ಮೋದಿ ಪ್ರಧಾನಿ ಗದ್ದುಗೇರಿದ ನಂತರ ಶೇ.21.03ರಷ್ಟು ರುಪಾಯಿ ಅಪಮೌಲ್ಯ!

ನರೇಂದ್ರ ಮೋದಿ ಪ್ರಧಾನಿಯಾಗಿ 1,557 ದಿನಗಳು ಕಳೆದಿವೆ. ಈ ಅವಧಿಯಲ್ಲಿ ಭಾರತದ ಕರೆನ್ಸಿ ರುಪಾಯಿ 1,234 ಪೈಸೆ ಕುಸಿದಿದೆ. ನಿತ್ಯವೂ ಸರಾಸರಿ ಶೇ.0.79 ಪೈಸೆ ಅಪಮೌಲ್ಯಗೊಳ್ಳುತ್ತ ಬಂದಿದೆ. ಡಾಲರ್ ವಿರುದ್ಧ ರುಪಾಯಿ ಯಾರೂ ಊಹಿಸಿದಷ್ಟು ಅಪಮೌಲ್ಯಗೊಂಡು 71ರ ಗಡಿ ದಾಟಿದೆ!

ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಗ್ರಹಿಸಿ 1,557 ದಿನ ಕಳೆದಿವೆ. ಅವರು ಪ್ರಧಾನಿಯಾದ ನಂತರ ದೇಶದ ಅಭಿವೃದ್ಧಿಯಾಗಿದೆಯೋ ಇಲ್ಲವೋ ಎಂಬುದನ್ನು ರಾಷ್ಟ್ರೀಯ ಸಾಂಖ್ಯಿಕ ಆಯೋಗ ಪ್ರಕಟಿಸಿರುವ ಹಿಂದಿನ ಸರಣಿಯ ಜಿಡಿಪಿ ಅಂಕಿ-ಅಂಶಗಳೇ ಸಾರಿ ಹೇಳುತ್ತಿವೆ.

ಆದರೆ, ಪ್ರಧಾನಿ ಮೋದಿ ಅಧಿಕಾರದ ಅವಧಿಯಲ್ಲಿ ಭಾರತದ ಕರೆನ್ಸಿ ದಯನೀಯವಾಗಿ ಮೌಲ್ಯ ಕಳೆದುಕೊಂಡಿದೆ. ನಾಲ್ಕು ವರ್ಷ ಹಾಗೂ ನೂರು ದಿನಗಳಲ್ಲಿ ನಮ್ಮ ರುಪಾಯಿ 1,234 ಪೈಸೆಗಳು ಅಂದರೆ, 12.34 ರುಪಾಯಿಯಷ್ಟು ಅಪಮೌಲ್ಯಗೊಂಡಿದೆ. ಶೇ.21.03 ಮೋದಿ ಅವರು ಆಡಳಿತ ನಡೆಸಿದ ದಿನಗಳ ಮತ್ತು ಕುಸಿದಿರುವ ರುಪಾಯಿ ಮೌಲ್ಯವನ್ನು ಸರಾಸರಿ ಲೆಕ್ಕ ಹಾಕಿದರೆ ನಿತ್ಯವೂ ನಮ್ಮ ಕರೆನ್ಸಿ 0.79 ಪೈಸೆಯಷ್ಟು ಕುಸಿದಿದೆ.

ರುಪಾಯಿ ಮೌಲ್ಯ ಕುಸಿತಕ್ಕೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿರುವುದು ಮತ್ತು ಡಾಲರ್ ಮೇಲಿನ ಬೇಡಿಕೆ ಹೆಚ್ಚಿರುವುದೇ ಕಾರಣ ಎಂದು ಹಣಕಾಸು ಇಲಾಖೆ ಉನ್ನತಾಧಿಕಾರಿಗಳೇ ವಿಶ್ಲೇಷಣೆ ಮಾಡಿದ್ದಾರೆ.

ಕಚ್ಚಾತೈಲ ಡಬ್ಲ್ಯೂಟಿಐ ಕ್ರೂಡ್ ಬೆಲೆ ಜೂನ್ 29ರಂದು 74.14 ಡಾಲರ್‌ಗೆ ಏರಿತ್ತು. ಶುಕ್ರವಾರ 69.98 ಡಾಲರ್ ಇದೆ. ಬ್ರೆಂಟ್ ಕ್ರೂಡ್ ಮೇ ತಿಂಗಳ 17ರಂದು 80 ಡಾಲರ್ ಮುಟ್ಟಿ ದಿನದ ಅಂತ್ಯಕ್ಕೆ 79.45 ಡಾಲರ್‌ಗೆ ಸ್ಥಿರವಾಗಿತ್ತು. ಶುಕ್ರವಾರ 77.46 ಡಾಲರ್‌ನಲ್ಲಿ ವಹಿವಾಟಾಗಿದೆ.

