ಟ್ವಿಟರ್ ಸ್ಟೇಟ್ | ಕೋರ್ಟ್‌ನಲ್ಲಿ ಸುಮ್ಮನಿದ್ದು ಮಾಧ್ಯಮದೆದುರು ಪೌರುಷ ತೋರಿದರೇ ಪುಣೆ ಪೊಲೀಸರು?

ಪುಣೆ ಪೊಲೀಸರು ಮಾನವ ಹಕ್ಕು ಕಾರ್ಯಕರ್ತರ ಮೇಲೆ ನಕ್ಸಲ್ ಸಂಪರ್ಕದ ಆರೋಪ ಹೊರಿಸಿದ್ದನ್ನು ಸಮರ್ಥಿಸಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, ನ್ಯಾಯಾಲಯದಲ್ಲಿ ಮಂಡಿಸದ ದಾಖಲೆಗಳನ್ನು ಪತ್ರಿಕೆಗಳ ಮುಂದೆ ಇಡಲು ಮುಂದಾದ ಪೊಲೀಸರ ಕ್ರಮ ಮಾಧ್ಯಮಗಳ ಟೀಕೆಗೆ ಗುರಿಯಾಗಿದೆ

ಪುಣೆ ಪೊಲೀಸರು ಶುಕ್ರವಾರ (ಆ.31) ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾನವ ಹಕ್ಕು ಕಾರ್ಯಕರ್ತರಿಗೆ ಮಾವೋವಾದಿ ಸಂಪರ್ಕಗಳಿದೆ ಎನ್ನುವ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ರಾಜೀವ್ ಗಾಂಧಿ ಹತ್ಯೆಯ ರೂಪದ ಸಂಚನ್ನೂ ಕಾರ್ಯಕರ್ತರು ಮಾಡಿದ್ದಾರೆ ಎಂದೂ ಹೇಳಿದ್ದಾರೆ. ಮಹಾರಾಷ್ಟ್ರದ ಎಡಿಜಿ ಪರಮ್‌ಬೀರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ, “ಸಂಚಿನಲ್ಲಿ ಭಾಗವಹಿಸಿದ ಕೆಲವರು ಮಾವೋವಾದಿಗಳಿಗೆ ಹಣ ಸಂಗ್ರಹ ಮತ್ತು ಶಸ್ತ್ರಾಸ್ತ್ರ ಹೊಂದಿಸುವುದರಲ್ಲಿ ತೊಡಗಿಸಿಕೊಂಡಿದ್ದರು,” ಎಂದು ಆರೋಪಿಸಿದ್ದಾರೆ. ಜೂನ್ ಆರಂಭದಲ್ಲಿ ರೋನಾ ವಿಲ್ಸನ್, ಸುಧೀರ್ ಧಾವ್ಲೆ, ಸುರೇಂದ್ರ ಗಾಡ್ಲಿಂಗ್, ಮಹೇಶ್ ರೌತ್‌ ಮತ್ತು ಶಿಕ್ಷಣ ತಜ್ಞ ಶೋಮಾ ಸೇನ್ ಅವರನ್ನು ಪೊಲೀಸರು ಬಂಧಿಸಿದ್ದರು. “ನಾವು ಈ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಭೀಮಾ ಕೋರೆಗಾಂವ್ ಗಲಭೆಗಳಿಗೂ ಪ್ರಚೋದನೆ ನೀಡಿರುವುದಕ್ಕೆ ಸಂಬಂಧಿಸಿದ ಪತ್ರಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಸರ್ಕಾರವನ್ನು ಕಿತ್ತೆಸೆಯುವ ಪಿತೂರಿಯೂ ನಡೆದಿದೆ. ರಾಜೀವ್ ಗಾಂಧಿ ರೀತಿಯಲ್ಲಿ ಹತ್ಯೆ ಮಾಡುವ ಉಲ್ಲೇಖವೂ ಆಗಿದೆ,” ಎಂದು ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಹೇಳಿದ್ದರು.

