ನೋಟು ಅಮಾನ್ಯ ಕುರಿತ ವಿಶ್ಲೇಷಣೆಯಲ್ಲಿ ಮುಗ್ಗರಿಸಿದ 13 ಮಂದಿ ದಿಗ್ಗಜರಿವರು!

ನೋಟು ಅಮಾನ್ಯ ಘೋಷಿಸಿದಾಗ ಹಲವು ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮಿಗಳು ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಕೊಂಡಾಡಿದರು. ಆದರೆ, ಈ ಕ್ರಮದಿಂದ ಆರ್ಥಿಕತೆ ಮೇಲೆ ಉಂಟಾದ ಅಗಾಧ ಋಣಾತ್ಮಕ ಪರಿಣಾಮಕ್ಕೆ ಹೋಲಿಸಿದರೆ ಗಳಿಸಿಕೊಂಡಿದ್ದು ತೀರಾ ಕಡಿಮೆ

೨೦೧೬ರ ನವೆಂಬರ್ ೮ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೧,೦೦೦ ರೂಪಾಯಿ ಮತ್ತು ೫೦೦ ರೂಪಾಯಿ ಮುಖಬೆಲೆಯ ದೊಡ್ಡ ನೋಟುಗಳ ಅಮಾನ್ಯ ಮಾಡುವ ಮೂಲಕ ಕಪ್ಪುಹಣದ ವಿರುದ್ಧದ ತಮ್ಮ ಸರ್ಜಿಕಲ್ ಸ್ಟ್ರೈಕ್ ಘೋಷಿಸಿದಾಗ ಹಲವು ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮಿಗಳು ಪ್ರಧಾನಿಗಳ ಕ್ರಮವನ್ನು ಕೊಂಡಾಡಿದರು. ಈಗ ಅದಾಗಿ ಹೆಚ್ಚೂಕಡಿಮೆ ಎರಡು ವರ್ಷಗಳಾದ ಮೇಲೆ, ಈ ಕ್ರಮದಿಂದ ಆರ್ಥಿಕತೆ ಮೇಲೆ ಉಂಟಾದ ಅಗಾಧ ಋಣಾತ್ಮಕ ಪರಿಣಾಮಕ್ಕೆ ಹೋಲಿಸಿದರೆ ಗಳಿಸಿಕೊಂಡಿದ್ದು ತೀರಾ ಕಡಿಮೆ ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವರದಿ ಹೊರಗೆಡವಿದೆ.

೨೦೧೬ರ ನವೆಂಬರ್-ಡಿಸೆಂಬರ್‌ನಲ್ಲಿ ತಜ್ಞರು ಏನು ಹೇಳಿದ್ದರು ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ; ಪಂಡಿತರೂ ಕೂಡ ಹೇಗೆ ಭಯಾನಕ ರೀತಿಯಲ್ಲಿ ತಪ್ಪಾಗಿ ಅರ್ಥಮಾಡಿಕೊಂಡು ಮುಗ್ಗರಿಸಬಹುದು ಎಂಬುದನ್ನು ಈ ಮಾತುಗಳು ತೊರಿಸುತ್ತವೆ.

