ಜನ ಹೋರಾಟಗಾರರ ಧ್ವನಿ ಹತ್ತಿಕ್ಕುವಲ್ಲಿ ಮೋದಿ ಅಧಿಪತ್ಯದ ಷಡ್ಯಂತ್ರಗಳಿವೆಯೇ?

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಕ್ಕು ಮತ್ತು ನ್ಯಾಯವನ್ನು ಪಡೆಯಲು ಬಂದೂಕುನ್ಯಾಯ ಪ್ರತಿಪಾದಿಸಿದವರು ಶಿಕ್ಷೆಗೆ ಅರ್ಹರು. ಆದರೆ, ಐವರು ಮಾನವ ಹಕ್ಕು ಹೋರಾಟಗಾರರ ಬಂಧನ, ದಾಳಿಗೆ ಕಾರಣವಾದ ಅಂಶ ಮತ್ತು ಈಗಿನ ಸಂದರ್ಭವನ್ನು ನೋಡಿದರೆ ಅನುಮಾನಗಳು ದಟ್ಟವಾಗಿ ಮೂಡುತ್ತವೆ

“ನನ್ನ ಮೂವತ್ತು ವರ್ಷದ ಶೈಕ್ಷಣಿಕ ಜೀವನವನ್ನು ಐದು ನಿಮಿಷದಲ್ಲಿ ಧ್ವಂಸ ಮಾಡಿದರು. ‘ನೀವ್ಯಾಕೆ ಮಾವೋ, ಮಾರ್ಕ್ಸ್ ರನ್ನು ಓದುತ್ತೀರಿ, ಗದ್ದರ್‌ ಹಾಡುಗಳನ್ಯಾಕೆ ಇಟ್ಟುಕೊಂಡಿದ್ದೀರಿ, ದೇವರ ಫೋಟೋಗಳನ್ನಿಡುವ ಬದಲು ಯಾಕೆ ಅಂಬೇಡ್ಕರ್‌, ಫುಲೆ ಫೋಟೋ ಇಟ್ಟಿದ್ದೀರಿ. ಬರುವ ಸಂಬಳದಲ್ಲಿ ಸಂತೋಷವಾಗಿರಲು ನಿಮಗೇನು ಕಷ್ಟ; ನೀವ್ಯಾಕೆ ಬುದ್ಧಿಜೀವಿ ಆಗಬೇಕು?’ ಎಂದು ಅವರು ನನ್ನನ್ನು ಪ್ರಶ್ನಿಸಿದರು...’’

-ಮಹಾರಾಷ್ಟ್ರ ಮತ್ತು ತೆಲಂಗಾಣ ಪೊಲೀಸರು ಮಂಗಳವಾರ ತಮ್ಮ ಮನೆ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿ ಹೈದರಾಬಾದಿನ ಇಎಫ್ ಎಲ್ (ಇನ್‌ ಸ್ಟಿಟ್ಯೂಟ್ ಆಫ್‌ ಇಂಗ್ಲಿಷ್ ಅಂಡ್ ಫಾರಿನ್‌ ಲಾಂಗ್ವೇಜಸ್) ವಿವಿ ಸಾಂಸ್ಕೃತಿಕ ಅಧ್ಯಯನ ವಿಭಾಗದ ಮುಖ್ಯಸ್ಥ ಕೆ ಸತ್ಯನಾರಾಯಣ ನೀಡಿರುವ ಪ್ರತಿಕ್ರಿಯೆ ಇದು. “ದಿಢೀರ್‌ ದಾಳಿ ನಡೆಸಿ, ಕುಟುಂಬದವರನ್ನು ಹೊರಬಿಡದೆ ದಿನವಿಡೀ ತಪಾಸಣೆ ಮಾಡಿ ನನ್ನನ್ನು ಮಾನಸಿಕವಾಗಿ ಹಿಂಸಿಸಿದರು. ನನ್ನ ಮೇಲಿರುವ ಗುರುತರ ಆಪಾದನೆ ಏನು ಎನ್ನುವುದನ್ನೂ ಹೇಳಲಿಲ್ಲ. ಲ್ಯಾಪ್‌ ಟಾಪ್‌, ಹಾರ್ಡ್ ಡಿಸ್ಕ್‌, ಪೆನ್‌ ಡ್ರೈವ್ ಮತ್ತು ಶೈಕ್ಷಣಿಕ ಪರಿಕರಗಳೆಲ್ಲವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಫೋನ್, ಇ-ಮೇಲ್‌ ಸಂಪರ್ಕವನ್ನು ನಿರ್ಬಂಧಿಸಿದ್ದಾರೆ,’’ ಎನ್ನುವುದು ಅವರ ಆರೋಪವಾಗಿತ್ತು. ಸತ್ಯನಾರಾಯಣರ ಮನೆ ಮೇಲಿನ ದಾಳಿಗೆ ಅವರು ತೆಲುಗಿನ ಕ್ರಾಂತಿಕಾರಿ ಕವಿ, ಹೋರಾಟಗಾರ ವರವರ ರಾವ್‌ ಅಳಿಯ ಎನ್ನುವುದು ಮುಖ್ಯ ಕಾರಣವಾದಂತಿತ್ತು.