ಆದರೆ, ಪತ್ರಿಕಾಗೋಷ್ಠಿಯಲ್ಲಿ ಪುಣೆ ಪೊಲೀಸರು ಸಾಕ್ಷ್ಯಾಧಾರ ಇಲ್ಲದೆಯೇ ಕಪೋಲಕಲ್ಪಿತ ಕತೆಗಳನ್ನು ಹೊಸೆದು ಹೇಳಿದ್ದಾರೆ ಎಂದು ಹಲವು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲೂ, ಪುಣೆ ಪೊಲೀಸರು ಸಾಕ್ಷ್ಯಗಳಿಲ್ಲದೆಯೇ ಸಾಮಾಜಿಕ ಕಾರ್ಯಕರ್ತರ ಮೇಲೆ ಆರೋಪಗಳನ್ನು ಹೊರಿಸುತ್ತಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ‘ಮಿರರ್ ನೌ’ ಮಾಧ್ಯಮ ಸಂಸ್ಥೆ ಮಾಡಿರುವ ಟ್ವೀಟ್‌ನಲ್ಲಿ, “ಪುಣೆ ಪೊಲೀಸರು ಹೇಳಿರುವುದು ಸತ್ಯವೇ ಆಗಿದ್ದರೆ, ವಾಸ್ತವದಲ್ಲಿ ಸಂಚು ಅಷ್ಟೊಂದು ಗಂಭೀರವಾಗಿದ್ದರೆ, ಪುಣೆ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಆ ಬಗ್ಗೆ ಏಕೆ ಉಲ್ಲೇಖಿಸಿಲ್ಲ? ಸರ್ಕಾರ ಅವಸರದಲ್ಲಿ ಕಾರ್ಯನಿರ್ವಹಿಸುತ್ತಿದೆಯೇ?” ಎಂದು ಪ್ರಶ್ನಿಸಲಾಗಿದೆ.

ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್, ‘ಸ್ಕ್ರಾಲ್’ ವೆಬ್‌ಸೈಟ್‌ನ ಸರಣಿ ಟ್ವೀಟ್‌ಗಳನ್ನು ಟ್ಯಾಗ್ ಮಾಡಿ, “ಪುಣೆ ಪೊಲೀಸರು ಮಾನವ ಹಕ್ಕು ಕಾರ್ಯಕರ್ತರ ಮೇಲೆ ಮಾಡಿರುವ ಆರೋಪಗಳ ವಿಚಾರದಲ್ಲಿ ‘ಸ್ಕ್ರಾಲ್‌’ ಪ್ರಕಟಿಸಿರುವ ವಿವರಗಳನ್ನು ಗಮನಿಸಿ. ಅವರು ಫ್ಯಾಸಿಸ್ಟ್ ವಿರೋಧಿ ವೇದಿಕೆಯನ್ನು ನಿರ್ಮಿಸಿದ್ದಾರೆ! ಅರುಣ್ ಫೆರೈರಾ ಅವರ ವಿರುದ್ಧ ದೊಂಬಿಹತ್ಯೆಗಳ ಕುರಿತ ಫೋಟೋಗಳನ್ನು ಪ್ರದರ್ಶಿಸಿರುವ ಆರೋಪ ಹೊರಿಸಲಾಗಿದೆ. ಇವೆಲ್ಲ ಸರ್ಕಾರಿ ವಿರೋಧಿ ಅಭಿಪ್ರಾಯಗಳೇ?” ಎಂದು ಪ್ರಶ್ನಿಸಿದ್ದಾರೆ.

‘ಸ್ಕ್ರಾಲ್’ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ೧೨ ಸರಣಿ ಟ್ವೀಟ್‌ ಮಾಡಿದೆ. “ಮಂಗಳವಾರ ಮಾನವ ಹಕ್ಕು ಕಾರ್ಯಕರ್ತರ ಬಂಧನದ ನಂತರ ಏನಾಗಿದೆ ಎನ್ನುವ ವಿವರ ಇಲ್ಲಿದೆ. ಅವರನ್ನು ಪುಣೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿ ಅವರ ಮೇಲೆ 'ಫ್ಯಾಸಿಸ್ಟ್ ವಿರೋಧಿ’ ವೇದಿಕೆ ಸ್ಥಾಪಿಸಿರುವ ಆರೋಪ ಹೊರಿಸಲಾಗಿದೆ. ಪುಣೆಯ ವಿಚಾರಣೆಯ ಸಂದರ್ಭ ಭೀಮಾ ಕೋರೆಗಾಂವ್‌ಗೆ ಸಂಬಂಧಿಸಿದ ಎಲ್ಗಾರ್ ಪರಿಷತ್ ಬಗ್ಗೆ ಉಲ್ಲೇಖವೂ ಆಗಿಲ್ಲ. ಅರುಣ್ ಫೆರೈರಾ ಅವರ ಮೇಲೆ ದೊಂಬಿಹತ್ಯೆಯ ವಿರುದ್ಧ ಫೋಟೋ ಪ್ರದರ್ಶನ ಮಾಡಿ ಯುವಜನರಲ್ಲಿ ಸರ್ಕಾರಿ ವಿರೋಧಿ ಅಭಿಪ್ರಾಯ ಮೂಡಿಸಿದ ಆರೋಪ ಹೊರಿಸಲಾಗಿದೆ. ‘ನಕ್ಸಲೈಟ್ ಚಿಂತನೆಗಳನ್ನು ಹರಡುವ ನಗರದ ನಕ್ಸಲೀಯರು ಅಮಾಯಕರಲ್ಲ. ಅವರು ಬುದ್ಧಿವಂತ ವ್ಯಕ್ತಿಗಳು’ ಎಂದು ಸರ್ಕಾರಿ ವಕೀಲ ಉಜ್ವಲ್‌ ಪವಾರ್ ವಾದಿಸಿದ್ದರು,” ಎಂದು ‘ಸ್ಕ್ರಾಲ್’ ಟ್ವೀಟ್‌ಗಳು ಹೇಳಿವೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಸುಪ್ರೀಂ ಕೋರ್ಟ್‌ನಲ್ಲೇಕೆ ಮೋದಿ ಹತ್ಯೆ ಸಂಚಿನ ವಿಚಾರ ಬರಲಿಲ್ಲ?