ಆರ್ ಜಗನ್ನಾಥನ್

"ಲೆಕ್ಕಾಚಾರ ಈ ರೀತಿ ಆಗಬಹುದು: ನೊಟುಗಳ ಅಮಾನ್ಯದ ಪರಿಣಾಮವಾಗಿ ೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ಬಹುತೇಕ ನೋಟುಗಳು ವ್ಯವಸ್ಥೆಯ ಹೊರಗಡೆಯೇ ಉಳಿದುಬಿಟ್ಟರೆ ಆರ್‌ಬಿಐ ಆ ಋಣಭಾರವನ್ನು ಕಡಿಮೆ ಮಾಡಿಕೊಂಡು ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದ ಲಾಭವನ್ನು ಕೊಡಬಹುದು. ಈ ಲಾಭದ ಪ್ರಮಾಣ ಪ್ರಾಯಶಃ ೧.೫ ಲಕ್ಷ ಕೋಟಿಯಿಂದ ೨ ಲಕ್ಷ ಕೋಟಿಗಳ ತನಕ ಆಗಬಹುದು. ಆಗ ಬಡ್ಡಿದರಗಳು ಕಡಿಮೆಯಾಗುವ ಮೂಲಕ (ಈಗಾಗಲೇ ಅದು ಆಗುತ್ತಿದೆ) ಹಾಗೂ ಮರೆಮಾಚಿದ ಆದಾಯಗಳು ತೆರಿಗೆ ಇಲಾಖೆಯ ಗಮನಕ್ಕೆ ಬರುವುದರಿಂದ ಸರ್ಕಾರದ ತೆರಿಗೆ ಆದಾಯವೂ ಹೆಚ್ಚಾಗುವ ಮೂಲಕ ಪ್ರಯೋಜನವಾಗುತ್ತದೆ.”

“ಬ್ಯಾಂಕುಗಳ ಮರುಬಂಡವಾಳೀಕರಣಕ್ಕಾಗಿ, ಪ್ರತಿ ಜನ್ ಧನ್ ಖಾತೆದಾರರಿಗೆ ನಗದು ಹಣ ನೀಡುವುದಕ್ಕಾಗಿ (ಇದನ್ನು ಕಪ್ಪುಹಣದ ಕುಳಗಳಿಂದ ವಸೂಲಿ ಮಾಡಿದ ಹಣ ಎಂದು ಪ್ರಚಾರ ಮಾಡಲಾಗಿತ್ತು), ತೆರಿಗೆಗಳನ್ನು ಕಡಿತ ಮಾಡುವುದಕ್ಕಾಗಿ ಮತ್ತು ಅಭಿವೃದ್ಧಿಪೂರಕ ಮೂಲಸೌಕರ್ಯಗಳಲ್ಲಿ ಬಂಡವಾಳ ಹೂಡುವುದಕ್ಕಾಗಿ ಮೋದಿಯವರು ೨೦೧೭ರಲ್ಲಿ ಮಾಡಬೇಕಾದದ್ದು ಕೇವಲ ೩ ಲಕ್ಷ ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡುವುದಷ್ಟೆ. ಅವರಿಗೆ ರಾಜಕೀಯವಾಗಿ ಲಾಭಗಳು ನಷ್ಟಗಳಿಗಿಂತ ಹೆಚ್ಚಾಗಿರುವಂತೆ ಕಾಣಬಹುದು. ಯಾರಿಗೆ ಗೊತ್ತು, ಅದೇ ಅವರಿಗೆ ೨೦೧೯ರ ಚುನಾವಣೆಯಲ್ಲಿ ದೊಡ್ಡ ಮಟ್ಟದ ಲಾಭ ತಂದುಕೊಡಬಹುದು..."

‘ಟೈಮ್ಸ್ ಆಫ್ ಇಂಡಿಯಾ’ ಸಂಪಾದಕೀಯ ಪುಟ, ನವೆಂಬರ್ ೨೮, ೨೦೧೬

ಆರ್ ಜಗನ್ನಾಥನ್; ಸ್ವರಾಜ್ಯ ನಿಯತಕಾಲಿಕೆ ಸಂಪಾದಕೀಯ ನಿರ್ದೇಶಕ

* * *

ಸ್ವಾಮಿನಾಥನ್ ಅಂಕ್ಲೇಸರಿಯ ಅಯ್ಯರ್

"ಇದರಿಂದ ಬರುವ ಅನಿರೀಕ್ಷಿತ ಲಾಭದ ಸ್ವಲ್ಪ ಪ್ರಮಾಣವನ್ನು ಆರ್‌ಬಿಐ ಗವರ್ನರ್‌ ಖರ್ಚುಗಳಿಗೆ ಮೀಸಲಿಡುವುದಕ್ಕೆ ಇಚ್ಛಿಸಬಹುದು. ಆದರೆ, ೩ ಲಕ್ಷ ಕೋಟಿ ಅನಿರೀಕ್ಷಿತ ಧನಭಾಗ್ಯವನ್ನು ಸರ್ಕಾರಕ್ಕೆ ವಿಶೇಷ ಲಾಭಾಂಶವಾಗಿ ಕೊಡಿ ಎಂದು ಮೋದಿ ಕೇಳಬಹುದು- ಕೇಳಿದರೆ ಆರ್‌ಬಿಐ ಗವರ್ನರ್ ಖಂಡಿತವಾಗಿಯೂ ಕೊಟ್ಟೇ ಕೊಡುತ್ತಾರೆ.”

