ಫೋಟೋ ಸ್ಟೋರಿ | ಮನೆಗೆ ಮರಳಿ ಅವಶೇಷ ಶೋಧಿಸುತ್ತಿದ್ದಾರೆ ಸಂತ್ರಸ್ತರು

ಕೊಡಗಿನಲ್ಲಿ ತಡೆಗೋಡೆಗಳು ಜರಿದು ಹಲವರ ಮನೆಯೊಳಗೆ ಮಣ್ಣುಮಿಶ್ರಿತ ನೀರು ಆವರಿಸಿಕೊಂಡಿತ್ತು. ಇಷ್ಟು ದಿನ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದು ಹಿಂದಿರುಗಿದ ಕೆಲವರು, ತಮ್ಮ ಕುಸಿದ ಮನೆಯಲ್ಲಿ ಏನಾದರೂ ವಸ್ತುಗಳು ಸಿಗಬಹುದು ಎಂದು ಹುಡುಕಾಟ ನಡೆಸಿದ್ದಾರೆ

ಮನೆಗೆ ನುಗಿದ್ದ ಮಣ್ಣನ್ನು ತೆರವುಗೊಳಿಸುತ್ತಿರುವ ಅಶ್ರಫ್.
ಇಂದಿರಾ ನಗರದಲ್ಲಿ ಮಣ್ಣಿನಡಿ ನಜ್ಜುಗುಜ್ಜಾದ ಕಾರನ್ನು ತೆಗೆಯಲು ಪ್ರಯತ್ನಿಸುತ್ತಿರುವುದು.
ಇಂದಿರಾ ನಗರದ ನಿವಾಸಿಗಳು ಮನೆಗಳಿಗೆ ನಿರ್ಮಿಸಿಕೊಂಡಿರುವ ಕಾಲುದಾರಿ
ಇಂದಿರಾ ನಗರದಲ್ಲಿ ಕುಸಿಯುವ ಹಂತದಲ್ಲಿರುವ ಮನೆಗಳು
ಬಿ ವಿ ಮುರುಗೇಶ್
ಕೃಷ್ಣ ಪೂಜಾರಿ

ಮಡಿಕೇರಿಯ ಇಂದಿರಾ ನಗರದ ಕೆಲವು ನಿರಾಶ್ರಿತರು ಪರಿಹಾರ ಕೇಂದ್ರದಲ್ಲಿ, ಬಂಧುಬಳಗದ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈಗ ಮನೆಗೆ ಮರಳುತ್ತಿರುವ ಅವರು ಗುಡ್ಡ ಕುಸಿತದಿಂದ ಜರ್ಜರಿತವಾಗಿ ಅಳಿದುಳಿದ ಆಸ್ತಿಪಾಸ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇಂದಿರಾ ನಗರದಲ್ಲಿ ತಡೆಗೋಡೆಗಳು ಜರಿದು ಅಶ್ರಫ್ ಎನ್ನುವವರ ಮನೆಯೊಳಗೆ ಮಣ್ಣುಮಿಶ್ರಿತ ನೀರು ಆವರಿಸಿಕೊಂಡಿತ್ತು. ಇಷ್ಟು ದಿನ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದು ಹಿಂದಿರುಗಿದ ಅವರು, ತನ್ನ ಮನೆಯಲ್ಲಿ ಏನಾದರೂ ವಸ್ತುಗಳು ಸಿಗಬಹುದು ಎಂದು ಭಾವಿಸಿ ಕುಟುಂಬಸ್ಥರೊಂದಿಗೆ ಮಣ್ಣನ್ನು ತೆರವು ಮಾಡುತ್ತಿದ್ದ ದೃಶ್ಯ ಕಂಡುಬಂತು. ಇದು ಅಶ್ರಫ್ ಒಬ್ಬರ ಕತೆಯಲ್ಲ. ಇಂದಿರಾ ನಗರದ ಬಹುತೇಕ ನಿವಾಸಿಗಳು ಇದೀಗ ಅವಶೇಷಗಳ ನಡುವೆ ಹುಡುಕಾಟ ಆರಂಭಿಸಿದ್ದಾರೆ. “ತಗ್ಗು ಪ್ರದೇಶದಲ್ಲಿರುವವರನ್ನು ಮುಂಜಾಗ್ರತಾ ಕ್ರಮವಾಗಿ ನಗರಸಭೆ ಸ್ಥಳಾಂತರ ಮಾಡಿತ್ತು. ಒಂದು ವಾರಗಳ ಕಾಲ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದೆವು. ಆದರೆ, ಇನ್ನೆಷ್ಟು ದಿನಗಳ ಕಾಲ ಅವರ ಮನೆಯಲ್ಲಿ ಇರಲು ಸಾಧ್ಯ ಎಂದು ನಗರಕ್ಕೆ ಆಗಮಿಸಿದ್ದೇವೆ,” ಎಂದು ಅಶ್ರಫ್ ಹೇಳುತ್ತಾರೆ.

