ಮಹಾರಾಷ್ಟ್ರ ಪೊಲೀಸರಿಗೆ ಸುಧಾ ಭಾರದ್ವಾಜ್ ಬರೆದ ಬಹಿರಂಗ ಪತ್ರದಲ್ಲೇನಿದೆ?

ಮಹಾರಾಷ್ಟ್ರ ಪೊಲೀಸರು ತಮ್ಮನ್ನು ಹಾಗೂ ಉಳಿದ ಹೋರಾಟಗಾರರನ್ನು ವ್ಯವಸ್ಥಿತವಾಗಿ ಅಪರಾಧಿಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ ಸುಧಾ ಭಾರದ್ವಾಜ್ ಬಹಿರಂಗ ಪತ್ರದ ಮೂಲಕ ಆರೋಪಿಸಿದ್ದಾರೆ. ಪತ್ರದ ವಿವರ ಇಂತಿದೆ

ಮಹಾರಾಷ್ಟ್ರ ಪೊಲೀಸರು ತಮ್ಮನ್ನು ಹಾಗೂ ಉಳಿದ ಹೋರಾಟಗಾರರನ್ನು ವ್ಯವಸ್ಥಿತವಾಗಿ ಅಪರಾಧಿಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಬಹಿರಂಗ ಪತ್ರದ ಮೂಲಕ ಆರೋಪಿಸಿದ್ದಾರೆ.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ಹಾಗೂ ಮಾವೋವಾದಿ ನಕ್ಸಲರ ಜೊತೆ ನಂಟು ಹೊಂದಿದ ಆರೋಪದ ಮೇಲೆ ಬಂಧಿತರಾಗಿ ಸದ್ಯ ಗೃಹಬಂಧನದಲ್ಲಿರುವ ಐವರು ಹೋರಾಟಗಾರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದರು. “ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಕೊನೆಗೊಳಿಸಲು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಹತ್ಯೆ ಮಾಡಲು ಬಂಧಿತ ಹೋರಾಟಗಾರು ಸಂಚು ರೂಪಿಸಿದ್ದಾರೆ. ಈ ಕುರಿತು ಬಂಧಿತ ಹೋರಾಟಗಾರು ಹಾಗೂ ಮಾವೋವಾದಿ ನಕ್ಸಲರ ಮಧ್ಯೆ ಪತ್ರ ವ್ಯವಹಾರ ನಡೆದಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ,” ಎಂದು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾವೋ ನಾಯಕ ಕಾಮ್ರೇಡ್ ಪ್ರಕಾಶ್ ಅವರಿಗೆ ಭಾರದ್ವಾಜ್ ಬರೆದಿದ್ದಾರೆ ಎನ್ನಲಾಗಿರುವ ಕೆಲವು ಪತ್ರಗಳನ್ನು ಪೊಲೀಸರು ಬಹಿರಂಗಪಡಿಸಿದ್ದರು.

ಪೊಲೀಸರು ಮಾಡಿರುವ ಈ ಆರೋಪಕ್ಕೆ ಕೂಡಲೇ ಸುಧಾ ಭಾರದ್ವಾಜ್ ಬಹಿರಂಗ ಪತ್ರ ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದು, “ಪೊಲೀಸರು ಆಯೋಜಿಸಿರುವ ಸುದ್ದಿಗೋಷ್ಠಿ ಹಾಗೂ ಅವರು ಬಿಡುಗಡೆ ಮಾಡಿರುವ ಪತ್ರಗಳು ನನ್ನ ಹಾಗೂ ಸಹ ಹೋರಾಟಗಾರರನ್ನು ಅಪರಾಧಿಗಳೆಂದೆ ಬಿಂಬಿಸುವ ಯತ್ನವಾಗಿದೆ. ಅಲ್ಲಿ ಪ್ರದರ್ಶಿಸಿರುವ ಪತ್ರಗಳು ಆಧಾರರಹಿತವಾಗಿದ್ದು, ಬೇಕಂತಲೇ ಸೃಷ್ಟಿಸಲಾಗಿದೆ. ಇದನ್ನೆಲ್ಲ ಗಮನಿಸಿದರೆ ಮಾನವ ಹಕ್ಕುಗಳ ವಕೀಲರು, ಕಾರ್ಯಕರ್ತರು ಹಾಗೂ ಸಂಘಟನೆಗಳ ಮೇಲೆ ದುರುದ್ದೇಶಪೂರ್ವಕವಾಗಿ ಕಳಂಕ ಹೊರಿಸುವ ಪ್ರಯತ್ನಗಳು ನಡೆಯುತ್ತಿವೆ,” ಎಂದು ಆರೋಪಿಸಿದ್ದಾರೆ.