“ಅನಿರೀಕ್ಷಿತವಾಗಿ ಬಂದಂತಹ ಈ ಲಾಭವನ್ನು ಮೋದಿ ಏನು ಮಾಡುತ್ತಾರೆ? ಅವರು ಅಧಿಕಾರಕ್ಕೆ ಬಂದ ಮೇಲೆ ತೆರೆದ ೨೫ ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ ಪ್ರತಿ ಖಾತೆಗೆ ೧೦,೦೦೦ ರೂಪಾಯಿಯಂತೆ ಜಮಾ ಮಾಡಬಹುದು. ಅದು ಸುಮಾರು ೨.೫ ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಉಳಿದ ೫೦,೦೦೦ ಕೋಟಿ ರೂಪಾಯಿಗಳನ್ನು ಮೂಲಸೌಕರ್ಯ ಅಭಿವೃದ್ಧಿಯಂತಹ ಇತರ ಕೆಲಸಗಳಿಗೆ ಖರ್ಚು ಮಾಡಬಹುದು. ೫೦,೦೦೦ ಕೋಟಿಯಲ್ಲಿ ಒಂದಿಷ್ಟು ಭಾಗವನ್ನು ಲಾಟರಿ ಎತ್ತಿ ನಾಗರಿಕರಿಗೆ ಹಂಚುವ ಮೂಲಕವೂ ಅವರು ಅನಿರೀಕ್ಷಿತವಾಗಿ ಸಿಕ್ಕಿರುವ ಅದ್ಭುತ ಲಾಭಾಂಶದ ಪ್ರಯೋಜನ ಪಡೆಯುವ ಸದಾವಕಾಶವನ್ನು ಎಲ್ಲ ನಾಗರಿಕರಿಗೆ ಒದಗಿಸುವುದಕ್ಕೂ ಮುಂದಾಗಬಹುದು."

‘ಟೈಮ್ಸ್ ಆಫ್ ಇಂಡಿಯಾ’ ಸಂಪಾದಕೀಯ ಪುಟ, ನವೆಂಬರ್ ೨೭, ೨೦೧೬

ಸ್ವಾಮಿನಾಥನ್ ಅಂಕ್ಲೇಸರಿಯ ಅಯ್ಯರ್ ; ಎಕನಾಮಿಕ್ಸ್ ಟೈಮ್ಸ್ ಪತ್ರಿಕೆ ಸಲಹಾ ಸಂಪಾದಕ ಹಾಗೂ ಅಂಕಣಕಾರ

* * *

ಎಸ್ ಗುರುಮೂರ್ತಿ

"ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮಾಡಿದ ಒಂದು ಅಂದಾಜಿನ ಪ್ರಕಾರ, ೧೨ ಲಕ್ಷ ಕೋಟಿ ರೂಪಾಯಿ ನಗದು ಹಣದ ಆರ್ಥಿಕತೆಯಲ್ಲಿ, ಸುಮಾರು ೩ ಲಕ್ಷ ಕೋಟಿ ರೂಪಾಯಿ ಎಂದೂ ವ್ಯವಸ್ಥೆಯೊಳಗೆ ಬಂದಿಲ್ಲ. ಹೀಗಾಗಿ, ಈ ಹಣವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹೆಚ್ಚುವರಿ ಹಣ ಲಭ್ಯವಾಗಲಿದೆ. ವ್ಯವಸ್ಥೆಯೊಳಗೆ ಬರಲಿರುವ ೧೨ ಲಕ್ಷ ಕೋಟಿ ರೂಪಾಯಿಯಲ್ಲಿ ಸರ್ಕಾರಕ್ಕೆ ೨ ಲಕ್ಷ ಕೋಟಿ ರೂಪಾಯಿಯಷ್ಟು ಹಣ ತೆರಿಗೆ ಆದಾಯವಾಗಿ ಬರಬೇಕು. ಇದರಿಂದ ಭಾರತೀಯ ಅಭಿವೃದ್ಧಿಗಾಥೆಯ ಮೇಲೆ ಸಕಾರಾತ್ಮಕವಾದ ದೂರಗಾಮಿ ಪರಿಣಾಮಗಳು ಆಗಲಿವೆ."

