ಸಾಮಾಜಿಕ ಕಾರ್ಯಕರ್ತರ ಬಂಧನ: ರೋಮಿಲಾ ಥಾಪರ್ ಮತ್ತಿತರರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ?

ರೋಮಿಲಾ ಥಾಪರ್, ದೇವಕಿ ಜೈನ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಮತ್ತು ಮಜಾ ದಾರುವಾಲ ಅವರು ಸಾಮಾಜಿಕ ಕಾರ್ಯಕರ್ತರ ಬಂಧನದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ‘ಸ್ಕ್ರಾಲ್‌’ನಲ್ಲಿ ಪ್ರಕಟವಾದ ಅರ್ಜಿಯ ಆಯ್ದ ಭಾಗದ ಭಾವಾನುವಾದ ಇಲ್ಲಿದೆ

ಏಕಕಾಲಕ್ಕೆ ಹಲವು ನಗರಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪುಣೆ ಪೊಲೀಸರು, ಗೌತಮ್ ನೌಲಾಖ, ಸುಧಾ ಭಾರಧ್ವಾಜ್, ವರವರ ರಾವ್, ಅರುಣ್ ಫೆರೈರಾ ಮತ್ತು ವರ್ನನ್ ಗೋನ್ಸಾಲ್ವೀಸ್ ಎಂಬ ಐವರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದರು. ಮಹಾರಾಷ್ಟ್ರದ ಭೀಮಾ ಕೋರೇಗಾಂವ್‌ನಲ್ಲಿ ಕಳೆದ ಜನವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ಇದಕ್ಕೆ ಕಾರಣವಾಗಿ ಕೊಡಲಾಗಿತ್ತು.

ಈ ಬಂಧನವನ್ನು ವಿರೋಧ ಪಕ್ಷಗಳು, ಮಾನವ ಹಕ್ಕು ಸಂಘಟನೆಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಖಂಡಿಸಿದ್ದಾರೆ. ಈ ಬಂಧನ ಪ್ರಶ್ನಿಸಿ ಮತ್ತು ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆಗೆ ಆಗ್ರಹಿಸಿ ಬುಧವಾರ ರೋಮಿಲಾ ಥಾಪರ್ ಅವರನ್ನೂ ಒಳಗೊಂಡು ಐವರು ಗಣ್ಯರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ಮುಖ್ಯಾಂಶಗಳು

 1. ವಿಸ್ತೃತ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳನ್ನು ಮತ್ತು ಪ್ರಜಾತಂತ್ರವನ್ನು ರಕ್ಷಿಸುವ ಸಲುವಾಗಿ ನಡೆಯುತ್ತಿರುವ ಪ್ರಾಮಾಣಿಕ ಕೆಲಸವನ್ನು ದಮನ ಮಾಡುವ ಪ್ರಯತ್ನವನ್ನು ತಡೆಯುವುದಕ್ಕಾಗಿ ಈ ಅರ್ಜಿ ಸಲ್ಲಿಸಲಾಗಿದೆ. ಸ್ವತಂತ್ರ ದನಿಗಳನ್ನು ಮತ್ತು ಆಡಳಿತ ಪಕ್ಷದ ಸಿದ್ಧಾಂತಕ್ಕೆ ಭಿನ್ನವಾದ ಸಿದ್ಧಾಂತವನ್ನು ಸದ್ದಡಗಿಸುವ ಉದ್ದೇಶದಿಂದ ದೇಶದಲ್ಲಿ ಪೊಲೀಸ್ ಬಲವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ದಾಖಲಿಸುವ ಉದ್ದೇಶವನ್ನೂ ಈ ಅರ್ಜಿ ಹೊಂದಿದೆ. ವಿಶ್ವಾಸಾರ್ಹ ಸಂಗತಿಗಳು ಮತ್ತು ಸಾಕ್ಷ್ಯ್ಷಾಧಾರಗಳು ಇಲ್ಲದೆ ತಮ್ಮ ಅಧಿಕಾರವನ್ನು ಬೇಕಾಬಿಟ್ಟಿಯಾಗಿ ಬಳಸುವ ಮೂಲಕ ಪುಣೆ ಪೊಲೀಸರು ನಡೆಸಿದ ಕಾನೂನುಬಾಹಿರ ಕೃತ್ಯಗಳು ನಾಗರಿಕರ ಹಕ್ಕು ಮತ್ತು ಸ್ವಾತಂತ್ರ್ಯದ ಮೇಲೆ ನಡೆದ ಅತಿದೊಡ್ಡ ದಾಳಿಯಾಗಿದೆ. ಭಿನ್ನದನಿಯನ್ನು ಅಡಗಿಸುವುದು, ಇಡೀ ದೇಶಾದ್ಯಂತ ತಳಮಟ್ಟದಲ್ಲಿ ನಿಕೃಷ್ಟ ಬದುಕು ಸಾಗಿಸುತ್ತಿರುವ ಜನಸಮೂಹಗಳಿಗೆ ಬೆಂಬವಾಗಿ ನಿಲ್ಲುತ್ತಿರುವುದನ್ನು ತಡೆಯುವುದು ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದು ಈ ಇಡೀ ಕಾರ್ಯಾಚರಣೆಯ ಉದ್ದೇಶವಾಗಿದೆ. ಈ ಕಾರ್ಯಾಚರಣೆ ನಡೆದಿರುವ ಸಂದರರ್ಭವನ್ನು ನೋಡಿದರೆ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವ ಉದ್ದೇಶ ಕೂಡ ಇದ್ದಂತಿದೆ.
