ವಾಟ್ಸ್ಆ್ಯಪ್ ಹೇಳಿದ್ದಷ್ಟೇ ನಿಜವಲ್ಲ; ಮಕ್ಕಳ ನಾಪತ್ತೆಗೆ ಹಲವು ಕಾರಣಗಳಿವೆ!

ಮಕ್ಕಳ ನಾಪತ್ತೆ ವದಂತಿ ಅನೇಕ ಮುಗ್ಧರನ್ನು ಬಲಿ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಅದು ನಿಜಕ್ಕೂ ಅಪಹರಣವೇ, ನಾಪತ್ತೆಯೇ ಎನ್ನುವ ಸಂಶಯಗಳೂ ಇವೆ. ಅಪಹರಣಕ್ಕೆ ಇರುವ ಹಲವು ಕಾರಣಗಳ ಕುರಿತು ವಿಶ್ಲೇಷಣೆ ಮಾಡಿರುವ ‘ದಿ ಹಿಂದೂ’ ಲೇಖನದ ಭಾವಾನುವಾದ ಇಲ್ಲಿದೆ

ಶೆಹಜಾದಿ ಮಲಿಕ್ ತಮ್ಮ ಫೋನ್‌ನಲ್ಲಿರುವ ಏಳು ನಿಮಿಷಗಳ ಆ ವೀಡಿಯೊ ತುಣಕನ್ನು ನೂರಾರು ಬಾರಿ ನೋಡಿದ್ದಾರೆ. ಕೆಲವು ಬಾರಿ ಏನಾದರೂ ಸುಳಿವು ಸಿಕ್ಕೀತೇ ಎಂದು, ಮತ್ತೆ ಕೆಲವು ಭಾರಿ ಯಾವುದೇ ಭರವಸೆ ಇಲ್ಲದೆ, ಇನ್ನೊಂದಷ್ಟು ಬಾರಿ ಅದರಲ್ಲಿರುವ ತಮ್ಮ 9 ವರ್ಷದ ಮಗ ಕಬೀರನನ್ನು ಸುಮ್ಮನೆ ನೋಡುವ ಸಲುವಾಗಿ. ಈ ವೀಡಿಯೊ ತುಣುಕನ್ನು ಪೆನ್‌ಡ್ರೈವ್‌ನಲ್ಲಿಟ್ಟು ಪೊಲೀಸರು ಆಕೆಗೆ ತಲುಪಿಸಿದ್ದರು. ಅದರಲ್ಲಿರುವುದು ಮೇ 11ರಿಂದ ನಾಪತ್ತೆಯಾಗಿರುವ ಅವರ ಮಗನ ಕೊನೆಯ ದೃಶ್ಯ;
ದೆಹಲಿಯ ನಿಜಾಮುದ್ದೀನ್ ಕಾಲನಿಯಲ್ಲಿ ಟ್ಯೂಷನ್ ಮುಗಿಸಿ ಕಬೀರ್ ವಾಪಸಾಗುತ್ತಿರುವ ದೃಶ್ಯ ಅದು.

ವಿಡಿಯೋದಲ್ಲಿ ದಾಖಲಾಗಿರುವಂತೆ ಸಮಯ ಮಧ್ಯಾಹ್ನ 2.25. ಕೆಂಪು ಮತ್ತು ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ಅವನ ಹೆಗಲಿಗೆ ಇದೆ. ತುಸು ಜೋರಾಗಿಯೇ ಹೆಜ್ಜೆ ಹಾಕುತ್ತಿದ್ದಾನೆ. ಆದರೆ, ಅವನಲ್ಲಿ ಯಾವುದೇ ಆತುರ ಕಾಣುತ್ತಿಲ್ಲ. ಎಡಗೈಯಲ್ಲಿರುವ ಬಟ್ಟಲಿನಂಥಹುದೇನೋ ಪಾತ್ರೆಗೆ ಕೆಳಗೆ ಬಿದ್ದ ನಾಣ್ಯವನ್ನೋ ಕಲ್ಲಿನ ಹರಳನ್ನೋ ಹಾಕಿಕೊಳ್ಳಲು ಯತ್ನಿಸುತ್ತಿದ್ದಾನೆ. ಆದರೆ, ಇದ್ದಕ್ಕಿದ್ದಂತೆ ಸಮೀಪದ ಅಶೋಕ ಮರಗಳ ನಡುವೆ ಮರೆಯಾಗುತ್ತಾನೆ. ಅಲ್ಲಿಗೆ ವೀಡಿಯೊ ಮುಕ್ತಾಯವಾಗುತ್ತದೆ. “ಮರದ ಹಿಂದೆ ನಿಂತಿರುವುದು ನಿಮಗೇನಾದರೂ ಕಾಣುತ್ತದೆಯೇ?” ಎನ್ನುತ್ತ ಮಲಿಕ್ ಕೇಳಿದರು. ಪೋನ್ ಪರದೆಯ ಮೂಲೆಯೊಂದರಲ್ಲಿ ಕಾಣುತ್ತಿರುವಂತೆ ಎಲೆಗಳ ಮಧ್ಯೆ ಅವನ ಕಪ್ಪು ಪ್ಯಾಂಟ್ ಗೋಚರಿಸುತ್ತಿದೆ. “ಬಹುಶಃ ಅವನು ಯಾರಿಗಾಗಿಯೋ ಅಲ್ಲಿ ಕಾಯುತ್ತಿರಬಹುದು ಅಥವಾ ಯಾರೊಂದಿಗೋ ಮಾತನಾಡುತ್ತಿರಬಹುದು. ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಹುಡುಗ. ನಮ್ಮ ಏರಿಯಾದಲ್ಲಿದ್ದ ಎಲ್ಲರೊಟ್ಟಿಗೆ ಮಾತನಾಡ್ತಾ ಇದ್ದ,” ಎಂದರು ಆಕೆ.