“ಮಾವೋವಾದಿ ಸಂಘಟನೆಗಳು ಏರ್ಪಡಿಸುವ ಸಭೆ, ವಿಚಾರಗೋಷ್ಠಿ ಹಾಗೂ ಪ್ರತಿಭಟನೆಗಳಿಗೆ ನಾನು ಹಣ ನೀಡಿದ್ದೇನೆ ಎಂದು ಪೋಲಿಸರು ಆರೋಪಿಸಿದ್ದಾರೆ. ಆದರೆ ಅದೆಲ್ಲ ಕಟ್ಟುಕತೆ. ಮಾವೋವಾದಿಯ ಸಂಘಟನೆಗಳಿಗೆ ಯಾವತ್ತೂ ನಾನು ಹಣ ಸಹಾಯ ಮಾಡಿಲ್ಲ. ಹಾಗೆಯೇ ನನಗೂ ಮತ್ತು ಮಹಾರಾಷ್ಟ್ರದ ಅಂಕಿತ್ ಅಥವಾ ಕಾಮ್ರೇಡ್ ಅಂಕಿತ ಎಂದು ಕರೆಯುವ ಅಂಕಿತನಿಗೆ ಸಂಪರ್ಕ ಇದೆ ಎಂದು ಕತೆ ಕಟ್ಟಲಾಗಿದೆ. ವಾಸ್ತವದಲ್ಲಿ ಅಂಕಿತ ವೈಯಕ್ತಿವಾಗಿ ನನ್ನ ಸಂಪರ್ಕದಲ್ಲಿ ಇಲ್ಲ,” ಎಂದಿದ್ದಾರೆ.

ಇದನ್ನೂ ಓದಿ : ಸುಧಾ ಭಾರದ್ವಾಜ್, ವರವರ ರಾವ್ ಬಂಧನಕ್ಕೆ ತೀವ್ರ ಖಂಡನೆ, ಪ್ರತಿಭಟನೆ

“ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಭೆ ಸಮಾರಂಭಗಳನ್ನು, ವಿಚಾರಗೋಷ್ಠಿಗಳನ್ನು ಏರ್ಪಡಿಸಿದರೆ ಮಾವೋ ಸಂಘಟನೆಯ ಪ್ರಚೋದನೆಯಿಂದಲೇ ಸಂಘಟಿಸುತ್ತಾರೆ ಎಂದು ಸದಾ ಪೊಲೀಸರು ಅನುಮಾನಿಸುತ್ತಾರೆ. ರಾಜ್ಯದಲ್ಲಿ ವಕೀಲರ ಸಂಘವಾದ ಐಎಪಿಎಲ್ ಅನ್ನು ನಿಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಆ ಸಂಘಟನೆಯ ಹೆಮ್ಮೆ ಎಂದರೆ, ಅಲ್ಲಿರುವ ನಿವೃತ್ತ ನ್ಯಾಯಮೂರ್ತಿಗಳು ವಕೀಲರ ಮೇಲಿನ ಆಕ್ರಮಣಗಳ ಕುರಿತು ಸದಾ ಪ್ರತಿರೋಧದ ಧ್ವನಿ ಎತ್ತುತ್ತಾರೆ,” ಎಂದು ತಿಳಿಸಿದ್ದಾರೆ.

“ಜಗದಲ್ಪುರ್ ಕಾನೂನು ಸಹಾಯ ಸಂಸ್ಥೆ ನನಗೆ ಚೆನ್ನಾಗಿ ಗೊತ್ತಿದೆ. ಆ ಸಂಸ್ಥೆಯೊಂದಿಗೆ ನಾನು ಹಣಕಾಸಿನ ವ್ಯವಹಾರ ಇಟ್ಟುಕೊಂಡಿಲ್ಲ. ಅಲ್ಲದೆ, ನಿಷೇಧಿತ ಸಂಘಟನೆಗಳಿಂದ ಹಣ ತಗೆದುಕೊಳ್ಳುವುದಾಗಲೀ ಮತ್ತು ಕೊಡುವುದಾಗಲೀ ನಾನು ಮಾಡಿಲ್ಲ. ಕಾನೂನು ಚೌಕಟ್ಟಿನಡಿ ನಾನು ಬದುಕುತ್ತಿದ್ದೇನೆ. ವಕೀಲ ಪ್ರಸಾದ್ ಚೌಹಾಣ್ ಹಾಗೂ ಹಿರಿಯ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್)ನಲ್ಲಿ ದಲಿತರ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಸುಖಾಸುಮ್ಮನೇ ಅವರ ವಿರುದ್ಧವೂ ಆರೋಪ ಮಾಡಲಾಗಿದೆ,” ಎಂದು ಸುಧಾ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More