ಜೂನ್ ತ್ರೈಮಾಸಿಕದ ಜಿಡಿಪಿ ಶೇ.8.2; ಅಪನಗದೀಕರಣದ ನಂತರ ಗರಿಷ್ಠ ಅಭಿವೃದ್ಧಿ

ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.2ರಷ್ಟು ದಾಖಲಾಗಿದೆ. ಅಪನಗದೀಕರಣದ ನಂತರ ದಾಖಲಾದ ಅತಿ ಗರಿಷ್ಠ ಅಭಿವೃದ್ಧಿ ಇದು. ಜಾಗತಿಕವಾಗಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದೀಗ ನಿಚ್ಚಳವಾಗಿದೆ. ಆ ಸ್ಥಾನದಲ್ಲಿದ್ದ ಚೀನಾದ ಜಿಡಿಪಿ ಶೇ.6.7

ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಒಟ್ಟು ರಾಷ್ಟ್ರೀಯ ಉತ್ನನ್ನ (ಜಿಡಿಪಿ) ಶೇ.8.2ರಷ್ಟು ದಾಖಲಾಗಿದೆ. 2011-12ನೇ ಸಾಲಿನ ಮೂಲದರದಲ್ಲಿ ಜಿಡಿಪಿ 33.74 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2017-18ನೇ ಸಾಲಿನಲ್ಲಿ ಇದು 31.18 ಲಕ್ಷ ಕೋಟಿಯಷ್ಟಿತ್ತು.

ಒಟ್ಟು ಮೌಲ್ಯವರ್ಧನೆ (ಜಿವಿಎ) ಮೂಲದಲ್ಲಿ 2018-19ನೇ ಮೊದಲ ತ್ರೈಮಾಸಿಕದಲ್ಲಿ 31.63 ಲಕ್ಷ ಕೋಟಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮೊತ್ತವು 29.29 ಲಕ್ಷ ಕೋಟಿಯಾಗಿತ್ತು ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ತಿಳಿಸಿದೆ.

2015ರಿಂದೀಚೆಗೆ ಜಿಡಿಪಿ ಲೆಕ್ಕಾಚಾರವನ್ನು 2004-05ರ ಬದಲಿಗೆ 2011-12ನೇ ಸಾಲನ್ನು ಮೂಲವರ್ಷವನ್ನಾಗಿಟ್ಟುಕೊಂಡು ಸರಕು ಮತ್ತು ಸೇವೆಯನ್ನು ಸೇರಿಸಿ ಲೆಕ್ಕಾಚಾರ ಹಾಕಲಾಗುತ್ತದೆ. ಹೊಸ ಮೂಲವರ್ಷದ ಲೆಕ್ಕಾಚಾರದ ಪ್ರಕಾರವೇ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ.7.5-76ರ ನಡುವೆ ಇರುತ್ತದೆಂದು ತಜ್ಞರು ಅಂದಾಜಿಸಿದ್ದರು. ಆದರೆ ಅಚ್ಚರಿಯೆಂಬಂತೆ ಶೇ.8.2ರಷ್ಟು ಅಭಿವೃದ್ಧಿ ದಾಖಲಾಗಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ

ಮೊದಲ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಜಿಡಿಪಿ ದಾಖಲಾಗಿದೆ. ಇದರರ್ಥ ಭಾರತವು ಜಾಗತಿಕ ಮಟ್ಟದಲ್ಲಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಬೃಹತ್ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಪನಗದೀಕರಣ ಮತ್ತು ಜಿಎಸ್ಟಿ ಜಾರಿ ನಂತರ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿದ್ದು. ಒಂದು ಹಂತದಲ್ಲಿ ಜಿಡಿಪಿ ಶೇ.5.2ರ ಮಟ್ಟಕ್ಕೆ ಇಳಿದಿತ್ತು. ಈಗ ಶೇ.8.2ರಷ್ಟು ಜಿಡಿಪಿ ದಾಖಲಾಗಿರುವುದು ಪ್ರಧಾನಿ ಮೋದಿ ಸರ್ಕಾರಕ್ಕೆ ಒಂದಷ್ಟು ಬಲಬಂದಂತಾಗಿದೆ. ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದ ಚೀನಾದ ಜೂನ್ ತ್ರೈಮಾಸಿಕದ ಜಿಡಿಪಿ ಶೇ.6.7ರಷ್ಟಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಇದು ಶೇ.6.8ರಷ್ಟಿತ್ತು.

