ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಮಾಜಿ‌ ಸಚಿವ ಚಿಂಚನಸೂರ ಬಿಜೆಪಿ ಸೇರ್ಪಡೆ ಇಂದು

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಬುಧವಾರ ಬಿಜೆಪಿ ಸೇರಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು, ಜೆಡಿಎಸ್ ಅಭ್ಯರ್ಥಿಯ ಎದುರು ಪರಾಭವಗೊಂಡಿದ್ದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಚಿಂಚನಸೂರ ಸಚಿವರಾಗಿದ್ದರು.

ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ-ಪಾಕ್ ಮಾತುಕತೆ

ಭಾರತ ಮತ್ತು ಪಾಕಿಸ್ತಾನ ದೇಶಗಳು ನಿರ್ಣಾಯಕ ಸಿಂಧೂ ನದಿ ಒಪ್ಪಂದದ ಕುರಿತಾಗಿ ಮಂಗಳವಾರ ಲಾಹೋರ್‌ನಲ್ಲಿ ಮಾತುಕತೆಯನ್ನು ಪುನರಾರಂಭಿಸುತ್ತಿವೆ. ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡ ನಂತರದ ಮೊದಲ ದ್ವಿಪಕ್ಷೀಯ ಮಾತುಕತೆ ಇದಾಗಲಿದೆ. ಎರಡು ದಿನಗಳ ಈ ಮಾತುಕತೆಯಲ್ಲಿ ಸಿಂಧೂ ನದಿ ಆಯೋಗದ ಭಾರತ ಕಮಿಷನರ್‌ ಪಿ ಕೆ ಸಕ್ಸೇನಾ ಹಾಗೂ ಸಿಂಧೂ ನದಿ ಆಯೋಗದ ಪಾಕಿಸ್ತಾನ ಕಮಿಷನರ್ ಸಯ್ಯದ್ ಮೆಹರ್ ಅಲಿ ಭಾಗವಹಿಸಲಿದ್ದಾರೆ. ಝೇಲಂ ನದಿಗೆ ಅಡ್ಡಲಾಗಿ ಭಾರತ ಜಲವಿದ್ಯುತ್ ಯೋಜನೆ ಆರಂಭಿಸುವುದರ ಕುರಿತಾಗಿ ಇಂದು ಮಾತುಕತೆ ನಡೆಯಲಿದೆ. ಭಾರತದಲ್ಲಿ ಚೀನಾಬ್ ನದಿಗೆ ೪೮ ಹಾಗೂ ೧,೦೦೦ ಮೆಗಾವ್ಯಾಟ್ ಸಾಮರ್ಥ್ಯದ ಕಲ್ನಾಯ್ ಹಾಗೂ ಪಕಾಲ್ ದುಲ್ ಹೆಸರಿನ ಎರಡು ಜಲವಿದ್ಯುತ್ ಯೋಜನೆ ಕೈಗೊಳ್ಳುತ್ತಿರುವುದರ ಬಗ್ಗೆಯೂ ಮಾತುಕತೆ ನಡೆಯಲಿದೆ.

ರಾಣಿ ಪಡೆ ಹಾಗೂ ವಿಕಾಸ್‌ ಕೃಷ್ಣನ್‌ಗೆ ಸೆಮಿಫೈನಲ್ ಗುರಿ

ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟದ ಹನ್ನೊಂದನೇ ದಿನವಾದ ಇಂದು ಭಾರತ ತನ್ನ ಪದಕ ಬೇಟೆ ಮುಂದುವರೆಸಲು ತವಕಿಸುತ್ತಿದೆ. ಏಷ್ಯಾಡ್‌ನಲ್ಲಿ ಹ್ಯಾಟ್ರಿಕ್ ಪದಕ ಗೆದ್ದ ಸಾಧಕನೆನಿಸಿಕೊಳ್ಳಲು ತವಕಿಸುತ್ತಿರುವ ವಿಕಾಸ್ ಕೃಷ್ಣನ್ (೭೫ ಕೆಜಿ) ಕ್ವಾರ್ಟರ್‌ಫೈನಲ್‌ನಲ್ಲಿ ಟೌಹೆಟಾ ಎರಿಬಿಕೆ ತಂಗ್ಲಾಥಿಯನ್ ವಿರುದ್ಧ ಕಾದಾಡಲಿದ್ದಾರೆ. ಇನ್ನು, ಪ್ರಶಸ್ತಿ ಫೇವರಿಟ್ ರಾಣಿ ಬಳಗ ಸಂಜೆ ೬.೩೦ರಿಂದ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಚೀನಾವನ್ನು ಎದುರುಗೊಳ್ಳುತ್ತಿದೆ. ಇತ್ತ, ಸಂಜೆ ೫.೨೦ರಿಂದ ಶುರುವಾಗಲಿರುವ ಅಥ್ಲೆಟಿಕ್ಸ್‌ನಲ್ಲಿ ದುತೀ ಚಾಂದ್ ೨೦೦ ಮೀಟರ್ ಓಟ ಸಂಜೆ ೬.೦೦ಕ್ಕೆ ನಡೆಯುವ ಸಾಧ್ಯತೆ ಇದೆ. ಪುರುಷರ ೪/೪೦೦ ಮೀ. ರಿಲೆ, ಮಹಿಳಾ ಹೆಪ್ಟಥ್ಲಾನ್‌ ಸಂಜೆ ೭.೧೦ಕ್ಕೆ ಜರುಗಲಿದೆ.