ದೇಶದ ವಿವಿಧೆಡೆಯ ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ ನಡೆದ ದಾಳಿಗಳಲ್ಲಿ ವರವರ ರಾವ್‌, ಸಾಮಾಜಿಕ ಹೋರಾಟಗಾರ್ತಿ ಮತ್ತು ನ್ಯಾಯವಾದಿ ಸುಧಾ ಭಾರದ್ವಾಜ್‌ ಸಹಿತ ಐವರನ್ನು ಬಂಧಿಸಿದ್ದು, ಹಲವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಂಧನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗೆ ಅಗತ್ಯ ದಾಖಲೆ ಸಲ್ಲಿಸುವಲ್ಲಿ ಪೊಲೀಸರು ವಿಫಲವಾಗಿ, ಆರಂಭಿಕ ಮುಖಭಂಗಕ್ಕೆ ಗುರಿಯಾಗಿದ್ದೂ ಆಗಿದೆ. ಮಹಾರಾಷ್ಟ್ರದ ಭೀಮ ಕೋರೆಗಾಂವ್ ನಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆನ್ನುವುದು ಈ ಎಲ್ಲರ ಬಂಧನಕ್ಕೆ ಕಾರಣ. ಈ ಮಧ್ಯೆ, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು ‘ಅನಧಿಕೃತ’ವಾಗಿ ಹೊರಿಸಲಾಗಿದ್ದು, ‘ನಗರ ನಕ್ಸಲರು’ (ಅರ್ಬನ್‌ ನಕ್ಸಲ್ಸ್) ಎನ್ನುವ ಪಟ್ಟ ಕಟ್ಟಲಾಗಿದೆ.

ಮೇಲ್ನೋಟಕ್ಕಿದು ಎರಡು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬೀಸಿದ ಬಲೆಯಂತೆ, ಜಾಲವನ್ನು ಭೇದಿಸಲು ನಡೆಸಿರುವ ತುರುಸಿನ ಕಾರ್ಯಾಚರಣೆಯಂತೆ ಕಾಣುತ್ತದೆ. ಬಂಧಿತರ ಪೈಕಿ ವರವರ ರಾವ್‌ ಸಹಿತ ಕೆಲವರು ಮಾವೋವಾದಿ ಸಿದ್ಧಾಂತವನ್ನು ಆಧರಿಸಿ, ಈ ಹಿಂದೆ ಅನೇಕ ಬಾರಿ ಬಂಧಿತರಾಗಿ ಜೈಲು ಶಿಕ್ಷೆ ಅನುಭವಿಸಿದ್ದವರು ಮತ್ತು ನ್ಯಾಯಾಲಯದಿಂದ ನಿರ್ದೋಷಿಗಳೆಂದು ಬಿಡುಗಡೆ ಪಡೆದ ನಂತರ ತಾವು ನಂಬಿದ ಸಿದ್ದಾಂತದ ವಿಷಯದಲ್ಲಿ ರಾಜಿ ಇಲ್ಲದ ಹೋರಾಟ ನಡೆಸಿದ್ದವರು. ಬಂದೂಕು ಮತ್ತು ರಕ್ತಪಾತದ ಮೂಲಕ ನ್ಯಾಯವನ್ನು ಅರಸುವ ಅತಿರೇಕವನ್ನು ಯಾರೇ ಮೆರೆದರೂ ತಕ್ಕ ಶಿಕ್ಷಗೆ ಅರ್ಹರೆನ್ನುವುದರಲ್ಲಿ ಎರಡು ಮಾತಿಲ್ಲ. ‘ಬಂದೂಕು ನ್ಯಾಯ- ನಿಷ್ಕರ್ಷೆ’ ಮಿತಿಯ ಆಚೆಗಿನ ಬಡವರು, ಆದಿವಾಸಿಗಳು, ಶೋಷಿತರ ಪರವಾದ ಅವರ ಕಾಳಜಿಯನ್ನು, ನಿಸ್ವಾರ್ಥ ಹೋರಾಟವನ್ನು ನಿರಾಕರಿಸಲಾಗದು. ಆದರೆ, ಐವರು ಹೋರಾಟಗಾರರನ್ನು ಬಂಧಿಸಿರುವ ಈಗಿನ ಸಂದರ್ಭ, ಬಂಧನ ವಿಧಾನ, ದಾಳಿಗೆ ಕಾರಣವಾದ ಅಂಶಗಳು ಅನುಮಾನಗಳನ್ನು ಮೂಡಿಸುವಂತಿವೆ.

ಯಾರೋ ಯಾರಿಗೋ ಬರೆದ ಪತ್ರ ಸಾರ್ವಜನಿಕಗೊಳ್ಳುವುದು, ಯಾರೋ ಎಲ್ಲೋ ಮಾತನಾಡಿದ್ದನ್ನು ಇನ್ಯಾವುದೋ ಘಟನೆಗೆ ಬೆಸಯುವುದು, ಕೋರೆಗಾಂವ್‌ ನಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಹೊಣೆಯನ್ನು ಮಾನವ ಹಕ್ಕು ಹೋರಾಟಗಾರರ ತಲೆಗೆ ಕಟ್ಟುವುದು, ಅಧ್ಯಾಪಕನ ಮನೆ ಮೇಲೆ ಯಾವ ಸೂಚನೆ ಇಲ್ಲದೆ ದಾಳಿ ನಡೆಸಿ ಜಾಲಾಡುವುದು,“ನಿಮಗ್ಯಾಕೆ ಇದೆಲ್ಲ ಉಸಾಬರಿ? ಬರುವ ಸಂಬಳದಲ್ಲಿ ಖುಷಿಯಾಗಿರಲಾಗದೆ?’’ಎಂದು ಆ ಅಧ್ಯಾಪಕನಿಗೆ ಪೊಲೀಸರು ಬಿಟ್ಟಿ ಉಪದೇಶ ನೀಡುವುದು, ಕಾರ್ಮಿಕರು, ಬಡವರು ಮತ್ತು ಮಾನವ ಹಕ್ಕುಗಳ ಪರ ಹಲವು ದಶಕದಿಂದ ಅವಿಶ್ರಾಂತ ಹೋರಾಡುತ್ತಿರುವ ನ್ಯಾಯವಾದಿ ಸುಧಾ ಅವರನ್ನು ಬಂಧಿಸಿ, ‘ಅಪಾಯಕಾರಿ’ ಎನ್ನುವಂತೆ ಸಾರ್ವಜನಿಕವಾಗಿ ಬಿಂಬಿಸುತ್ತಿರುವುದು ಇದನ್ನೆಲ್ಲ ನೋಡಿದರೆ, ನಿರ್ದಿಷ್ಟ ಪ್ರಕರಣದ ವಿಚಾರಣೆಯಷ್ಟೆ ಇಲ್ಲ, ಮತ್ತೇನೋ ಷಡ್ಯಂತ್ರವಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ನಾಲ್ಕೂವರೆ ವರ್ಷ ಪೂರೈಸಿ ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೀಗ ತನ್ನ ಮೇಲಿನ ಸಣ್ಣ ಟೀಕೆಯನ್ನೂ ಸಹಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ತನ್ನ ವಿರುದ್ಧ ಧ್ವನಿ ಎತ್ತುವವರನ್ನು, ಪ್ರಶ್ನೆ ಮಾಡುವವರನ್ನು,ಇಂಥ ಹೋರಾಟಗಾರರ ಪರ ವಕಾಲತ್ತು ವಹಿಸುವವರನ್ನು ನಿರ್ದಯವಾಗಿ ಹತ್ತಿಕ್ಕಲು, ಪೊಲೀಸ್‌ ವ್ಯವಸ್ಥೆಯನ್ನು ಛೂ ಬಿಟ್ಟು ಬಂಧಿಸಿ ಜೈಲಿಗೆ ಅಟ್ಟಲು ಹೇಸುತ್ತಿಲ್ಲ. ಇದರಿಂದಾಗಿಯೇ ದಲಿತರು, ಅಲ್ಪಸಂಖ್ಯಾತರು, ಬಡವರು, ಆದಿವಾಸಿಗಳಂಥ ಧ್ವನಿ ಇಲ್ಲದ ಜನರ ಪರ ಕೆಲಸ ಮಾಡುವ ಮಾನವ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಕೇಂದ್ರದ ಕೆಂಗಣ್ಣಿಗೆ ಮತ್ತೆ-ಮತ್ತೆ ಗುರಿಯಾಗುತ್ತಿದ್ದಾರೆ.

ಆಡಳಿತ ಪಕ್ಷದ ಇಂಥ ‘ಸರ್ವಾಧಿಕಾರಿ’ ಮನಸ್ಥಿತಿಯನ್ನು ಕೆಲವರು ಕಟುಮಾತುಗಳಲ್ಲಿ ಖಂಡಿಸುತ್ತಿದ್ದಾರೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ, ತನ್ನ ರಾಜಕೀಯ ವೈರಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದನ್ನು ಈಗಿನ ವಿದ್ಯಮಾನಗಳ ಜೊತೆ ತುಲನೆ ಮಾಡಿ ನೋಡಲಾಗುತ್ತಿದೆ. “ಇಂದಿರಾ ಗಾಂಧಿ ಕಾಲದ್ದು ಘೋಷಿತ ತುರ್ತು ಪರಿಸ್ಥಿತಿ. ಈಗಿನದು ಅಘೋಷಿತ ತುರ್ತು ಪರಿಸ್ಥಿತಿ. ಆಗ ಬಂಧಿತರಾಗಿದ್ದವರು ರಾಜಕೀಯ ಕೈದಿಗಳೆನಿಸಿಕೊಂಡಿದ್ದರು. ಈಗ ಹಾಗಲ್ಲ. ಕೊಲೆಗೆ ಸಂಚು, ಗಲಭೆಗೆ ಕುಮ್ಮಕ್ಕು ಇತ್ಯಾದಿ ಗಂಭೀರವಾದ ಮತ್ತು ಕಠಿಣ ಶಿಕ್ಷೆ ವಿಧಿಸಬಹುದಾದ ಆರೋಪಗಳನ್ನು ಹೊರಿಸಿ ಬಂಧಿಸಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವವಾದಿ ಸರ್ಕಾರವನ್ನು ಮುನ್ನಡೆಸುತ್ತಿರುವವರ ಮನಸ್ಥಿತಿಯು ಸರ್ವಾಧಿಕಾರಿ ಆಡಳಿತಗಾರನ ಧೋರಣೆಯನ್ನೂ ಮೀರಿಸುವಂತಿದೆ,’’ ಎನ್ನುವ ಕಟುಟೀಕೆಗಳು ಕೇಳಿಬರುತ್ತಿವೆ.

