ಅಪನಗದೀಕರಣ ಮಹಾ ವಿಫಲ: ಅರುಣ್ ಜೇಟ್ಲಿ, ರಾಹುಲ್ ಗಾಂಧಿ ವಾಗ್ವಾದ

ಅಪನಗದೀಕರಣ ಮಹಾ ವಿಫಲ ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಸಾರಿ ಹೇಳುತ್ತಿವೆ. ಶೇ.99.7ರಷ್ಟು ರದ್ದಾದ ನೋಟುಗಳು ವಾಪಸಾಗಿವೆ. ಈ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದೇನು? ಇಲ್ಲಿದೆ ವಿವರ

ಅರುಣ್ ಜೇಟ್ಲಿ ಹೇಳಿದ್ದು

 • ರದ್ದು ಮಾಡಿದ ನೋಟುಗಳೆಲ್ಲವೂ ವಾಪಸಾದ ಮಾತ್ರಕ್ಕೆ ಅಪನಗದೀಕರಣ ವಿಫಲ ಎಂದು ಹೇಳುವಂತಿಲ್ಲ. ಬ್ಯಾಂಕಿನಲ್ಲಿ ಠೇವಣಿ ಇಡದ ನೋಟುಗಳ ಅಪನಗದೀಕರಣ ಮಾಡುವುದಷ್ಟೇ ಮುಖ್ಯ ಉದ್ದೇಶವಾಗಿರಲಿಲ್ಲ. ಅಪನಗದೀಕರಣದ ಮುಖ್ಯ ಉದ್ದೇಶ ತೆರಿಗೆ ಪೂರ್ಣ ರಾಷ್ಟ್ರ ಮಾಡುವುದಾಗಿತ್ತು. ಇದಕ್ಕೆ ಆರ್ಥಿಕತೆಯನ್ನು ಸಂಘಟಿತ ವಲಯಕ್ಕೆ ತಂದು ಕಪ್ಪುಹಣ ನಿಗ್ರಹಿಸಬೇಕಿತ್ತು. ಆ ಉದ್ದೇಶ ಸಂಪೂರ್ಣ ಈಡೇರಿದೆ.
 • ಬ್ಯಾಂಕಿನಲ್ಲಿ ನಗದು ಪಾವತಿ ಮಾಡಿದ ತಕ್ಷಣ ಹಣ ಯಾರದೆಂಬ ಗೌಪ್ಯತೆ ಹೋಗುತ್ತದೆ. ಹಣ ಯಾರದ್ದೆಂದು ಗೊತ್ತಾದ ನಂತರ ಅಗತ್ಯಬಿದ್ದಲ್ಲಿ ತನಿಖೆಗೆ ಒಳಪಡಿಸಲಾಗುತ್ತದೆ. ಅಪನಗದೀಕರಣದ ನಂತರ 1.8 ಲಕ್ಷ ಠೇವಣಿದಾರರನ್ನು ತನಿಖೆಗೆ ಒಳಪಡಿಸಲು ಗುರುತಿಸಲಾಗಿದೆ. ಹಲವರು ತ್ವರಿತವಾಗಿ ತೆರಿಗೆ ಮತ್ತು ದಂಡವನ್ನು ಪಾವತಿಸಿದ್ದಾರೆ. ಹಣ ಬ್ಯಾಂಕಿನಲ್ಲಿ ಠೇವಣಿ ಇಟ್ಟಾಕ್ಷಣ ಅದು ತೆರಿಗೆ ಪಾವತಿಸಿರುವ ಹಣ ಎಂದು ಭಾವಿಸಬೇಕಿಲ್ಲ.
 • 2014 ಮಾರ್ಚ್‌ನಲ್ಲಿ 3.8 ಕೋಟಿ ಮಂದಿ ಆದಾಯ ತೆರಿಗೆ ವಿವರ ಸಲ್ಲಿಸಿದ್ದರು. 2017-18ರಲ್ಲಿ ತೆರಿಗೆ ವಿವರ ಸಲ್ಲಿಸಿದರವರ ಸಂಖ್ಯೆ 6.86 ಕೋಟಿಗೆ ಏರಿದೆ. ಕಳೆದ ಎರಡು ವರ್ಷಗಳಲ್ಲಿ ಅಪನಗದೀಕರಣದ ಪರಿಣಾಮವಾಗಿ ತೆರಿಗೆ ವಿವರ ಸಲ್ಲಿಕೆ ಕ್ರಮವಾಗಿ ಶೇ.19 ಮತ್ತು 25ರಷ್ಟು ಹೆಚ್ಚಿದೆ.