‘ಸ್ವರಾಜ್ಯ’ ಮ್ಯಾಗಜಿನ್, ನವೆಂಬರ್ ೧೮, ೨೦೧೬

ಎಸ್ ಗುರುಮೂರ್ತಿ; ಆರ್‌ಬಿಐ ಆಡಳಿತ ಮಂಡಳಿಯ ಸದಸ್ಯ, ಪತ್ರಕರ್ತ ಹಾಗೂ ಸ್ವದೇಶಿ ಜಾಗರಣ್ ಮಂಚ್ ಸಂಚಾಲಕ

ಇದನ್ನೂ ಓದಿ : ಮೋದಿ ಪ್ರಧಾನಿ ಗದ್ದುಗೇರಿದ ನಂತರ ಶೇ.21.03ರಷ್ಟು ರುಪಾಯಿ ಅಪಮೌಲ್ಯ!

ಸುರ್ಜಿತ್ ಭಲ್ಲಾ

"ನೋಟುಗಳ ಅಮಾನ್ಯವು ಮಹಾಸ್ಪೋಟಕ ಸುಧಾರಣೆ. ೧೯೭೮ನೇ ಇಸ್ವಿ ಚೀನಾದ ಚರಿತ್ರೆಯಲ್ಲಿ ಹೇಗೆ ಮಹತ್ವಪೂರ್ಣ ವರ್ಷವಾಗಿದೆಯೋ ಅದೇ ರೀತಿಯಲ್ಲಿ ಭಾರತ ಪಾಲಿಗೆ ೨೦೧೬ನೇ ಇಸ್ವಿ ಚಾರಿತ್ರಿಕವಾಗಲಿದೆ. ’ಡಿ-ಡೇ’ (ಡಿಮಾನಟೈಸೇಷನ್ ಡೇ) ಆಗಿ ಐವತ್ತು ದಿನಗಳಲ್ಲೇ ಅದರ ಬಗ್ಗೆ ತೀರ್ಪು ನೀಡುವುದು ತೀರಾ ಅವಸರದ ತೀರ್ಮಾನವಾಗುತ್ತದೆ. ’ಡಿ’ಯ (ನೋಟು ಅಮಾನ್ಯ) ಪರಿವರ್ತನಾತ್ಮಕ ಶಕ್ತಿಯ ಅನುಭವಾಗುವುದು ನೂರೈವತ್ತು ದಿನಗಳಾದ ಮೇಲೆ.”

“ಆದರೆ, ಬುದ್ದಿಜೀವಿ ವಲಯ ಮತ್ತು ಮುಖ್ಯವಾಹಿನಿ ಮಾಧ್ಯಮಗಳು (ದೇಶಿ ಮತ್ತು ವಿಶೇಷವಾಗಿ ವಿದೇಶಿ) ನೋಟು ಅಮಾನ್ಯವನ್ನು ಮಹಾಸ್ಫೋಟಕ ಸುಧಾರಣೆಯ ಭಾಗವಾಗಿ ಏಕೆ ನೋಡುತ್ತಿಲ್ಲ? ಅದಕ್ಕಿರುವ ಏಕೈಕ ಕಾರಣ ಎಂದರೆ, ಇಲ್ಲಿ ನಡೆಯುತ್ತಿರುವುದು ಸೈದ್ಧಾಂತಿಕ ಯುದ್ಧ; ಈ ಸುಧಾರಣೆಯೊಳಗಿರುವ ಅಮೂಲ್ಯ ಸಾರವನ್ನು ಅದು ಪರಿಗಣಿಸುವುದೇ ಇಲ್ಲ. 'ನಮ್ಮಂಥವರು' ಎಂಬ ಸಿದ್ಧಾಂತದ ಪ್ರಕಾರ ಕಾಂಗ್ರೇಸ್ಸೇತರ ಸರ್ಕಾರ ಏನೇ ಮಾಡಲಿ ಅದು ತಪ್ಪಾಗಿರುತ್ತದೆ, ಅನೈತಿಕವಾಗಿರುತ್ತದೆ ಮತ್ತು ಸಂಕುಚಿತವಾಗಿರುತ್ತದೆ."