ಹುಡುಗ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಸ್ಥಳದಿಂದ ಕೆಲವು ಕಿಮೀ ದೂರದ ಸಾರ ಕಲೇ ಖಾನ್ ಗ್ರಾಮದ ಒಂದೇ ಕೊಠಡಿ ಹೊಂದಿರುವ ಮನೆಯಲ್ಲಿ ಹುಡುಕಾಟ ನಡೆಸಿದ್ದರು ಮಲಿಕ್. ಸ್ಥಳೀಯರ ಸಹಾಯ ಪಡೆದು ಮಗು ನಾಪತ್ತೆಯಾಗಿರುವ ವಿವರ ಹೊಂದಿದ ಪೋಸ್ಟರ್‌ಗಳನ್ನು, ಎಫ್‌ಐಆರ್ ವಿವರಗಳನ್ನು ಆ ಹಳ್ಳಿಯ ಗೋಡೆಗಳಿಗೆ ಅಂಟಿಸಿ ಬಂದಿದ್ದರು. ಮೊದಮೊದಲು ಪೊಲೀಸರು ಕೂಡ ಸಹಾಯ ಮಾಡಿದರು. ತಾವೇ ಸ್ವತಃ ಪೋಸ್ಟರ್ ಹಚ್ಚಿದರು. ಅಲ್ಲದೆ ಆಸ್ಪತ್ರೆ, ಮಕ್ಕಳ ಆಶ್ರಮ, ಚರಂಡಿಗಳಲ್ಲಿ ಕೂಡ ಹುಡುಕಾಟ ನಡೆಸಿದವು ಎಂದರು.

"ಪೋಲಿಸರು ಈಗಲೂ ಹುಡುಕುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ಮೊದಲು ಹುಡುಕಾಡಿದ್ದು ಬಿಟ್ಟರೆ ಈಗ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಮಗುವನ್ನು ಅಪಹರಿಸುವಂತಹ ವೈರಿಗಳು ಯಾರಾದರೂ ಇದ್ದರೇ? ಎಂದು ನಮ್ಮನ್ನು ಕೇಳುತ್ತಿದ್ದಾರೆ,” ಎಂದು ಹೇಳಿದರು. ಪೊಲೀಸರಿಂದ ಏನೂ ಉಪಯೋಗವಾಗುವುದಿಲ್ಲ ಎಂದು ತಿಳಿದಾಗ ಸ್ವತಃ ಮಲಿಕ್ ಗಂಡ, ವೃತ್ತಿಯಿಂದ ಮೆಕಾನಿಕ್ ಆಗಿರುವ ಅಮಿನ್ ಪೋಸ್ಟರ್‌ಗಳನ್ನು ಹಿಡಿದು ಮನೆಮನೆಗೆ ಅಲೆದರು. ನೆರೆಹೊರೆ ಮಾತ್ರವಲ್ಲದೆ ಪಕ್ಕದ ಗುರುಗ್ರಾಮ, ಘಾಜಿಯಾಬಾದ್ ಹಾಗೂ ನೋಯ್ಡಾದಲ್ಲಿ ಹುಡುಕಾಡಿದರು. ಜ್ಯೋತಿಷಿಗಳು ಹೇಳಿದಂತೆ ಅಲಿಘಡ ಮತ್ತು ಮಥುರಾಕ್ಕೂ ಹೋಗಿಬಂದರು. ಆದರೂ ಮಗುವಿನ ಸುಳಿವಿಲ್ಲ. ಇಷ್ಟಾದರೂ, ಎಷ್ಟೇ ದೂರದ ಸ್ಥಳವಾದರೂ ಹುಡುಕಾಟ ಮುಂದುವರಿದಿದೆ. “ಕನಿಷ್ಠ ಮನಶಾಂತಿಗಾದರೂ ಹುಡುಕಾಟ ನಡೆಸಬೇಕಿದೆ,” ಎನ್ನುತ್ತಾರವರು.