 2. ಚಾರಿತ್ರಿಕ ಕೋರೆಗಾಂವ್ ಗೆಲುವಿನ ೨೦೦ನೇ ವಿಜಯೋತ್ಸವ ಆಚರಿಸುವುದಕ್ಕಾಗಿ ‘ಎಲ್ಗಾರ್ ಪರಿಷತ್ತು’ ನಡೆಸಿದ ದಲಿತರ ಮತ್ತು ದಲಿತ ಕಾರ್ಯಕರ್ತರ ಸಮಾವೇಶದ ನಂತರದಲ್ಲಿ ಭೀಮಾ ಕೋರೇಗಾಂವ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪುಣೆ ಪೊಲೀಸರು ೨೦೧೮ರ ಜನವರಿ ೮ರಂದು ಎಫ್‌ಐಆರ್ ದಾಖಲಿಸಿದ್ದರು (ಸಂಖ್ಯೆ; ೪/೨೦೧೮, ಪಿ.ಎಸ್. ವಿಶ್ರಮ್ ನಗರ, ಪುಣೆ). ಭಾರತದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ ಬಿ ಸಾವಂತ್ ಮತ್ತು ಬಾಂಬೆ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಕೋಲ್ಸೆ ಪಾಟೀಲ್ ಅವರು ಈ ‘ಎಲ್ಗಾರ್ ಪರಿಷತ್ತಿ’ನ ಸಂಘಟಕರಾಗಿದ್ದರು. ಈಗ ಅಕ್ರಮವಾಗಿ ಬಂಧನಕ್ಕೊಳಗಾಗಿರುವವರಲ್ಲಿ ಯಾರ ಹೆಸರನ್ನೂ ನಿರ್ದಿಷ್ಟವಾಗಿ ಎಫ್‌ಐಆರ್‌ನಲ್ಲಿ ನಮೂದಿಸಲಾಗಿಲ್ಲ ಹಾಗೂ ಅವರಲ್ಲಿ ಯಾರೂ ಎಲ್ಗಾರ್ ಪರಿಷತ್ತು ಸಂಘಟಿಸಿದ ಸಮಾವೇಶದಲ್ಲೂ ಪಾಲ್ಗೊಂಡಿರಲಿಲ್ಲ ಎಂಬುದು ವಿವಾದಾತೀತ ವಿಷಯವಾಗಿದೆ.