 • ಅಪನಗದೀಕರಣದ ನಂತರ ಹೊಸದಾಗಿ ಆದಾಯ ತೆರಿಗೆ ವಿವರ ಸಲ್ಲಿಸಿದವರ ಸಂಖ್ಯೆ ಎರಡು ವರ್ಷಗಳಲ್ಲಿ ಕ್ರಮವಾಗಿ 85.51 ಲಕ್ಷ ಮತ್ತು 1.07 ಕೋಟಿ.
 • 2018-19ರಲ್ಲಿ ವೈಯಕ್ತಿಕ ಆದಾಯ ತೆರಿಗೆ ಮುಂಗಡ ಪಾವತಿ ಶೇ.44.1ರಷ್ಟು ಮತ್ತು ಕಾರ್ಪೊರೆಟ್ ತೆರಿಗೆ ಶೇ.17.4ರಷ್ಟು ಏರಿದೆ.
 • 2013-14ರಲ್ಲಿ 6.38 ಲಕ್ಷ ಕೋಟಿ ಇದ್ದ ಆದಾಯ ತೆರಿಗೆಯು 2017-18ನೇ ಸಾಲಿನಲ್ಲಿ 10.02 ಲಕ್ಷ ಕೋಟಿ ರುಪಾಯಿಗೆ ಏರಿದೆ.
 • ಅಪನಗದೀಕರಣ ಪೂರ್ವದ ಎರಡು ವರ್ಷಗಳಲ್ಲಿ ತೆರಿಗೆ ಸಂಗ್ರಹವು ಶೇ.6.6 ಮತ್ತು ಶೇ.9ರಷ್ಟು ಹೆಚ್ಚಳವಾಗಿತ್ತು. ಅಪನಗದೀಕರಣದ ನಂತರದ ಎರಡು ವರ್ಷಗಳಲ್ಲಿ ತೆರಿಗೆ ಸಂಗ್ರಹವು ಶೇ.15 ಮತ್ತು 18ರಷ್ಟು ಹೆಚ್ಚಿದೆ. ಮೂರನೇ ವರ್ಷವೂ ಅಷ್ಟೇ ಪ್ರಮಾಣದಲ್ಲಿ ತೆರಿಗೆ ಪ್ರಮಾಣ ಹೆಚ್ಚಳವಾಗುವುದು ಕಾಣಿಸುತ್ತಿದೆ.
 • ಅಪನಗದೀಕರಣದ ನಂತರ 2017 ಜುಲೈ 1 ರಂದು ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರಲಾಯಿತು. ಜಿಎಸ್ಟಿ ಜಾರಿಗೆ ಬಂದ ಮೊದಲ ವರ್ಷವೇ ನೊಂದಾಯಿತ ತೆರಿಗೆದಾರರ ಸಂಖ್ಯೆ ಶೇ.72.5ರಷ್ಟು ಹೆಚ್ಚಳವಾಯಿತು. ಮೂಲ 66.17 ಲಕ್ಷದಷ್ಟಿದ್ದ ನೊಂದಾಯಿತ ತೆರಿಗೆದಾರರ ಸಂಖ್ಯೆ 114.17 ಲಕ್ಷಕ್ಕೆ ಏರಿತು.
 • ಇದೆಲ್ಲವೂ ಅಪನಗದೀಕರಣದ ಸಕಾರಾತ್ಮಕ ಪರಿಮಾಣಗಳು. ಆರ್ಥಿಕತೆ ಸಂಘಿಟತ ವಲಯಕ್ಕೆ ತರುವುದರಿಂದ ಆರ್ಥಿಕತೆಗೆ ಹೆಚ್ಚಿನ ಹಣ ಹರಿದುಬರುತ್ತದೆ. ಹೆಚ್ಚಿನ ತೆರಿಗೆ ಆದಾಯ, ಹೆಚ್ಚಿನ ವಿನಿಯೋಗ ಸಾಧ್ಯವಾಗುತ್ತದೆ. ಅದರಿಂದಾಗಿಯೇ ಮೊದಲ ಎರಡು ತ್ರೈಮಾಸಿಕಗಳ ನಂತರ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿದೆ.