ನಿಜ, ಬಂಡವಾಳಶಾಹಿಗಳು, ಏಕ ಸಿದ್ಧಾಂತವಾದಿಗಳ ಆಡುಂಬೋಲವಾಗಿರುವ ವರ್ತಮಾನದ ಆಡಳಿತದಲ್ಲಿ ಧ್ವನಿ ಇಲ್ಲದವರ ಪರ ನಿಲ್ಲುವವರು, ಸಂವಿಧಾನವೇ ಸಿದ್ಧಾಂತ ಎಂದು ನಂಬಿ, ಅದರ ಅನುಷ್ಠಾನಕ್ಕೆ ಅವಿರತ ಹೋರಾಡುವವರು ದಾಳಿಗೆ ಗುರಿಯಾಗುತ್ತಿದ್ದಾರೆ. ಇಂಥವರ ವಿರುದ್ಧ ಏನೇನೋ ಆರೋಪ ಹೊರಿಸಿ ಜೈಲಿಗೆ ಅಟ್ಟುವ, ಅವರ ಧ್ವನಿಯನ್ನು ಹತ್ತಿಕ್ಕುವ, ಬಲವನ್ನು ಕುಗ್ಗಿಸುವ, ಸಮಾಜದ ಕಣ್ಣಿನಲ್ಲಿ ‘ಸಮಾಜಘಾತುಕ ಶಕ್ತಿ’ ಎಂಬಂತೆ ಬಿಂಬಿಸುವ ಮತ್ತು ಬಡವರು, ಆದಿವಾಸಿಗಳು, ದುರ್ಬಲ ವರ್ಗದ ಜನರ ಪರ ಮಾತನಾಡುವವರನ್ನು ‘ನಗರ ನಕ್ಸಲರು’ ಎಂದು ಬ್ರ್ಯಾಂಡ್‌ ಮಾಡುವ ಮತಿಹೀನ ಷಡ್ಯಂತ್ರ ನಡೆಯುತ್ತಿದೆ. “ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ಮಾಡಿಕೊಂಡು, ಬರುವ ಹಣದಲ್ಲಿ ಸುಖವಾಗಿದ್ದರೆ ಕ್ಷೇಮ. ಸಲ್ಲದ ವಿಷಯಗಳಲ್ಲಿ ಮೂಗು ತೂರಿಸಿದರೆ ಇಂಥದೇ ಕ್ಷೋಭೆ ಎದುರಿಸಬೇಕಾಗುತ್ತದೆ,’’ ಎನ್ನುವ ಎಚ್ಚರಿಕೆ ಸಂದೇಶವೂ ಇದರ ಹಿಂದೆ ಇಲ್ಲದೆ ಇಲ್ಲ.

ಮಾತ್ರವಲ್ಲ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆಳೆಯುತ್ತಿರುವ ಕರ್ನಾಟಕ ಪೊಲೀಸರು ತನಿಖೆಯಲ್ಲೀಗ ನಿರ್ಣಾಯಕ ಘಟ್ಟ ತಲುಪಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಮತ್ತು ತನಿಖೆ ಸಾಗುತ್ತಿರುವ ಜಾಡನ್ನು ನೋಡಿದರೆ ಅದು ಸಂಘಪರಿವಾರದ ಅಂಗಸಂಸ್ಥೆಯ ಅಂಗಳದಲ್ಲೇ ನಿಲ್ಲುವ ಸಾಧ್ಯತೆ ಕಾಣುತ್ತಿದೆ. ಒಂದೊಮ್ಮೆ, ಕರ್ನಾಟಕ ಪೊಲೀಸರು ವಿಶೇಷ ಆಸ್ಥೆ ವಹಿಸಿ, ಸಾವಧಾನದಿಂದ ಪ್ರಕರಣವನ್ನು ನಿರ್ವಹಿಸದೆ ಹೋಗಿದ್ದರೆ ಬಹುಶಃ ಪನ್ಸಾರೆ, ದಾಭೋಲ್ಕರ್‌,ಎಂ ಎಂ ಕಲಬುರ್ಗಿ ಅವರ ಹತ್ಯಾ ಪ್ರಕರಣಗಳಂತೆಯೇ ಗೌರಿ ಪ್ರಕರಣವೂ ‘ಸಮಾಧಿ’ ಸೇರುವ ಮತ್ತು ಇನ್ನಷ್ಟು ವಿಚಾರಪರರ ಹತ್ಯೆಗಳು ನಡೆಯುವ ಅಪಾಯವೂ ಇತ್ತು.