ಮೋದಿ ಪ್ರಧಾನಿ ಆದ ನಂತರದಲ್ಲಿ ಮುಖ್ಯವಾಗಿ 2015-17ರ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ತೀವ್ರವಾಗಿ ಕುಸಿದಿತ್ತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ಗೆ 25 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿತ್ತು. ಈ ಮೂರು ವರ್ಷಗಳಲ್ಲಿನ ಸರಾಸರಿ ಕಚ್ಚಾತೈಲ ಬೆಲೆ 2015ರಲ್ಲಿ 41.85 (43.22) 2016ರಲ್ಲಿ 36.34 (37.02) 2017ರಲ್ಲಿ 42.74 (42.63) ನಷ್ಟಿತ್ತು. ಕಂಸದಲ್ಲಿರುವ ದರವು ಹಣದುಬ್ಬರಕ್ಕೆ ಹೊಂದಾಣಿಕೆ ಮಾಡಿದಾಗಿನ ಸರಾಸರಿ ದರ. ಹಿಂದಿನ ಮೂರೂ ವರ್ಷಗಳಲ್ಲೂ ಈಗಿನ ದರಕ್ಕೆ ಹೋಲಿಸಿದರೆ ಶೇ.50ರಷ್ಟು ಕಡಿಮೆ ದರ ಇತ್ತು.

ಈಗ ನಮ್ಮ ಪ್ರಶ್ನೆ ಏನೆಂದರೆ, ಒಂದು ವೇಳೆ ಕಚ್ಚಾತೈಲ ದರ 2015-17ರ ನಡುವೆ 60-70 ಡಾಲರ್ ಆಜುಬಾಜಿನಲ್ಲಿ ಇದ್ದಿದ್ದರೆ ನಮ್ಮ ರುಪಾಯಿಯ ಗತಿ ಏನಾಗುತ್ತಿತ್ತು? ನಮ್ಮ ದೇಶದ ಹಣದುಬ್ಬರ ಪರಿಸ್ಥಿತಿ ಹೇಗಿರುತ್ತಿತ್ತು? ನಮ್ಮ ಆರ್ಥಿಕ ಸ್ಥಿತಿ ಯಾವ ಮಟ್ಟಕ್ಕೆ ಕುಸಿಯುತ್ತಿತ್ತು? ಅದೃಷ್ಟವಶಾತ್ ಈ ಮೂರು ವರ್ಷಗಳ ಅವಧಿಯಲ್ಲಿ ಕಚ್ಚಾತೈಲದ ಸರಾಸರಿ ದರ ಎಂದೂ 50ರ ಗಡಿ ದಾಟಿರಲಿಲ್ಲ.

ಈಗ 70 ಗಡಿ ದಾಟಿದ ತಕ್ಷಣ ರುಪಾಯಿ ಅಪಮೌಲ್ಯ ತೀವ್ರ ಪ್ರಮಾಣದಲ್ಲಾಗಿದೆ. 2018ರಿಂದೀಚೆಗೆ ಶೇ.11ರಷ್ಟು ರುಪಾಯಿ ಅಪಮೌಲ್ಯಗೊಂಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಸರಾಸರಿ 105 ಡಾಲರ್‌ಗೆ ಏರಿದ್ದಾಗಲೂ ಭಾರತದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರಲಿಲ್ಲ. ರುಪಾಯಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿದಿರಲಿಲ್ಲ ಮತ್ತು ಹಣದುಬ್ಬರ ನಿಯಂತ್ರಣದಲ್ಲೇ ಇತ್ತು.

ಆಗ ದೇಶದ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದ ಮನಮೋಹನ್ ಸಿಂಗ್ ಅವರೇ ಪ್ರಧಾನಿಯಾಗಿದ್ದರು. ಆರ್ಥಿಕ ಸಚಿವರಿಗೆ ಅವರು ಸದಾ ಮಾರ್ಗದರ್ಶನ ಮಾಡುತ್ತಿದ್ದರು. ಪ್ರಸ್ತುತ ಮೋದಿ ಸರ್ಕಾರದಲ್ಲಿ ದೇಶದ ಆರ್ಥಿಕತೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡಿರುವ ಒಬ್ಬ ಸಚಿವರೂ ಇಲ್ಲ. ನರೇಂದ್ರ ಮೋದಿ ರಾಜಕೀಯ ಲೆಕ್ಕಾಚಾರ ಪರಿಣಿತರೇ ಹೊರತು ಆರ್ಥಿಕ ಲೆಕ್ಕಾಚಾರದ ಪರಿಣಿತರಲ್ಲ. ಅವರಿಗೆ ಇಡೀ ದೇಶದ ಆರ್ಥಿಕತೆ ಮೇಲೆ ಇನ್ನೂ ಹಿಡಿತ ಸಿಕ್ಕಿಲ್ಲ.