 3. ಭೀಮಾ ಕೋರೇಗಾಂವ್‌ನಲ್ಲಿ ದಲಿತ ಸಮಾವೇಶದ ವಿರುದ್ಧ ಕೆಲವು ಗುಂಪುಗಳು ಹಿಂಸಾಚಾರಕ್ಕೆ ಪ್ರೇರಣೆ ನೀಡಿದ್ದನ್ನು ತಾವು ನೋಡಿದ್ದಾಗಿ ಹೇಳಿದ ಕೆಲವು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳನ್ನು ಆಧಾರವಾಗಿಟ್ಟುಕೊಂಡು ಪುಣೆ ಪೊಲೀಸರು ಆರಂಭದಲ್ಲಿ ಹಿಂದುತ್ವ ನಾಯಕರಾದ ಮಿಲಿಂದ್ ಎಕ್ಬೋಟೆ ಮತ್ತು ಸಾಂಭಾಜಿ ರಾವ್ ಬಿಢೆ ಎಂಬುವವರ ವಿರುದ್ಧ ೨೦೧೮ರ ಜನವರಿ ೪ರಂದು ಎಫ್‌ಐಆರ್ ದಾಖಲಿಸಿದ್ದರು. ಕೋರೆಗಾಂವ್-ಭೀಮಾ ಹಿಂಸಾಚಾರದ ರೂವಾರಿಗಳಾಗಿದ್ದ ಬಲಪಂಥೀಯ ನಾಯಕರಾದ ಬಿಢೆ ಮತ್ತು ಎಕ್ಬೋಟೆ ವಿರುದ್ಧ ರಾಜ್ಯ ಸರ್ಕಾರ ಮತ್ತು ಪೊಲೀಸರು ಯಾವುದೇ ಕಠಿಣ ಮತ್ತು ನಿಷ್ಪಕ್ಷಪಾತ ನಿರ್ಣಾಯಕ ಕ್ರಮ ಕೈಗೊಳ್ಳಲಿಲ್ಲ. ಅದರ ಬದಲಿಗೆ, ಅತ್ಯಂತ ದುರ್ಬಲ ಮತ್ತು ನಿರ್ಲಕ್ಷಿತ ಜನಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ, ಅದರಲ್ಲೂ ನಿರ್ದಿಷ್ಟವಾಗಿ ದಲಿತರು, ಆದಿವಾಸಿಗಳು, ಮಹಿಳೆಯರು, ಭೂಹೀನ ಕಾರ್ಮಿಕರು ಮತ್ತು ಬಡಜನರ ಹಕ್ಕುಗಳನ್ನು ಗೌರವಿಸುತ್ತ, ಆ ಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ ಬದ್ಧತೆಯಿಂದ ಕೆಲಸ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಕಾರ್ಯಕರ್ತರನ್ನು, ವಕೀಲರನ್ನು ಮತ್ತು ಪತ್ರಕರ್ತರನ್ನು ಬಂಧಿಸುವ ದುರುದ್ದೇಶದ ಪ್ರಕ್ರಿಯೆಗೆ ಪೊಲೀಸರು ಚಾಲನೆ ನೀಡಿದ್ದರು.
 4. ಅದಾದ ನಂತರ ೨೦೧೮ರ ಜೂನ್‌ನಲ್ಲಿ ನಾಗಪುರ ವಿಶ್ವವಿದ್ಯಾಲಯದ ಪ್ರೊ.ಶೋಮಾ ಸೇನ್, ಜಿ ಎನ್ ಸಾಯಿಬಾಬ ಅವರ ಪರ ವಕಾಲತ್ತು ಮಾಡುತ್ತಿದ್ದ ಪ್ರಸಿದ್ಧ ಮಾನವ ಹಕ್ಕುಗಳ ವಕೀಲ ಸುರೇಂದ್ರ ಗಾಡ್ಲಿಂಗ್, ಪತ್ರಿಕೆಯೊಂದರ ಸಂಪಾದಕರಾದ ಸುಧೀರ್ ಧವಳೆ, ರಾಜಕೀಯ ಕೈದಿಗಳ ರಕ್ಷಣೆಗಾಗಿನ ಸಮಿತಿಯ ಸದಸ್ಯರಾದ ರೋಣಾ ವಿಲ್ಸನ್ ಮತ್ತು ಒಕ್ಕಲೆಬ್ಬಿಸುವಿಕೆಯ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತ ಮಹೇಶ್ ರಾವತ್ ಅವರನ್ನು, ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ಭಾರತೀಯ ದಂಡಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ಸೆಕ್ಷನ್ನುಗಳ ಅಡಿಯಲ್ಲಿ ಬಂಧಿಸಲಾಯಿತು. ಅವರ ಬಂಧನದ ನಂತರ, ರೋಣಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ 'ಕಾಮ್ರೇಡ್ ಪ್ರಕಾಶ್' ಅವರಿಗೆ 'ಆರ್' ಎಂಬುವವರು ಬರೆದ ಒಂದು ಪತ್ರ ದೊರೆತಿದ್ದು, ಅದರಲ್ಲಿ ‘ಹಿರಿಯ ಸಂಗಾತಿಗಳು' ಮೋದಿ ಯುಗವನ್ನು ಅಂತ್ಯಗೊಳಿಸುವುದಕ್ಕಾಗಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಪ್ರಧಾನಮಂತ್ರಿಯನ್ನು ಹತ್ಯೆಗೈಯುವುದಕ್ಕಾಗಿ 'ರಾಜೀವ್ ಗಾಂಧಿ ರೀತಿಯ' ಕಾರ್ಯಾಚರಣೆಯನ್ನು ಯೋಜಿಸುತ್ತಿರುವ ಬಗ್ಗೆ ವಿವರಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ಪ್ರಚಾರ ಮಾಡಿದವು. ಅದು ಭೀಮಾ ಕೋರೇಗಾಂವ್ ಹಿಂಚಾಚಾರ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಆಯ್ದ ಕೆಲವು ಸುದ್ದಿವಾಹಿನಿಗಳ ಮೂಲಕ ತುಂಬಾ ಪ್ರಚೋದನಕಾರಿಯಾದ, ಆಧಾರರಹಿತವಾದ, ತನಿಖೆಗೊಳಪಡಿಸದ ಮತ್ತು ಸಾಬೀತಾಗದ ಆರೋಪಗಳನ್ನು ಹರಡುವ ಮೂಲಕ ಬಂಧಿತರ ವಿರುದ್ಧ ಪೂವ್ರಗ್ರಹಪೀಡಿತ ಸಾರ್ವಜನಿಕ ಅಭಿಪ್ರಾಯ ರೂಪಿಸುವುದಕ್ಕಾಗಿ ನಡೆಸಿದ ವ್ಯವಸ್ಥಿತ ಷಢ್ಯಂತ್ರವಾಗಿದೆ. ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಎಂದೂ ಹಾಜರುಪಡಿಸದ ಈ ಪತ್ರ ಖೊಟ್ಟಿ ಎಂದು ಈಲ್ಗಾರ್ ಪರಿಷತ್ತಿನ ಸಂಘಟಕರಾದ ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೋಲ್ಸೆ ಪಾಟೀಲ್ ಮತ್ತು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ ಬಿ ಸಾವಂತ್ ಅವರು ಖಂಡಿಸಿದ್ದಾರೆ. ಪ್ರಭುತ್ವ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ದನಿಯೆತ್ತುವಂತೆ ದಮನಿತ ಜನರನ್ನು ಎಲ್ಗಾರ್ ಪರಿಷತ್ತು ಅಣಿಗೊಳಿಸಿದ್ದರಿಂದ ಸರ್ಕಾರಕ್ಕೆ ಹೆದರಿಕೆಯುಂಟಾಗಿದೆ ಎಂದೂ ಅವರು ಹೇಳಿದ್ದಾರೆ. ಜೂನ್‌ನಲ್ಲಿ ಬಂಧಿಸಲಾದ ಐವರು ಆರೋಪಿಗಳೇ ಕೋರೇಗಾಂವ್ ಹಿಂಸಾಚಾರಕ್ಕೆ ಕಾರಣವಾದ ಎಲ್ಗಾರ್ ಪರಿಷತ್ತನ್ನು ಸಂಘಟಿಸಿದ್ದು ಮತ್ತು ಅದಕ್ಕೆ ಹಣಕಾಸು ಒದಗಿಸಿದ್ದು ಎಂದು ಪೊಲೀಸರ ದೂರು ಹೇಳುತ್ತದೆ. ಆದರೆ, ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಆ ಕಾರ್ಯಕ್ರಮ ಆಯೋಜಿಸಿದ್ದು ತಾವು ಎಂದು ಹೇಳಿಕೊಂಡಿದ್ದಾರೆ.
