ಕೇವಲ ೧೦೧ ರುಪಾಯಿ ವೇತನ ಸಾಕೆಂದ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ!

ರಾಜ್ಯ ಸಚಿವರ ವೇತನ, ಸ್ಥಾನಮಾನ ಯಾರಿಗೆ ತಾನೇ ಬೇಡ? ಇಂಥದ್ದೊಂದು ಸೌಲಭ್ಯಗಳಿಗಾಗಿ ವಿಧಾನಸೌಧದ ಕಂಬಗಳನ್ನು ಸುತ್ತಿ, ಹುದ್ದೆ ಅನುಭವಿಸಿದವರೇ ಹೆಚ್ಚು. ಆದರೆ, ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು ವೇತನ, ಸೌಲಭ್ಯವೇ ಬೇಡ ಎಂದು ನಿರಾಕರಿಸಿದ್ದು ಬೆಳಕಿಗೆ ಬಂದಿದೆ

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಭಾಗವಾಗಿ ಆರ್ಥಿಕ ಮಿತವ್ಯಯ ಪಾಲಿಸಬೇಕು ಎಂಬ ಸೂಚನೆ ನೀಡಿದ್ದರು. ಸಚಿವರುಗಳು ಈ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಅಧಿಕಾರಿಗಳು ಕೂಡ ಮಿತವ್ಯಯ ಪಾಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾಗಿ ನೇಮಕವಾಗಿರುವ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ಇವರೆಲ್ಲರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ತಾಂತ್ರಿಕ ಸಲಹೆಗಾರರಾಗಿ ನೇಮಕವಾಗಿರುವ ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿಯ ನಿವೃತ್ತ ಕಾರ್ಯದರ್ಶಿ ಎಂ ಕೆ ವೆಂಕಟರಾಮು ಅವರೇ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಎಂಜಿನಿಯರ್. ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರನ್ನಾಗಿ ೨೦೧೮ರ ಜೂನ್‌ ೨೧ರಂದು ನೇಮಿಸಿ ಆದೇಶ ಹೊರಡಿಸಲಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳಿಗೆ ಬೇರೆ-ಬೇರೆ ವಿಭಾಗದಲ್ಲಿ ಸಲಹೆಗಾರರು ನೇಮಕವಾಗಿದ್ದರು. ಆದರೆ, ತಾಂತ್ರಿಕ ಸಲಹೆಗಾರ ಹುದ್ದೆ ಸೃಜಿಸಿರಲಿಲ್ಲ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ತಾಂತ್ರಿಕ ಸಲಹೆಗಾರ ಹುದ್ದೆಗೆ ನಿವೃತ್ತ ಎಂಜಿನಿಯರ್‌ ಅವರನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಾಂತ್ರಿಕ ಸಲಹೆಗಾರರಿಗೆ ರಾಜ್ಯ ಸಚಿವರ ಸ್ಥಾನಮಾನ ಒದಗಿಸಲಾಗಿದೆ. ವೇತನವೂ ಸೇರಿದಂತೆ ಇತರ ಭತ್ಯೆಗಳ ಮೊತ್ತವೇ ತಿಂಗಳಿಗೆ ಮೂರು ಲಕ್ಷಕ್ಕೂ ಹೆಚ್ಚಿನದಾಗಿದೆ. ಆದರೆ, ಎಂ ಕೆ ವೆಂಕಟರಾಮು ಅವರು ತಮಗೆ ಲಭ್ಯವಾಗಿರುವ, ರಾಜ್ಯ ಸಚಿವರಿಗೆ ಸಿಗುವ ವೇತನವೂ ಸೇರಿದಂತೆ ಇತರ ಎಲ್ಲ ಆರ್ಥಿಕ ಸೌಲಭ್ಯವನ್ನು ಪಡೆಯಲು ವಿನಯಪೂರ್ವಕ ನಿರಾಕರಿಸಿದ್ದಾರೆ. ರಾಜ್ಯ ಸಚಿವರ ವೇತನ ಮತ್ತಿತರ ಸವಲತ್ತು ನಿರಾಕರಿಸಿ ಕೇವಲ ೧೦೧ ರು.ಗಳನ್ನು ಪಡೆಯಲು ನಿರ್ಧರಿಸಿದ್ದಾರೆ. ಈ ನಿದರ್ಶನ ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. ಈ ಕುರಿತು ಎಂ ಕೆ ವೆಂಕಟರಾಮು ಅವರು ಇಲಾಖೆಗೆ ಆ.೧೪ರಂದು ಬರೆದಿರುವ ಪತ್ರ ‘ದಿ ಸ್ಟೇಟ್’ಗೆ ಲಭ್ಯವಾಗಿದೆ.

