ರುಪಾಯಿ ಕುಸಿತ ಪರಿಣಾಮ ಮತ್ತೆ ಬಡ್ಡಿದರ ಏರಿಸಲಿದೆ ಆರ್‌ಬಿಐ: ಎಸ್‌ಬಿಐ ವರದಿ

ಅಮೆರಿಕದ ಡಾಲರ್ ವಿರುದ್ಧ ಸತತವಾಗಿ ಕುಸಿಯುತ್ತಿರುವ ರುಪಾಯಿ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕಾಪಾಡಲು ಮಧ್ಯಪ್ರವೇಶದಿಂದಾದ ವೆಚ್ಚದ ಹಿನ್ನೆಲೆಯಲ್ಲಿ ಆರ್‌ಬಿಐ ಮತ್ತೆ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ

ಸತತವಾಗಿ ಕುಸಿಯುತ್ತಿರುವ ರುಪಾಯಿ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆ ಮಧ್ಯಪ್ರವೇಶಿಸಿದ್ದರಿಂದಾದ ವೆಚ್ಚದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಬಡ್ಡಿದರ ಏರಿಸುವ ಸಾಧ್ಯತೆ ಇದೆ. ಒಂದು ವೇಳೆ ಬಡ್ಡಿ ದರ ಏರಿಸಿದರೆ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಅಭಿವೃದ್ಧಿ ದಾಖಲಿಸಿರುವ ಜಿಡಿಪಿ ಪೂರ್ಣವರ್ಷದಲ್ಲಿ ಶೇ.7.5ಕ್ಕೆ ಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನಾ ವರದಿ ‘ಇಕೊರ್ಯಾಪ್’ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಹಿಂದಿನ ಜೂನ್ ಮತ್ತು ಆಗಸ್ಟ್ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ತಲಾ 25 ಅಂಶಗಳಷ್ಟು ರೆಪೊದರ (ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಏರಿಸಿದೆ. ಈಗ ರೆಪೊದರ ಶೇ.6.50ಕ್ಕೇರಿದೆ. ಅಕ್ಟೋಬರ್ 3-5ರವರೆಗೆ ನಡೆಯಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಮತ್ತೆ 25 ಅಂಶಗಳಷ್ಟು ರೆಪೊದರ ಏರಿಸುವ ಸಾಧ್ಯತೆ ಇದೆ.

ಆರ್‌ಬಿಐ ಸತತವಾಗಿ ಬಡ್ಡಿದರ ಏರಿಕೆ ಮಾಡುವುದರ ಪರಿಣಾಮ ಖಾಸಗಿ ಉಪಭೋಗ ವೆಚ್ಚದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. 2014ರಲ್ಲಿ ಸತತ ಮೂರು ಬಾರಿ ಬಡ್ಡಿದರ ಏರಿಕೆ ಮಾಡಿದ್ದರ ಪರಿಣಾಮ ಖಾಸಗಿ ಉಪಭೋಗ ವೆಚ್ಚವು 2014ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಶೇ.2ಕ್ಕೆ ಕುಸಿದಿತ್ತು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

“ಸತತವಾಗಿ ಕುಸಿಯುತ್ತಿರುವ ರುಪಾಯಿ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್‌ಬಿಐ ಮಧ್ಯಪ್ರವೇಶ ಮಾಡಿದ್ದರಿಂದಾಗಿರುವ ವೆಚ್ಚದ ಪರಿಣಾಮ ಮತ್ತೊಂದು ಸುತ್ತು ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ. ಇದು ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಅಭಿವೃದ್ಧಿ ಮೊದಲ ತ್ರೈಮಾಸಿಕದಲ್ಲಿ ಶೇ.8.2ರಷ್ಟಾಗಿದ್ದರೂ ಪೂರ್ಣವರ್ಷದಲ್ಲಿ ಶೇ.7.5ಕ್ಕೆ ತಗ್ಗಲಿದೆ,” ಎಂದು ಆರ್‌ಬಿಐ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ತಿಳಿಸಿದ್ದಾರೆ.