 5. ೨೦೧೮ರ ಆಗಸ್ಟ್ ೨೮ರಂದು, ದೇಶಾದ್ಯಂತ ಮಾನವ ಹಕ್ಕು ಕಾರ್ಯಕರ್ತರು, ವಕೀಲರು ಮತ್ತು ಲೇಖಕರ ಮನೆಗಳ ಮೇಲೆ ಮತ್ತೊಂದು ಸುತ್ತಿನ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ. ದಾಳಿ ಮತ್ತು ಬಂಧನಕ್ಕೊಳಗಾದ ಎಲ್ಲರಲ್ಲೂ ನಡುವಿನ ಒಂದು ಸಮಾನ ಅಂಶವೆಂದರೆ, ಅವರೆಲ್ಲರೂ ಬಡವರ, ತುಳಿತಕ್ಕೊಳಗಾದವರ ಮತ್ತು ದುರ್ಬಲ ವರ್ಗದ ಕಲ್ಯಾಣಕ್ಕಾಗಿ, ಅದರಲ್ಲೂ ನಿರ್ದಿಷ್ಟವಾಗಿ ಆದಿವಾಸಿ ಮತ್ತು ದಲಿತ ಸಮುದಾಯಗಳ ಏಳಿಗೆಗಾಗಿ ದುಡಿಯುತ್ತಿರುವವರು ಹಾಗೂ ಈ ಪ್ರಕ್ರಿಯೆಯಲ್ಲಿ ಪ್ರಭುತ್ವ, ಪೊಲೀಸ್ ಮತ್ತು ಖಾಸಗಿ ಕಾರ್ಪೋರೇಟ್ ಶಕ್ತಿಗಳನ್ನೂ ಒಳಗೊಂಡಂತೆ ಹಲವು ಬಲಾಢ್ಯರ ಕೆಂಗಣ್ಣಿಗೆ ಗುರಿಯಾದವರು. ೨೦೧೮ರ ಆಗಸ್ಟ್ ೨೮ರಂದು ದಾಳಿಗೊಳಗಾದವರಲ್ಲಿ ಯಾರೊಬ್ಬರೂ ಈಲ್ಗಾರ್ ಪರಿಷತ್ತು ೨೦೧೭ರ ಡಿಸೆಂಬರ್ ೩೧ರಂದು ಸಂಘಟಿಸಿದ ಸಮಾವೇಶದಲ್ಲಿ ಇರಲಿಲ್ಲ ಎಂಬುದು ಒಪ್ಪಿತ ಸತ್ಯವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲೂ ಅವರ ಹೆಸರಿಲ್ಲ ಅಥವಾ ಅವರ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪವಿಲ್ಲ ಅಥವಾ ಈ ಎಫ್‌ಐಆರ್‌ನೊಂದಿಗೆ ಅವರಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂಬುದೂ ವಿವಾದಾತೀತ ಸತ್ಯವಾಗಿದೆ. ಪೊಲೀಸರು ಈ ಎಫ್‌ಐಆರ್‌ ಅನ್ನು ತನಿಖಾ ಪ್ರಕ್ರಿಯೆಯನ್ನು ಪ್ರಾರಂಭಿಸುವುದಕ್ಕೆ ಬಳಸುತ್ತಿಲ್ಲ, ಬದಲಿಗೆ ಮಾನವ ಹಕ್ಕುಗಳ ರಕ್ಷಕರನ್ನು ಬಲೆಗೆ ಕೆಡವಲು ಬಳಸಿಕೊಳ್ಳುತ್ತಿದ್ದಾರೆ.
 6. ಬೇಕಾಬಿಟ್ಟಿಯಾಗಿ, ಕಾನೂನುಬಾಹಿರವಾಗಿ ಮತ್ತು ಮನಸೋಯಿಚ್ಛೆ ನಡೆಸಿದ ಈ ಬಂಧನಗಳ ಸ್ವರೂಪದ ಬಗ್ಗೆಯೂ ಬೆಟ್ಟು ಮಾಡಿ ತೋರುವುದು ಸೂಕ್ತ ಎನ್ನಿಸುತ್ತದೆ. ಎಫ್‌ಐಆರ್ ೪/೨೦೧೮ಕ್ಕೂ ಹಾಗೂ ಬಂಧಿತರಾದ ಮತ್ತು ದಾಳಿಗೊಳಗಾದ ಮಾನವ ಹಕ್ಕುಗಳ ರಕ್ಷಕರಿಗೂ ಸಂಬಂಧ ಕಲ್ಪಿಸುವಂತಹ ಯಾವುದೇ ರೀತಿಯ ಆಧಾರಗಳನ್ನು ನೀಡದೆ ಪೊಲೀಸರು, ಮಾನವ ಹಕ್ಕು ರಕ್ಷಕರನ್ನು ಮನಸೋಯಿಚ್ಛೆ ಬಂಧಿಸುವುದಕ್ಕೆ ಈ ಎಫ್‌ಐಆರ್ ಅನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕಿಂತ; ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಗೌತಮ್ ನೌಲಾಖ ಮತ್ತು ಸುಧಾ ಭಾರದ್ವಾಜ್ ಅವರ ಬಂಧನಕ್ಕೆ ಸಂಬಂಧಪಟ್ಟಂತೆ ‘ಸ್ವತಂತ್ರ ಮತ್ತು ಗೌರವಾನ್ವಿತ ವ್ಯಕ್ತಿಗಳು' ಬಂಧನ ಮೆಮೊಗಳನ್ನು ಪ್ರಾಮಾಣಿಕರಿಸಿದ್ದಾರೆ ಎಂದು ತೋರಿಸುವುದಕ್ಕಾಗಿ ಪುಣೆ ಪೊಲೀಸರೇ ಕರೆದುಕೊಂಡು ಬಂದಿದ್ದ ಕೆಲವು ವ್ಯಕ್ತಿಗಳು