ಮಾನವ ಹಕ್ಕು ಕಾರ್ಯಕರ್ತರ ಬಂಧನ ಚರ್ಚೆ; ‘ನಾವೂ ನಗರ ನಕ್ಸಲೀಯರು’ ಎಂದ ಟ್ವೀಟಿಗರು

ಪುಣೆ ಪೊಲೀಸರು ಮಾನವ ಹಕ್ಕು ಕಾರ್ಯಕರ್ತರ ಮನೆಗಳಲ್ಲಿ ಶೋಧ ನಡೆಸಿ ಐವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ‘ನಗರ ನಕ್ಸಲೀಯರು’ ಎನ್ನುವ ಪದ ಹೆಚ್ಚು ಚಾಲ್ತಿಗೆ ಬಂದಿದೆ. ಕಾರ್ಯಕರ್ತರಿಗೆ ನಕ್ಸಲೀಯರು ಎನ್ನುವುದನ್ನು ವಿರೋಧಿಸಿ ಟ್ವಿಟರ್‌ನಲ್ಲಿ #MeTooUrbanNaxal ಟ್ರೆಂಡ್ ಆಗಿದೆ

ಇದೇ ಜನವರಿಯಲ್ಲಿ ಪುಣೆಯ ಹತ್ತಿರವಿರುವ ಭೀಮಾ ಕೋರೇಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಳೆದ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಗಳಲ್ಲಿ ಐವರು ಸಾಮಾಜಿಕ ಕಾರ್ಯಕರ್ತರನ್ನು ಮತ್ತು ವಕೀಲರನ್ನು ಬಂಧಿಸಲಾಗಿತ್ತು. ಇದೀಗ ಹೊಸ ಬೆಳವಣಿಗೆಯಲ್ಲಿ ಮಂಗಳವಾರ ಬೆಳಗ್ಗೆ ಆರು ನಗರಗಳಲ್ಲಿ ನಡೆದ ಸರಣಿ ದಾಳಿಗಳಲ್ಲಿ ಪುಣೆ ಪೊಲೀಸರು ದೇಶಾದ್ಯಂತ ಸ್ಥಳೀಯ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದ ಹತ್ತು ಮಂದಿ ಮಾನವ ಹಕ್ಕು ಕಾರ್ಯಕರ್ತರ ಮನೆಗಳಲ್ಲಿ ಶೋಧ ನಡೆಸಿ ಐವರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಬುಧವಾರದಂದು #MeTooUrbanNaxal ಎನ್ನುವ ಹ್ಯಾಷ್‌ಟ್ಯಾಗ್ ಒಂದು ಇಡೀ ದಿನ ಟ್ರೆಂಡ್ ಆಗಿದೆ.

