ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ರಾಜ್ಯದಲ್ಲಿ ಫತ್ವಾ ಹೊರಡಿಸದಂತೆ ಉತ್ತರಾಖಂಡ್ ಹೈಕೋರ್ಟ್ ಆದೇಶ

ರಾಜ್ಯದಲ್ಲಿ ಫತ್ವಾ ಹೊರಡಿಸದಂತೆ ಉತ್ತರಾಖಂಡ್ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ, ಹರಿದ್ವಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿ ಹಾಗೂ ಆಕೆಯ ಕುಟುಂಬದವರನ್ನು ಹಳ್ಳಿಯಿಂದ ಹೊರಹೋಗುವಂತೆ ಅಲ್ಲಿನ ಮೌಲ್ವಿ ಫತ್ವಾ ಹೊರಡಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ನಂತರ ಫತ್ವಾವನ್ನು ಹೈಕೋರ್ಟ್ ನಿಷೇಧಿಸಿದೆ. ಫತ್ವಾ ಹೊರಡಿಸಿದ ಮೌಲ್ವಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಹರಿದ್ವಾರ ಜಿಲ್ಲೆಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಗೆ ಸೂಚನೆ ನೀಡಿದೆ.

ರಾಹುಲ್ ಗಾಂಧಿ ಚೀನಾ ವಕ್ತಾರರಂತೆ ವರ್ತಿಸುತ್ತಾರೆ; ಬಿಜೆಪಿ ನಾಯಕರ ವಾಗ್ದಾಳಿ

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಯಾಕೆ ಚೀನಾ ವಕ್ತಾರರಂತೆ ವರ್ತಿಸುತ್ತಾರೆ? ಎಂದು ಪ್ರಶ್ನಿಸಿದ್ದು, ನೀವು ರಾಹುಲ್ ಗಾಂಧಿ, ಚೀನಾ ಗಾಂಧಿ ಅಲ್ಲ ಎಂದಿದ್ದಾರೆ. ಭಾರತದಲ್ಲಿರುವ ಚೀನಾ ರಾಯಬಾರಿಗೆ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಏಕೆ ಅದ್ದೂರಿಯಾಗಿ ಬೀಳ್ಗೊಡುತ್ತಾರೆ ? ಜಗತ್ತಿನಾದ್ಯಂತ ಚೀನಾ ಬಗ್ಗೆ ಏಕೆ ಮಾತನಾಡುತ್ತಾರೆ. ಚೀನಾ ಪರವಾಗಿ ಪ್ರಚಾರ ಮಾಡುವಂತೆ ಅವರನ್ನು ನೇಮಿಸಲಾಗಿದೆಯೇ ಎಂದು ಸಂಬೀತ್ ಪಾತ್ರ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಬಂಧಿತ ಸಾಮಾಜಿಕ ಕಾರ್ಯಕರ್ತರಿಗೂ ಮೋದಿ ಹತ್ಯೆ ಸಂಚಿಗೂ ನಂಟಿದೆ: ಪುಣೆ ಪೊಲೀಸರು