ಈ ಬಂಧನ ಮೆಮೊಗಳಿಗೆ ಸಹಿ ಮಾಡಿದ್ದಾರೆ ಎಂಬ ವಿಷಯವಿಲ್ಲಿ ಉಲ್ಲೇಖಾರ್ಹ. ಸ್ವಾದೀನಪಡಿಸಿಕೊಂಡ ವಸ್ತುಗಳಿಗೆ ಸಂಬಂಧಪಟ್ಟ ಮೆಮೋಗಳು ಮರಾಠಿ ಭಾಷೆಯಲ್ಲಿದ್ದು, ಅವುಗಳಿಗೂ ಪುಣೆ ಪೊಲೀಸರೊಂದಿಗೆ ಬಂದಿದ್ದ ಪಂಚರೇ ಸಹಿ ಮಾಡಿದ್ದಾರೆ. ಯಾವ ಎಫ್‌ಐಆರ್ ಆಧಾರದಲ್ಲಿ ಈ ಬಂಧನಗಳನ್ನು ಮಾಡಲಾಗಿದೆಯೋ ಆ ಎಫ್‌ಐಆರ್ ಕೂಡ ಮರಾಠಿಯಲ್ಲಿದ್ದು, ಅದರ ಅನುವಾದವನ್ನು ಬಂಧಿತ ಕಾರ್ಯಕರ್ತರಿಗೆ ನೀಡಿಲ್ಲ. ಗೌತಮ್ ನೌಲಾಖ ಆಗಲೀ ಅಥವಾ ಸುಧಾ ಭಾರದ್ವಾಜ್ ಆಗಲೀ ಮರಾಠಿ ಭಾಷೆ ಬಲ್ಲವರಲ್ಲ.
 7. ಈ ರೀತಿಯಲ್ಲಿ ಭಯೋತ್ಪಾದಕರಿಗಾಗಿ ರೂಪಿಸಲಾದ ಕಾನೂನಿನ ಉಗ್ರ ಕಲಮುಗಳ ಅಡಿಯಲ್ಲಿ ಬಂಧಿಸುವ ಮೂಲಕ ಇಂತಹ ಉದಾರ ಮತ್ತು ಪ್ರತಿರೋಧ ದನಿಗಳನ್ನು ಅಡಗಿಸಿದರೆ ಸಾಂವಿಧಾನಾತ್ಮಕತೆ ಮತ್ತು ದೇಶದ ಪ್ರಜಾತಾಂತ್ರಿಕ ಸಂರಚನೆಯೂ ಉಳಿಯುವುದಿಲ್ಲ. ಇವು ಅಪರಾಧಿ ಪ್ರಕರಣಗಳಾಗಿದ್ದು, ಅವುಗಳ ವಿರುದ್ಧ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅವುಗಳ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ ಎಂಬ ಸಾಮಾನ್ಯ ವಾದ ಇಲ್ಲಿ ಅನ್ವಯವಾಗುವುದಿಲ್ಲ; ಏಕೆಂದರೆ, ಈ ಪ್ರಕರಣಗಳಲ್ಲಿ ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಮಹಾರಾಷ್ಟ್ರ ಪೊಲೀಸರಿಗೆ ಮುಖಭಂಗ; ಸಾಮಾಜಿಕ ಕಾರ್ಯಕರ್ತರಿಗೆ ಕೇವಲ ಗೃಹಬಂಧನ

ಆಧಾರಗಳು

 1. ಏಕೆಂದರೆ, ಈ ಚಿರಪರಿಚಿತ ಮಾನವ ಹಕ್ಕು ಕಾರ್ಯಕರ್ತರು ಮತ್ತು ಆಡಳಿತರೂಢ ಪಕ್ಷಕ್ಕಿಂತ ಭಿನ್ನ ವಿಚಾರಧಾರೆ ಹೊಂದಿರುವವರು. ಭೀಮಾ ಕೋರೇಗಾಂವ್ ಘಟನೆಗಳಲ್ಲಿ ಭಾಗವಹಿಸದೆ ಇದ್ದರೂ ಹಾಗೂ ಆ ಘಟನೆಗಳೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಅವರನ್ನು ಆ ಘಟನೆಗಳ ತನಿಖೆಯ ಭಾಗವಾಗಿ ಬಂಧಿಸಿರುವುದು ದುರುದ್ದೇಶದಿಂದ ಕೂಡಿರುವುದು ಮಾತ್ರವಲ್ಲ, ದೇಶದಲ್ಲಿ ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವುದು ಹಾಗೂ ಮಾನವ ಹಕ್ಕು ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನವೂ ಆಗಿರುವುದು ಸ್ಪಷ್ಟವಾಗಿದೆ. ಈ ಬಂಧನಗಳು ಮತ್ತು ದಾಳಿಗಳು ಭಾರತದ ಸಂವಿಧಾನದ ೧೪ ಮತ್ತು ೨೧ನೇ ವಿಧಿಗಳಲ್ಲಿ ಎಲ್ಲ ಕಾನೂನುಪಾಲಕ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ.