‘ಫೈನಾನ್ಷಿಯಲ್ ಎಕ್ಸ್‌ಪ್ರೆಸ್’, ಡಿಸೆಂಬರ್ ೩೧, ೨೦೧೬

ಸುರ್ಜಿತ್ ಭಲ್ಲಾ; ಅರ್ಥಶಾಸ್ತ್ರಜ್ಞ ಹಾಗೂ ಪ್ರಧಾನಿ ಮೋದಿಯವರ ಆರ್ಥಿಕ ಸಲಹಾ ಮಂಡಳಿ ಸದಸ್ಯ

* * *

ಬಿಬೇಕ್ ದೇಬ್ರಾಯ್

"ಆರಂಭದಿಂದಲೂ ನಾನು, ಹಣಕಾಸು ಮಂತ್ರಿಗಳು ಮತ್ತು ಹಣಕಾಸು ಮಂತ್ರಾಲಯ ಹೇಳುತ್ತಿರುವುದನ್ನು ಗಮನಿಸುತ್ತ ಬಂದಿದ್ದೇನೆ. ಹಣ ಬರುವುದಕ್ಕೆ ಮೂರು ಭಿನ್ನ ಮಾರ್ಗಗಳಿವೆ ಎಂಬುದು ಮನವರಿಕೆಯಾಗಿರುವುದನ್ನು ನಾನು ಕಂಡಿದ್ದೇನೆ. ಮೊದಲನೆಯದು, ಹಿಂತಿರುಗಿ ಬರುವ ಹಣ. ಇದು ಆರ್‌ಬಿಐ ಋಣಭಾರಗಳನ್ನು ಕಡಿಮೆ ಮಾಡುತ್ತದೆ. ಆರ್‌ಬಿಐ ಋಣಭಾರಗಳು ಕಡಿಮೆಯಾದಾಗ ಅದು ತನ್ನಿಂದ ತಾನೆ ಯಾವ ಕ್ಷಣದಲ್ಲಾದರೂ ಸರ್ಕಾರಕ್ಕೆ ಹೋಗಿರುವ ಅಥವಾ ಹೋಗುವ ಹಣವಾಗಿಬಿಡುವುದಿಲ್ಲ. ಅದು ಆರ್‌ಬಿಐ ಮತ್ತು ಹಣಕಾಸು ಮಂತ್ರಾಲಯ ಸೇರಿ ತೆಗೆದುಕೊಳ್ಳುವ ತೀರ್ಮಾನವಾಗಿರುತ್ತದೆ. ಇವತ್ತು ನಾವಿಲ್ಲಿ ಕುಳಿತುಕೊಂಡು ಈ ವಿಷಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಹೇಳುವುದಕ್ಕೆ ಬರುವುದಿಲ್ಲ.”

“ಎರಡನೆಯ ಭಾಗ ಎಂದರೆ, ಬ್ಯಾಂಕುಗಳಿಗೆ, ಬಹುತೇಕ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ, ಬರುವ ಹಣವೂ ಸ್ವಲ್ಪ ಇದೆ. ಇದು ಅವುಗಳ ಆಸ್ತಿಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಅಷ್ಟರ ಮಟ್ಟಿಗೆ ಮತ್ತೆ ಸಾಲ ನೀಡಲು ಅವುಗಳಿಗೆ ಶಕ್ತಿ ನೀಡುತ್ತದೆ."