ಇದೆಲ್ಲದರ ಮಧ್ಯೆ ತನಿಖೆಗೂ ನೆರವಾಗದ, ಅಮಿನ್‌ಗೆ ಮನಃಶಾಂತಿಯನ್ನೂ ನೀಡದಂತಹ ವೀಡಿಯೊ ಒಂದು ಅವರ ವಾಟ್ಸ್ಆ್ಯಪ್ ನಂಬರಿಗೆ ಹರಿದುಬಂದಿದೆ. ಅದರಲ್ಲಿ ಮಕ್ಕಳ ಕಳ್ಳಿ ಎನ್ನಲಾದ ವ್ಯಕ್ತಿಯೊಬ್ಬರ ಚಿತ್ರಣವಿದೆ. ಯಾರೋ ಹೇಳಿ ಕಳುಹಿಸಿದಂತೆ ಹೆಜ್ಜೆ ಹಾಕುತ್ತಿರುವ, ಕಪ್ಪು ಕನ್ನಡಕ ಧರಿಸಿರುವ ಆಕೆ ಬಸ್ ನಿಲ್ದಾಣ, ಓಣಿಗಳಂತಹ ಜಾಗದಲ್ಲಿ ನಿಂತು ಮಕ್ಕಳಿಗೆ ಅಮಲು ಬರಿಸುವ ಚಾಕೊಲೆಟ್ ನೀಡಿ ಅಪಹರಿಸುತ್ತಿರುವ ದೃಶ್ಯ ಅದು.

ಕಬೀರನ ಕತೆ ಏನಾಯಿತು ಎಂದು ನಮಗೆ ತಿಳಿಯದಿರಬಹುದು. ಆದರೆ, ಅವನೀಗ ದೇಶಾದ್ಯಂತ ನಾಪತ್ತೆಯಾಗಿರುವ ಮಕ್ಕಳ ಅಂಕಿ-ಸಂಖ್ಯೆಗೆ ಮತ್ತೊಂದು ಸೇರ್ಪಡೆಯಾಗಿದ್ದಾನೆ. ರಾಷ್ಟ್ರೀಯ ಅಪರಾಧ ದಾಖಲೆಗಳು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಸರಾಸರಿ ಪ್ರತಿದಿನ 174 ಮಕ್ಕಳಂತೆ 2016ರಲ್ಲಿ 63,407 ಮಕ್ಕಳು ಕಾಣೆಯಾಗಿದ್ದಾರೆ. ಇನ್ನೂ ಆತಂಕಕಾರಿ ವಿಚಾರ ಎಂದರೆ, 2016ರಲ್ಲಿ ಕಾಣೆಯಾದ ಶೇ.50ರಷ್ಟು ಮಕ್ಕಳು ಇನ್ನೂ ಪತ್ತೆಯಾಗಿಲ್ಲ.

ಆದರೆ, ಈ ಅಂಕಿ-ಅಂಶಗಳಾಚೆಗಿನ ಕತೆಗಳು ಗೋಜಲುಗಳಿಂದ ಕೂಡಿವೆ. ಕೆಲವೊಮ್ಮೆ ಕೆಟ್ಟ ಪರಿಣಾಮ ಬೀರುವಂತಿವೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿರುವ ಶಸ್ತ್ರಧಾರಿ ಗುಂಪು ಅಥವಾ ಅಲೆಮಾರಿಗಳನ್ನು ಕುರಿತ ‘ಮಕ್ಕಳ ಅಪಹರಣ’ ವದಂತಿಗಿಂತಲೂ ಭಿನ್ನವಾಗಿವೆ. ತನ್ನನ್ನು ಅಪಹರಿಸಲಾಗುತ್ತದೆ ಎಂಬ ಅರಿವಿಲ್ಲದೆಯೇ 14 ವರ್ಷದ ಹುಡುಗಿಯೊಬ್ಬಳು ಗೆಳೆಯನೊಂದಿಗೆ ಓಡಿಹೋಗಿರಬಹುದು ಅಥವಾ 17 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಹೋದಾಗಲೂ ಅದನ್ನು ಅವರ ಮನೆಯವರು ಅಪಹರಣ ಎಂದು ಬಿಂಬಿಸಿದ್ದಿರಬಹುದು. ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕಾರ್ಖಾನೆಗಳಲ್ಲಿ ಅಮಾನುಷವಾಗಿ ದುಡಿಮೆಗೆ ಹಚ್ಚುವ ನೆರೆಹೊರೆಯವರಿರಬಹುದು. ಅಪ್ಪನ ಬೈಗುಳ ತಾಳಲಾರದೆ ಸ್ವತಃ ಮಗ ತಪ್ಪಿಸಿಕೊಂಡಿರಬಹುದು ಅಥವಾ ತನ್ನ ನೆಚ್ಚಿನ ನಟನನ್ನು ಕಣ್ಣಾರೆ ಕಾಣಲು ನಗರಗಳತ್ತ ತೆರಳಿರಬಹುದು.

