ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಸಮ್ಮಿಶ್ರ ಸರ್ಕಾರಕ್ಕೆ ೧೦೦ ದಿನ: ದೆಹಲಿಯಲ್ಲಿ ಗಣ್ಯರನ್ನು ಭೇಟಿ ಮಾಡಿದ ಸಿಎಂ, ಡಿಸಿಎಂ

ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಗುರುವಾರ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಜಿತೇಂದ್ರ ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಮ್ಮಿಶ್ರ ಸರ್ಕಾರವು ೧೦೦ ದಿನ ಪೂರೈಸಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ‌ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಪ್ರವಾಹದಿಂದ ನಷ್ಟ ಸಂಭವಿಸಿರುವ ಜಿಲ್ಲೆಗಳ ಪುನರ್ ನಿರ್ಮಾಣಕ್ಕೆ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದಾರೆ. ಇನ್ನು, ರಾಜ್ಯ ಸರ್ಕಾರ ಜಾರಿಗೊಳಿಸಲು ಚಿಂತನೆ ನಡೆಸಿರುವ ಋಣಮುಕ್ತ ಕಾಯಿದೆಗೆ ಒಪ್ಪಿಗೆ ಕೋರುವ ಸಂಬಂಧ ರಾಷ್ಟ್ರಪತಿ ಜೊತೆ ಕುಮಾರಸ್ವಾಮಿ ಚರ್ಚಿಸಿದ್ದಾರೆ.

ವಿದೇಶಿ ನೆರವು ಪಡೆಯಲು ಇರುವ ತೊಡಕುಗಳ ಪರಿಶೀಲನೆ: ಕೇರಳ ಸಿಎಂ

ಕೇರಳದ ಪ್ರವಾಹ ಪರಿಹಾರ ಕಾರ್ಯಗಳಿಗೆ ವಿದೇಶಿ ನೆರವನ್ನು ಪಡೆಯಲು ಇರುವ ಕಾನೂನು ತೊಡಕುಗಳನ್ನು ಬಗೆಹರಿಸಿ ಅನುದಾನ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಂದು ನಡೆದ ಒಂದು ದಿನದ ಅಧಿವೇಶನದಲ್ಲಿ ಮಾತಾಡಿದ ಅವರು, “ಕೇರಳ ವಾರ್ಷಿಕ ಯೋಜನಾ ವೆಚ್ಚಕ್ಕಿಂತಲೂ ಹೆಚ್ಚು ನಷ್ಟ ಅನುಭವಿಸುತ್ತಿದೆ, ಪ್ರವಾಹದಿಂದಾಗಿ ಈವರೆಗೆ 483 ಜನಗಳ ಪ್ರಾಣಹಾನಿಯಾಗಿದ್ದು, 15 ಮಂದಿ ಇನ್ನೂ ಪತ್ತೆಯಾಗಿಲ್ಲ. 14.5 ಲಕ್ಷ ಜನರು ನಿರಾಶ್ರಿತರಾಗಿದ್ದು, 57 ಸಾವಿರ ಹೆಕ್ಟೇರ್ ಕೃಷಿಭೂಮಿ ಹಾನಿಗೊಳಗಾಗಿದೆ. ಈಗಾಗಲೇ 730 ಕೋಟಿ ರುಪಾಯಿ ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವಿಗಾಗಿ ನಿರೀಕ್ಷಿಸುತ್ತಿದ್ದೇವೆ,” ಎಂದಿದ್ದಾರೆ.

ಮತ್ತೆ ಡಿಎಂಕೆ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ ಎಂ ಕೆ ಅಳಗಿರಿ

ಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಜಿ ಕೇಂದ್ರ ಸಚಿವ ಎಂ ಕೆ ಅಳಗಿರಿ ಮತ್ತೆ ಪಕ್ಷಕ್ಕೆ ಹಿಂತಿರುಗುವ ಇಂಗಿತ ವ್ಯಕ್ತ ಪಡಿಸಿದ್ದಾರೆ. “ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಲ್ಲಿ ಕಿರಿಯ ಸಹೋದರ ಹಾಗೂ ಡಿಎಂಕೆ ನೂತನ ಅಧ್ಯಕ್ಷ ಸ್ಟಾಲಿನ್ ಅವರನ್ನು ನಾಯಕನಾಗಿ ಒಪ್ಪಿಕೊಳ್ಳಲು ಸಿದ್ಧನಿದ್ದೇನೆ, ನಿರಾಕರಿಸಿದಲ್ಲಿ ಮುಂಬರುವ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ. 2014ರಲ್ಲಿ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದ ಕರುಣಾನಿಧಿ ಅವರು ಅಳಗಿರಿಯವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.

