ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ರಫೇಲ್ ಡೀಲ್ ಪ್ರಕರಣ: ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ವಿವಾದಾತ್ಮಕ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, “ಉನ್ನತ ರಕ್ಷಣಾ ಒಪ್ಪಂದವನ್ನು ತುರ್ತು ಖರೀದಿ ಮಾಡುವ ಅನಿವಾರ್ಯತೆ ಏನಿತ್ತು?” ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ. “ರಫೇಲ್ ಡೀಲ್ ಕುರಿತಂತೆ ಜನ ಪ್ರಶ್ನಿಸುತ್ತಿದ್ದಾರೆ. ನೀವೇ ಘೋಷಿಸಿದಂತೆ ಇದೊಂದು 'ತುರ್ತು ಖರೀದಿ' ಒಪ್ಪಂದ. ಆದರೆ, ಇದುವರೆಗೂ ಏಕೆ ಒಂದೇ ಒಂದು ರಫೇಲ್ ವಿಮಾನ ಭಾರತಕ್ಕೆ ಬಂದಿಲ್ಲ. ತುರ್ತು ಖರೀದಿಯ ಅನಿವಾರ್ಯತೆ ಏನಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ನೊಂದಿಗೆ ಪ್ರಣಬ್ ಫೌಂಡೇಶನ್ ಸಹಯೋಗ ವರದಿ ತಳ್ಳಿಹಾಕಿದ ಪ್ರಣಬ್

ಹರಿಯಾಣದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಫೌಂಡೇಶನ್‌, ಆರ್‌ಎಸ್‌ಎಸ್‌ ಸಂಘಟನೆಯ ಸಹಯೋಗದೊಂದಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಆರಂಭಿಸಲು ಹೊರಟಿದೆ ಎಂಬ ಮಾಧ್ಯಮ ವರದಿಗಳನ್ನು ಪ್ರಣಬ್ ಮುಖರ್ಜಿ ತಳ್ಳಿಹಾಕಿದ್ದಾರೆ. ಸೆ.೨ರಂದು ಹರ್ಯಾಣ ಸರ್ಕಾರ ಸ್ಮಾರ್ಟ್‌ಗ್ರಾಮ್ ಯೋಜನೆಯ ಅಡಿಯಲ್ಲಿ ಕೆಲ ಯೋಜನೆಗಳನ್ನು ಉದ್ಘಾಟಿಸಲು ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸಿದ ಹಿನ್ನೆಲೆಯಲ್ಲಿ ಈ ವದಂತಿಗಳು ಹರಡುತ್ತಿವೆ. ಆದರೆ, ಆರ್‌ಎಸ್‌ಎಸ್ ಜೊತೆಗೆ ನಮ್ಮ ಫೌಂಡೇಶನ್‌ ಯಾವುದೇ ಯೋಜನೆಯನ್ನು ಹಮ್ಮಿಕೊಂಡಿಲ್ಲ ಎಂದು ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ.

ಸಮಾರೋಪದಲ್ಲಿ ರಾಣಿ ರಾಂಪಾಲ್‌ ಧ್ವಜಧಾರಿ

ಭಾರತ ಹಾಕಿ ವನಿತಾ ತಂಡದ ನಾಯಕಿ ರಾಣಿ ರಾಂಪಾಲ್ ಜಕಾರ್ತದಲ್ಲಿ ನಡೆಯಲಿರುವ ಹದಿನೆಂಟನೇ ಏಷ್ಯಾಡ್ ಸಮಾರೋಪ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದಾರೆ. ದಿನದ ಹಿಂದಷ್ಟೇ ಮುಕ್ತಾಯ ಕಂಡ ವನಿತಾ ಹಾಕಿ ತಂಡದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತ್ತು. ಕೂಟದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಿ ಜಾವೆಲಿನ್ ಪಟು ನೀರಜ್ ಚೋಪ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಅಂದಹಾಗೆ, ಸಮಾರೋಪ ಸಮಾರಂಭದ ಧ್ವಜಧಾರಿಯನ್ನು ಆರಿಸುವುದು ಅಥ್ಲೀಟ್‌ಗಳ ಲಭ್ಯತೆಯನ್ನು ಅವಲಂಬಿಸಿದೆ. ಸರಿಸುಮಾರು ೫೫೦ಕ್ಕೂ ಹೆಚ್ಚು ಭಾರತದ ಏಷ್ಯಾಡ್ ನಿಯೋಗದಲ್ಲಿ ಈಗಾಗಲೇ ಹಲವರು ತವರಿಗೆ ವಾಪಸಾಗಿದ್ದಾರೆ.

ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ: ಕೆಸಿಆರ್‌ ನಿರ್ಧಾರ ಸಾಧ್ಯತೆ

ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ವಿಧಾನಸಭೆ ವಿಸರ್ಜಿಸುವ ಬಗೆಗಿನ ಚರ್ಚೆ ತೆಲಂಗಾಣದಲ್ಲಿ ಮುನ್ನೆಲೆಗೆ ಬಂದಿದೆ. ರವಿವಾರ ಸೆ.2ರಂದು ಹೈದರಾಬಾದ್‌ನಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರು ವಿಧಾನಸಭೆ ವಿಸರ್ಜನೆ ಕುರಿತು ಸಚಿವರ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಜೊತೆ ವಿಧಾನಸಭೆ ಚುನಾವಣೆ ನಡೆದರೆ ಟಿಆರ್‌ಎಸ್‌ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಕಾರಣಕ್ಕೆ ಸಿಎಂ ಚಂದ್ರಶೇಖರ್‌ ರಾವ್‌ ಈ ನಿರ್ಧಾರಕ್ಕೆ ಕೈಗೊಳ್ಳುವ ಸಾಧ್ಯತೆಗಳಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಉತ್ತರಪತ್ರಿಕೆ ಮರುಪರಿಶೀಲನೆಯಲ್ಲೇ ಮೂರು ಕೋಟಿ ರು. ಗಳಿಸಿದ ದೆಹಲಿ ವಿವಿ

ದೆಹಲಿ ವಿಶ್ವವಿದ್ಯಾಲಯವು ೨೦೧೫-೧೬ ಹಾಗೂ ೨೦೧೭-೧೮ ರ ಶೈಕ್ಷಣಿಕ ವರ್ಷಗಳಲ್ಲಿ ನಡೆದ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳ ಉತ್ತರಪತ್ರಿಕೆ ಮರುಪರಿಶೀಲನೆಯಲ್ಲಿ ೩ ಕೋಟಿ ಹಣ ಗಳಿಸಿದ ಮಾಹಿತಿ ಆರ್‌ಟಿಐ ಮೂಲಕ ಬಹಿರಂಗಗೊಂಡಿದೆ. ಆ ವರ್ಷಗಳಲ್ಲಿ ಉತ್ತರ ಪತ್ರಿಕೆಗಳಿಗೆ ಕೇವಲ ಮರುಮೌಲ್ಯಮಾಪನಕ್ಕೆ ೨೩.೨ ಲಕ್ಷ ರು. ಮತ್ತು ಮರುಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಂಚಿ ೬.೫ ಲಕ್ಷ ರು. ಹಣ ಗಳಿಸಿದ್ದು. ಮರುಮೌಲ್ಯಮಾಪನಕ್ಕೆ ಪ್ರತಿ ಪತ್ರಿಕೆಗೆ ೧೦೦೦ ರು. ಹಾಗೂ ಮರುಪರಿಶೀಲನೆಗೆ ೭೫೦ ರುಪಾಯಿಗಳನ್ನು ವಿಶ್ವವಿದ್ಯಾಲಯ ನಿಗದಿ ಮಾಡಿತ್ತು.

ಆದಾಯ ತೆರಿಗೆ ವಿವರ ಸಲ್ಲಿಕೆ ಶೇ.71ರಷ್ಟು ಹೆಚ್ಚಳ

2017-18ನೇ ಸಾಲಿನಲ್ಲಿ 5.42 ಕೋಟಿ ಜನರು ಆದಾಯ ತೆರಿಗೆ ವಿವರ ಸಲ್ಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.71ರಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆಗಸ್ಟ್ 31ರಂದು ಆದಾಯ ತೆರಿಗೆ ವಿವರ ಸಲ್ಲಿಸಲು ಕೊನೆ ದಿನವಾಗಿತ್ತು. ಕಳೆದ ವರ್ಷ ಆಗಸ್ಟ್ 31ರ ವೇಳೆಗೆ 3.17 ಕೋಟಿ ಜನರು ಆದಾಯ ವಿವರ ತೆರಿಗೆ ಸಲ್ಲಿಸಿದ್ದರು. ಆನ್‌ಲೈನ್ ಮೂಲಕ ತೆರಿಗೆ ವಿವರ ಸಲ್ಲಿಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಆದಾಯ ವಿವರ ಸಲ್ಲಿಕೆಗೆ ಕೊನೆ ದಿನವಾದ ಆಗಸ್ಟ್ 31ರಂದು 34.95 ಲಕ್ಷ ಮಂದಿ ಆನ್ಲೈನ್ ನಲ್ಲಿ ವಿವರ ಸಲ್ಲಿಸಿದ್ದಾರೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ 1.17 ಕೋಟಿ ಜನರು ಆನ್ಲೈನ್ ನಲ್ಲಿ ತೆರಿಗೆ ವಿವರ ಸಲ್ಲಿಸಿದಂತಾಗಿದೆ.