ಈಗ, ಗೌರಿ ಕೊಲೆ ಪ್ರಕರಣದ ಸಂಚುಕೋರರೇ ದಾಭೋಲ್ಕರ್, ಕಲಬುರ್ಗಿ ಹತ್ಯೆ ಹಿಂದೆಯೂ ಇದ್ದಾರೆನ್ನುವ ಅಂಶ ಗೋಚರಿಸುತ್ತಿದೆ. ತನಿಖೆ ಇದೇ ಗತಿಯಲ್ಲಿ ಮುಂದುವರಿದರೆ ಬಹುಶಃ ಅದು ಬಲಪಂಥೀಯ ಕಟ್ಟಾಳುಗಳ ಪಾಲಿಗೆ ಗಂಟಲ ಗಾಳವಾಗಿ ಪರಿಣಮಿಸಬಹುದು. ಸಂಭವನೀಯ ಅಪಮಾನ ತಪ್ಪಿಸಿಕೊಳ್ಳಲಿಕ್ಕಾಗಿಯೇ ಈಗ ಎಡಪಂಥೀಯ ಚಿಂತಕರು ಮತ್ತು ಮಾನವ ಹಕ್ಕು ಹೋರಾಟಗಾರರನ್ನು ಕೋರೆಗಾಂವ್‌ ಹಿನ್ನೆಲೆಯಲ್ಲಿ ಬಂಧಿಸಿ, ಅವರ ಮೇಲೆ ಮೋದಿ ಹತ್ಯಾ ಸಂಚಿನ ‘ಅನಧಿಕೃತ’ ಆರೋಪವನ್ನೂ ಹೊರಿಸುತ್ತಿರಬಹುದು ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ರಾಜಕೀಯ ವಿರೋಧಿಗಳು ಏನೇ ಪ್ರಶ್ನೆ ಮಾಡಿದರೂ, “ನಿಮ್ಮ ಅವಧಿಯಲ್ಲೂ ಮಾಡಿದ್ದಿರಲ್ಲ,’’ ಎಂದು ಹೇಳಿ ಬಚಾವಾಗುವುದು ಬಿಜೆಪಿಯವರಿಗೆ ವಾಡಿಕೆಯ ಸಂಗತಿ. ಈಗ ಕೂಡ, “ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೆಲವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು,’’ ಎನ್ನುವ ಸಮರ್ಥನೆ ಕೇಳಿಬರುತ್ತಿದೆ. ಮುಂದೆ, “ವಿಚಾರವಾದಿಗಳನ್ನು ಕೊಂದವರು ಬಲಪಂಥೀಯರು,’’ ಎನ್ನುವ ಆಕ್ಷೇಪ ವ್ಯಕ್ತವಾದರೆ, “ಎಡಪಂಥೀಯರು ಮೋದಿ ಹತ್ಯೆಗೇ ಸಂಚು ಮಾಡಿದ್ದರು,’’ ಎಂದು ಪ್ರತಿ ಟೀಕೆ ಮಾಡಿ, ಜನಸಾಮಾನ್ಯರ ದಿಕ್ಕು ತಪ್ಪಿಸುವ, ಅನುಕಂಪ ಗಿಟ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಇದನ್ನೂ ಓದಿ : ಟೀಕೆ, ವಿರೋಧ ಬಗ್ಗುಬಡಿಯುವಲ್ಲಿನ ಪ್ರಭುತ್ವದ ಹಳೇ ತಂತ್ರ ‘ನಕ್ಸಲ್’ ಹಣೆಪಟ್ಟಿ

ಇನ್ನೊಂದು ಗಮನಿಸಬೇಕಾದ ಸಂಗತಿ, ಗುಜರಾತ್‌ ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊತ್ತು ಜೈಲು ಪಾಲಾಗಿದ್ದವರು ತಾಂತ್ರಿಕ ಮತ್ತು ಪ್ರಭಾವ ಬಳಕೆಯ ಕಾರಣಗಳಿಂದಾಗಿ ಕಾನೂನು ಕುಣಿಕೆಯಿಂದ ಬಚಾವಾಗಿ, ಪ್ರಕರಣದಿಂದ ‘ಮುಕ್ತಿ’ಯನ್ನು ಗಿಟ್ಟಿಸಿ ಆಡಳಿತದ ನಿಯಂತ್ರಕ ಸ್ಥಾನದಲ್ಲಿ ಕುಳಿತಿದ್ದಾರೆ. ಅವರ ಮೂಗಿನಡಿಯೇ ದೊಂಬಿಹತ್ಯೆ, ಗೋಸಂರಕ್ಷಣೆ ನೆಪದಲ್ಲಿ ಅಮಾಯಕರ ಹತ್ಯೆಗಳು ದೇಶಾದ್ಯಂತ ಘಟಿಸುತ್ತಿವೆ. ಹೀಗೆ ಒಂದಿಲ್ಲೊಂದು ಬಗೆಯಲ್ಲಿ ತಮ್ಮ ಕೈ, ಮುಖದಲ್ಲಿ ರಕ್ತದ ಕಲೆಗಳನ್ನು ಉಳಿಸಿಕೊಂಡಿರುವ ಶಕ್ತಿಗಳೇ ಈಗ ಮಾನವ ಹಕ್ಕು ಹೋರಾಟಗಾರರ ಮೇಲೆ ಕೊಲೆ ಪಿತೂರಿಯ ಕೆಸರೆರಚಿ, ಅದನ್ನು ‘ಅಧಿಕೃತ’ಗೊಳಿಸಲು ಕತೆಗಳನ್ನು ಹೆಣೆಯುತ್ತಿದ್ದಾರೆ. ಕೊಂದದ್ದಾಯಿತು. ಕೊಲ್ಲಿಸಿದ್ದಾಯಿತು. ಕೊಂದು ಜೀರ್ಣಿಸಿಕೊಂಡಿದ್ದೂ ಆಯಿತು. ಈಗ, ಕೊಲೆ ಸಂಚಿನ ಆಪಾದನೆಯ ಕತ್ತಿಯನ್ನು ಜನಪರ ಹೋರಾಟಗಾರರ ಮೇಲೆ ತೂಗಿಬಿಡಲಾಗಿದೆ!

ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, ಭೀಮ ಕೋರೆಗಾಂವ್‌ ಹಿಂಸಾಚಾರಕ್ಕೆ ಹಿಂದೂ ಏಕತಾ ಅಘಡಿಯ ಮಿಲಿಂದ್ ಏಕ ಭೋಟೆ, ಶಿವಾಜಿ ಪ್ರತಿಷ್ಠಾನದ ಸಂಭಾಜಿ ಭಿಡೆ ಮುಂತಾದ ಬಲಪಂಥೀಯ ಮುಖಂಡರ ಕುಮ್ಮಕ್ಕು, ಕೈವಾಡ ಕಾರಣ ಎಂದು ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು‌ ಬಹಿರಂಗ ಆರೋಪ ಮಾಡಿದ್ದರು. ಆದರೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಇದು ಮುಖ್ಯವಾದ ಸಂಗತಿ ಎನ್ನಿಸಿಯೇ ಇಲ್ಲ. ಬದಲು, ಹಿಂಸೆಗೆ ಎಡಪಂಥೀಯರನ್ನಷ್ಟೆ ಗುರಿ ಮಾಡಿ ಹಣಿಯಲು ಹೊರಟಿದೆ. ಇದರ ಜೊತೆಗೇ, ಮೋದಿ ಕೊಲೆಯ ಸಂಚಿನ ಕತೆಯನ್ನೂ ಹೆಣೆಯಲಾಗಿದೆ. ಹೀಗೆಯೇ ಮುಂದುವರಿದರೆ, ಮೋದಿ ಮತ್ತು ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಧ್ವನಿ ಎತ್ತುವವರು, ಅಭಿಪ್ರಾಯ ಮೂಡಿಸುವವರು, ಬಡವರು ಮತ್ತು ಶೋಷಿತರ ವಿರುದ್ಧದ ನಿಲುವನ್ನು ಖಂಡಿಸುವವರು ಮುಂದಿನ ದಿನಗಳಲ್ಲಿ ‘ಮೋದಿ ಹತ್ಯೆ’ ಯತ್ನದ ಸಂಚುಕೋರರಾಗಿ ಬಿಂಬಿಸಲ್ಪಡುವ ಅಪಾಯವನ್ನು ಅಲ್ಲಗಳೆಯಲಾಗದು.