2016ರ ಮೇ ತಿಂಗಳು. ಬಿಹಾರದ ಕತಿಹಾರ್ ಜಿಲ್ಲೆಯ ರಘುನಾಥಪುರ ಗ್ರಾಮದಲ್ಲಿ ಹನ್ನೆರಡು ವರ್ಷದ ಸಲೀಂ ಎಂಬಾತನನ್ನು ತನ್ನ ನೆರೆಹೊರೆಯವರೇ ಅಪಹರಿಸಿದರು. ಸಲೀಂಗೆ ಹಳೆ ದೆಹಲಿಯ ಆಭರಣದಂಗಡಿಯಲ್ಲಿ ಕೆಲಸ ಕೊಡುವುದಾಗಿ, ವಿದ್ಯಾಭ್ಯಾಸದ ಜವಾಬ್ದಾರಿ ನೋಡಿಕೊಳ್ಳುವುದಾಗಿ ಹೇಳಿ ವ್ಯಕ್ತಿಯೊಬ್ಬ ಕರೆದೊಯ್ದ. ಸಲೀಂ ತಂದೆ ಬಶೀರ್ ಅವರು ಗುರುಗ್ರಾಮದಲ್ಲಿ ಕಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಬಳಿಕ ಸಲೀಂ ಮತ್ತು ಆತನನ್ನು ಕರೆದುಕೊಂಡು ಹೋಗಿದ್ದಾತ ನಾಪತ್ತೆ ಆಗಿರುವುದು ಬೆಳಕಿಗೆ ಬಂತು. ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು. ಅನುಮಾನ ಇರುವ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ವಿವರಿಸಿದರು ಬಶೀರ್. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ನೆರೆಯ ಮನೆಯವರು ಕೇಸು ವಾಪಸ್ ಪಡೆಯುವಂತೆ ಹಣದ ಆಮಿಷ ಒಡ್ಡಿದರು. ಆದರೆ, ಬಶೀರ್ ಒಪ್ಪಲಿಲ್ಲ. ನಮ್ಮ ಹುಡುಗ ನಮಗೆ ಬೇಕಷ್ಟೇ ಎಂದು ಹೇಳಿದರು. ಆದರೆ, ತನಿಖೆ ಯಾವುದೇ ಪ್ರಗತಿ ಕಾಣಲಿಲ್ಲ. ಅಲ್ಲದೆ, “ಹಣ ತೆಗೆದುಕೊಂಡು ಪ್ರಕರಣ ಹಿಂತೆಗೆದುಕೊಳ್ಳುವಂತೆ ಪೊಲೀಸರು ಕೂಡ ನಮ್ಮನ್ನು ಕೇಳಿದರು,” ಎನ್ನುತ್ತಾರೆ ಬಶೀರ್. ನಂತರ ಅವರು ತಮ್ಮ ಕೆಲಸ ತೊರೆದು ದೆಹಲಿಯ ಮೂಲೆಮೂಲೆಯಲ್ಲಿ ಮಗನಿಗಾಗಿ ಹುಡುಕಿದರು.

ದೆಹಲಿ ಮೂಲದ ಬಚಪನ್ ಬಚಾವೋ ಆಂದೋಲನ್ (ಬಿಬಿಎ) ಎಂಬ ಸರ್ಕಾರೇತರ ಸಂಸ್ಥೆ ಮಧ್ಯಪ್ರವೇಶಿಸಿದ ಮೇಲೆ ಪೊಲೀಸರು ಬಶೀರ್ ಹುಡುಕಾಟಕ್ಕೆ ಮುಂದಾದರು. ಆ ವರ್ಷ ಸಂಸ್ಥೆ ಹಾಗೂ ಪೊಲೀಸರು ಸೇರಿ ಸಣ್ಣ-ಸಣ್ಣ ವರ್ಕ್‌ಶಾಪ್‌ಗಳಲ್ಲಿ ದುಡಿಯುತ್ತಿದ್ದ 16 ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅದರಲ್ಲಿ ಪಕ್ಕದ ಮನೆಯ ವ್ಯಕ್ತಿ ಸಿಕ್ಕರೂ ಸಲೀಂ ಸಿಗಲಿಲ್ಲ. ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭವಾಯಿತು. 20 ರಾಜ್ಯಗಳ ಮಕ್ಕಳ ಕೇಂದ್ರಗಳಿಗೆ ಸಲೀಂ ಭಾವಚಿತ್ರ ರವಾನಿಸಲಾಯಿತು. ಕಡೆಗೆ, ಈ ವರ್ಷದ ಮಾರ್ಚ್‌ನಲ್ಲಿ ಸಲೀಂ ಹರ್ಯಾಣದ ದರ್ಗಾವೊಂದರಲ್ಲಿ ಪತ್ತೆಯಾದ.