‘ಫಸ್ಟ್‌ ಪೋಸ್ಟ್’, ಡಿಸೆಂಬರ್ ೨೮, ೨೦೧೬

ಬಿಬೇಕ್ ದೇಬ್ರಾಯ್ ; ಅರ್ಥಶಾಸ್ತ್ರಜ್ಞ ಹಾಗೂ ನೀತಿ ಆಯೋಗದ ಸದಸ್ಯ

* * *

ಜಗದೀಶ್ ಭಗವತಿ, ಪ್ರವೀಣ್ ಕೃಷ್ಣ, ಸುರೇಶ್ ಸುಂದರೇಸನ್

"ವಿಶಾಲ ಕಪ್ಪು ಆರ್ಥಿಕತೆ ಮತ್ತು ತೆರಿಗೆ ವಂಚನೆಗಳ ವಿನಾಶಕಾರಿ ಪ್ರಯತ್ನಗಳು ಸುಸಂಘಟಿತವಾಗಿರುವಾಗ ಅದರ ಬಗ್ಗೆ ಇಲ್ಲಿಯ ತನಕ ಯಾವುದೇ ನಿರ್ಧಿಷ್ಟ ಕ್ರಮವನ್ನು ಕೈಗೊಂಡಿರಲಿಲ್ಲ. ಕಪ್ಪುಹಣದ ಪ್ರಾಥಮಿಕ ವಾಹಕಗಳಾದ ದೊಡ್ಡ ನೋಟುಗಳನ್ನು ಅಮಾನ್ಯೀಕರಿಸುವ ಮೋದಿಯವರ ಪ್ರಯತ್ನ ಬಹಳ ಧೈರ್ಯಶಾಲಿಯಾದದ್ದು."

‘ಟೈಮ್ಸ್ ಆಫ್ ಇಂಡಿಯಾ’. ಡಿಸೆಂಬರ್ ೧೩, ೨೦೧೬

ಜಗದೀಶ್ ಭಗವತಿ; ಇಂಡೋ ಅಮೆರಿಕನ್ ಅರ್ಥಶಾಸ್ತ್ರಜ್ಞ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ

ಪ್ರವೀಣ್ ಕೃಷ್ಣ; ಅಮೆರಿಕ ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಹಾಗೂ ವ್ಯವಹಾರಗಳ ಪ್ರಾಧ್ಯಾಪಕ

ಸುರೇಶ್ ಸುಂದರೇಸನ್; ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನ ಪ್ರಾಧ್ಯಾಪಕ

* * *

ಎನ್ ಆರ್ ನಾರಾಯಣಮೂರ್ತಿ

"ಇದು ಉತ್ತಮವಾದುದು. ಇದು ಕಪ್ಪುಹಣ, ಭ್ರಷ್ಟಾಚಾರಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಜನರು ಡಿಜಿಟಲ್ ಆರ್ಥಿಕತೆಯನ್ನು ಬಳಸುವುದಕ್ಕೆ ಜನರಿಗೆ ನೀಡಿರುವ ಪ್ರೋತ್ಸಾಹ ಕೂಡ. ಹೀಗಾಗಿ, ಈ ಮೂರೂ ಅಂಶಗಳ ದೃಷ್ಟಿಯಿಂದ ಇದು ಉತ್ತಮ ನಿರ್ಧಾರವಾಗಿದೆ. ನಾವು ಇದನ್ನು ಕೊಂಡಾಡಬೇಕು."