ಎಂ ಕೆ ವೆಂಕಟರಾಮು ಅವರು ಬರೆದಿರುವ ಪತ್ರದ ಪ್ರತಿ

ವೇತನ ರೂಪದಲ್ಲಿ ಸಾಂಕೇತಿಕವಾಗಿ ಕೇವಲ ೧೦೧ ರು.ಗಳನ್ನು ಪಡೆದು, ರಾಜ್ಯ ಸಚಿವರ ಸ್ಥಾನಮಾನದಿಂದ ಸಿಗುವ ಎಲ್ಲ ಆರ್ಥಿಕ ಸೌಲಭ್ಯಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಜಮೆ ಮಾಡುವಂತೆ ಅವರು ಪತ್ರ ಬರೆದಿದ್ದಾರೆ. ವೇತನ, ಇಂಧನ ಭತ್ಯೆ, ಆತಿಥ್ಯ ಭತ್ಯೆ, ಮನೆ ಬಾಡಿಗೆ ಭತ್ಯೆಯೂ ಆರ್ಥಿಕ ಸೌಲಭ್ಯದಲ್ಲಿ ಒಳಗೊಂಡಿದೆ.

ಈ ಪತ್ರ ಆಧರಿಸಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಅಭಿಪ್ರಾಯಕ್ಕಾಗಿ ಅಕೌಟೆಂಟ್ ಜನರಲ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಸಿಎಂ ಮಾತಿಗೆ ಕಿಮ್ಮತ್ತು ಕೊಡದ ಸಚಿವರು; ಲಕ್ಷಾಂತರ ರು. ಮೌಲ್ಯದ ಪೀಠೋಪಕರಣ ಖರೀದಿ!

“ನಾನು ಈ ಹಿಂದೆಯೇ ತಿಳಿಸಿರುವಂತೆ, ನನಗೆ ಸಾಂಕೇತಿಕವಾಗಿ ೧೦೧ ರು.ಗಳನ್ನು ವೇತನ ರೂಪದಲ್ಲಿ ನೀಡಿ, ರಾಜ್ಯ ಸಚಿವರ ಸ್ಥಾನಮಾನದಿಂದ ಒದಗುವ ಮಿಕ್ಕೆಲ್ಲ ಆರ್ಥಿಕ ಸೌಲಭ್ಯಗಳನ್ನೂ ಅಂದರೆ ವೇತನ, ಇಂಧನ ಭತ್ಯೆ, ಆತಿಥ್ಯ ಭತ್ಯೆ, ಮನೆ ಬಾಡಿಗೆ ಭತ್ಯೆ ಇತ್ಯಾದಿಗಳನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಜಮೆ ಮಾಡುವಂತೆ ಮತ್ತೊಮ್ಮೆ ಕೋರುತ್ತೇನೆ. ಕಾರ್ಯಸ್ಥಾನದಿಂದ ಪ್ರವಾಸ ಮಾಡಿದ ಸಂದರ್ಭಗಳಲ್ಲಿ ಪ್ರವಾಸ ಭತ್ಯೆ ಮತ್ತು ದಿನಭತ್ಯೆಗಳನ್ನು ಮಾತ್ರ ಸ್ವೀಕರಿಸಲು ಸಮ್ಮತಿಸಿರುತ್ತೇನೆ,” ಎಂದು ವೆಂಕಟರಾಮು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಂ ಕೆ ವೆಂಕಟರಾಮು ಅವರು ಬರೆದಿರುವ ಪತ್ರದ ಪ್ರತಿ
 • ವೇತನ; ೩೫,೦೦೦ ರೂ.
 • ಸೆಂಚುರಿ ಅಲೆಯನ್ಸ್; ೨ ಲಕ್ಷ ರೂ.
 • ಮನೆ ಬಾಡಿಗೆ; ೧ ಲಕ್ಷ ರೂ.

ವೆಂಕಟರಾಮು ಅವರು ಬೇಡವೆಂದ ವೇತನ ಭತ್ಯೆಗಳ ವಿವರ

 • ವೇತನ: 35,000 ರು.
 • ಸೆಂಚುರಿ ಅಲಯನ್ಸ್: 2 ಲಕ್ಷ ರು.
 • ಮನೆ ಬಾಡಿಗೆ: 1 ಲಕ್ಷ ರು.
 • ಇಂಧನ ಭತ್ಯೆ: ೧ ಸಾವಿರ ಲೀಟರ್
 • ಪ್ರಯಾಣ ಭತ್ಯೆ: ಪ್ರತಿ ಕಿಮೀಗೆ ೩೦ ರು.
 • ಪೀಠೋಪಕರಣಗಳು: ೧೦.೦೦ ಲಕ್ಷ ರು. ಮಿತಿಯಲ್ಲಿ ಗೃಹಪಯೋಗಿ ವಸ್ತುಗಳು, ಪೀಠೋಪಕರಣಗಳ ಖರೀದಿ
 • ವಾಹನ ಸೌಕರ್ಯ: ೨೧ ಲಕ್ಷ ರು. ಮಿತಿಗೆ ಒಳಪಟ್ಟು ವಾಹನ ಖರೀದಿ
 • ಸಿಬ್ಬಂದಿ: ೧೧ ಮಂದಿ ಸಿಬ್ಬಂದಿ ಹೊಂದಲು ಅವಕಾಶ
 • ದೂರವಾಣಿ ಸೌಲಭ್ಯ: ಮನೆ ಹಾಗೂ ಕಚೇರಿಗೆ ಉಚಿತ ದೂರವಾಣಿ ಸೌಲಭ್ಯ
 • ಕಚೇರಿ ಸ್ಥಳಾವಕಾಶ: ವಿಧಾನಸೌಧ, ವಿಕಾಸಸೌಧದಲ್ಲಿ ಸುಸಜ್ಜಿತ ಕಚೇರಿ
 • ಆದ್ಯತಾ ಪಟ್ಟಿ: ಶಾಸಕರ ಅಧ್ಯಕ್ಷತೆಯ ನಂತರದ ಸ್ಥಾನಮಾನ
 • ಪ್ರವಾಸ ಭತ್ಯೆ: ರಾಜ್ಯ ಪ್ರವಾಸದಲ್ಲಿ ಪ್ರತಿದಿನಕ್ಕೆ ೨,೦೦೦ ರು. ಹೊರರಾಜ್ಯ ಪ್ರವಾಸಕ್ಕೆ ೨,೫೦೦ ರು.
 • ವೈದ್ಯಕೀಯ ಭತ್ಯೆ: ಸಚಿವರಿಗೆ ಹಾಗೂ ಅವರ ಅವಲಂಬಿತರಿಗೆ ಮರುಪಾವತಿ
 • ಶಿಷ್ಟಾಚಾರ: ಹೊರರಾಜ್ಯ ಮತ್ತು ರಾಜ್ಯದಲ್ಲಿ ಶಿ‍‍‍ಷ್ಟಾಚಾರ ವ್ಯವಸ್ಥೆ