ಚತುಷ್ಕೋನ ಸರಣಿ ಜಯಿಸುವ ವಿಶ್ವಾಸದಲ್ಲಿ ಮನೀಶ್ ಪಾಂಡೆ

ಮನೀಶ್ ಪಾಂಡೆ ಸಾರಥ್ಯದಲ್ಲಿ ಫೈನಲ್ ತಲುಪಿರುವ ಭಾರತ 'ಬಿ' ತಂಡ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ 'ಎ' ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸುವ ಗುರಿ ಹೊತ್ತಿದೆ. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಟೂರ್ನಿಯ ಮೂರು ಪಂದ್ಯಗಳನ್ನು ಆಡಿದ್ದ ಪಾಂಡೆ ಬಳಗ, ದಕ್ಷಿಣ ಆಫ್ರಿಕಾ ‘ಎ’ ಮತ್ತು ಭಾರತ ‘ಎ’ ತಂಡದ ವಿರುದ್ಧದ ಪಂದ್ಯಗಳಲ್ಲಿ ಜಯಿಸಿತ್ತು. ಆದರೆ, ಭಾನುವಾರ (ಆ.೨೬) ಆಸ್ಟ್ರೇಲಿಯಾ 'ಎ' ಎದುರು ಸೋತಿತ್ತು. ಅದರಲ್ಲಿ ಮನೀಷ್ ಸಿಡಿಸಿದ ಶತಕ ವ್ಯರ್ಥವಾಗಿತ್ತು. ಈ ಟೂರ್ನಿಯಲ್ಲಿ 233 ರನ್‌ ಗಳಿಸಿರುವ ಮನೀಶ್ ಪಾಂಡೆ ಸರಣಿ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ, ಆಸ್ಟ್ರೇಲಿಯಾ ಎ ತಂಡದ ಉಸ್ಮಾನ್ ಖ್ವಾಜಾ ಮತ್ತು ನಾಯಕ ಟ್ರಾವಿಸ್ ಹೆಡ್ ಅವರು ಈ ಟೂರ್ನಿಯಲ್ಲಿ ತಲಾ ಒಂದು ಶತಕ ಹೊಡೆದು ಮಿಂಚಿದ್ದು, ಪಂದ್ಯ ಬೆಳಗ್ಗೆ ೯ರಿಂದ ಶುರುವಾಗಲಿದೆ. ಸ್ಟಾರ್ ನೆಟ್ವರ್ಕ್‌ನಲ್ಲಿ ನೇರಪ್ರಸಾರವಿದೆ.

ಗೋವಾಕ್ಕೆ ಮರಳುತ್ತಿದ್ದಾರೆ ಮುಖ್ಯಮಂತ್ರಿ ಪರಿಕ್ಕರ್

ಚಿಕಿತ್ಸೆಗಾಗಿ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಬುಧವಾರ ಗೋವಾಕ್ಕೆ ಮರಳಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿದೆ. ೬೨ ವರ್ಷದ ಪರಿಕ್ಕರ್ ಅವರು ಕರುಳು ಸಂಬಂಧಿ ರೋಗಕ್ಕೆ ಒಳಗಾಗಿದ್ದು, ಈಗಾಗಲೇ ನಾಲ್ಕೈದು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಮೂರು ತಿಂಗಳು ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡು ಜೂನ್‌ನಲ್ಲಿ ಮರಳಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More