ಅಪನಗದೀಕರಣ ಜಾರಿ ಮಾಡಿದಾಗ ಮತ್ತು ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಮಾಡಿದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಥಿಕ ಜ್ಞಾನ ಅಷ್ಟಕ್ಕಷ್ಟೇ ಎಂಬುದು ಗೊತ್ತಾಗಿತ್ತು. ಈಗ ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ರದ್ದು ಮಾಡಿದ ನೋಟುಗಳ ಪೈಕಿ ಶೇ.99.3ರಷ್ಟು ವಾಪಸಾಗಿವೆ ಎಂದು ತಿಳಿಸಿದೆ. ಪರೋಕ್ಷವಾಗಿ ಅಪನಗದೀಕರಣ ಮಹಾವೈಫಲ್ಯ ಎಂದು ಹೇಳಿದೆ.

ರುಪಾಯಿ ಸತತ ಕುಸಿಯುತ್ತಿರುವ ಹೊತ್ತಿನಲ್ಲಿ ಈಗ ರುಪಾಯಿ ಕುಸಿತವನ್ನೂ ಸಮರ್ಥಿಸಿಕೊಳ್ಳುವ ಕೆಲಸವನ್ನು ಹಣಕಾಸು ಇಲಾಖೆ, ನೀತಿ ಆಯೋಗ, ಎಸ್ಬಿಐ ಮತ್ತಿತರ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಇರುವವರನ್ನು ಬಳಸಿಕೊಂಡು ಮಾಡಲಾಗುತ್ತಿದೆ. ರುಪಾಯಿ ಕುಸಿತವು ದೇಶದ ಆರ್ಥಿಕತೆಯ ಅಸ್ಥಿರತೆಯ ಪ್ರತೀಕ ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡ ಸತ್ಯ ಮತ್ತು ವಾಸ್ತವಿಕತೆ. ಅದನ್ನು ತಿರುಚುವ ಪ್ರಯತ್ನ ಸಾಗಿದೆ.

ಇದನ್ನೂ ಓದಿ : ರುಪಾಯಿ ಮೌಲ್ಯ ಕುಸಿತದಿಂದ ಆರ್ಥಿಕತೆ ಮೇಲಾಗುವ ಪರಿಣಾಮಗಳೇನು ಗೊತ್ತೇ?

ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಅವರು, “ನರೇಂದ್ರ ಮೋದಿ ಪ್ರಧಾನಿ ಆದಲ್ಲಿ ರುಪಾಯಿಯು ಡಾಲರ್ ವಿರುದ್ಧ 40 ರುಪಾಯಿಗೆ ಸ್ಥಿರಗೊಂಡು ಪ್ರಬಲವಾಗುತ್ತದೆ,” ಎಂದು ಭವಿಷ್ಯ ನುಡಿದಿದ್ದರು. ರವಿಶಂಕರ್ ಭವಿಷ್ಯ ನುಡಿದು ನಾಲ್ಕೂವರೆ ವರ್ಷಗಳಾಗಿವೆ. ರವಿಶಂಕರ್ ಲೆಕ್ಕಾಚಾರದಲ್ಲೇ ಹೇಳುವುದಾದರೆ, ಅವರು ಭವಿಷ್ಯ ನುಡಿದಿದ್ದ ಪ್ರಮಾಣಕ್ಕೆ ಹೋಲಿಸಿದರೆ ರುಪಾಯಿ ಶೇ.77.50ರಷ್ಟು ಅಪಮೌಲ್ಯಗೊಂಡಿದೆ. ಪ್ರತಿ ಡಾಲರ್‌ಗೆ 40 ರುಪಾಯಿ ಇರಬೇಕಾಗಿದ್ದ ಡಾಲರ್ 71 ರುಪಾಯಿಗೆ ಕುಸಿದಿದೆ.

ಭಕ್ತರು ಉದಾರ ದೇಣಿಗೆ ನೀಡುವಾಗ ವಾಸ್ತವಿಕ ಆರ್ಥಿಕತೆ ಅರ್ಥವಾಗುವುದು ಕಷ್ಟ. ರವಿಶಂಕರ್ ಅವರದ್ದೂ ಇದೇ ಸಮಸ್ಯೆ. ಅವರಿಗೆ ದೇಶದ ವಾಸ್ತವಿಕ ಆರ್ಥಿಕತೆ ಅರ್ಥವಾಗಿರಲಿಕ್ಕಿಲ್ಲ. ಅರ್ಥವಾಗಿದ್ದರೆ ಡಾಲರ್ ವಿರುದ್ಧ ರುಪಾಯಿಯು 71 ರುಪಾಯಿಗೆ ಕುಸಿದಾಗ ಅದನ್ನು ವಿಶ್ಲೇಷಿಸಿ ಟ್ವೀಟ್ ಮಾಡುತ್ತಿದ್ದರು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More