ಸಿಂಗಾಪುರ ಚಿತ್ರೋತ್ಸವದಲ್ಲಿ ಕಾಣಿಸಿಕೊಳ್ಳಲಿದೆ ‘ಮಾಂಟೊ’

ನಂದಿತಾ ದಾಸ್ ನಿರ್ದೇಶನದ ‘ಮಾಂಟೊ’ ಹಿಂದಿ ಸಿನಿಮಾ ಸಿಂಗಾಪುರದ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಲೇಖಕ ಸಾದತ್ ಹಸನ್‌ ಮಾಂಟೊ ಬಯೋಪಿಕ್ ಇದು. ನವಾಜುದ್ದೀನ್‌ ಸಿದ್ದಿಕಿ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಂಟೊ ಪತ್ನಿಯಾಗಿ ರಸಿಕಾ ದುಗಾಲ್‌ ಅಭಿನಯಿಸುತ್ತಿದ್ದು, ಇತರ ಪ್ರಮುಖ ಪಾತ್ರಗಳಲ್ಲಿ ತಾಹಿರ್ ರಾಜ್, ರಿಸಿ ಕಪೂರ್‌, ದಿವ್ಯಾ ದತ್ತಾ ಇದ್ದಾರೆ. ಸೆಪ್ಟೆಂಬರ್ 21ರಂದು ಸಿನಿಮಾ ಜಗತ್ತಿನಾದ್ಯಂತ ತೆರೆಕಾಣಲಿದೆ.

ಅರ್ಧಶತಕ ವಂಚಿತ ಜೋ ರೂಟ್

ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಂದೂ ಆತಿಥೇಯ ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಪರದಾಡುತ್ತಿದೆ. ಬ್ಯಾಟಿಂಗ್‌ಗೆ ಸವಾಲಾಗಿ ಪರಿಣಮಿಸಿರುವ ದಿ ರೋಸ್ ಬೌಲ್ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ೨೪೬ ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್ ಎದುರು ಭಾರತ, ೨೭ ರನ್ ಅಲ್ಪ ಮುನ್ನಡೆ ಸಾಧಿಸಿತ್ತು. ಮೂರನೇ ದಿನದಾಟದ ೫೭ ಓವರ್‌ಗಳು ಮುಗಿಯುವ ಹೊತ್ತಿಗೆ ಇಂಗ್ಲೆಂಡ್ ೫ ವಿಕೆಟ್ ನಷ್ಟಕ್ಕೆ ೧೫೦ ರನ್ ಗಳಿಸಿ, ಆ ಮೂಲಕ ೧೨೩ ರನ್ ಮುನ್ನಡೆ ಪಡೆದಿತ್ತು. ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ತಲಾ ೨೦ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇದಕ್ಕೂ ಮುನ್ನ ತಂಡಕ್ಕೆ ಆಧಾರವಾಗಿದ್ದ ನಾಯಕ ಜೋ ರೂಟ್, ಕೇವಲ ೨ ರನ್‌ಗಳಿಂದ ಅರ್ಧಶತಕದಿಂದ ವಂಚಿತರಾದರು. ಮೊಹಮದ್ ಶಮಿಯ ಸಮಯೋಚಿತ ಫೀಲ್ಡಿಂಗ್‌ನಿಂದ ರೂಟ್ ವಿಕೆಟ್ ಕಳೆದುಕೊಂಡರು.

ಬಿಹಾರ-ಕಠ್ಮಂಡು ರೈಲು ಸಂಪರ್ಕಕ್ಕೆ ಸಹಾಯ ಮಾಡಲು ಒಪ್ಪಿಕೊಂಡ ಭಾರತ

ಬಿಹಾರದ ರಕ್ಸುವಲ್‌ನಿಂದ ನೇಪಾಳ ರಾಜಧಾನಿ ಕಠ್ಮಂಡುವಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಭಾರತ ಸಹಾಯ ಮಾಡಲಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈ ಸಂಬಂಧ ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಒಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಮಾತುಕತೆ ನಡೆಸಿದ್ದು, ಎರಡೂ ರಾ‍ಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತವು ಈ ಮಾರ್ಗದ ಕುರಿತು ಪೂರ್ವಭಾವಿ ಸಮೀಕ್ಷೆ ಮಾಡಲಿದೆ ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More