ಅವನೀಗ ಹೆತ್ತವರೊಂದಿಗೆ ಇದ್ದಾನೆ. ಆದರೆ ತನಗಾದ ಅನುಭವ ಅವನನ್ನು ಮಾನಸಿಕವಾಗಿ ಘಾಸಿಗೊಳಿಸಿದೆ. ಇತರ ಮಕ್ಕಳನ್ನು ಹೊಡೆಯುತ್ತಿದ್ದರು ಎಂದು ಹೇಳಿದ್ದು ಬಿಟ್ಟರೆ, ಅವನು ಹರಿದ್ವಾರ ತಲುಪಿದ್ದು ಹೇಗೆ ಎಂಬುದಾಗಲೀ, ಯಾರು ತನ್ನನ್ನು ದುಡಿಮೆಗೆ ಹಚ್ಚಿದ್ದು ಎಂಬುದನ್ನಾಗಲೀ ಹೇಳುತ್ತಿಲ್ಲ. ಬಶೀರ್ ಹೇಳಿದಂತೆ, ಸಲೀಂ ತಾಯಿ ಆತನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದಾರೆ. ಏಕೆಂದರೆ, ಪೋಷಕರ ಬಳಿ ಹೆಚ್ಚು ಮಾತನಾಡುವ ಸ್ಥಿತಿಯಲ್ಲಿ ಅವನಿರಲಿಲ್ಲ.

ಅದೃಷ್ಟವಶಾತ್ ಸಲೀಂನನ್ನು ರಕ್ಷಿಸಲಾಯಿತು. ಚೈಲ್ಡ್ ರೈಟ್ಸ್ ಅಂಡ್ ಯು (ಕ್ರೈ) ಸಂಸ್ಥೆಯ ಸೋಹಾ ಮೋಯ್ತ್ರಾ ಹೇಳುವಂತೆ, “ಪೊಲೀಸರು ತನಿಖೆ ನಡೆಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮಕ್ಕಳು ಮರಳಿ ಸಿಗುವ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಮಾನವ ಕಳ್ಳಸಾಗಾಣಿಕೆ ಎಂಬುದು ವ್ಯವಸ್ಥಿತ ವ್ಯೂಹವಾಗಿದ್ದು, ಮಗು ಕೈಯಿಂದ ಕೈಗೆ ಬದಲಾಗುತ್ತಲೇ ಇರುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೂ ಕಳಿಸಲಾಗುತ್ತದೆ. ಮಗು ಅಪಹರಣಕ್ಕೀಡಾದ ದೂರು ಬರುತ್ತಿದ್ದಂತೆ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂಬ 2013ರ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಪೊಲೀಸರು ದೊಡ್ಡಮಟ್ಟದಲ್ಲಿ ಹಿಂಜರಿಯುತ್ತಾರೆ. ಕುಟುಂಬದವರಿಗೆ, ‘ನಿಮ್ಮ ಮಕ್ಕಳು ಓಡಿಹೋಗಿದ್ದಾರೆ, ತನಿಖೆಗೂ ಮೊದಲೇ ಮಗು ಬಂದರೂ ಬರಬಹುದು’ ಎಂಬ ಸಬೂಬು ನೀಡಿ ನಾಪತ್ತೆ ಪ್ರಕರಣಗಳನ್ನು ಮುಚ್ಚಿಹಾಕುವುದೇ ಹೆಚ್ಚು.”

ಇದನ್ನೂ ಓದಿ : ಮಕ್ಕಳ ಕಳ್ಳರ ಕುರಿತ ಸುಳ್ಳು ಸುದ್ದಿಗೆ ಬಲಿಯಾಗಿದ್ದು 20 ಮಂದಿ ಅಮಾಯಕರು!