 2. ಏಕೆಂದರೆ, ಯಾವುದೇ ರೀತಿಯ ಹಿಂಸೆಯಲ್ಲಿ ಪಾಲ್ಗೊಂಡಿರುವ ಅಥವಾ ಯಾವುದೇ ರೀತಿಯ ಹಿಂಸೆಯನ್ನು ಪ್ರಚೋದಿಸಿದ ಚರಿತ್ರೆಯಿಲ್ಲದ ಈ ಶಾಂತಿಪ್ರಿಯ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಬಳಸುವುದು ದುರುದ್ದೇಶಪೂರ್ವಕ ಆಗಿದೆಯಲ್ಲದೆ, ಈ ಕಾರ್ಯಕರ್ತರನ್ನು ಮತ್ತು ಅಂತಹ ಇತರ ನಾಗರಿಕರನ್ನು ಹೆದರಿಸಿ ಅವರಲ್ಲಿ ಭೀತಿ ಉಂಟುಮಾಡುವ ಪ್ರಯತ್ನವೂ ಆಗಿದೆ. ಕಾನೂನು ಪ್ರಕ್ರಿಯೆಯನ್ನು ಅತಾರ್ಕಿಕ ರೀತಿಯಲ್ಲಿ ಬಳಸುವ ಮತ್ತು ದುರ್ಬಳಕೆ ಮಾಡುವ ಮೂಲಕ ರಾಜಕೀಯ ಮತ್ತು ಸೈದ್ಧಾಂತಿಕ ಎದುರಾಳಿಗಳನ್ನು/ ವಿರೋಧಿಗಳನ್ನು ಗುರಿಮಾಡಿ ಶಿಕ್ಷೆಗೊಳಪಡಿಸುವುದು ನಮ್ಮ ಸಮಾಜದ ’ಕಾನೂನಿನಾಡಳಿತ’ದ ಮೂಲ ತತ್ವಗಳಿಗೆ ವಿರುದ್ಧವಾದುದು. ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳನ್ನು ಪ್ರಭುತ್ವವೇ ದಮನ ಮಾಡುವುದು ಭಾರತದ ಸಂವಿಧಾನದಡಿಯಲ್ಲಿ ವ್ಯಕ್ತಿಗಳಿಗೆ ನೀಡಲಾಗಿರುವ ಹಕ್ಕುಗಳ ಉಲ್ಲಂಘನೆಯಲ್ಲದೆ, ೧೯೭೬ರಲ್ಲಿ ಭಾರತವು ಒಪ್ಪಿಕೊಂಡ 'ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಒಡಂಬಡಿಕೆ'ಯನ್ನೂ ಒಳಗೊಂಡಂತೆ ಅಂತಾರಾಷ್ಟ್ರೀಯ ಮಾನವ ಹಕ್ಕು ಕಾನೂನುಗಳ ಉಲ್ಲಂಘನೆಯೂ ಆಗಿದೆ.
 3. ಏಕೆಂದರೆ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಂತಹ ವಿಶೇಷ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಮನಬಂದಂತೆ ದುರ್ಬಳಕೆ ಮಾಡಿಕೊಂಡು ಬಂಧಿಸುವ ಮೂಲಕ ವಾಕ್‌ ಸ್ವಾತಂತ್ರ್ಯ, ಭಿನ್ನಮತ ಮತ್ತು ರಾಜಕೀಯ ಅಭಿವ್ಯಕ್ತಿಯನ್ನು ಹತ್ತಿಕ್ಕುವುದು ಬಂಧಿತ ವ್ಯಕ್ತಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಷ್ಟೇ ಆಗುವುದಿಲ್ಲ; ಜೊತೆಗೆ, ಅದು ಎಲ್ಲ ನಾಗರಿಕರ ಮೇಲೆಯೂ ದುಷ್ಪರಿಣಾಮ ಬೀರಲಿದ್ದು, ಅವರು ತಮ್ಮ ಜೀವ ಮತ್ತು ಸ್ವಾತಂತ್ರ್ಯಗಳಿಗೆ ಎದುರಾಗಲಿರುವ ಅಪಾಯಗಳಿಗೆ ಹೆದರಿ ತಮಗೆ ಸಂವಿಧಾನದ ೧೯ ಮತ್ತು ೨೧ನೇ ವಿಧಿಗಳಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಪೂರ್ಣವಾಗಿ ಅನುಭವಿಸುವುದಕ್ಕೂ ಆಗದಿರುವ ಪರಿಸ್ಥಿತಿ ಉಂಟಾಗುತ್ತದೆ.
