌಲಾಖಾ

ಗೌತಮ್‌ ನೌಲಾಖಾ ಅವರು ನಾಗರಿಕ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಪತ್ರಕರ್ತ. ಪೀಪಲ್ಸ್‌ ಯೂನಿಯನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್ ಸಂಘಟನೆ‌ ಮೂಲಕ ಸುದೀರ್ಘ ಹೋರಾಟದಲ್ಲಿ ತೊಡಗಿಕೊಂಡಿರುವ ಅವರು ದೇಶದ ಖ್ಯಾತ ಚಳವಳಿಗಾರರಲ್ಲಿ ಒಬ್ಬರು. ದೆಹಲಿಯಲ್ಲಿ ವಾಸವಾಗಿರುವ ಅವರು, ‘ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್ಲಿ’ ಪತ್ರಿಕೆಯ‌ ಸಂಪಾದಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಪೀಪಲ್ಸ್‌ ಯೂನಿಯನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ ಕಾರ್ಯದರ್ಶಿಯಾಗಿರುವ ಗೌತಮ್‌ ಅವರು, ಕಾಶ್ಮೀರ ಜನರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ರೂಪಿಸಲ್ಪಟ್ಟ ಅಂತಾರಾಷ್ಟ್ರೀಯ ಜನತಾ ನ್ಯಾಯಾಧಿಕರಣದ‌ ಸಹ ಸಂಚಾಲಕರಾಗಿದ್ದಾರೆ. ಹೆಚ್ಚಾಗಿ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಿರುವ ಅವರು, ಇತ್ತೀಚೆಗೆ ಮಾವೋವಾದಿಗಳ ಪ್ರಭಾವವಿರುವ ಚತ್ತೀಸ್‌ಗಢದ ಹಲವು ಭಾಗಗಳಲ್ಲಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನೌಲಾಖಾ ಅವರು ‘ಡೇ ಅಂಡ್‌ ನೈಟ್ಸ್ ಇನ್‌ ದಿ ಹಾರ್ಟ್‌ಲ್ಯಾಂಡ್‌ ಆಫ್‌ ದಿ ರೆಬಿಲಿಯನ್‌’ ಎಂಬ ಕೃತಿ ರಚಿಸಿದ್ದಾರೆ.

2010ರಲ್ಲಿ ನೌಲಾಖಾ ಅವರ ಕಾಶ್ಮೀರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಕಾಶ್ಮೀರದಲ್ಲಿ ನಡೆದಿವೆ ಎನ್ನಲಾದ ಅಪಹರಣ, ಅತ್ಯಾಚಾರ, ಕೊಲೆ ಹಾಗೂ ಕಣ್ಮರೆ ಪ್ರಕರಣಗಳಲ್ಲಿ ಸೈನ್ಯದ ಕೈವಾಡವಿದೆ ಎಂದು ಆರೋಪಿಸಿ ನಡೆಯಲಾಗಿದ್ದ ಪ್ರತಿಭಟನೆಯಲ್ಲಿ ನೌಲಾಖಾ ಭಾಗವಹಿಸಿದ್ದರು. ಆ ನಂತರ ಶ್ರೀನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕಾಶ್ಮೀರದಲ್ಲಿ ನಡೆದ ಅಪರಾಧ ಕೃತ್ಯಗಳಲ್ಲಿ ಭಾರತೀಯ ಸೈನ್ಯದ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿಸುವ ಮೂಲಕ ಅಂದಿನ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.

ವರ್ನೊನ್‌ ಗೊನ್ಸಾಲ್ವೇಸ್‌

ಎಡಪಂಥೀಯ ವಿಚಾರದಾರೆಗಳನ್ನು ಪ್ರತಿಪಾದಿಸುವ ಮೂಲಕ ಸಾಮಾಜಿಕ ಹೋರಾಟರಾರರು ಮತ್ತು ನಕ್ಸಲ್‌ ಚಳವಳಿಯ ಬೆಂಬಲಿಗರಾಗಿ ವರ್ನೊನ್‌ ಗೊನ್ಸಾಲ್ವೇಸ್‌ (60 ವರ್ಷ) ಗುರುತಿಸಿಕೊಂಡಿದ್ದಾರೆ. ಮಂಗಳೂರು ಮೂಲದ ಕ್ಯಾಥೊಲಿಕ್‌ ದಂಪತಿಯ ಮಗನಾಗಿ ಜನಿಸಿದ ಇವರು, ದಕ್ಷಿಣ ಮುಂಬೈನ ಬೈಕುಲ್ಲಾದಲ್ಲಿ ತಮ್ಮ ಬಾಲ್ಯ ಕಳೆದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದವರು. ಮುಂಬೈನ ರೂಪಾರೆಲ್‌ ಹಾಗೂ ಎಚ್‌ ಆರ್‌ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅವರು. ಅಂದು ಮುಂಬೈನಲ್ಲಿ ಶುರುವಾಗಿದ್ದ ಕಾರ್ಮಿಕ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಹೋರಾಟದ ಬದುಕಿನ ಅಧ್ಯಾಯ ಆರಂಭಿಸಿದರು.