“ಕಳೆದ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕೃಷಿಯೇತರ ಒಟ್ಟು ಮೌಲ್ಯವರ್ಧನೆ (ಜಿವಿಎ) ಶೇ.11.5ರಷ್ಟು ಇದ್ದದ್ದು, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.14ಕ್ಕೆ ಏರಿದೆ. ಇದೇ ಅವಧಿಯಲ್ಲಿ ಕೃಷಿ ಮೌಲ್ಯವರ್ಧನೆಯು ಶೇ.10.9ರಿಂದ ಶೇ.7ಕ್ಕೆ ತಗ್ಗಿದೆ. ಕೃಷಿ ವಲಯಕ್ಕೆ ಮುಖ್ಯವಾಗಿ ಬೆಳೆಗಳಿಗೆ ಸರ್ಕಾರದ ನೀತಿಯ ಬೆಂಬಲ ಅಗತ್ಯವಿದೆ. ಕನಿಷ್ಠ ಬೆಂಬಲ ಬೆಲೆ ರೈತರಿಗೆ ತಲುಪಬೇಕಾದರೆ ಸರ್ಕಾರ ಧಾನ್ಯ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಅಗತ್ಯವಿದೆ. ಇದರ ಜೊತೆಗೆ ಕೃಷಿ ಉತ್ಪನ್ನಗಳ ಮುಕ್ತ ಮಾರುಕಟ್ಟೆ ದರ ಮತ್ತು ಕನಿಷ್ಠ ಬೆಂಬಲ ಬೆಲೆಯ ಅಂತರವನ್ನು ಭರಿಸಲು ರಾಜ್ಯ ಸರ್ಕಾರಗಳು ಮುಂದಾಗಬೇಕು,” ಎಂದು ಘೋಷ್ ಹೇಳಿದ್ದಾರೆ.

ಕೃಷಿ ಮತ್ತು ಕೃಷಿ ಸಂಬಂಧಿ ವಲಯದ ಒಟ್ಟು ಮೌಲ್ಯವರ್ಧನೆ ಶೇ.5.3ಕ್ಕೆ ಏರಿದ್ದರೂ ಇದಕ್ಕೆ ಮುಖ್ಯ ಕಾರಣ ಹೈನೋದ್ಯಮ, ಅರಣ್ಯ ಮತ್ತು ಮೀನುಗಾರಿಕೆ ವಲಯದ ಅಭಿವೃದ್ಧಿ ಶೇ.8.1ಕ್ಕೆ ಏರಿರುವುದು. ವಾಸ್ತವವಾಗಿ ಕೃಷಿ ಅಭಿವೃದ್ಧಿ ಶೇ.2.5ರಷ್ಟಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ರೆಪೊದರ ಏರಿಸಿದ ಆರ್‌ಬಿಐ; ಸಾಲಗಳ ಮೇಲೆ ಹೆಚ್ಚು ಇಎಂಐ ಪಾವತಿಸಲು ಸಿದ್ದರಾಗಿ

ಪರಿಣಾಮಗಳೇನು?: ಒಂದು ವೇಳೆ ಆರ್‌ಬಿಐ ಅಕ್ಟೋಬರ್ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ 25 ಅಂಶಗಳಷ್ಟು ರೆಪೊದರ ಏರಿಸಿದರೆ ಒಟ್ಟು ರೆಪೊದರ ಶೇ.6.57ಕ್ಕೆ ಏರುತ್ತದೆ. ಇದು ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ರೆಪೊದರ ಏರಿಕೆಗೆ ಅನುಗುಣವಾಗಿ ಬ್ಯಾಂಕುಗಳು ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಸುತ್ತವೆ. ಈಗಾಗಲೇ ಸತತ ಎರಡು ಬಾರಿ ಬ್ಯಾಂಕುಗಳು ಬಡ್ಡಿದರ ಏರಿಸಿವೆ. ಈಗಿರುವ ಬಡ್ಡಿದರವೇ ಗ್ರಾಹಕರಿಗೆ ಹೊರೆಯಾಗುವ ಮಟ್ಟದಲ್ಲಿದೆ. ಮತ್ತೆ ಬಡ್ಡಿದರ ಏರಿಸಿದರೆ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುತ್ತದೆ.

ಇದರಿಂದ ಗ್ರಾಹಕರು ಸಾಲ ಪಡೆಯುವ ಪ್ರಮಾಣ ತಗ್ಗುತ್ತದೆ. ಇದು ಪರೋಕ್ಷವಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ, ವಾಹನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಡೀ ಆರ್ಥಿಕ ಚಟುವಟಿಕೆಗೆ ನಿಧಾನಗತಿಗೆ ಸರಿಯುತ್ತದೆ. ಆಗ ಒಟ್ಟಾರೆ ಜಿಡಿಪಿ ಕುಸಿಯುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More