ಮಹಾರಾಷ್ಟ್ರದಲ್ಲಿ ಭೀಮಾ ಕೋರೆಗಾವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಬಂಧಿಸಲಾದ ಸಾಮಾಜಿಕ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪರಮ್ ಬೀರ್ ಸಿಂಗ್ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಬಂಧಿತ ಐವರು ಹೋರಾಟಗಾರರು ನಿಷೇಧಿತ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಸ್ಪಷ್ಟ ಪುರಾವೆ ಸಿಕ್ಕ ನಂತರವೇ ಅವರನ್ನು ವಶಕ್ಕೆ ಪಡೆಯಲಾಗಿದೆ, ರಾಜೀವ್ ಗಾಂಧಿ ಅವರ ಹತ್ಯೆ ಮಾದರಿಯಲ್ಲಿಯೇ ಪ್ರಧಾನಿ ಮೋದಿಯವರ ಹತ್ಯೆಗೆ ತಯಾರಿ ಮಾಡಲಾಗಿತ್ತು ಎಂಬುದರ ಬಗ್ಗೆ ಪತ್ರ ಹಾಗೂ ದಾಖಲೆಗಳ ಮೂಲಕ ತಿಳಿದುಬಂದಿದೆ ಎಂದಿದ್ದಾರೆ. ಪತ್ರದಲ್ಲಿ ಗ್ರೆನೇಡ್ ಲಾಂಚರ್ ಖರೀದಿಗಾಗಿ ಹಣವನ್ನು ಕೇಳಲಾಗಿದೆ. ರೋನಾ ವಿಲ್ಸನ್ ಮತ್ತು ಸಿಪಿಐ-ಮಾವೋವಾದಿ ನಾಯಕನ ನಡುವಿನ ಇಮೇಲ್‌ನಲ್ಲಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ 'ಮೋದಿ-ರಾಜ್' ಅಂತ್ಯಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ ಮಾಡಿದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್

ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರು ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿಯಾಗಿ ‘ಡಿಜಿಟಲ್ ವಿಲೇಜ್’ ಯೋಜನೆ ಕುರಿತು ಚರ್ಚಿಸಿದ್ದಾರೆ. ಕ್ಯಾಲಿಪೋರ್ನಿಯಾದ ಗೂಗಲ್ ಮುಖ್ಯ ಕಚೇರಿಯಲ್ಲಿ ಈ ಮಾತುಕತೆ ನಡೆದಿದ್ದು, “ದೇಶದ ಪ್ರತಿಯೊಂದು ಗ್ರಾಮಗಳಿಗೆ ವೈ ಫೈ ಸಂಪರ್ಕ ಕಲ್ಪಿಸುವ ಡಿಜಿಟಲ್ ವಿಲೇಜ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದಕ್ಕೆ ಗೂಗಲ್ ಸಂಸ್ಥೆ ಕೂಡ ಭಾಗಿಯಾಗಬೇಕು,” ಎಂದು ಮನವಿ ಮಾಡಿಕೊಂಡಿದ್ದಾರೆ. “ಪ್ರತಿ ಹಳ್ಳಿಗಳು ಡಿಜಿಟಲ್ ಹಳ್ಳಿಗಳಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಲ್ಲದೇ ಕೃಷಿ ಕುರಿತು ಹವಾಮಾನ ಮಾಹಿತಿಯನ್ನು ರೈತರು ತಿಳಿದುಕೊಂಡು ಉತ್ತಮ ಕೃಷಿ ಚಟುವಟಿಕೆಗಳಲ್ಲಿ ಅವರು ತೊಡಗಬಹುದು,” ಎಂದು ಸಚಿವರು ವಿವರಿಸಿದ್ದಾರೆ.

ಪ್ರಿಯಾ ವಾರಿಯರ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮಲಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ಸುಪ್ರೀಂ ಕೋರ್ಟ್‌ ಮೇಟ್ಟಿಲೇರಿದ್ದ ಅರ್ಜಿದಾರನನ್ನು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತರಾಟೆಗೆ ತೆಗೆದುಕೊಂಡಿದ್ದು, ಆಕೆಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ವಜಾಗೊಳಿಸಿದ್ದಾರೆ. “ಹಾಡನ್ನು ಧರ್ಮನಿಂದನೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಸಿನಿಮಾದಲ್ಲಿ ಬಳಸಿರುವುದು ಜನಪದ ಹಾಡು. ನಿಮಗೆ ಮಾಡಲು ಬೇರೆ ಕೆಲಸ ಇರಲಿಲ್ಲವೇ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆಕೆ ಕಣ್ಣು ಮಿಟುಕಿಸಿದ್ದು ಮುಸ್ಲಿಂ ಸಮುದಾಯದ ನಂಬಿಕೆಗಳಿಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ‘ಒರು ಆಡಾರ್ ಲವ್’ ಚಿತ್ರದಲ್ಲಿ ಮಲಯಾಳಂ ನಟಿ ಪ್ರಿಯಾ ವಾರಿಯರ್ ಕಣ್ಣು ಮಿಟುಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು ಕೆಲ ವಿವಾದಕ್ಕೂ ಕಾರಣವಾಗಿತ್ತು.