‘ಎಕನಾಮಿಕ್ ಟೈಮ್ಸ್’, ನವೆಂಬರ್ ೧೦, ೨೦೧೬

ಎನ್ ಆರ್ ನಾರಾಯಣಮೂರ್ತಿ; ಇನ್ಫೋಸಿಸ್ ಸ್ಥಾಪಕ

* * *

ಅರವಿಂದ ಪನಾಗರಿಯ

"ಇದರ ಪರಿಣಾಮ ನಿಮಗೆ ದೀರ್ಘಾವಧಿಯಲ್ಲಿ ಗೊತ್ತಾಗುತ್ತದೆ. ಇದೊಂದು ಬಹಳ ಧನಾತ್ಮಕ ಕ್ರಮವಾಗಿದ್ದು ಬ್ಯಾಂಕುಗಳಲ್ಲಿ ಠೇವಣಿಗಳು ಹೆಚ್ಚಾದಂತೆ ಹಣಕಾಸು ಮಧ್ಯಸ್ಥಿಕೆ ಹೆಚ್ಚಾಗುತ್ತದೆ. ಇದರ ಅರ್ಥ, ಖಾಸಗಿಯಾಗಿ ಹೂಡಲಾಗಿದ್ದ ಬಂಡವಾಳವೀಗ ಹಣಕಾಸು ಸಂಸ್ಥೆಗಳ ಮೂಲಕ ಹೂಡಿಕೆಯಾಗುತ್ತದೆ. ಇದು ಉತ್ತಮ ಪರಿಣಾಮ ಬೀರಲಿದೆ (ಆರ್ಥಿಕತೆಯ ಮೇಲೆ). ನಾವು ಡಿಜಿಟಲೀಕರಣಗೊಂಡ ಹಣಕಾಸು ನಿರ್ವಹಣೆಯ ಕಡೆಗೆ ಸಾಗಿದಂತೆಲ್ಲ ಇದು ನಮ್ಮ ನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದೂ ಕೂಡ ಒಂದು ಸಕಾರಾತ್ಮಕ ಬೆಳವಣಿಗೆ."

‘ಎಕನಾಮಿಕ್ ಟೈಮ್ಸ್’, ನವೆಂಬರ್ ೩೦, ೨೦೧೬

ಅರವಿಂದ ಪನಾಗರಿಯ; ಇಂಡೋ ಅಮೆರಿಕನ್ ಅರ್ಥಶಾಸ್ತ್ರಜ್ಞ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ

* * *

ಮುಖೇಶ್ ಅಂಬಾನಿ

"ಈ ಕೆಲಸ ಮಾಡುವ ಮೂಲಕ ನಮ್ಮ ಪ್ರಧಾನಮಂತ್ರಿಗಳು ಭಾರತದಲ್ಲಿ ಡಿಜಿಟಲೀಕೃತ ಮತ್ತು ಪರಿಣಾಮಕಾರಿ ನಗದು ಬಳಕೆಯ ಆರ್ಥಿಕತೆಯ ಕಡೆ ಅತಿ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಡಿಜಿಟಲ್ ಹಣಕಾಸು ವ್ಯವಹಾರಗಳು ನಿಷ್ಕಳಂಕ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಬಲಿಷ್ಠ ಭಾರತವನ್ನು ಮತ್ತು ಭಾರತೀಯ ಆರ್ಥಿಕತೆಯನ್ನು ಸೃಷ್ಟಿಸಲು ನೆರವಾಗುತ್ತವೆ. ಇದು ಪ್ರತಿ ಹಂತದಲ್ಲೂ ಅಭೂತಪೂರ್ವ ಪಾರದರ್ಶಕತೆ ತರುವುದಕ್ಕೆ ನೆರವಾಗುತ್ತದೆ. ಜನಸಾಮಾನ್ಯರೇ ಈ ಬದಲಾವಣೆಯ ಅತಿದೊಡ್ಡ ಫಲಾನುಭವಿಗಳು ಎಂದು ನಾನು ನಂಬಿದ್ದೇನೆ."