ಅಷ್ಟೇ ಅಲ್ಲ, ರಾಜ್ಯ ಸಚಿವರ ಸ್ಥಾನಮಾನಕ್ಕೆ ಲಭ್ಯವಾಗುವ ಎಲ್ಲ ಸವಲತ್ತುಗಳ ವಿವರಗಳನ್ನು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ (ಲೆಕ್ಕಪತ್ರ) ಶಾಖೆಗೆ ಒದಗಿಸಿ ಬಿಲ್‌ ತಯಾರಿಸಿ ಪಾವತಿಸಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಿದ ಮೊತ್ತದ ವಿವರಗಳನ್ನು ಹಿಂಬರಹದ ಮೂಲಕ ಕಾಲಕಾಲಕ್ಕೆ ಒದಗಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರ ಹುದ್ದೆಯೂ ಸೇರಿದಂತೆ ಇತರ ಸಲಹೆಗಾರರ ಹುದ್ದೆಯೂ ಯಾವುದೇ ನಿರ್ದಿಷ್ಟ ವೇತನ ಶ್ರೇಣಿ ಒಳಗೊಂಡ ಹುದ್ದೆಯಲ್ಲ. ಸಲಹೆಗಾರರ ನೇಮಕಾತಿ ಮತ್ತು ಸ್ಥಾನಮಾನದ ವಿಷಯಗಳು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಿದೆ.

ಎಂ ಕೆ ವೆಂಕಟರಾಮ್‌ ಅವರಿಗೀಗ ೮೦ರ ಇಳಿವಯಸ್ಸು. ದಾವಣಗೆರೆ ನಗರದಲ್ಲಿ ೧೯೭೦ರ ದಶಕದಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ನೀರಾವರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು, ನಿವೃತ್ತಿ ಹಂತದಲ್ಲಿ ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇವರ ನೇಮಕಾತಿ ಮತ್ತು ವೇತನಕ್ಕೆ ಸಂಬಂಧಿಸಿದಂತೆ ‘ದಿ ಸ್ಟೇಟ್‌’ ಜೊತೆ ಅನೌಪಚಾರಿಕವಾಗಿ ಮಾತನಾಡಿದ ವೆಂಕಟರಾಮು ಅವರು, “ಸರ್ಕಾರ ತಮಗೆ ಪಿಂಚಣಿ ನೀಡುತ್ತಿದೆ. ಇಷ್ಟು ವರ್ಷ ಸರ್ಕಾರದ ಅನ್ನ ತಿಂದಿದ್ದೇನೆ. ಅದನ್ನು ತೀರಿಸಲು ಒಂದು ಒಳ್ಳೇ ಅವಕಾಶವಿದು,” ಎಂದರು. ಆದರೆ, ಫೋಟೋ ಕೊಡಲು ಸುತಾರಾಂ ಒಪ್ಪಲಿಲ್ಲ.

ಮುಖ್ಯಮಂತ್ರಿಗಳ ಇತರ ಸಲಹೆಗಾರರು, ವಿಶೇಷ ಕರ್ತವ್ಯಾಧಿಕಾರಿಗಳು ಸರ್ಕಾರ ಒದಗಿಸಿರುವ ಎಲ್ಲ ರೀತಿಯ ಸವಲತ್ತುಗಳನ್ನು ಬಿಟ್ಟೂಬಿಡದೆ ಅನುಭವಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ನಡುವೆ, ಎಂ ಕೆ ವೆಂಕಟರಾಮು ಅವರು ತೆಗೆದುಕೊಂಡಿರುವ ನಿರ್ಧಾರ ಉತ್ತಮ ಬೆಳವಣಿಗೆಯಲ್ಲೊಂದಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More