ಏಷ್ಯಾಡ್ ಬಾಕ್ಸಿಂಗ್ ಫೈನಲ್‌ಗೆ ಅಮಿತ್

ಈ ಬಾರಿಯ ಏಷ್ಯಾಡ್‌ನ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಏಕೈಕ ಚಿನ್ನದ ಪದಕದ ಭರವಸೆಯಾಗಿ ಅಮಿತ್ ಪಂಘಾಲ್ ಹೊರಹೊಮ್ಮಿದ್ದಾರೆ. ವಿಕಾಸ್ ಕೃಷ್ಣನ್ ದೈಹಿಕ ಫಿಟ್ನೆಸ್ ಸಮಸ್ಯೆಯಿಂದ ಸೆಮಿಫೈನಲ್ ಬೌಟ್‌ನಲ್ಲಿ ಸ್ಪರ್ಧಿಸಲಾಗದೆ ಕಂಚಿಗೆ ತೃಪ್ತವಾದರೆ, ಅಮಿತ್ ಫೈನಲ್‌ಗೆ ಧಾವಿಸಿದರು. ಇಂದು ನಡೆದ ನಾಲ್ಕರ ಘಟ್ಟದ ಬೌಟ್‌ನಲ್ಲಿ ಫಿಲಿಪೈನ್ಸ್‌ನ ಕಾರ್ಲೊ ಪಾಲಮ್ ವಿರುದ್ಧ ಅಮಿತ್ ೩-೨ರಿಂದ ಗೆಲುವು ಸಾಧಿಸಿದರು. ಅತೀವ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಫಿಲಿಪೈನ್ಸ್ ಬಾಕ್ಸರ್ ಅಮಿತ್‌ಗೆ ಸರಿಸಾಟಿಯಾಗಿ ಸೆಣಸಿದರೂ, ಕೆಲವು ಅತ್ಯುತ್ತಮ ಪಂಚ್‌ಗಳಿಂದ ಅಮಿತ್ ಗಮನ ಸೆಳೆದರಲ್ಲದೆ, ತೀರ್ಪುಗಾರರಿಂದ ಜಯಶಾಲಿಯಾಗಿ ಹೊರಹೊಮ್ಮಿದರು. ಹರ್ಯಾಣ ಮೂಲದ ಅಮಿತ್, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಐಡಿಯಾ ಸೆಲ್ಯುಲಾರ್- ವೋಡಾಫೋನ್ ವಿಲೀನ ಪ್ರಕ್ರಿಯೆ ಪೂರ್ಣ

ದೂರಸಂಪರ್ಕ ವಲಯದ ದೈತ್ಯ ಕಂಪನಿಗಳಾದ ಐಡಿಯಾ ಸೆಲ್ಯುಲಾರ್ ಮತ್ತು ವೊಡಾಫೋನ್ ಕಂಪನಿಗಳ ವಿಲೀನ ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದೆ. ದೇಶದ ಮೊಬೈಲ್ ಸೇವಾ ವಲಯದಲ್ಲಿ ಇದು ಐತಿಹಾಸಿಕ ಹೆಜ್ಜೆ. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಐಡಿಯಾ-ವೋಡಾಫೋನ್ ಏಕೀಕೃತ ಕಂಪನಿಯು ದೇಶದ ಅತಿದೊಡ್ಡ ಮೊಬೈಲ್ ಸೇವೆ ಒದಗಿಸುವ ಕಂಪನಿಯಾಗಿ ಹೊರಹೊಮ್ಮಿದೆ. ಇದುವರೆಗೆ ಅಗ್ರಸ್ಥಾನದಲ್ಲಿದ್ದ ಏರ್ಟೆಲ್ ಎರಡನೇ ಸ್ಥಾನಕ್ಕೆ ಇಳಿದಿದೆ ರಿಲಯನ್ಸ್ ಜಿಯೋ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. 23 ಬಿಲಿಯನ್ ಡಾಲರ್ ಮೌಲ್ಯದ ಈ ವಿಲೀನ ಪ್ರಕ್ರಿಯೆಯು ಭಾರತೀಯ ದೂರಸಂಪರ್ಕ ವಲಯದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ತರಲಿದ್ದು ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರದ ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್ ಹೇಳಿದ್ದಾರೆ.