ಅಪಹರಣಕ್ಕೀಡಾದ ಎಂಟು ತಿಂಗಳ ಬಳಿಕ 14 ವರ್ಷದ ಮೇಘನಾ ಎಂಬಾಕೆಯನ್ನು ರಕ್ಷಿಸಿ ಕರೆತಂದಾಗ ಆಕೆ 22 ವಾರಗಳ ಗರ್ಭಿಣಿಯಾಗಿದ್ದಳು. ಆಕೆಯ ಬಳಿ ಇದ್ದ ಮೊಬೈಲ್‌ನಿಂದಾಗಿ ಉತ್ತರ ಪ್ರದೇಶದ ಚಂದಾಪುರದಿಂದ ಅವಳನ್ನು ರಕ್ಷಿಸಿ ಕರೆತರುವುದು ಸಾಧ್ಯವಾಯಿತು. ಮೇಘನಾ, ಮಹಾರಾಷ್ಟ್ರದ ಕಲ್ಯಾಣ್ ಪಟ್ಟಣದವಳು. ತನ್ನ ತಂದೆ ಕೆಲಸ ಮಾಡುತ್ತಿದ್ದ ಹೋಟೆಲಿಗೆ ದಿನವೂ ಬರುತ್ತಿದ್ದ 23 ವರ್ಷದ ತರುಣನೊಬ್ಬ ಆಕೆಯನ್ನು ಅಪಹರಿಸಿದ್ದ. ಇಬ್ಬರ ನಡುವೆ ಮಾತುಕತೆ ಆರಂಭವಾದ ಕೆಲ ದಿನಗಳ ಬಳಿಕ ಹೊರಗೆ ಸುತ್ತಾಡಿ ಬರೋಣ ಎಂದು ಆತ ಅವಳನ್ನು ಕರೆದೊಯ್ದಿದ್ದ. ಮದುವೆಯಾಗುವ ಭರವಸೆ ನೀಡಿದ್ದನೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. “ನಿನ್ನನ್ನು ಒಳ್ಳೆ ಶಾಲೆಗೆ ಸೇರಿಸುತ್ತೇನೆ,” ಎಂದು ಆತ ಹೇಳುತ್ತಿದ್ದ ಎಂಬುದಷ್ಟೇ ಮೇಘನಾಳಿಂದ ಸಿಕ್ಕ ವಿವರ.

ಕಳೆದ ವರ್ಷ ಜುಲೈನಲ್ಲಿ ಆಕೆ ಆತನೊಂದಿಗೆ ರೈಲು ಹತ್ತಿದಳು. ಅದು ಅವಳ ದುಸ್ವಪ್ನದ ಮುನ್ನುಡಿ ಎಂಬಂತಿತ್ತು. ತನ್ನ ಕುಟುಂಬಸ್ಥರಿದ್ದ ಮನೆಗೆ ಕರೆದೊಯ್ದ ಆತ, ಮೇಘನಾಳನ್ನು ಅಲ್ಲಿ ಕೂಡಿ ಹಾಕಿದ. “ಆತ ನನಗೆ ಹೊಡೆಯುತ್ತಿದ್ದ. ಪ್ರತಿದಿನ ಅತ್ಯಾಚಾರ ಎಸಗುತ್ತಿದ್ದ. ಮನೆಯಿಂದ ಹೊರಬರಲು ಬಿಡುತ್ತಿರಲಿಲ್ಲ,” ಎನ್ನುತ್ತಾಳೆ ಆಕೆ. ಇದಕ್ಕೂ ಮುನ್ನ, ಆಕೆಯ ತಂದೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂಥದ್ದೇ ವ್ಯಕ್ತಿಯ ಬಗ್ಗೆ ಅನುಮಾನಗಳಿವೆ ಎಂದು ಕೂಡ ಹೇಳಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೇಘನಾ ಬಳಿಯಿದ್ದ ಫೋನ್ ಆಕೆಯನ್ನು ರಕ್ಷಿಸಿತು. ಚಿಕ್ಕಮ್ಮನಿಗೆ ಹೇಗೋ ಕರೆ ಮಾಡಿದ ಆಕೆ, ಎಲ್ಲ ವಿಷಯವನ್ನೂ ಹೇಳಿಕೊಂಡಳು. ನಂತರ ಆಕೆಯನ್ನು ಪತ್ತೆಹಚ್ಚಲಾಯಿತು. ಈ ಮಧ್ಯೆ ಆಕೆಗೆ ಗರ್ಭಪಾತವಾಯಿತು. “ನಾನೀಗ ಶಾಲೆಗೆ ಹೋಗಲು ಬಯಸುತ್ತೇನೆ,” ಎನ್ನುತ್ತಾಳೆ ಮೇಘನಾ.

