ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಸಮನ್ವಯ ಸಮಿತಿಯ ಮೂರನೇ ಸಭೆ

ಸುಮಾರು ಎರಡು ತಿಂಗಳ ಬಳಿಕ ಶುಕ್ರವಾರ ಸಂಜೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯು ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನಿನ್ನೆಯಷ್ಟೆ ಶತದಿನ ಪೂರೈಸಿದೆ. ಆನಂತರದಲ್ಲಿನ ಮೊದಲ ಸಭೆ ಇದಾಗಿದ್ದು, ಸಚಿವ ಸಂಪುಟ ವಿಸ್ತರಣೆ, ನಿಗಮ ಮತ್ತು ಮಂಡಳಿಗಳಿಗೆ ಶಾಸಕರ ನೇಮಕ ಮತ್ತಿತರ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜೂನ್ ೧೪ ಮತ್ತು ಜುಲೈ ೧ರಂದು ಸಮನ್ವಯ ಸಮಿತಿ ಸಭೆ ನಡೆದಿತ್ತು.

೧೦೫ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

ಪ್ರವಾಹದಿಂದ ತತ್ತರಿಸಿರುವ ಕೊಡಗಿನ ಮೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿ ರಾಜ್ಯದ ೧೦೫ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ೩ ಮಹಾನಗರ ಪಾಲಿಕೆ, ೨೩ ನಗರಸಭೆ, ೫೩ ಪುರಸಭೆ ಹಾಗೂ ೨೦ ಪಟ್ಟಣ ಪಂಚಾಯಿತಿ ಸೇರಿದಂತೆ ೧೦೫ ಸ್ಥಳೀಯ ಸಂಸ್ಥೆಗಳ ೨,೬೩೪ ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ೯,೧೨೧ ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಂಜೆ ೫ರ ವರೆಗೆ ಮತದಾನ ನಡೆಯಲಿದೆ. ಸಮ್ಮಿಶ್ರ ಸರ್ಕಾರದ ಭಾಗಿದಾರರಾದ ಕಾಂಗ್ರೆಸ್-ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿವೆ. ಸೆ.೩ರಂದು ಮತ ಎಣಿಕೆ ನಡೆಯಲಿದೆ.

3೬ ವರ್ಷಗಳ ಚಿನ್ನದ ಬರ ನೀಗಲು ಸಜ್ಜಾದ ರಾಣಿ ಪಡೆ

ಹದಿನೆಂಟನೇ ಏಷ್ಯಾಡ್‌ನಲ್ಲಿ ಎಂಟು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಭಾರತ ಹಾಕಿ ತಂಡಕ್ಕೆ ಬರಸಿಡಿಲಿನಂತೆ ಎರಗಿದ ಸೋಲು ಹಸಿಹಸಿಯಾಗಿರುವಾಗಲೇ ವನಿತಾ ತಂಡ ಇಂದು ಫೈನಲ್‌ಗೆ ಸಜ್ಜಾಗಿದೆ. ಮಲೇಷ್ಯಾ ವಿರುದ್ಧ ಸಡನ್ ಡೆತ್‌ನಲ್ಲಿ ಸೋಲನುಭವಿಸಿದ ಶ್ರೀಜೇಶ್ ಪಡೆಯ ಸೋಲನ್ನು ಮರೆಮಾಚಲು ಪಣ ತೊಟ್ಟಿರುವ ರಾಣಿ ರಾಂಪಾಲ್ ಸಾರಥ್ಯದ ಭಾರತ ವನಿತಾ ತಂಡ ಇಂದು ಜಪಾನ್ ವಿರುದ್ಧ ಕಾದಾಡಲಿದೆ. ೧೯೮೨ರ ದೆಹಲಿ ಕೂಟದಲ್ಲಿ ಚಿನ್ನ ಗೆದ್ದಿದ್ದ ಭಾರತ ವನಿತಾ ಹಾಕಿ ತಂಡ ಆನಂತರದಲ್ಲಿ ಸಂಪೂರ್ಣ ಎಡವಿತ್ತು. ಇಲ್ಲಿನ ಗೆಲುವು ವನಿತಾ ತಂಡದ ೨೦೨೦ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸಿಕೊಡುವ ದೃಷ್ಟಿಯಲ್ಲೂ ಮಹತ್ವಪೂರ್ಣವೆನಿಸಿದೆ. ೯ನೇ ಶ್ರೇಯಾಂಕಿತ ರಾಣಿ ಪಡೆ, ೧೪ನೇ ಶ್ರೇಯಾಂಕಿತ ಜಪಾನ್‌ ವಿರುದ್ಧ ಸುಲಭ ಗೆಲುವು ಸಾಧಿಸುವ ಭರವಸೆಯಲ್ಲಿದೆ. ಪಂದ್ಯ ಸಂಜೆ ೬.೩೦ರಿಂದ ಶುರುವಾಗಲಿದೆ. ಇನ್ನು, ಪುರುಷರ ಬಾಕ್ಸಿಂಗ್‌ ಸೆಮಿಫೈನಲ್‌ನಲ್ಲಿ ವಿಕಾಸ್ ಕೃಷ್ಣನ್ (೭೫ ಕೆಜಿ ವಿಭಾಗ) ಮತ್ತು ಅಮಿತ್ ಪಂಗಲ್ (೪೯ ಕೆಜಿ ವಿಭಾಗ) ಬಾಕ್ಸಿಂಗ್ ರಿಂಗ್‌ಗಿಳಿಯಲಿದ್ದಾರೆ.

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ವಿಮಾನ ಹಠಾತ್ತನೆ 8 ಸಾವಿರ ಅಡಿ ಕೆಳಗೆ ಕುಸಿದಿತ್ತು. ಇದಾದ ನಂತರ ಅವರು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಕುರಿತು ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ, ಇಂದು ಹೊಸದಿಲ್ಲಿಯಿಂದ ಪಯಣ ಆರಂಭಿಸುವ ಅವರು, ನೇಪಾಳ ಮೂಲಕವಾಗಿ ಎರಡು ಯಾತ್ರೆ ಕೈಗೊಳ್ಳಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More