ಏಕಕಾಲಕ್ಕೆ ಚುನಾವಣೆ; ಮೋದಿ ಉತ್ಸಾಹಕ್ಕೆ ತಣ್ಣೀರು ಎರಚಿದ ಕಾನೂನು ಆಯೋಗ

ನೋಟು ರದ್ದತಿ, ಜಿಎಸ್‌ಟಿ ಮುಂತಾದ ಸಾಧನೆಗಳ ಸಾಲಿಗೆ ‘ಏಕಕಾಲಕ್ಕೆ ಚುನಾವಣೆ’ ಜಾರಿಗೆ ತಂದ ಸಾದನೆಯನ್ನೂ ಸೇರಿಸಿಕೊಳ್ಳುವ ಉಮೇದಿನಲ್ಲಿದ್ದ ಪ್ರಧಾನಿ ಮೋದಿ ಅವರಿಗೆ ಕಾನೂನು ಆಯೋಗದ ಕರಡು ವರದಿ ನಿರಾಶೆ ತಂದಿದೆ. ವ್ಯಾಪಕ ಚರ್ಚೆ ಇಲ್ಲದೆ ಅದು ಸಾಧ್ಯವಿಲ್ಲ ಎಂದಿದೆ ಆಯೋಗ

‘ಒಂದು ದೇಶ ಒಂದು ತೆರಿಗೆ’ ಬಳಿಕ ಇದೀಗ ಕೇಂದ್ರದ ಬಿಜೆಪಿ ಸರ್ಕಾರ ಅತ್ಯುತ್ಸಾಹದಿಂದ ಜಾರಿಗೆ ಮುಂದಾಗಿರುವ ‘ಒಂದು ದೇಶ-ಒಂದು ಚುನಾವಣೆ’ ನೀತಿಗೆ ಭಾರತೀಯ ಕಾನೂನು ಆಯೋಗ ಪೂರಕ ವರದಿ ನೀಡುವ ಮೂಲಕ ಬಹುತೇಕ ಹಸಿರು ನಿಶಾನೆ ತೋರಿದೆ. ಆದರೆ, ಆಯೋಗ ತನ್ನ ಅವಧಿ ಮುಗಿಯುವ ಮುನ್ನಾ ದಿನ (ಆ.೩೧) ಬಹುತೇಕ ಅಂತಿಮ ವರದಿಯನ್ನೇ ನೀಡಲಿದೆ ಎಂಬ ನಿರೀಕ್ಷೆಗಳನ್ನು ಹುಸಿಯಾಗಿಸಿ, ಕೇವಲ ಕರಡು ವರದಿ ನೀಡುವ ಮೂಲಕ, ‘ಒಂದು ದೇಶ-ಒಂದು ಚುನಾವಣೆ’ ಮಂತ್ರ ಪಠಿಸುತ್ತಿದ್ದ ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಪಕ್ಷದ ಉತ್ಸಾಹಕ್ಕೆ ಒಂದಿಷ್ಟು ತಣ್ಣೀರು ಎರಚಿದೆ ಕೂಡ. ಆ ಮೂಲಕ, ಆಡಳಿತ ಪಕ್ಷದ ಅವಸರದ ತೀರ್ಮಾನಕ್ಕೆ ಬದಲಾಗಿ, ಈ ಕುರಿತು ಸಾಕಷ್ಟು ಸಾರ್ವಜನಿಕ ಚರ್ಚೆ ಮತ್ತು ಸಂವಿಧಾನಿಕ ಅವಕಾಶಗಳ ಕುರಿತ ಮಂಥನದ ಅಗತ್ಯವನ್ನೂ ಆಯೋಗ ಒತ್ತಿ ಹೇಳಿದೆ.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ಶಕ್ತಿಯೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು. ಆದರೆ, ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಪ್ರಯತ್ನ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ಸ್ವರೂಪ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೇ ಪೆಟ್ಟು ಕೊಡಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಇದೇ ಅಭಿಪ್ರಾಯವನ್ನು ಕಾನೂನು ಆಯೋಗದ ಒಳಗೂ ಕೆಲವರು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ, ಅಂತಿಮ ಕ್ಷಣದಲ್ಲಿ ಆಯೋಗ ಅಂತಿಮ ವರದಿಗೆ ಬದಲಾಗಿ ಕರಡು ವರದಿ ಸಲ್ಲಿಸುವ ತೀರ್ಮಾನ ಕೈಗೊಂಡು, ಇದೀಗ ಕರಡು ವರದಿ ಸಲ್ಲಿಸಿದೆ. ಆ ಮೂಲಕ, ಏಕಕಾಲಕ್ಕೆ ಲೋಕಸಭಾ ಮತ್ತು ದೇಶದ ಎಲ್ಲ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಮತ್ತು ಸ್ವತಃ ಪ್ರಧಾನಿ ತೋರುತ್ತಿದ್ದ ಅತ್ಯುತ್ಸಾಹಕ್ಕೆ ತಣ್ಣೀರು ಎರಚಿದೆ.