‘ಇಂಡಿಯನ್ ಎಕ್ಸ್‌ಪ್ರೆಸ್’, ಡಿಸೆಂಬರ್ ೧, ೨೦೧೬

ಮುಖೇಶ್ ಅಂಬಾನಿ; ರಿಲಾಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ

* * *

ಅಜಿತ್ ರಾನಡೆ

"ಭಾರತದ ಕರೆನ್ಸಿ ಪರಿವರ್ತನೆಯಲ್ಲಿ ಕೇವಲ ಅಧಿಕ ಮೌಲ್ಯದ ನೋಟುಗಳನ್ನು ಹಿಂಪಡೆದಿರುವುದು ಮಾತ್ರವಲ್ಲ, ಹಿಂಪಡೆದುದಕ್ಕಿಂತಲೂ ಅಧಿಕ ಉನ್ನತ ಮೌಲ್ಯದ ೨,೦೦೦ ರೂಪಾಯಿ ನೋಟನ್ನು ಜಾರಿಗೆ ತಂದಿರುವುದೂ ಇದೆ. ಹೀಗಾಗಿ, ಈ ಕರೆನ್ಸಿ ಪರಿವರ್ತನೆ ಯಾವ ಉದ್ದೇಶವನ್ನು ಈಡೇರಿಸುತ್ತದೆ? ಖಂಡಿತವಾಗಿಯೂ ಇದು ಏರುಗತಿಯಲ್ಲಿದ್ದ ನಕಲಿ ನೋಟುಗಳ ಹಾವಳಿಯನ್ನು ತಡೆದಿದೆ. ಶೇಕಡ ೨೫ರಷ್ಟು ಹಳೆಯ ನೋಟುಗಳು ಎಂದೂ ಬರುವುದಿಲ್ಲ ಎನ್ನುವುದಾದರೆ ಅವುಗಳ ಮೌಲ್ಯವನ್ನು ಶಾಶ್ವತವಾಗಿ ನಾಶ ಮಾಡಲಾಯಿತು, ಧ್ವಂಸಗೊಳಿಸಲಾಯಿತು ಎಂದೂ ಇದರ ಅರ್ಥವಾಗಿದೆ. ಅದು ಅಂದಾಜು ೩.೫ ಲಕ್ಷ ಕೋಟಿಯಷ್ಟಿದೆ."

‘ಫೋರ್ಬ್ಸ್ ಇಂಡಿಯಾ’, ನವೆಂಬರ್ ೨೧, ೨೦೧೬

ಅಜಿತ್ ರಾನಡೆ; ಅರ್ಥಶಾಸ್ತ್ರಜ್ಞ ಹಾಗೂ ರಾಜಕೀಯ ವಿಶ್ಲೇಷಕ

* * *

ಅರವಿಂದ ವೀರಮಣಿ

"ಬಹಳಷ್ಟು ಪ್ರಮಾಣದ ಕಪ್ಪುಹಣ ಈ ದೊಡ್ಡ ನೋಟುಗಳಲ್ಲೇ ಇರುವುದನ್ನು ಪರಿಗಣಿಸಿದರೆ ಕಪ್ಪುಹಣವನ್ನು ತೊಳೆದುಹಾಕುವುದಕ್ಕೆ ಇದು ಪ್ರಯೋಜನಕಾರಿ ವಿಧಾನವಾಗಿದೆ. ಇದನ್ನು ಜಾರಿಗೊಳಿಸಿದ ವಿಧಾನವೂ ಆಶ್ಚರ್ಯ ಹುಟ್ಟಿಸುವುದಿಲ್ಲ. ಏಕೆಂದರೆ, ಒಳಗಿನವರೇ ಇದನ್ನು ದುರುಪಯೋಗ ಮಾಡಿಕೊಂಡು ಹೊರಗಿನವರನ್ನಷ್ಟೇ ಬಲಿಪಶು ಮಾಡುವ ಅಪಾಯ ಇರುವುದರಿಂದ ಅದನ್ನು ಘೋಷಿಸುವ ತನಕ ಬಹಳ ಗೌಪ್ಯವಾಗಿಯೇ ಇಡಲಾಗುತ್ತದೆ."

‘ದಿ ವೈರ್’, ನವೆಂಬರ್ ೯, ೨೦೧೬

ಅರವಿಂದ ವೀರಮಣಿ; ಮಾಜಿ ಆರ್ಥಿಕ ಸಲಹೆಗಾರ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More