ಮೋದಿ ಬತ್ತಳಿಕೆಯಲ್ಲಿನ ಎಲ್ಲ ‘ಮಾಯಾವಿ ಅಸ್ತ್ರ’ಗಳು ಮುಗಿದಿದ್ದರ ಸೂಚನೆಯಂತೆಯೂ ಈ ಬೆಳವಣಿಗಗಳು ಕಾಣುತ್ತಿವೆ. ದೇಶವಾಸಿಗಳನ್ನು ಮತ್ತು ಅವರು ಎತ್ತುವ ತಕರಾರುಗಳನ್ನು ತಮ್ಮ ಸೃಷ್ಟಿತ ‘ಪ್ರಭಾವಳಿ’ಯಿಂದ ಎದುರಿಸಲಾಗದಂಥ ಸ್ಥಿತಿಗೆ ತಲುಪಿರುವ ಅಥವಾ ಇನ್ನು ಮುಂದೆ ಜನ ಅದನ್ನೆಲ್ಲ ನಂಬುವುದಿಲ್ಲ ಎನ್ನಿಸಿದ್ದರಿಂದ ಅಧಿಕಾರಸ್ಥರು ಇಂಥ ಹುಸಿ ಅಸ್ತ್ರಗಳ ಮೊರೆಹೋದಂತೆ ತೋರುತ್ತಿದೆ. ಮೇಲಿನವರ ಹುಕುಂಗಳನ್ನು ತಪ್ಪದೇ ಪಾಲಿಸುವ ಪೊಲೀಸರು, ಇಎಫ್‌ಎಲ್‌ವಿವಿ ಅಧ್ಯಾಪಕನ ಬಳಿ ಹೋಗಿ, “ಮಾರ್ಕ್ಸ್‌ನನ್ನು ಯಾಕೆ ಓದುತ್ತೀರಿ, ದೇವರ ಫೋಟೋ ಬದಲು ಅಂಬೇಡ್ಕರರ ಫೋಟೋ ಯಾಕೆ ಇಟ್ಟುಕೊಂಡಿದ್ದೀರಿ?” ಎಂದು ಪ್ರಶ್ನೆ ಮಾಡುತ್ತಾರೆ ಎಂದರೆ, ನಾವು ಯಾವ ಕಾಲದಲ್ಲಿ,, ಯಾರ ಮರ್ಜಿಯಲ್ಲಿದ್ದೇವೆ, ಯಾವ ಸಂವಿಧಾನ ನಮ್ಮನ್ನು ಆಳುತ್ತಿದೆ ಎನ್ನುವ ಪ್ರಶ್ನೆ ಮೂಡದೆ ಇರದು. ಇಂಥ ಕಾರಣಕ್ಕೇ ಅನೇಕರು, ಮೋದಿ ಆಡಳಿತಾವಧಿಯಲ್ಲಿ ಸರ್ವಾಧಿಕಾರದ ಛಾಯೆಯನ್ನು ಢಾಳಾಗಿ ಕಾಣುತ್ತಿದ್ದಾರೆ ಮತ್ತು ದೇಶದಲ್ಲಿ ಏನೇ ಸಂಭವಿಸಿದರೂ ಮೋದಿ ಪರಿವಾರವನ್ನೇ ಅದಕ್ಕೆ ಹೊಣೆ ಮಾಡುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More