ಹಿಂದುತ್ವದ ಅಲೆ, ಕಾಂಗ್ರೆಸ್ ವಿರೋಧಿ ಅಪಪ್ರಚಾರದ ಬಲ ಹಾಗೂ ಪ್ರಧಾನಿ ಮೋದಿಯವರ ವರ್ಚಸ್ಸಿನ ಮೇಲೆಯೇ ಚುನಾವಣೆಗಳನ್ನು ಗೆಲ್ಲಬಹುದು ಎಂಬ ವಿಶ್ವಾಸದಲ್ಲಿದ್ದ ಆಡಳಿತ ಪಕ್ಷ, ಅದೇ ವಿಶ್ವಾಸದಲ್ಲೇ ದೇಶದ ಎಲ್ಲ ರಾಜ್ಯಗಳಲ್ಲೂ ಅಧಿಕಾರ ಹಿಡಿಯುವ ಮತ್ತು ರಾಷ್ಟ್ರೀಯ ಅಲೆಯ ಬಲದ ಮೇಲೆ ಲೋಕಸಭಾ ಸ್ಥಾನಗಳನ್ನೂ ಬಹುತೇಕ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಪ್ರಧಾನಿ ಮೋದಿ ಕೂಡ ಇದೇ ಲೆಕ್ಕಾಚಾರದ ಮೇಲೆ ನೋಟು ರದ್ಧತಿ, ಜಿಎಸ್‌ಟಿ ಮುಂತಾದ ತಮ್ಮ ಹೆಗ್ಗಳಿಕೆಯ ಸಾಧನೆಗಳ ಸಾಲಿಗೆ ಏಕಕಾಲಕ್ಕೆ ಚುನಾವಣೆ ಜಾರಿಗೆ ತಂದ ಸಾದನೆಯನ್ನೂ ಸೇರಿಸಿಕೊಳ್ಳುವ ಉಮೇದಿನಲ್ಲಿದ್ದರು.

ಆದರೆ, ಕಳೆದ ವಾರವಷ್ಟೇ ಚುನಾವಣಾ ಆಯೋಗ ಅಂತಹ ಸಾಧ್ಯತೆಯನ್ನು ತಳ್ಳಿಹಾಕಿತ್ತು. ಏಕಕಾಲಕ್ಕೆ ದೇಶದ ಎಲ್ಲ ವಿಧಾನಸಭೆ ಮತ್ತು ಲೋಕಸಭೆಗೆ ಚುನಾವಣೆ ನಡೆಸುವಷ್ಟು ತಾಂತ್ರಿಕ, ಹಣಕಾಸು ಮತ್ತು ಸಿಬ್ಬಂದಿ ಬೆಂಬಲ ತಮಗೆ ಇಲ್ಲ. ಅದು ಸದ್ಯದ ಸ್ಥಿತಿಯಲ್ಲಿ ಕಾರ್ಯಸಾಧುವೂ ಅಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದರು. ಆದರೆ, ಪ್ರಧಾನಿ ಮೋದಿಯವರು ಈ ಬಗ್ಗೆ ಮತ್ತೆ-ಮತ್ತೆ ಪ್ರಸ್ತಾಪಿಸುವ ಮೂಲಕ ಪರೋಕ್ಷವಾಗಿ ತಮ್ಮ ನಿಲುವನ್ನು ಸಾರ್ವಜನಿಕ ವ್ಯವಸ್ಥೆಯ ಮೇಲೆ ಹೇರುವ ಪ್ರಯತ್ನವನ್ನೂ ಮಾಡಿದ್ದರು.