ಮೊದಲ ತ್ರೈಮಾಸಿಕದಲ್ಲಿ ಶೇ.7.6ರಷ್ಟು ಜಿಡಿಪಿ ಅಭಿವೃದ್ಧಿ ನಿರೀಕ್ಷೆ

ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.7.6ರಷ್ಟಾಗುವ ನಿರೀಕ್ಷೆ ಇದೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ವರದಿ ತಿಳಿಸಿದೆ. ಶುಕ್ರವಾರ ಜಿಡಿಪಿ ಅಂಕಿಅಂಶಗಳನ್ನು ಕೇಂದ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಅಭಿವೃದ್ಧಿ ಶೇ.5.6ರಷ್ಟಿತ್ತು. ಅಪನಗದೀಕರಣದ ಹಿನ್ನೆಲೆಯಲ್ಲಿ ಆರ್ಥಕ ಹಿನ್ನಡೆಯಾದ್ದರಿಂದ ಜಿಡಿಪಿ ಅಭಿವೃದ್ಧಿ ತಗ್ಗಿತ್ತು. ಉತ್ಪಾದಕ ವಲಯ ಮತ್ತು ಸೇವಾ ವಲಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿರುವುದು ಜಿಡಿಪಿ ಶೇ.7.6ರಷ್ಟಾಗಲಿದೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಅಭೀಕ್ ಬರುವಾ ಹೇಳಿದ್ದಾರೆ.

ಪತ್ರಕರ್ತರ ಮೇಲೆ ಮುಗಿಬಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸಿಎನ್‌ಎನ್ ಸುದ್ದಿಸಂಸ್ಥೆಯ ನಡುವಣ ವೈಮನಸ್ಯ ಮತ್ತಷ್ಟು ಹೆಚ್ಚಿದೆ. ಸಿಎನ್‌ಎಸ್ ಸಂಸ್ಥೆಯ ಅಧ್ಯಕ್ಷ ಜೆಫ್ ಜುಕರ್‌ ಅವರನ್ನು ಈ ಕ್ಷಣದಿಂದಲೇ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಬೇಕೆಂದು ಸಂಸ್ಥೆಯ ಆಡಳಿತ ಮಂಡಳಿಗೆ ಅವರು ಕರೆ ಮಾಡಿದ್ದಾರೆ. ಅವರು ತಮ್ಮ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದಾರೆ ಮತ್ತು ದ್ವೇಷ ಕಾರುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಈ ಮಧ್ಯೆ, ವಾಟರ್‌ಗೇಟ್ ಹಗರಣ ಬಯಲಿಗೆಳೆದ ಖ್ಯಾತ ಪತ್ರಕರ್ತ ಕಾರ್ಲ್ ಬರ್ನ್‌ಸ್ಟೇನ್ ಅವರನ್ನು ಕಟುವಾಗಿ ಟೀಕೆ ಮಾಡಿದ್ದಾರೆ. “ಅವನೊಬ್ಬ ಭ್ರಷ್ಟ, ಮೂರ್ಖ, ಜವಾಬ್ದಾರಿ ಇಲ್ಲದವ, ಕಟ್ಟುಕತೆಗಳನ್ನು ಹಣೆಯುವವ,” ಎಂದು ಟ್ವೀಟ್ ಮಾಡಿದ್ದಾರೆ.

ಉಗ್ರ ಸಲಾಹುದ್ದೀನ್ ಪುತ್ರನ ಬಂಧನ

ಪೊಲೀಸರ ‘ಮೋಸ್ಟ್ ವಾಟೆಂಡ್ ಲಿಸ್ಟ್’ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪುತ್ರ ಸೈಯದ್ ಶಕೀಲ್ ಯೂಸೂಫ್‌ನನ್ನು ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ. 2011ರಲ್ಲಿ ಎನ್‌ಐಎ ದಾಖಲಿಸಿಕೊಂಡಿರುವ ಉಗ್ರರ ಹಣಕಾಸು ನೆರವು ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸೈಯದ್ ಶಕೀಲ್ ಯೂಸೂಫ್‌ನನ್ನು ವಶಕ್ಕೆ ಪಡೆದಿದೆ. ಬಂಧಿತ ಶಕೀಲ್, ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ಆಗಿ ಕೆಲಸ ಮಾಡುತ್ತಿದ್ದು, ಆತನ ರಾಮಬಾಗ್‌ನಲ್ಲಿನ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.

ಒಂದು ಅಂಕ ಕಡಿಮೆ ನೀಡಿದ್ದಕ್ಕೆ ಐದು ಲಕ್ಷ ದಂಡ!

ವಿದ್ಯಾರ್ಥಿನಿಗೆ ಪುನರ್‌ಮೌಲ್ಯಮಾಪನದ ಸಂದರ್ಭದಲ್ಲಿ ಅಂಕ ನೀಡುವಲ್ಲಿ ಸತಾಯಿಸಿದ ಬಿಹಾರ ಪ್ರೌಢಶಿಕ್ಷಣ ಮಂಡಳಿಗೆ ಹೈಕೋರ್ಟ್ ೫ ಲಕ್ಷ ರೂಪಾಯಿ ದಂಡ ವಿಧಿಸಿದೆ. ಹಿಂದಿ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದು ಪುನರ್ ಮೌಲ್ಯಮಾಪನಕ್ಕೆ ವಿದ್ಯಾರ್ಥಿನಿ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದ ಮಂಡಳಿ, ಅಂಕ ನೀಡಲು ವಿಳಂಬ ಮಾಡಿತ್ತು.

