ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಇಂದಿನಿಂದ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ

ಗೌರಿ ಲಂಕೇಶ್ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್ ಇಂದಿನಿಂದ ಸೆಪ್ಟೆಂಬರ್ 5ರವರೆಗೆ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಹಮ್ಮಿಕೊಂಡಿದೆ. ಇಂದು ಧಾರವಾಡದಲ್ಲಿ ‘ಕಲಬುರ್ಗಿ ದಿನ’ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಸಪ್ತಾಹಕ್ಕೆ ಚಾಲನೆ ಸಿಗಲಿದೆ. 6 ದಿನಗಳ ವಾಹನ ಜಾಥಾ ರಾಜ್ಯಾದ್ಯಂತ ಸಂಚರಿಸಿ ಸೆಪ್ಟೆಂಬರ್ 5ರಂದು ಬೆಂಗಳೂರು ತಲುಪಲಿದೆ. ಗೌರಿ ಲಂಕೇಶ್, ಕಲಬುರ್ಗಿ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಕೈವಾಡ ಇದ್ದು, ಈ ಸಂಸ್ಥೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ಅಭಿವ್ಯಕ್ತಿ ವಿರೋಧಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಗೌರಿಬಳಗದ ಸದಸ್ಯರು ತಿಳಿಸಿದ್ದಾರೆ.

ಮೇವು ಹಗರಣ ದೋಷಿ ಲಾಲು ಪ್ರಸಾದ್ ಯಾದವ್ ಕೋರ್ಟ್‌ಗೆ

ತಾತ್ಕಾಲಿಕ ಜಾಮೀನು ಅವಧಿ ಅಂತ್ಯಗೊಂಡಿರುವುದರಿಂದ ಮೇವು ಹಗರಣದ ದೋಷಿ ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಗುರುವಾರ ಸಿಬಿಐ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಆ.30ರೊಳಗೆ ಸಿಬಿಐ ಕೋರ್ಟ್ ಗೆ ಹಾಜರಾಗುವಂತೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದ್ದರಿಂದ ಬುಧವಾರ ಪಟನಾದಿಂದ ರಾಂಚಿಗೆ ಆಗಮಿಸಿದರು. ಅನಾರೋಗ್ಯ ಒಳಗಾಗಿರುವ ಅವರು ಚಿಕಿತ್ಸೆಗಾಗಿ ರಾಂಚಿಯ ಆರ್ ಐ ಎಂ ಎಸ್ ಆಸ್ಪತ್ರೆ ಹಾಗೂ ದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಇಷ್ಟು ದಿನ ಚಿಕಿತ್ಸೆ ಪಡೆಯುತ್ತಿದ್ದರು.

ಇಂಡೋ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಇಂದಿನಿಂದ

ಐದು ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದರೂ, ನಾಟಿಂಗ್‌ಹ್ಯಾಮ್‌ನಲ್ಲಿ ಪುಟಿದೆದ್ದು ಭರ್ಜರಿ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ, ಇಂದಿನಿಂದ ಸೌಥಾಂಪ್ಟನ್‌ನಲ್ಲಿ ಶುರುವಾಗಲಿರುವ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲೂ ಜಯದ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ಸರಣಿ ಗೆಲ್ಲಬೇಕಾದರೆ ಈ ಪಂದ್ಯವನ್ನೂ ಒಳಗೊಂಡಂತೆ ಕೊನೆಯ ಪಂದ್ಯವನ್ನು ಜಯಿಸಲೇಬೇಕಿದೆ. ಇತ್ತ, ಆತಿಥೇಯ ಇಂಗ್ಲೆಂಡ್ ತಂಡವು ಪ್ರಸ್ತುತ ಪಂದ್ಯವನ್ನು ಗೆದ್ದು ಇಲ್ಲವೇ ಕೊನೆಯ ಪಂದ್ಯವನ್ನೂ ಒಳಗೊಂಡಂತೆ ಎರಡರಲ್ಲೂ ಡ್ರಾ ಸಾಧಿಸಿದರೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.

ಪಂದ್ಯ ಆರಂಭ: ಮಧ್ಯಾಹ್ನ ೩.೩೦ರಿಂದ (ಭಾರತೀಯ ಕಾಲಮಾನ) | ನೇರಪ್ರಸಾರ: ಸೋನಿ ನೆಟ್ವರ್ಕ್

ಅಥ್ಲೆಟಿಕ್ಸ್‌ನಲ್ಲಿ ಇನ್ನಷ್ಟು ಪದಕಗಳ ನಿರೀಕ್ಷೆ

ಪ್ರಸ್ತುತ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಹದಿನೆಂಟನೇ ಏಷ್ಯಾಡ್‌ನಲ್ಲಿ ಭಾರತ ಇಂದು ಅಥ್ಲೆಟಿಕ್ಸ್‌ನಲ್ಲಿ ಮತ್ತಷ್ಟು ಪದಕಗಳನ್ನು ಗೆಲ್ಲುವ ತುಡಿತದಲ್ಲಿದೆ. ಈಗಾಗಲೇ ಫೀಲ್ಡ್ ಮತ್ತು ಟ್ರ್ಯಾಕ್ ಈವೆಂಟ್‌ಗಳಲ್ಲಿ ಐದು ಸ್ವರ್ಣ ಪದಕಗಳನ್ನು ಗೆದ್ದಿರುವ ಭಾರತ ಇಂದು ಸಂಜೆ ೫.೦೦ರಿಂದ ಶುರುವಾಗಲಿರುವ ವಿವಿಧ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿಯೂ ಬಂಗಾರದ ಪದಕದ ಮೇಲೆ ಕಣ್ಣಿಟ್ಟಿದೆ. ಮುಖ್ಯವಾಗಿ, ಡಿಸ್ಕ್ ಎಸೆತದಲ್ಲಿ ಅನುಭವಿ ಸೀಮಾ ಪುನಿಯಾ (ಸಂಜೆ ೫.೦೦) ಮತ್ತು ಕುಮಾರಿ ಸಂದೀಪ್ ಸ್ಪರ್ಧೆಗಿಳಿಯಲಿದ್ದಾರೆ. ಇನ್ನು, ೧,೫೦೦ ಮೀ. ಫೈನಲ್ಸ್‌ನಲ್ಲಿ ಚಿತ್ರಾ ಉನ್ನಿಕೃಷ್ಣನ್ ಮತ್ತು ಮೋನಿಕಾ ಚೌಧರಿ (ಸಂಜೆ ೬.೦೦) ಟ್ರ್ಯಾಕ್‌ಗಿಳಿಯಲಿದ್ದಾರೆ. ಅಂತೆಯೇ ೪/೪೦೦ ಮೀಟರ್ ರಿಲೇ ಫೈನಲ್‌ ಸಂಜೆ ೭.೦೦ಕ್ಕೆ ಜರುಗಲಿದೆ.

ಸಿಎಂ ಎಚ್ಡಿಕೆಯಿಂದ ಕೇಂದ್ರ ಸಚಿವರ ಭೇಟಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೆಹಲಿಗೆ ಭೇಟಿ ನೀಡಿದ್ದು, ಗುರುವಾರ ಬೆಳಗ್ಗೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಯವರ ಸಚಿವಾಲಯ ಮಾಹಿತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಮನವಿ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More