ಮೋದಿಯವರು ಅಷ್ಟು ಒತ್ತಾಸೆ ಮತ್ತು ಆಸಕ್ತಿಯಿಂದ ಆ ವಿಷಯವನ್ನು ಮತ್ತೆ-ಮತ್ತೆ ಪ್ರಸ್ತಾಪಿಸುತ್ತಿದ್ದ ಮತ್ತೊಂದು ಕಾರಣ; ಏಕಕಾಲಕ್ಕೆ ಚುನಾವಣೆ ನಡೆಸುವ ಜೊತೆಗೆ, ಆ ವ್ಯವಸ್ಥೆಗೆ ಪೂರಕ ಸಂವಿಧಾನ ತಿದ್ದುಪಡಿಯ ಮೂಲಕ ಪ್ರಧಾನಿ ಆಯ್ಕೆ ಪ್ರಕ್ರಿಯೆ ಮತ್ತು ಅಧಿಕಾರವನ್ನು ಕೂಡ ಬದಲಾಯಿಸುವ ಉದ್ದೇಶವಿದೆ ಎಂಬ ಅನುಮಾನಗಳಿದ್ದವು. ಆ ಅನುಮಾನಗಳಿಗೆ ಪೂರಕವಾಗಿ ಇದೀಗ ಆಯೋಗದ ಕರಡು ವರದಿಯಲ್ಲಿಯೂ ಪ್ರಧಾನಿ ಆಯ್ಕೆಯ ಕುರಿತು ಕೆಲವು ಸಲಹೆ ಮತ್ತು ಶಿಫಾರಸುಗಳನ್ನು ನೀಡಲಾಗಿದೆ.

ವರದಿಯ ಪ್ರಕಾರ, ದೇಶದ ಪ್ರಧಾನಿ ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೂಡ ಈಗಿರುವ ಬಹುಮತ ಪಡೆದ ಅಥವಾ ಬಹುಮತ ಸಾಬೀತಿನ ವಿಶ್ವಾಸ ಹೊಂದಿರುವ ಪಕ್ಷದ ಶಾಸಕರು ಅಥವಾ ಸಂಸದರು ಒಮ್ಮತದಿಂದ ತಮ್ಮ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡುವ ಬದಲಾಗಿ, ವಿಧಾನಸಭಾ ಅಥವಾ ಲೋಕಸಭಾ ಅಧ್ಯಕ್ಷರ (ಸ್ಪೀಕರ್) ನೇಮಕದ ಮಾದರಿಯಲ್ಲಿ ಆಯ್ಕೆ ಮಾಡಬಹುದು. ಆ ಮೂಲಕ ಅವಿಶ್ವಾಸ ಗೊತ್ತುವಳಿಯಂತಹ ಪರಿಸ್ಥಿತಿಯನ್ನು ತಡೆಯುವುದು ಮತ್ತು ಅವಧಿಪೂರ್ವ ಚುನಾವಣೆಗಳನ್ನು ತಡೆಯುವುದು ಸಾಧ್ಯ ಎಂದೂ ಹೇಳಲಾಗಿದೆ. ಅಲ್ಲದೆ, ಅವಿಶ್ವಾಸ ಗೊತ್ತುವಳಿಯ ಕುರಿತ ಹಾಲಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಒಮ್ಮೆ ಆಯ್ಕೆಯಾದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವಂತೆ ಕಾನೂನಾತ್ಮಕ ರಕ್ಷಣೆ ಒದಗಿಸುವ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ರಾಷ್ಟ್ರೀಯ ವಿಷಯಗಳೇ ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದರಿಂದ ಮತ್ತು ರಾಷ್ಟ್ರೀಯ ಪ್ರಭಾವಿ ನಾಯಕತ್ವಗಳ ಎದುರು ಸ್ಥಳೀಯ ಪ್ರಾದೇಶಿಕ ನಾಯಕತ್ವಗಳು ಮಂಕು ಕವಿಯುವುದರಿಂದ ರಾಜ್ಯಗಳ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷ, ನಾಯಕತ್ವವೇ ಜನಾದೇಶ ಪಡೆಯಲಿದೆ. ಇದು ಪ್ರಾದೇಶಿಕ ಪಕ್ಷಗಳು ಮತ್ತು ಸ್ಥಳೀಯ ನಾಯಕತ್ವಕ್ಕೆ ಕೊಡಲಿಪೆಟ್ಟು ಕೊಡಲಿದೆ ಎಂಬುದು ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ವಿರೋಧಿಸುವ ಎಲ್ಲರ ಪ್ರಮುಖ ಆಕ್ಷೇಪ. ಜೊತೆಗೆ, ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ರಚನೆಗೆ ಇಂತಹ ಕ್ರಮ ಪೆಟ್ಟು ಕೊಡಲಿದೆ ಎಂಬುದು ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳ ವಾದವಾಗಿತ್ತು. ಆ ಆತಂಕಕ್ಕೆ ಈಗ, ಪ್ರಧಾನಿ ಹುದ್ದೆಯ ಅಧಿಕಾರವನ್ನು ಸ್ಥಾಪಿತಗೊಳಿಸುವ ಪ್ರಸ್ತಾಪ ಕೂಡ ಸೇರಿಕೊಂಡಿದೆ.