ಶೇ.8.2ರಷ್ಟು ಅಭಿವೃದ್ಧಿ ದಾಖಲಾಗಿರುವುದು ಕಳೆದ ಎಂಟು ತ್ರೈಮಾಸಿಕಗಳ ಪೈಕಿ ಅತಿ ಗರಿಷ್ಠಮಟ್ಟದ್ದಾಗಿದೆ. 2016 ಜುಲೈ- ಸೆಪ್ಟಂಬರ್ ತ್ರೈಮಾಸಿಕದಲ್ಲಿ ಶೇ.9.2ರಷ್ಟು ಜಿಡಿಪಿ ದಾಖಲಾಗಿದ್ದೆ ಗರಿಷ್ಠ ಮಟ್ಟದಾಗಿತ್ತು. 2017 ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಶೇ.5.2ಕ್ಕೆ ಕುಸಿದಿತ್ತು. ನಂತರದ ತ್ರೈಮಾಸಿಕದಲ್ಲಿ ಅಂದರೆ 2017 ಜುಲೈ- ಸೆಪ್ಟಂಬರ್ ತ್ರೈಮಾಸಿಕದಲ್ಲಿ ಶೇ.7.7ಕ್ಕೇರಿತ್ತು.

ಏರುತ್ತಿರುವ ತೈಲ ಬೆಲೆ ಕುಸಿಯುತ್ತಿರುವ ರುಪಾಯಿ ಮತ್ತಿತರ ಅಂಶಗಳು ಭಾರತದ ಅಭಿವೃದ್ಧಿಗೆ ವ್ಯಕ್ತಿರಿಕ್ತವಾಗಿವೆ. ಇದರ ಪರಿಣಾಮ ಚಾಲ್ತಿ ಖಾತೆ ಕೊರತೆ ಮತ್ತಷ್ಟು ಹಿಗ್ಗಿದೆ. ಇಂತಹ ಪರಿಸ್ಥಿತಿಯಲ್ಲೂ ಶೇ.8.2ರಷ್ಟು ಜಿಡಿಪಿ ಅಭಿವೃದ್ಧಿ ದಾಖಲಾಗಿರುವುದು ಸರ್ಕಾರಕ್ಕೆ ಕೊಂಚ ನೆಮ್ಮದಿ ತಂದಿದೆ. ಅಕ್ಟೋಬರ್ 3-5ರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆ ನಡೆಯಲಿದ್ದು ಬಡ್ಡಿದರ ನಿರ್ಧರಿಸುವ ನಿಟ್ಟಿನಲ್ಲಿ ಜಿಡಿಪಿ ಅಂಕಿ ಅಂಶಗಳು ಪ್ರಧಾನ ಪಾತ್ರ ವಹಿಸಬಹುದು.

ಇದನ್ನೂ ಓದಿ : ಜಿಡಿಪಿ ಅಂಕಿ-ಅಂಶ ವಿಶ್ವಾಸಾರ್ಹವೇ? ರಂಗರಾಜನ್ ಅವರಿಗೂ ಅನುಮಾನ ಇದೆ!

ಜೂನ್ ತ್ರೈಮಾಸಿಕದಲ್ಲಿ ಉತ್ಪಾದನೆ, ವಿದ್ಯುತ್, ಅನಿಲ, ನೀರು ಸರಬರಾಜು ಮತ್ತಿತರ ಅಗತ್ಯ ಸೇವೆಗಳು, ನಿರ್ಮಾಣ, ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತಿತರ ಸೇವೆಗಳು ಶೇ.7ಕ್ಕಿಂತಲೂ ಹೆಚ್ಚು ಅಭಿವೃದ್ಧಿ ದಾಖಲಿಸಿವೆ. ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ ಶೇ.5.3, ವ್ಯಾಪಾರ, ಹೋಟೆಲ್, ಸಾರಿಗೆ, ಸಂಪರ್ಕ ಮತ್ತು ಪ್ರಸಾರ ಸೇವೆಗಳ ಅಭಿವೃದ್ಧಿ ಶೇ.0.1 ಮತ್ತು ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ಅಭಿವೃದ್ಧಿ ಶೇ.6.7ರಷ್ಟು ಅಭಿವೃದ್ಧಿ ದಾಖಲಿಸಿವೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

ಉತ್ಪಾದನಾ ವಲಯವು ಮೂಲದರದ ಆಧಾರದ ಮೇಲೆ ಒಟ್ಟು ಮೌಲ್ಯವರ್ಧನೆ (ಜಿವಿಎ) ಶೇ.13.5ರಷ್ಟು ಹೆಚ್ಚಳ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ. (-) 1.8ರಷ್ಟು ದಾಖಲಾಗಿತ್ತು. ನಿರ್ಮಾಣ ವಲಯವು ಶೇ.8.7ರಷ್ಟು ಅಭಿವೃದ್ಧಿ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.1.8ರಷ್ಟು ದಾಖಲಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More