ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು  

ಲಕ್ಷ್ಮಿ ಹೆಬ್ಬಾಳ್ಕರ್-ಜಾರಕಿಹೊಳಿ ಸಹೋದರರ ನಡುವೆ ಸಂಧಾನ ಸಭೆ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ ಅವರ ದೂರಿನ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಅವರ ಮಧ್ಯೆ ಉಂಟಾಗಿರುವ ಸಂಘರ್ಷ ಬಗೆಹರಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್‌ ಅವರು ಶನಿವಾರ ಬೆಳಗಾವಿ ಪ್ರಮುಖರ ಸಭೆ ನಡೆಸಲಿದ್ದಾರೆ. ಎಪಿಎಂಸಿ ಹಾಗೂ ‍ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಚುನಾವಣೆ ವಿಷಯದಲ್ಲಿ ಎರಡು ಬಣಗಳ ಮಧ್ಯೆ ಸಂಘರ್ಷ ಆರಂಭವಾಗಿದ್ದು, ಈಚೆಗೆ ಬಹಿರಂಗವಾಗಿ ಅಸಮಧಾನಗಳು ವ್ಯಕ್ತವಾಗಿದ್ದವು.

ಇಂದಿನಿಂದ ಥರ್ಡ್ ಪಾರ್ಟಿ ವಿಮೆ ಕಡ್ಡಾಯ

ದೀರ್ಘಾವಧಿ ಥರ್ಡ್ ಪಾರ್ಟಿ ವಿಮೆ ಕಡ್ಡಾಯಗೊಂಡಿರುವುದರಿಂದ ಇಂದಿನಿಂದ ಹೊಸ ಕಾರು , ಬೈಕ್ ಖರೀದಿ ದುಬಾರಿಯಾಗಲಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ, ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೊಸ ಕಾರುಗಳಿಗೆ 3 ವರ್ಷ ಮತ್ತು ಬೈಕ್ ಗಳಿಗೆ 5 ವರ್ಷಗಳ ಥರ್ಡ್‌ ಪಾರ್ಟಿ ವಿಮೆ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಿದೆ. ಸುಪ್ರೀಂ ಕೋರ್ಟ್ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ ಎಸ್ ರಾಧಾಕೃಷ್ಣನ್ ನೇತೃತ್ವದ ರಸ್ತೆ ಸುರಕ್ಷತಾ ಸಮಿತಿಯು ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸುವಂತೆ ವರದಿ ನೀಡಿತ್ತು. ಅಪಘಾತದ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಸತ್ತರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಹೀಗಾಗಿ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಸಿಎಂ ಎಚ್‌ಡಿಕೆ ಜನತಾ ದರ್ಶನ

ಬಜೆಟ್ ಹಾಗೂ ಆನಂತರದ ರಾಜಕೀಯ ಬೆಳವಣಿಗೆಗಳಿಂದ ಜೂನ್ ಎರಡನೇ ವಾರದ ನಂತರ ನಡೆಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜನತಾ ದರ್ಶನ ಇಂದಿನಿಂದ ಪುನಾರಂಭವಾಗಲಿದೆ. ಪ್ರತಿ ಶನಿವಾರ ಬೆಳಗ್ಗೆ ೧೧ರಿಂದ ಸಂಜೆ ೪.೩೦ರವರೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ ಜನರ ದೂರು ದುಮ್ಮಾನಗಳನ್ನು ಅವರು ಆಲಿಸಲಿದ್ದಾರೆ.