ಗೊನ್ಸಾಲ್ವೇಸ್ ಅವರನ್ನು ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯಡಿ 2007ರಲ್ಲಿ ಬಂಧಿಸಿ, ಅವರ ವಿರುದ್ಧ 20 ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ದಾಖಲಿಸಿದ್ದರು. “ಗೊನ್ಸಾಲ್ವೇಸ್ ಅವರು ಮಾವೋವಾದಿ ಸಂಘಟನೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಅಕ್ರಮ ಶಸ್ತ್ರಾಸ್ತ ಹೊಂದಿದ್ದಾರೆ. ಆ ಮೂಲಕ, ಮಹಾರಾಷ್ಟ್ರದ ನಗರ ಪ್ರದೇಶಗಳಲ್ಲಿ ಭಯೋತ್ಪಾದಕ ಚಟವಟಿಕೆಗಳನ್ನು ನಡೆಸಲು ಯುವಕರನ್ನು ಉತ್ತೇಜಿಸಿದ್ದಾರೆ,” ಎಂದು ಆರೋಪಿಸಲಾಗಿತ್ತು. 2014ರಲ್ಲಿ ನಾಗಪುರದ ಜಿಲ್ಲಾ ನ್ಯಾಯಾಲಯವು ಗೊನ್ಸಾಲ್ವೇಸ್ ಅವರನ್ನು ಅಕ್ರಮ ಶಸ್ತ್ರಾಸ್ತ ಕಾಯ್ದೆ, ಸ್ಫೋಟಕ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಇದನ್ನೂ ಓದಿ : ಬಡವರು, ಕಾರ್ಮಿಕರ ಪಾಲಿನ ಪ್ರೀತಿಯ ‘ದೀದಿ’ ವಕೀಲೆ ಸುಧಾ ಭಾರದ್ವಾಜ್

ಅರುಣ್‌ ಫರೈರಾ

48 ವರ್ಷದ ಅರುಣ್ ಫರೈರಾ ಅವರು ಮುಂಬೈ ಮೂಲದವರಾಗಿದ್ದಾರೆ. ವ್ಯಂಗ್ಯಚಿತ್ರಕಾರರೂ, ಬರಹಗಾರರೂ ಆಗಿರುವ ಅವರು, ಮಾವೋವಾದಿ ಸಿದ್ಧಾಂತದ ಅನುಯಾಯಿ. ಮಾವೋವಾದಿ ಸಿದ್ಧಾಂತಗಳ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದ ಅವರನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಪೊಲೀಸರು 2007ರಲ್ಲಿ ಬಂಧಿಸಿದ್ದರು. ಅವರ ವಿರುದ್ಧ ಕೊಲೆ ಸಂಚು, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಹೊರಿಸಲಾಗಿತ್ತು. ರಾಷ್ಟ್ರದ್ರೋಹ ಹಾಗೂ ದೇಶದ ವಿರುದ್ಧ ಯುದ್ಧ ಸಾರಿದ ಆಪಾದನೆ ಒಳಗೊಂಡಂತೆ ಒಟ್ಟು 10 ಮೊಕದ್ದಮೆಗಳನ್ನು ಫರೈರಾ ವಿರುದ್ಧ ದಾಖಲಿಸಲಾಗಿತ್ತು.

2011ರಲ್ಲಿ ನಾಗಪುರ ಪೊಲೀಸರಿಂದ ಬಂಧನಕ್ಕೊಳಗಾದ ಅರುಣ್‌, 2014ರಲ್ಲಿ ತಮ್ಮ ಮೇಲಿದ್ದ ಎಲ್ಲ ಮೊಕದ್ದಮೆಗಳಿಂದ ಖುಲಾಸೆಯಾಗಿದ್ದರು. ಆ ನಂತರ ಜೈಲಿನಲ್ಲಿ ಅವರು ಅನುಭವಿಸಿದ ಹಿಂಸೆ, ಪೊಲೀಸರ ದೌರ್ಜನ್ಯಗಳ ಬಗೆಗಿನ ಅನುಭವಗಳನ್ನು ‘ಕಲರ್ಸ್‌ ಆಫ್‌ ಕೇಜ್‌’ ಪುಸ್ತಕದ ಮೂಲಕ ಹೊರಹಾಕಿದರು. ಇತ್ತೀಚೆಗೆ ಮುಂಬೈನಲ್ಲಿರುವ ಅರ್ಥರ್‌ ರೋಡ್‌ ಜೈಲಿನ ತಮ್ಮ ಕಹಿ ಅನುಭವಗಳನ್ನು ವೆಬ್‌ಸೈಟ್‌ವೊಂದಕ್ಕೆ ಬರೆದುಕೊಂಡಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More