ವಾಸ್ತವದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದ ನಕ್ಸಲೀಯರು (Urban Naxals) ಎನ್ನುವ ಶಬ್ದ ಹೆಚ್ಚು ಬಳಕೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧಿಗಳನ್ನು ಹತ್ತಿಕ್ಕಲು ಬಿಜೆಪಿ ಮತ್ತು ಸಂಘಪರಿವಾರದ ಬೆಂಬಲಿಗ ಟ್ವೀಟಿಗರು ಸದಾ ಈ ಪದವನ್ನು ಬಳಸುತ್ತಾರೆ. ಮೋದಿಯವರನ್ನು ವಿರೋಧಿಸಿ ಟ್ವೀಟ್ ಮಾಡುವವರನ್ನು ನಗರದ ನಕ್ಸಲೀಯರು ಎಂದು ಜರಿಯಲಾಗುತ್ತಿತ್ತು. ಬಲಪಂಥೀಯ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್‌ನಲ್ಲಿ ಈ ಪದವನ್ನು ಸದಾ ಬಳಸುತ್ತಿರುತ್ತಾರೆ. ಪ್ರಗತಿಪರರು ಮತ್ತು ಚಿಂತಕರನ್ನು ವಿವೇಕ್ ಅಗ್ನಿಹೋತ್ರಿ ಸದಾ ನಗರದ ನಕ್ಸಲೀಯರು ಎಂದು ಅಣಕಿಸುತ್ತಿರುತ್ತಾರೆ. ಇದೀಗ ಸಾಮಾಜಿಕ ಕಾರ್ಯಕರ್ತರು ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿಯೂ ಅದೇ ಪದವನ್ನು ಬಳಸಿದ ವಿವೇಕ್ ಅಗ್ನಿಹೋತ್ರಿ, “ಬಂಧನಕ್ಕೊಳಗಾದ ಈ ನಗರದ ನಕ್ಸಲೀಯರನ್ನು ಸಮರ್ಥಿಸಿಕೊಳ್ಳುತ್ತಿರುವವರ ಒಂದು ಪಟ್ಟಿ ಮಾಡಬೇಕು ಎಂದು ಕೆಲವು ಯುವ ಸಮುದಾಯವನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ನೀವು ಬದ್ಧತೆಯಿಂದ ಸ್ವಯಂ ಮುಂದೆ ಬಂದಲ್ಲಿ ನನಗೆ ವೈಯಕ್ತಿಕ ಸಂದೇಶ ಕಳುಹಿಸಿ,” ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಉತ್ತರವಾಗಿ ನಾನೂ ನಗರನಕ್ಸಲೀಯ #MeTooUrbanNaxal ಎನ್ನುವ ಹ್ಯಾಷ್‌ಟ್ಯಾಗ್ ಈಗ ಟ್ರೆಂಡ್ ಆಗುತ್ತಿದೆ. ಪತ್ರಕರ್ತ ಪ್ರತೀಕ್ ಸಿನ್ಹಾ ಅವರು ಟ್ವೀಟ್ ಮಾಡಿ, “ವಿವೇಕ್ ಅಗ್ನಿಹೋತ್ರಿಯವರೇ, ನಾನು ನಿಮ್ಮ ಪಟ್ಟಿಯಲ್ಲಿ ಸ್ವಯಂ ಆಗಿ ಸೇರ್ಪಡೆಗೊಳ್ಳಲು ಬಯಸಿದ್ದೇನೆ. ನಾವೆಲ್ಲರೂ ಸೇರಿ #MeTooUrbanNaxal ಎನ್ನುವ ಹ್ಯಾಷ್‌ಟ್ಯಾಗ್ ಜೊತೆಗೆ ವಿವೇಕ್ ಅಗ್ನಿಹೋತ್ರಿ ಅವರನ್ನು ಟ್ಯಾಗ್ ಮಾಡಿ ಪಟ್ಟಿ ತಯಾರಿಸಲು ನೆರವಾಗೋಣ. ಈ ವ್ಯಕ್ತಿಯ ಆದರ್ಶಮಯ ಕೆಲಸಕ್ಕೆ ನಾವು ನೆರವಾಗಬೇಕಿದೆ,” ಎಂದು ಹೇಳಿದ್ದಾರೆ. ಅದಾದ ನಂತರ ಬಹಳಷ್ಟು ಮಂದಿ ವಿವೇಕ್ ಅಗ್ನಿಹೋತ್ರಿಯವರಿಗೆ ಟ್ಯಾಗ್ ಮಾಡಿ #ನಾನೂನಗರನಕ್ಸಲೀಯ ಎನ್ನುವ ಹ್ಯಾಷ್‌ಟ್ಯಾಗ್ ಬಳಸುತ್ತಿದ್ದಾರೆ.

ಇದನ್ನೂ ಓದಿ : ಸಾಮಾಜಿಕ ಹೋರಾಟಗಾರರ ಸರಣಿ ಬಂಧನವು ಮೋದಿ ಹತ್ಯೆ ಸಂಚಿನ ಪ್ರಕರಣದ್ದಲ್ಲ

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಟ್ವೀಟಿಗರು ಅನೇಕರು ಈ ಟ್ಯಾಗ್ ಬಳಸಿದ್ದಾರೆ. ಟಿವಿ ಮತ್ತು ವೆಬ್ ಕಾರ್ಯಕ್ರಮಗಳ ನಿರ್ಮಾಪಕರಾದ ಮೇಘನಾದ್ ಟ್ವೀಟ್ ಮಾಡಿ, “ಪ್ರಜಾಪ್ರಭುತ್ವದ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸಲು ಅಸಮ್ಮತಿ ಅತಿ ಮುಖ್ಯ. ನಾನೂ ಅದನ್ನೇ ಪ್ರೋತ್ಸಾಹಿಸುತ್ತೇನೆ. ನನ್ನನ್ನೂ ಪಟ್ಟಿಯಲ್ಲಿ ಸೇರಿಸಿ,” ಎಂದು ಹೇಳಿದ್ದಾರೆ. ಬಹಳಷ್ಟು ಮಂದಿ ಸ್ವತಂತ್ರ ಚಿಂತನೆಯ ಮತ್ತು ಬಡವರ, ಶೋಷಿತರ ಧ್ವನಿಯಾಗಿರುವ ಕಾರ್ಯಕರ್ತರ ಪರವಾಗಿ ನಿಲ್ಲುವುದಾದಲ್ಲಿ ತಾವೂ ನಗರ ನಕ್ಸಲೀಯರು ಎಂದು ಕರೆಸಿಕೊಳ್ಳಲು ಸಿದ್ಧ ಎಂದು ಟ್ವೀಟ್ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಇಂತಹ ಪ್ರತೀ ಟ್ವೀಟಿಗರನ್ನೂ ಪ್ರಶ್ನಿಸುತ್ತ ತಮ್ಮ ಅಭಿಪ್ರಾಯವನ್ನು ಪ್ರಕಟಿಸುತ್ತಿದ್ದಾರೆ. #MeTooUrbanNaxal ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಪ್ರಕಟವಾದ ಕೆಲವು ಪ್ರಮುಖ ಟ್ವೀಟ್‌ಗಳು ಹೀಗಿವೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More