ಇಂಡೋ-ಪಾಕ್ ಪಂದ್ಯಕ್ಕೆ ಕ್ಷಣಗಣನೆ

ಹದಿನೆಂಟನೇ ಏಷ್ಯಾ ಕ್ರೀಡಾಕೂಟದ ಮುಕ್ತಾಯದ ಮುನ್ನಾ ದಿನವಾದ ಇಂದು ಭಾರತ ಇನ್ನಷ್ಟು ಪದಕಗಳ ಮೇಲೆ ಕಣ್ಣಿಟ್ಟಿದೆ. ಮುಖ್ಯವಾಗಿ, ಸೆಮಿಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಸೋತು ಚಿನ್ನದ ಪದಕ ತಪ್ಪಿಸಿಕೊಂಡ ಭಾರತ ಹಾಕಿ ತಂಡ, ಇಂದು ಸಂಜೆ ೪.೦೦ಕ್ಕೆ ಶುರುವಾಗಲಿರುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಕಂಚಿನ ಪದಕಕ್ಕಾಗಿ ಸೆಣಸಲಿದೆ. ಅಂತೆಯೇ, ಚಿನ್ನದ ಪದಕಕ್ಕಾಗಿ ದೀಪಿಕಾ ಪಳ್ಳೀಕಲ್, ಜೋಶ್ನಾ ಚಿನ್ನಪ್ಪ ಇರುವ ವನಿತೆಯರ ಸ್ಕ್ವಾಶ್ ತಂಡ ಬಲಿಷ್ಠ ಹಾಂಕಾಂಗ್ ಅನ್ನು ಎದುರುಗೊಳ್ಳಲಿದ್ದು ಪಂದ್ಯ ಮಧ್ಯಾಹ್ನ ೧.೩೦ಕ್ಕೆ ಆರಂಭವಾಗಲಿದೆ. ಇನ್ನುಳಿದಂತೆ ೪೯ ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಅಮಿತ್ ಪಂಗಲ್ ಮಧ್ಯಾಹ್ನ ೨.೩೦ಕ್ಕೆ ಆರಂಭವಾಗಲಿರುವ ಬೌಟ್‌ನಲ್ಲಿ ಚಿನ್ನದ ಪದಕ ತಂದೀಯಲು ಸಜ್ಜಾಗಿದ್ದಾರೆ. ಸಂಜೆ ೭.೩೦ಕ್ಕೆ ತಂಡ ವಿಭಾಗದ ಜೂಡೊ ಸ್ಪರ್ಧೆ ನಡೆಯಲಿದ್ದು, ಭಾರತ ಮತ್ತು ನೇಪಾಳ ಹಣಾಹಣಿಗೆ ಇಳಿಯಲಿದೆ.

ಏಷ್ಯಾ ಕಪ್ ಟೂರ್ನಿಗೆ ಇಂದು ಭಾರತ ತಂಡದ ಆಯ್ಕೆ

ಇದೇ ತಿಂಗಳು ೧೫ರಿಂದ ದುಬೈನಲ್ಲಿ ಶುರುವಾಗಲಿರುವ ಪ್ರತಿಷ್ಠಿತ ಏಷ್ಯಾ ಕಪ್ ಟಿ೨೦ ಪಂದ್ಯಾವಳಿಗೆ ಭಾರತ ತಂಡವನ್ನು ಇಂದು ಪ್ರಕಟಿಸಲಾಗುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚತುಷ್ಕೋನ ಸರಣಿಯಲ್ಲಿ ಭಾರತ ಬಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ ಮನೀಶ್ ಪಾಂಡೆ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್‌ಗೆ ತಂಡದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ಕಲ್ಪಿಸಿದ್ದೇ ಆದಲ್ಲಿ ರೋಹಿತ್ ಶರ್ಮಾ ತಂಡದ ಸಾರಥ್ಯ ಹೊತ್ತುಕೊಳ್ಳುವುದು ನಿಶ್ಚಿತವಾಗಲಿದೆ. ಇನ್ನು, ಕರ್ನಾಟಕದಿಂದ ಕೆ ಎಲ್ ರಾಹುಲ್ ಕೂಡಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಮಯಾಂಕ್ ಮತ್ತು ಮನೀಶ್‌ಗೂ ಸ್ಥಾನ ಸಿಕ್ಕರೆ ಮೂವರು ಕನ್ನಡಿಗರು ಏಷ್ಯಾ ಕಪ್‌ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More