ಆದರೆ, ಸದ್ಯಕ್ಕೆ ೨೦೧೯ರ ಲೋಕಸಭೆಯ ಒಟ್ಟಿಗೇ ಎಲ್ಲ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಸುವ ಉಮೇದಿನಲ್ಲಿದ್ದ ಬಿಜೆಪಿ ಮತ್ತು ಮೋದಿಯವರ ಉದ್ದೇಶ ಕೈಗೂಡುವಂತಿಲ್ಲ. ಏಕೆಂದರೆ, ಸಂವಿಧಾನ ತಿದ್ದುಪಡಿ ಇಲ್ಲದೆ, ಹೀಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ. ಸಂವಿಧಾನ ತಿದ್ದುಪಡಿಗೆ ಮುನ್ನ ಆ ಕುರಿತ ಚರ್ಚೆಗೆ ಸಾಕಷ್ಟು ಕಾಲಾವಕಾಶ ಹಿಡಿಯಲಿದೆ ಮತ್ತು ಒಂದು ವೇಳೆ ಸರ್ಕಾರದ ಆಸಕ್ತಿ ವಹಿಸಿ ತಿದ್ದುಪಡಿ ಮಸೂದೆ ಮಂಡಿಸಿದರೂ, ಸಂಸತ್ತಿನ ಉಭಯ ಸದನಗಳಲ್ಲಿ ಅದು ಅನುಮೋದನೆಗೆ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ. ಹಾಗಾಗಿ, ೨೦೨೪ರ ಲೋಕಸಭಾ ಚುನಾವಣೆಯವರೆಗೆ ಏಕಕಾಲಕ್ಕೆ ಚುನಾವಣೆಯ ಸಾಧ್ಯತೆ ಇಲ್ಲ ಎಂದು ಸ್ವತಃ ಕಾನೂನು ಆಯೋಗದ ಮೂಲಗಳನ್ನೇ ಉಲ್ಲೇಖಿಸಿ ‘ದಿ ಪ್ರಿಂಟ್’ ಅಂತರ್ಜಾಲ ಮಾಧ್ಯಮ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ಒಂದು ದೇಶ, ಒಂದು ಚುನಾವಣೆ | ಬಿಜೆಪಿ ಅವಸರಕ್ಕೆ ಬ್ರೇಕ್‌ ಹಾಕಿದ ಆಯೋಗ 

ಅಪಾರ ಹಣಕಾಸು ವೆಚ್ಚ, ಚುನಾವಣಾ ನೀತಿ ಸಂಹಿತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆ, ಅಪಾರ ಸಿಬ್ಬಂದಿ ಅಗತ್ಯ, ಚುನಾವಣಾ ರಾಜಕಾರಣದ ವರಸೆ ದೂರಗಾಮಿ ಅಭಿವೃದ್ಧಿ ಕಾರ್ಯಕ್ಕೆ ಮತ್ತು ಸಧೃಢ ಆಡಳಿತಕ್ಕೆ ಒಡ್ಡುವ ಅಡ್ಡಿ ಮುಂತಾದ ಕಾರಣಗಳ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಗತ್ಯ ಎಂಬುದು ಪ್ರಧಾನಿ ಮೋದಿ ಮತ್ತು ಬಿಜೆಪಿಯ ನಿಲುವಾಗಿತ್ತು. ಆದರೆ, ಇದೀಗ ಕಾನೂನು ಆಯೋಗ ಆ ಕುರಿತ ವ್ಯಾಪಕ ಸಾರ್ವಜನಿಕ ಚರ್ಚೆ ಮತ್ತು ಸಂವಿಧಾನ ತಿದ್ದುಪಡಿಯ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಮೂಲಕ ಪರೋಕ್ಷವಾಗಿ ಈ ವಿಷಯದಲ್ಲಿ ಅವಸರದ ಮತ್ತು ದುಡುಕಿನ ತೀರ್ಮಾನ ಸಲ್ಲದು ಎಂಬ ಸಂದೇಶವನ್ನು ಸಾರಿದೆ.