2016ರಲ್ಲಿ ಅಪಹರಣಕ್ಕೀಡಾದ 54,328 ಮಕ್ಕಳು (ಶೇ.66) 12ರಿಂದ 18 ವರ್ಷದವು. “ಇಬ್ಬರ ಸಂಬಂಧವನ್ನು ಒಪ್ಪಿಕೊಳ್ಳದ ಪೋಷಕರು ಅಪಹರಣದ ಹಣೆಪಟ್ಟಿ ಕಟ್ಟುವುದೂ ಇದೆ,” ಎನ್ನುತ್ತಾರೆ ದೆಹಲಿ ಮೂಲದ ಹಕ್ ಸರ್ಕಾರೇತರ ಸಂಘಟನೆಯ ಸಹ ಸಂಸ್ಥಾಪಕಿ ಭಾರ್ತಿ ಅಲಿ. ಪೋಸ್ಕೊ ಕಾಯ್ದೆಯಡಿ ಮುಂಬೈ ಮತ್ತು ದೆಹಲಿಯಲ್ಲಿ ದಾಖಲಾದ 1,957 ಪ್ರಕರಣಗಳನ್ನು ಅಧ್ಯಯನ ಮಾಡಿರುವ ಅವರು, “ಇದರಲ್ಲಿ ಬಹುತೇಕ ಪ್ರಕರಣಗಳು ಪರಸ್ಪರ ಒಪ್ಪಿತ ಲೈಂಗಿಕ ಸಂಪರ್ಕಕ್ಕೆ ಸಂಬಂಧಿಸಿದವು. ನ್ಯಾಯಾಲಯಗಳು ಅಂತಹ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಶಿಕ್ಷೆ ನೀಡದೆ ಅಪಹರಣಕ್ಕೆ ಮಾತ್ರ ಸಜೆ ನೀಡುತ್ತವೆ. ಹೀಗಾಗಿ ಅಪಹರಣ ಪ್ರಕರಣಗಳ ಸಂಖ್ಯೆ ಹೆಚ್ಚಿದೆ,” ಎನ್ನುತ್ತಾರೆ.

ಆದರೂ, ಎಲ್ಲ ಅಪಹರಣ ಪ್ರಕರಣಗಳನ್ನೂ ಮಾನವ ಕಳ್ಳಸಾಗಣೆ ಎನ್ನಲಾಗುವುದಿಲ್ಲ. 16 ವರ್ಷದ ಮತಿವಣ್ಣನ್ ಪ್ರಕರಣ ಅಂತಹ ಉದಾಹರಣೆ. ಆತನಿಗೆ ತಾಯಿ ಇರಲಿಲ್ಲ. ತಂದೆ ಕುರುಡು. ಮಲತಾಯಿ ಜೊತೆಗೆ ಮತಿವಣ್ಣನ್ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. “ದಿನವೂ ದುಡ್ಡಿಗಾಗಿ ಪೀಡಿಸುತ್ತಿದ್ದರು. ನನಗೆ ಇಲ್ಲಿರಲು ಇಷ್ಟ ಇಲ್ಲ. ಎಲ್ಲಾದರೂ ಹೋಗಿ ದುಡೀತೇನೆ,” ಎನ್ನುತ್ತಾನೆ ಅವನು. ಸರ್ಕಾರೇತರ ಸಂಸ್ಥೆಯೊಂದರ ಕಾರ್ಯಕರ್ತರು ವಿಲ್ಲುಪುರಂ ರೈಲು ನಿಲ್ದಾಣದಲ್ಲಿ ಆತನನ್ನು ಪತ್ತೆಮಾಡಿದರು. ಬಹಳ ಮನವರಿಕೆ ಮಾಡಿಕೊಟ್ಟ ನಂತರ ಆತ ಮನೆಗೆ ತೆರಳಲು ಒಪ್ಪಿದ.

“ದೇಶದ ಪ್ರತಿ ರೈಲು ನಿಲ್ದಾಣದಲ್ಲಿ ಸರಾಸರಿ ಐದು ನಿಮಿಷಕ್ಕೊಂದು ಅನಾಥ ಮಗು ಪತ್ತೆಯಾಗುತ್ತದೆ. ಮನೆಯವರ, ಶಾಲೆಗಳ ಶಿಕ್ಷೆ ತಡೆಯಲಾಗದೆಯೋ, ನಟರಾಗಿಬಿಡುವ ಕನಸು ಹೊತ್ತೋ ಈ ಮಕ್ಕಳು ನಾಪತ್ತೆ ಆಗುವುದುಂಟು,” ಎನ್ನುತ್ತದೆ ರೈಲ್ವೆ ಚಿಲ್ಡ್ರನ್ ಎಂಬ ಅಂತಾರಾಷ್ಟ್ರೀಯ ಮಟ್ಟದ ಸರ್ಕಾರೇತರ ಸಂಸ್ಥೆಯ ವರದಿ.