ವೆಬ್ ಸರಣಿಗೆ ಚಿತ್ರಕತೆ ಬರೆಯಲಿದ್ದಾರೆ ಜಾವೇದ್ ಅಖ್ತರ್‌

ಹಿರಿಯ ಚಿತ್ರಸಾಹಿತಿ ಜಾವೇದ್‌ ಅಖ್ತರ್‌ ‘ಬೇರ್‌ಫೂಟ್‌ 11’ ವೆಬ್ ಸರಣಿಗೆ ಚಿತ್ರಕತೆ ರಚಿಸಲಿದ್ದಾರೆ. ಸ್ಟ್ರೀಮಿಂಗ್ ಮೀಡಿಯಾದಲ್ಲಿ ಇದು ಅವರ ಮೊದಲ ಪ್ರಯತ್ನ. ‘ಬೇರ್‌ಫೂಟ್‌ 11’ ಇಬ್ಬರು ಭಾರತೀಯರು ಕತೆ. ಒಬ್ಬ ಹಿಂದೂ, ಮತ್ತೊಬ್ಬ ಮುಸ್ಲಿಂ. ಫುಟ್‌ಬಾಲ್‌ನೊಂದಿಗೆ ವಿಭಜನೆಗೊಂಡ ದೇಶಗಳ ಮನಸ್ಸುಗಳನ್ನು ಬೆಸೆಯುವ ಕಥಾನಕ ಇದು. ‘ವೂಟ್‌’, ‘ವಯಾಕಾಮ್‌ 18’ನ ಡಿಜಿಟಲ್ ವಿಂಗ್. ಸರಣಿ ಸ್ಟ್ರೀಮ್ ಆಗುವ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

ಅಮೆರಿಕನ್ ಓಪನ್ ಟೆನಿಸ್‌ನಿಂದ ಹೊರಬಿದ್ದ ವೋಜ್ನಿಯಾಕಿ

ಈ ಋತುವಿನ ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯಭೇರಿ ಬಾರಿಸಿದ್ದ ಕೆರೋಲಿನ್ ವೋಜ್ನಿಯಾಕಿ ಋತುವಿನ ಕೊನೆಯ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ದ್ವಿತೀಯ ಶ್ರೇಯಾಂಕಿತೆ ವೋಜ್ನಿಯಾಕಿ ಉಕ್ರೇನ್ ಆಟಗಾರ್ತಿ ಲೆಸಿಯಾ ಸುರೆಂಕೊ ಎದುರು ೪-೬, ೨-೬ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಇತ್ತ, ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ತಮ್ಮ ದೇಶದವರೇ ಆದ ಬೆನಾರ್ಡ ಪೆರಾ ವಿರುದ್ಧ ೬-೪, ೬-೧ ನೇರ ಸೆಟ್‌ಗಳ ಗೆಲುವಿನೊಂದಿಗೆ ತೃತೀಯ ಸುತ್ತಿಗೆ ಧಾವಿಸಿದರು. ಶ್ರೇಯಾಂಕರಹಿತ ಆಟಗಾರ್ತಿ ಸುರೆಂಕೊ ವಿರುದ್ಧ ವೋಜ್ನಿಯಾಕಿ ಕಳಪೆ ಆಟವಾಡಿ ಆಘಾತಕಾರಿ ಸೋಲನುಭವಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More