ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ

ಮುಂದಿನ ಮುಖ್ಯ ನಾಯಮೂರ್ತಿ ಯಾರಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಸಿಜೆಐ ದೀಪಕ್ ಮಿಶ್ರಾ ಅವರು ಅಕ್ಟೋಬರ್ ಮೊದಲ ವಾರದಲ್ಲಿ ನಿವೃತ್ತಿ ಹೊಂದುತ್ತಿದ್ದು, ಅವರ ಉತ್ತರಾಧಿಕಾರಿಯಾಗಿ ನ್ಯಾ.ರಂಜನ್ ಗೊಗೊಯ್ ನೇಮಕವಾಗಿದ್ದಾರೆ

ಭಾರತದ ಮುಂದಿನ ಮುಖ್ಯ ನಾಯಮೂರ್ತಿ (ಸಿಜೆಐ) ಯಾರಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ೪೫ನೇ ಸಿಜೆಐಯಾಗಿ ನೇಮಕಗೊಂಡಿದ್ದ ದೀಪಕ್ ಮಿಶ್ರಾ ಅವರು ಅಕ್ಟೋಬರ್ ಮೊದಲ ವಾರದಲ್ಲಿ ನಿವೃತ್ತಿ ಹೊಂದುತ್ತಿದ್ದು, ಅವರ ಉತ್ತರಾಧಿಕಾರಿಯಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇಮಕವಾಗಲಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಹೊಂದುವ ೩೦ ದಿನಗಳೊಳಗೆ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರು ಎಂಬುದನ್ನು ಅವರೇ ನಿರ್ಧರಿಸಬೇಕಿರುವುದು ನಿಯಮ. ಈ ಹಿನ್ನೆಲೆಯಲ್ಲಿ ನ್ಯಾ.ರಂಜನ್ ಗೊಗೊಯ್ ಅವರ ಹೆಸರನ್ನು ಸಿಜೆಐ ದೀಪಕ್ ಮಿಶ್ರಾ ಅವರು ಅಂಗೀಕರಿಸಿ ಕಾನೂನು ಸಚಿವಾಲಯಕ್ಕೆ ಶನಿವಾರ ಶಿಫಾರಸು ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ನ್ಯಾ.ರಂಜನ್ ಗೊಗೊಯ್ ಅವರ ಹೆಸರನ್ನೇ ಅಂಗೀಕರಿಸಬೇಕು ಎಂದು ಕೋರಿ ಸಿಜೆಐ ಮಿಶ್ರಾ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ನೆನೆಯಬಹುದು.

ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿಯನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವುದು ನಿಯಮ. ಎರಡನೇ ಸ್ಥಾನದಲ್ಲಿ ನ್ಯಾ.ರಂಜನ್ ಗೊಗೊಯ್ ಅವರೇ ಇದ್ದು, ಬರುವ ಅಕ್ಟೋಬರ್ ೩ರಂದು ೪೬ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಗೊಗೊಯ್ ಅವರ ಸೇವಾ ಅವಧಿ ಇನ್ನೂ ೧೪ ತಿಂಗಳಿದ್ದು, ೨೦೧೯ರ ನವೆಂಬರ್ ೧೭ರಂದು ನಿವೃತ್ತಿ ಹೊಂದಲಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ವಿಶೇಷ ಆಸಕ್ತಿಯನ್ನು ವಹಿಸಿ ಮಸೂದೆ ರೂಪಿಸಿತ್ತು ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಕೇಂದ್ರ ಕಾನೂನು ಸಚಿವಾಲಯ ಇಂಥ ಸುದ್ದಿಯನ್ನು ಅಲ್ಲಗಳೆದಿದೆ.

ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಐದು ನ್ಯಾಯಮೂರ್ತಿಗಳಲ್ಲಿ ನ್ಯಾ.ರಂಜನ್ ಗೊಗೊಯ್ ಕೂಡ ಒಬ್ಬರಾಗಿದ್ದಾರೆ. ೨೦೧೮ರ ಜನವರಿಯಲ್ಲಿ ಕೊಲಿಜಿಯಂಗೆ ಸೇರಿದ ನಾಲ್ವರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ, ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ದೇಶಾದ್ಯಂತ ಚರ್ಚೆಗೆ ಒಳಗಾಗಿತ್ತು. ಆ ಸುದ್ದಿಗೋಷ್ಠಿಯಲ್ಲಿ ನ್ಯಾ.ಜೆ ಚೆಲಮೇಶ್ವರ (ನಿವೃತ್ತಿ ಹೊಂದಿದ್ದಾರೆ), ನ್ಯಾ.ಎಂ ಬಿ ಲೋಕುರ್, ನ್ಯಾ.ಕುರಿಯನ್ ಜೋಸೆಫ್ ಅವರೊಂದಿಗೆ ನ್ಯಾ.ರಂಜನ್ ಗೊಗೊಯ್ ಕೂಡ ಆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದು ಗಮನಾರ್ಹ.

ಇದನ್ನೂ ಓದಿ : ಗಾಂಧಿ ಹತ್ಯೆಯ ಮರುತನಿಖೆಗೆ ಆದೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ವಿಶೇಷ ಸಿಬಿಐ ನ್ಯಾಯಾಧೀಶ ಬಿ ಎಚ್ ಲೋಯಾ ಅವರ ಸಾವಿನ ತನಿಖೆಯ ಪ್ರಕರಣದ ವಿಚಾರಣೆಯನ್ನು ಕಿರಿಯ ನ್ಯಾಯಾಧೀಶರಿಗೆ ನೀಡಲಾಗಿರುವ ಬಗ್ಗೆ ಕಳಕಳಿಯನ್ನು ರಂಜನ್ ಗೊಗೊಯ್ ವ್ಯಕ್ತಪಡಿಸಿದ್ದರು. ಸುದ್ದಿಗೋಷ್ಠಿ ವಿಚಾರವಾಗಿ ಮೌನವನ್ನೇ ಕಾಯ್ದುಕೊಂಡು ಬಂದ ಸಿಜೆಐ ಮಿಶ್ರಾ ಅವರು, ಆಗಸ್ಟ್ ಆರಂಭದಲ್ಲಿ ಮೊದಲ ಬಾರಿಗೆ ಆ ಕುರಿತು ಮೌನ ಮುರಿದು, “ನ್ಯಾಯಾಂಗ ವ್ಯವಸ್ಥೆಯ ನೈಜ ಸವಾಲಗಳನ್ನು ಅರಿಯಬೇಕು. ಸುಖಾಸುಮ್ಮನೆ ಏನೇನೋ ಮಾತನಾಡಬಾರದು,” ಎಂದು ಪರೋಕ್ಷವಾಗಿ ಆ ನಾಲ್ವರು ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ನೀಡಿದ್ದರು.

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಿಜೆಐ ಮಿಶ್ರಾ ಮಾತನಾಡುತ್ತ, “ವ್ಯವಸ್ಥೆಯನ್ನು ಟೀಕಿಸುವುದು, ಅದರ ಮೇಲೆ ದಾಳಿ ಮಾಡುವುದು ಮತ್ತು ನಾಶ ಮಾಡುವುದು ತುಂಬಾ ಸುಲಭ. ಆದರೆ ವ್ಯವಸ್ಥೆಯನ್ನು ರೂಪಿಸುವುದು ಕಷ್ಟಕರ ಹಾಗೂ ಸವಾಲಿನದ್ದು. ಇದು ಸಾಧ್ಯವಾಗಬೇಕಾದರೆ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಅಥವಾ ಕುಂದುಕೊರತೆಗಳನ್ನು ಮೀರಬೇಕಾಗುತ್ತದೆ,” ಎಂದು ತಿರುಗೇಟು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More