ಚೆನ್ನೈನ ಚೈಲ್ಡ್ ವೆಲ್ಫೇರ್ ಕಮಿಟಿಯ ಶೀಲಾ ಚಾರ್ಲ್ಸ್ ಮೋಹನ್, “ಒಮ್ಮೆ 500 ಕಿಮೀ ದೂರದ ಥೇಣಿಯಿಂದ ಚೆನ್ನೈಗೆ ಬಂದಿದ್ದಳು ಒಬ್ಬ ಹುಡುಗಿ. ಏಕೆ ಬಂದೆಯಮ್ಮಾ ಎಂದು ಪ್ರಶ್ನಿಸಿದರೆ, ‘ನಾನು ಜಯಲಲಿತಾ ಅಭಿಮಾನಿ. ಆಕೆಯನ್ನು ನೋಡಲು ಬಂದೆ’ ಎಂಬ ಕಾರಣ ನೀಡಿದ್ದಳು. ಇನ್ನು, ಸೀಸನಲ್ ಆಗಿ ನಾಪತ್ತೆಯಾಗುವ ಮಕ್ಕಳೂ ಇರುತ್ತಾರೆ. ಉದಾಹರಣೆಗೆ, ಪರೀಕ್ಷೆ ಆರಂಭವಾಗುವ ಹೊತ್ತಿನಲ್ಲಿ ಅಥವಾ ಫಲಿತಾಂಶದ ಸಮಯದಲ್ಲಿ,” ಎಂದು ಹೇಳುತ್ತಾರೆ.

ಶೇ.50ಕ್ಕೂ ಹೆಚ್ಚು ಮಕ್ಕಳು ಪತ್ತೆಯಾಗುತ್ತಿಲ್ಲ ಎಂಬ ಕಳವಳಕಾರಿ ಬೆಳವಣಿಗೆ ಬಗ್ಗೆ ಮಾತನಾಡಿದ ಮೋಯ್ತ್ರಾ, “ಪೊಲೀಸರು ಮತ್ತು ಮಕ್ಕಳ ರಕ್ಷಣಾ ಸಂಸ್ಥೆಗಳು ಇನ್ನೂ ಹೆಚ್ಚು ಒಗ್ಗೂಡಬೇಕಿದೆ. ಮಕ್ಕಳು ಮಾಡಿದ ದೂರವಾಣಿ ಕರೆ ಆಲಿಸುವುದು, ಅಪಾಯಕಾರಿ ಪ್ರದೇಶಗಳನ್ನು ಗುರುತಿಸುವುದು ಮುಂತಾದ ವಿಚಾರದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಅಗತ್ಯ,” ಎನ್ನುತ್ತಾರೆ.

“ಶೇ.50ರಷ್ಟು ಮಕ್ಕಳು ಪತ್ತೆಯಾಗಿಲ್ಲ ಎಂಬ ವಿಚಾರವನ್ನು ಪೊಲೀಸರು ಒಪ್ಪುವುದಿಲ್ಲ. ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳುವಂತೆ, ಮಕ್ಕಳು ಪತ್ತೆಯಾದ ನಂತರ ಪೋಷಕರು ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸುವುದಿಲ್ಲ. ಮುಖ ಗುರುತಿಸುವ ವ್ಯವಸ್ಥೆ (ಎಫ್‌ಆರ್‌ಎಸ್) ಮೂಲಕವೇ ಪತ್ತೆಹಚ್ಚಬಲ್ಲ ತಂತ್ರಜ್ಞಾನ ದೆಹಲಿ ಪೊಲೀಸರ ಬಳಿ ಇದೆ. ಇಂತಹ ಪ್ರಕರಣಗಳಲ್ಲಿ ಓಡಿಹೋದ ಘಟನೆಗಳೇ ಹೆಚ್ಚು. ಮಾನವ ಕಳ್ಳಸಾಗಾಣಿಕೆಯ ಪ್ರಮಾಣ ಶೇ.2ರಿಂದ 3ರಷ್ಟಿರುತ್ತದೆ,” ಎನ್ನುತ್ತಾರವರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿಪಡಿಸಿರುವ ಡೇಟಾಬೇಸ್ ಟ್ರಾಕ್ ಚೈಲ್ಡ್‌ಗೆ ಮಕ್ಕಳ ಭಾವಚಿತ್ರ ಕಳುಹಿಸಿ ವಿವರ ಸಂಗ್ರಹಿಸುವ ವ್ಯವಸ್ಥೆ ಸಾಕಷ್ಟು ರಾಜ್ಯಗಳಲ್ಲಿ ಜಾರಿಯಾಗಬೇಕಿದೆ. ಈ ದತ್ತಾಂಶ ವಿವರ ಹೆಚ್ಚು ಕ್ರಿಯಾಶೀಲವಾದರೆ ಕಬೀರ್‌ನಂತೆ ಇನ್ನೂ ಪತ್ತೆಯಾಗದ ಶೇ.50ರಷ್ಟು ಮಕ್ಕಳನ್ನು ರಕ್ಷಿಸಲು ಸಾಧ್ಯವಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More