ಪದ್ಮಜಾ ಜೋಶಿ ಅವರು ಟ್ವೀಟ್ ಮಾಡಿ, “ಬಂಧಿತ ಕಾರ್ಯಕರ್ತರಿಂದ ಪಡೆಯಲಾಗಿದೆ ಎಂದು ಹೇಳಲಾದ ಶಸ್ತ್ರಾಸ್ತ್ರ ವಿವರವಿರುವ ಕ್ಯಾಟಲಾಗ್‌ವೊಂದನ್ನು ಪುಣೆ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದಾರೆ. ಪೊಲೀಸರ ಪ್ರಕಾರ, ಕಾರ್ಯಕರ್ತರು ಎಂ೪ ಖರೀದಿಸಲು ಪ್ರಯತ್ನಿಸುತ್ತಿದ್ದರು,” ಎಂದು ತಿಳಿಸಿದ್ದಾರೆ. ‘ಜನತಾ ಕಾ ರಿಪೋರ್ಟರ್’ ವೆಬ್‌ತಾಣ ಟ್ವೀಟ್ ಮಾಡಿ, ಬಂಧಿತರಲ್ಲಿ ಒಬ್ಬರಾಗಿರುವ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರ ಪತ್ರವನ್ನು ಪ್ರಕಟಿಸಿದೆ. ಸುಧಾ ಭಾರದ್ವಾಜ್ ಅವರು ತಮ್ಮ ಪತ್ರದಲ್ಲಿ ಪೊಲೀಸರು ಕಪೋಲಕಲ್ಪಿತ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪತ್ರಕರ್ತ ನಿಖಿಲ್ ವಾಘ್ಲೆ ಟ್ವೀಟ್ ಮಾಡಿ, “ಪುಣೆ ಪೊಲೀಸರು ಸಂಪೂರ್ಣ ಪ್ರಕರಣವನ್ನು ಒಂದು ತಮಾಷೆಯಾಗಿ ಬದಲಿಸಿದ್ದಾರೆ. ಜೂನ್‌ನಲ್ಲಿಯೇ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದ್ದರೂ, ೩ ತಿಂಗಳಿಂದ ಯಾವುದೇ ಸಾಕ್ಷ್ಯವನ್ನು ನೀಡಲಿಲ್ಲ. ಹೊಸ ಬಂಧನಗಳದ್ದೇ ಮತ್ತೊಂದು ಕತೆ. ಹೀಗೆ ಜನರನ್ನು ಮನಸ್ಸಿಗೆ ಬಂದಂತೆ ಬಂಧಿಸಿ ಜೈಲಿನಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತೆ ಸುಪ್ರಿಯಾ ಶರ್ಮಾ ಟ್ವೀಟ್ ಮಾಡಿ, “ಕೊನೆಗೂ ಮಹಾರಾಷ್ಟ್ರ ಪೊಲೀಸ್ ಎಡಿಜಿ ಅವರನ್ನು ಯಾರೋ ಭೀಮಾ ಕೋರೆಗಾಂವ್‌ಗೆ ಸಂಬಂಧಿಸಿದ ಹಿಂದೂ ಕಾರ್ಯಕರ್ತರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. 'ಅದು ಪ್ರತ್ಯೇಕ ಎಫ್‌ಐಆರ್‌' ಎಂದು ಅವರು ಉತ್ತರಿಸಿದ್ದಾರೆ. ಆ ಎಫ್‌ಐಆರ್‌ನಲ್ಲಿ ಪೊಲೀಸರು ಸಾಂಬಾಜಿ ಭಿಡೆ ವಿರುದ್ಧ ಪ್ರಕರಣವನ್ನು ದಾಖಲಿಸುತ್ತಿಲ್ಲ,” ಎಂದು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More