 4. ಏಕೆಂದರೆ, ಎಲ್ಲ ಬಂಧಿತ ವ್ಯಕ್ತಿಗಳು ಗೌರವಾನ್ವಿತರೂ ಹಾಗೂ ಸಮಾಜದ ಮಹತ್ವದ ವ್ಯಕ್ತಿಗಳಾಗಿದ್ದು, ಅವರನ್ನು ಬಂಧನದಲ್ಲಿರಿಸಬೇಕಾದ ಅವಶ್ಯಕತೆ ಇಲ್ಲ. ಬಂಧನವು ಕಟ್ಟಕಡೆಯ ಆಯ್ಕೆಯಾಗಿರಬೇಕೇ ಹೊರತು ಅದನ್ನು ಸಂವಿಧಾನದ ೨೧ನೇ ವಿಧಿಯಡಿಯಲ್ಲಿ ಖಾತ್ರಿಪಡಿಸಲಾಗಿರುವ ವ್ಯಕ್ತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಗಳನ್ನು ನಿರಾಕರಿಸುವುದಕ್ಕೆ ಮನಸೋಯಿಚ್ಚೆ ಬಳಸಬಾರದು ಎಂಬುದು ನಿರ್ವಿವಾದಿತವಾಗಿ ಒಪ್ಪಿತವಾದ ಅಂಶವಾಗಿದೆ. ಡಾ.ಸುಭಾಷ್ ಕಾಶಿನಾಥ್ ಮಹಾಜನ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಮೊಕದ್ದಮೆಯಲ್ಲಿ [(೨೦೧೮) ೬ Sಅಅ ೪೫೪] ಇದನ್ನು ಹೇಳಲಾಗಿದೆ.

ಮನವಿ

ಆದ್ದರಿಂದ ಮಾನ್ಯ ನ್ಯಾಯಾಲಯವು ಕೆಳಗಿನ ಮನವಿಗಳನ್ನು ಪರಿಗಣಿಸಬೇಕಾಗಿ ವಿನಂತಿ:

 • ಭೀಮಾ ಕೋರೇಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ೨೦೧೮ರ ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಸಲಾದ ಈ ಮಾನವ ಹಕ್ಕು ಕಾರ್ಯಕರ್ತರ ಬಂಧನಗಳ ಬಗ್ಗೆ ಸ್ವತಂತ್ರವಾದ ಮತ್ತು ಸಮಗ್ರವಾದ ತನಿಖೆ ನಡೆಸುವುದಕ್ಕೆ ಸೂಕ್ತ ಆಜ್ಞೆ, ಆದೇಶ ಅಥವಾ ನಿರ್ದೇಶನ ನೀಡುವುದು.
 • ಈ ಸಾರಾಸಗಟು ಬಂಧನ ಸರಣಿಗಳ ಕುರಿತು ಮಹಾರಾಷ್ಟ್ರ ಸರ್ಕಾರದಿಂದ ವಿವರಣೆ ಕೇಳುವುದಕ್ಕಾಗಿ ಸೂಕ್ತ ಆಜ್ಞೆ, ಆದೇಶ ಅಥವಾ ನಿರ್ದೇಶನ ನೀಡುವುದು.
 • ಭೀಮಾ ಕೋರೇಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಎಲ್ಲ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡುವುದಕ್ಕಾಗಿ ಹಾಗೂ ಈ ಪ್ರಕರಣದ ತನಿಖೆ ಪೂರ್ಣವಾಗಿ ನ್ಯಾಯಾಲಯದ ತೀರ್ಪು ಹೊರಬೀಳುವ ತನಕ ಯಾವುದೇ ಬಂಧನಗಳಾಗದಂತೆ ತಡೆಯುವುದಕ್ಕಾಗಿ ಸೂಕ್ತ ಆಜ್ಞೆ, ಆದೇಶ ಅಥವಾ ನಿರ್ದೇಶನ ನೀಡುವುದು.
 • ನ್ಯಾಯಾಲಯಕ್ಕೆ ಸೂಕ್ತವೆನಿಸುವ ಇನ್ಯಾವುದೇ ರೀತಿಯ ಆದೇಶಗಳನ್ನು ನೀಡುವುದು.

ಅರ್ಜಿದಾರರ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರ ಮೂಲಕ ನವದೆಹಲಿಯಲ್ಲಿ ೨೦೧೮ರ ಆಗಸ್ಟ್ ೨೮ರಂದು ಬರೆಸಿ ಸಲ್ಲಿಸಿದ ಅರ್ಜಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More