ಟಾಮ್ ಕ್ರ್ಯೂಸ್‌ ‘ಟಾಪ್‌ ಗನ್‌’ ಸರಣಿ 2020ಕ್ಕೆ

ಟಾಮ್ ಕ್ರ್ಯೂಸ್‌ ಅಭಿನಯದ ‘ಟಾಪ್‌ ಗನ್: ಮ್ಯಾವರಿಕ್‌‌’ ಸರಣಿ ಸಿನಿಮಾ 2020ಕ್ಕೆ ಮುಂದೂಡಲ್ಪಟ್ಟಿದೆ. ಈ ಮೊದಲು ಚಿತ್ರದ ಬಿಡುಗಡೆ ದಿನಾಂಕ 2019, ಜುಲೈ12 ಎಂದು ನಿಗದಿಯಾಗಿತ್ತು. ಇದೀಗ ಬದಲಾದ ಯೋಜನೆಯಂತೆ ಸಿನಿಮಾ 2020, ಜೂನ್‌ 26ಕ್ಕೆ ಬಿಡುಗಡೆಯಾಗಲಿದೆ. ಜಾನ್‌ ಕ್ರಾಸಿನ್‌ಸ್ಕಿ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರದಲ್ಲಿ ಮೈಲ್ಸ್‌ ಟೆಲ್ಲರ್‌, ವಾಲ್ ಕಿಲ್ಮರ್‌, ಜೆನಿಫರ್ ಕಾನೆಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಪ್ಯಾರಾಮೌಂಟ್‌ ಪಿಕ್ಚರ್ಸ್‌ ಸಿನಿಮಾ ನಿರ್ಮಿಸುತ್ತಿದೆ.

ವಿಶ್ವ ವೇಗದೂತನ ಫುಟ್ಬಾಲ್ ಪಯಣಕ್ಕೆ ಕ್ಷಣಗಣನೆ

ವಿಶ್ವ ಕಂಡ ಸಾರ್ವಕಾಲಿಕ ಶ್ರೇಷ್ಠ ಓಟಗಾರರ ಪೈಕಿ ಒಬ್ಬರಾಗಿರುವ ಜಮೈಕಾದ ಉಸೇನ್ ಬೋಲ್ಟ್ ಫುಟ್ಬಾಲ್ ಪದಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ (ಆ.೩೧) ನಡೆಯಲಿರುವ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಆಸ್ಟ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ಪರ ಫುಟ್ಬಾಲ್ ಮೈದಾನಕ್ಕಿಳಿಯುತ್ತಿರುವ ಬೋಲ್ಟ್ ಯಾವ ಪರಿಯಲ್ಲಿ ಮಿಂಚು ಹರಿಸುತ್ತಾರೆ ಎಂಬುದನ್ನು ಜಗತ್ತಿನ ಕ್ರೀಡಾಪ್ರಿಯರು ತವಕದಿಂದ ಕಾಯುತ್ತಿದ್ದಾರೆ. ಆದರೆ, 32ರ ಹರೆಯದ ಬೋಲ್ಟ್ ಈಗಾಗಲೇ ತಮ್ಮ ಫುಟ್ಬಾಲ್ ಪದಾರ್ಪಣಾ ಪಂದ್ಯ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಅಥ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಮಿಂಚಿದಂತೆ ಮಿಂಚಲು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ದ್ವಿತೀಯ ಸುತ್ತಿನಲ್ಲೇ ಹೊರನಡೆದ ಆಂಡಿ ಮರ್ರೆ; ನಡಾಲ್ ತೃತೀಯ ಸುತ್ತಿಗೆ

ಬ್ರಿಟನ್‌ನ ನಂ.೧ ಟೆನಿಸ್ ಆಟಗಾರ ಆಂಡಿ ಮರ್ರೆ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಫೆರ್ನಾಂಡೊ ವೆರ್ಡೆಸ್ಕೊ ವಿರುದ್ಧ 5-7, 6-2, 4-6, 4 ಸೆಟ್‌ಗಳ ಸೋಲನುಭವಿಸಿದರು. ೧೪ ತಿಂಗಳ ಬಳಿಕ ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಆಡುತ್ತಿರುವ ಮರ್ರೆ, ಇನ್ನೂ ದೈಹಿಕವಾಗಿ ಪೂರ್ಣ ಕ್ಷಮತೆ ಸಾಧಿಸಿಲ್ಲ ಎಂಬುದನ್ನು ತಮ್ಮ ಆಟದ ವೈಖರಿಯಿಂದಲೇ ನಿರೂಪಿಸಿದರು! ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ಕೆನಡಾ ಆಟಗಾರ ವಸೆಕ್ ಪಾಸ್ಪಿಸಿಲ್ ವಿರುದ್ಧ ೬-೩, ೬-೪, ೬-೨ ನೇರ ಸೆಟ್‌ಗಳ ಗೆಲುವಿನೊಂದಿಗೆ ತೃತೀಯ ಸುತ್ತಿಗೆ ಸಾಗಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More