ಈಗಾಗಲೇ ನೋಟು ರದ್ದತಿಯಂತಹ ದುಡುಕಿನ ಮತ್ತು ಪ್ರಚಾರದ ಹಂಬಲದ ಕ್ರಮಗಳು ದೇಶದ ಆರ್ಥಿಕತೆ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಎಂತಹ ಪೆಟ್ಟು ನೀಡಿವೆ ಮತ್ತು ಅದು ಎಷ್ಟು ಹಾಸ್ಯಾಸ್ಪದ ಕ್ರಮ ಎಂಬುದು ಮೊನ್ನೆ ತಾನೇ ಆರ್‌ಬಿಐ ಬಿಡುಗಡೆ ಮಾಡಿರುವ ವರದಿಯಿಂದ ಸಾಬೀತಾಗಿದೆ. ಸರ್ಕಾರಕ್ಕೆ ದೊಡ್ಡ ಹಿನ್ನಡೆ ತಂದಿರುವ ಮತ್ತು ಪ್ರಧಾನಿಗೆ ತೀವ್ರ ಮುಖಭಂಗ ಉಂಟುಮಾಡಿರುವ ಆರ್‌ಬಿಐ ವರದಿಯ ಬಳಿಕ, ಇದೀಗ ಕಾನೂನು ಆಯೋಗ ಕೂಡ ಏಕಕಾಲಕ್ಕೆ ಚುನಾವಣೆ ನಡೆಸುವ ವಿಷಯದಲ್ಲಿ ಆಡಳಿತ ಪಕ್ಷಕ್ಕೆ ಪೂರಕ ವರದಿ ನೀಡಿಲ್ಲ.

ಇನ್ನು ಹೊಸ ಕಾನೂನು ಆಯೋಗ ರಚನೆಯಾಗಿ, ಅದು ಈಗಿನ ಕರಡು ವರದಿಯ ಕುರಿತ ಸಾರ್ವಜನಿಕ ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮ ವರದಿ ಸಿದ್ಧಪಡಿಸಿ ಸಲ್ಲಿಸಿದ ಬಳಿಕವಷ್ಟೇ ಸರ್ಕಾರದ ಆ ಕುರಿತ ಅಗತ್ಯ ಮಸೂದೆ ಸಿದ್ಧಪಡಿಸಲು ಸಾಧ್ಯ. ಹಾಗಾಗಿ, ಸದ್ಯಕ್ಕೆ ಏಕ ಕಾಲಕ್ಕೆ ಚುನಾವಣೆ ಎಂಬುದು ಇನ್ನೂ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಯ ವಿಷಯವಾಗಿಯೇ ಉಳಿಯಲಿದೆ. ಇದು, ಈ ಕುರಿತ ಭಿನ್ನ ಅಭಿಪ್ರಾಯ ಮತ್ತು ಕೆಲ ಆತಂಕ ಹೊಂದಿದ್ದ ರಾಜಕೀಯ ಪಕ್ಷಗಳ ಪಾಲಿಗೆ ನಿರಾಳವೆನಿಸಿದರೆ, ಮುಂಬರುವ ಚುನಾವಣೆಯಲ್ಲಿ ಮತದಾರರ ಮುಂದೆ ತನ್ನ ಹೆಗ್ಗಳಿಕೆಗಳ ಪಟ್ಟಿ ಮಂಡಿಸಲು ಸಿದ್ಧವಾಗಿದ್ದ ಬಿಜೆಪಿಗೆ ಹಿನ್ನಡೆ ತಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More