ಅಧಿಕ ಶಕ್ತಿ ವಿದ್ಯುತ್ ರೈಲು ಎಂಜಿನ್‌ನ ಪ್ರಥಮ ಪ್ರಯೋಗಾತ್ಮಕ ಪರೀಕ್ಷೆ ವಿಫಲ

ದೇಶದ ಮೊದಲ ಅಧಿಕ ಶಕ್ತಿಯ ವಿದ್ಯುತ್ ರೈಲು ಎಂಜಿನ್ ನಿರ್ಮಾಣ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ನಲ್ಲಿ ಹಸಿರು ನಿಶಾನೆ ತೋರಿಸಿದ್ದರು. ಇದೀಗ ಅಧಿಕ ಶಕ್ತಿಯ ವಿದ್ಯುತ್ ರೈಲು ಎಂಜಿನ್‌ನ ಪ್ರಥಮ ಪ್ರಯೋಗಾತ್ಮಕ ಪರೀಕ್ಷೆ ನಡೆದಿದ್ದು, ಮೊದಲ ಪ್ರಾಯೋಗಿಕ ಯಾನದಲ್ಲೇ ವೈಫಲ್ಯ ಕಂಡಿದೆ

ದೇಶದ ಮೊದಲ ಅಧಿಕ ಶಕ್ತಿಯ ವಿದ್ಯುತ್ ರೈಲು ಎಂಜಿನ್ ನಿರ್ಮಾಣ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ನಲ್ಲಿ ಹಸಿರು ನಿಶಾನೆ ತೋರಿಸಿದ್ದರು. ಇದೀಗ ಅಧಿಕ ಶಕ್ತಿಯ ವಿದ್ಯುತ್ ರೈಲು ಎಂಜಿನ್‌ನ ಪ್ರಥಮ ಪ್ರಯೋಗಾತ್ಮಕ ಪರೀಕ್ಷೆ ನಡೆದಿದ್ದು, ಮೊದಲ ಪ್ರಾಯೋಗಿಕ ಯಾನದಲ್ಲೇ ವೈಫಲ್ಯ ಕಂಡಿದೆ. ಫ್ರಾನ್ಸ್ ಮೂಲದ ಅಲ್ಸ್ಟೋಮ್ ಸಂಸ್ಥೆಯಿಂದ ರೈಲಿನ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಮಾಧೇಪುರ ಘಟಕದಲ್ಲಿ ಈ ಎಂಜಿನ್ ತಯಾರು ಮಾಡಲಾಗಿತ್ತು. "ಹೊಸ ಎಂಜಿನ್ ವೇಗಕ್ಕೆ ಸಂಬಂಧಿಸಿದ ಕಾರ್ಯಕ್ಷಮತೆಯನ್ನು ಪ್ರಮಾಣೀಕರಿಸುವ ವೇಳೆ ಸಸ್ಪೆನ್ಷನ್‌ನಲ್ಲಿ ದೋಷ ಉಂಟಾಗಿ ಪ್ರಯೋಗ ಪ್ರಯತ್ನ ವಿಫಲವಾಗಿದೆ,” ಎಂದು ಕೇಂದ್ರ ರೈಲ್ವೆ ಸಚಿವಾಲಯ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಅಲ್ಸ್ಟೋಮ್ ಸಂಸ್ಥೆಗೆ ಪತ್ರ ಬರೆದಿರುವ ಭಾರತೀಯ ರೈಲ್ವೆಇಲಾಖೆ, 270 ದಿನಗಳ ಒಳಗೆ ಆಮದಾಗಿರುವ ಉಪಕರಣಗಳಲ್ಲಿನ ದೋಷಗಳನ್ನು ಬಗೆಹರಿಸುವಂತೆ ಸೂಚಿಸಿದೆ. ಒಂದು ವೇಳೆ ಇದರಲ್ಲಿ ವಿಫಲವಾದರೆ, ಒಪ್ಪಂದದ ಅನ್ವಯ ದಂಡ ಭರಿಸುವಂತೆಯೂ ಹೇಳಿದೆ.

ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ ಶಾಶ್ವತ ಉದ್ಯೋಗಕ್ಕೆ ಆಗ್ರಹಿಸಿ ಮುಂಬೈನಲ್ಲಿ ಪ್ರತಿಭಟನೆ

ಈ ಯೋಜನೆಯ ಒಪ್ಪಂದದ ಪ್ರಕಾರ, ಮೊದಲ 5 ರೈಲು ಎಂಜಿನ್‌ಗಳನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗುವುದು; ನಂತರದ ಎಂಜಿನ್ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಮಾಧೇಪುರ ಘಟಕದಲ್ಲಿ ಜೋಡಿಸಲಾಗುವುದು. ಇದುವರೆಗೆ ಭಾರತೀಯ ರೈಲ್ವೆಯಲ್ಲಿ 6,000 ಅಶ್ವಶಕ್ತಿ (ಎಚ್‌ಪಿ) ಸಾಮರ್ಥ್ಯದ ಎಂಜಿನ್ ಕಾರ್ಯನಿರ್ವಹಿಸುತ್ತಿದ್ದವು. ಈ ಯೋಜನೆ ಯಶಸ್ವಿಯಾದಲ್ಲಿ 12,000 ಎಚ್‌ಪಿ ಮತ್ತು ಅದಕ್ಕೂ ಹೆಚ್ಚಿನ ಶಕ್ತಿಯ ವಿದ್ಯುತ್‌ ಎಂಜಿನ್‌ಗಳನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಾದ ರಷ್ಯಾ, ಚೀನಾ, ಜರ್ಮನಿ ಮತ್ತು ಸ್ವೀಡನ್‌ಗಳ ಸಾಲಿಗೆ ಭಾರತವೂ ಸೇರಲಿತ್ತು. ಗಂಟೆಗೆ 110 ಕಿಮೀ ವೇಗದಲ್ಲಿ ಕ್ರಮಿಸುವ ಈ ಎಂಜಿನ್‌ಗಳು, ಸರಕು ಸಾಗಣೆ ರೈಲುಗಳ ವೇಗ ಮತ್ತು ಸಾಮರ್ಥ್ಯ ಹೆಚ್ಚಿಸಲು ನೆರವಾಗಲಿವೆ.

ಭಾರತೀಯ ರೈಲ್ವೆ ಮುಂದಿನ 11 ವರ್ಷಗಳಲ್ಲಿ 800ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ರೈಲು ಎಂಜಿನ್‌ಗಳನ್ನು ಉತ್ಪಾದಿಸಲು ಯೋಜನೆ ರೂಪಿಸಿದ್ದು, ಈ ಯೋಜನೆಗೆ 20,000 ಕೋಟಿಗೂ ಹೆಚ್ಚಿನ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ. ಮೊದಲ 5 ಎಂಜಿನ್‌ಗಳನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಂಡು ಈ ವರ್ಷಾಂತ್ಯದ ವೇಳೆಗೆ ಸಿದ್ಧಗೊಳಿಸಿ, ಉಳಿದ 795 ಎಂಜಿನ್‌ಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ 11 ವರ್ಷಗಳ ಅವಧಿಯಲ್ಲಿ ತಯಾರಿಸಿ ಕಾರ್ಯರೂಪಕ್ಕೆ ತರುವ ಉದ್ದೇಶ ಯೋಜನೆಯಲ್ಲಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More