ರಾಹುಲ್ ಗಾಂಧಿ ಹೇಳಿದ್ದು

 • ಭಾರತೀಯ ರಿಸರ್ವ್ ಬ್ಯಾಂಕ್ ಶೇ.99.3ರಷ್ಟು ನೋಟುಗಳು ವಾಪಸಾಗಿವೆ ಎಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಉತ್ತರಿಸಬೇಕು; ಕಪ್ಪುಹಣ ಎಲ್ಲಿದೆ? ಭಯೋತ್ಪಾದನೆ ಎಲ್ಲಿ ನಿಂತಿದೆ? ನಕಲಿ ನೋಟುಗಳ ಹಾವಳಿ, ಭ್ರಷ್ಟಾಚಾರ ಎಲ್ಲಿ ನಿಂತಿದೆ?
 • ಪ್ರಧಾನಿ ನರೇಂದ್ರ ಮೋದಿ 15-20 ಸಹವರ್ತಿ ಬಂಡವಾಳಶಾಹಿಗಳಿಗೆ ಅನಕೂಲ ಮಾಡಿಕೊಡಲು ಅಪನಗದೀಕರಣ ಜಾರಿ ಮಾಡಿದ್ದಾರೆ. ಬ್ಯಾಂಕುಗಳಿಂದ ಸಾಲ ಪಡೆದು ನಿಷ್ಕ್ರಿಯ ಸಾಲ ಹೆಚ್ಚಿಸಿರುವ ಪ್ರಧಾನಿ ಮೋದಿ ಅವರ ಸ್ನೇಹಿತರಿಗೆ ಮಾತ್ರ ಇದರಿಂದ ಅನುಕೂಲವಾಗಿದೆ.
 • ಬಡವರು, ರೈತರು, ಸಣ್ಣ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದು ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶ್ರೀಮಂತರು ತಮ್ಮ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಮಾಡಿಕೊಳ್ಳಲು ಅಪನಗದೀಕರಣ ಜಾರಿ ಮಾಡಲಾಗಿದೆ.
 • ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪಿನಿಂದಾಗಿ ಅಪನಗದೀಕರಣ ಮಾಡಿದ್ದಲ್ಲ; ಬದಲಿಗೆ, ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ. ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳನ್ನು ನಾಶ ಮಾಡಿ ಅಮೆಜಾನ್‌ನಂತಹ ದೈತ್ಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಕುತಂತ್ರವು ಪ್ರಧಾನಿ ಮೋದಿ ಅವರ ಉದ್ದೇಶವಾಗಿತ್ತು.
 • ಅಹಮದಾಬಾದ್‌ನಲ್ಲಿರುವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕಿನಲ್ಲಿ 700 ಕೋಟಿ ರುಪಾಯಿ ನೋಟು ಬದಲಾಯಿಸಿಕೊಳ್ಳಲಾಗಿದೆ. ಅಪನಗದೀಕರಣಕ್ಕೂ ಮುಂಚೆ ಬಿಜೆಪಿ ಗುಜರಾತಿನಲ್ಲಿ ಹೊಸ-ಹೊಸ ಕಚೇರಿಗಳನ್ನು ತೆರೆದಿದೆ. ಇದೊಂದು ದೊಡ್ಡ ಹಗರಣ.
 • ಪ್ರಧಾನಿ ಮೋದಿ ಹೇಳುತ್ತಾರೆ, ಹಿಂದಿನ 70 ವರ್ಷಗಳಲ್ಲಿ ಯಾರೂ ಇಂತಹ ಸಾಧನೆ ಮಾಡಿರಲಿಲ್ಲ ಎಂದು. ನಿಜ, ಕಳೆದ 70 ವರ್ಷಗಳಲ್ಲಿ ಯಾರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಡವರು, ಸಣ್ಣ ವ್ಯಾಪಾರಿಗಳ ಬದುಕಿನ ಮೇಲೆ ಹೊಡೆದಿರಲಿಲ್ಲ, ಯುವಕರ ಉದ್ಯೋಗ ಕಸಿದಿರಲಿಲ್ಲ.
ಇದನ್ನೂ ಓದಿ : ಅಪನಗದೀಕರಣ ಯೋಜನೆ ಮಹಾವಿಫಲ; ನೈತಿಕ ಹೊಣೆ ಹೊರುತ್ತಾರೆಯೇ ಪ್ರಧಾನಿ ಮೋದಿ?
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More