ಮೇಲಿನಿಂದ ಮೂರು ಮನೆಗಳು ಜರಿದುಬಂದ ಪರಿಣಾಮ ಬಿ ವಿ ಮುರುಗೇಶ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರು ನೆಲಕಚ್ಚಿತ್ತು. ಇದರೊಂದಿಗೆ ನಿರ್ಮಲ ಎನ್ನುವವರ ಸ್ಕೂಟಿ ಸೇರಿದಂತೆ ಮತ್ತೆ ಎರಡು ಸ್ಕೂಟಿಗಳು ಕೊಚ್ಚಿಹೋಗಿದ್ದವು. ಇತ್ತೀಚೆಗೆ ಮುರುಗೇಶ್ ಲೋನ್ ಮುಖಾಂತರ ಕಾರು ಖರೀದಿಸಿದ್ದರು. ಆದರೆ, ಇಂದು ಸಾಲ ಕಟ್ಟಲಾಗದೆ ಬಿರುಕು ಬಿಟ್ಟ ಮನೆಯಲ್ಲಿ, ಚಿಂತೆಯಿಂದ ತಲೆ ಮೇಲೆ ಕೈಹೊತ್ತು ನೆಲೆಸಿದ್ದಾರೆ. ಗುರುವಾರ ತನ್ನ ಸ್ನೇಹಿತರು ಹಾಗೂ ಅಕ್ಕಪಕ್ಕದ ಮನೆಯವರ ನೆರವಿನೊಂದಿಗೆ ಕಾರನ್ನು ಮಣ್ಣಿನಿಂದ ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ.

ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗಲಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಹಾಗೂ ಜನರಿಗೆ ಓಡಾಡಲು ಸಂಪರ್ಕ ರಸ್ತೆಗಳ ನಿರ್ಮಾಣ ಮಾಡಿಕೊಟ್ಟರೆ ಸಾಕು. ನಮ್ಮ ಜೀವನವನ್ನು ನಾವು ಕಟ್ಟಿಕೊಳ್ಳುತ್ತೇವೆ.
ಬಿ ವಿ ಮುರುಗೇಶ್, ಇಂದಿರಾ ನಗರ ನಿವಾಸಿ
ಇದನ್ನೂ ಓದಿ : ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಬೇಕಿದೆ ಪ್ರಬಲ ಸ್ಥಳೀಯ ನಾಯಕತ್ವ

ಇಂದಿರಾ ನಗರದ ನಿವಾಸಿ ಮೈನಾವತಿಯವರಿಗೆ ಪ್ರಕೃತಿ ವಿಕೋಪದಿಂದ ಮನೆ ಬೀಳುವ ಸಂದರ್ಭದಲ್ಲಿ ಕಾಲಿಗೆ ಗಾಯವಾಗಿತ್ತು. ನಂತರ ನಗರದ ಓಂಕಾರೇಶ್ವರ ಸದನದಲ್ಲಿ ಆಶ್ರಯ ನೀಡಲಾಗಿತ್ತು. ಮದುವೆ ಸಮಾರಂಭಗಳು ನಡೆಯಬೇಕಾದ ಹಿನ್ನೆಲೆಯಲ್ಲಿ ಅಲ್ಲಿದ್ದ ಜನರನ್ನು ಬೇರೆ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಬೇರೆಡೆ ಸರಿಯಾದ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಇಲ್ಲದೆ ಪರದಾಡಿದ್ದಾರೆ. ಕುಶಾಲನಗರದಿಂದ ತಮ್ಮ ನಿವಾಸಕ್ಕೆ ತೆರಳಿದ ಅವರು, ಇಂದು ಮನೆ ಇಲ್ಲದೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ವೇದಾವತಿ, ಪರಶುರಾಮ್, ರಾಮಕೃಷ್ಣ, ಜವರೇಗೌಡ, ಉಷಾ, ತಾಯಮ್ಮ, ಸೇರಿದಂತೆ ಇತರ ನಿವಾಸಿಗಳ ಮನೆಗಳು ನೆಲಸಮವಾಗಿದೆ. ಗಣೇಶ್, ಶಾರದ ಅವರ ಮನೆಗಳ ಗೋಡೆಗಳು ಜರಿದು ಕುಸಿಯುವ ಹಂತಕ್ಕೆ ತಲುಪಿವೆ. ಇಂದಿರಾ ನಗರದ ಮೇಲಿರುವ ಚಾಮುಂಡೇಶ್ವರಿ ನಗರದ ರಸ್ತೆಗಳು ಸಣ್ಣಮಟ್ಟದಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಮಳೆ ಮುಂದುವರಿದಲ್ಲಿ ಮಣ್ಣಿನ ಗೋಡೆಗಳೆಲ್ಲ ಕುಸಿಯುವ ಸಾಧ್ಯತೆ ಇದೆ.

ಇಂದಿರಾ ನಗರದಲ್ಲಿ ಪ್ರಕೃತಿ ವಿಕೋಪದಿಂದ ಮಣ್ಣಿನ ಗೋಡೆಗಳು ಜರಿದು ೨೦ಕ್ಕೂ ಅಧಿಕ ಮನೆಗಳು ನೆಲಕಚ್ಚಿವೆ. ಆದರೂ ಬೇರೆ ದಾರಿ ಇಲ್ಲದೆ ಕುಸಿಯುವ ಹಂತದಲ್ಲಿರುವ ಮನೆಯಲ್ಲಿ ವಾಸಿಸುವಂತಾಗಿದೆ. ಈ ಹಿಂದೆ ಇಂದಿರಾ ನಗರದ ನಿವಾಸಿಗಳ ಮನೆಗಳಿಗೆ ತೆರಳಲು ಸಣ್ಣಪುಟ್ಟ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಇಂದು ರಸ್ತೆಗಳು ಮಣ್ಣಿನಿಂದ ಆವೃತವಾಗಿದ್ದು, ರಸ್ತೆ ಎಲ್ಲಿ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಮಳೆ ಹೆಚ್ಚು ಸುರಿದ ಪರಿಣಾಮ ಕಾಂಕ್ರಿಟ್ ರಸ್ತೆಗಳು ಜಾರುತ್ತಿದ್ದು, ನಡೆದಾಡಲೂ ಕಷ್ಟವಾಗುತ್ತಿದೆ. ರಸ್ತೆ ಇಲ್ಲದ ಜಾಗಗಳಿಗೆ ಇಲ್ಲಿನ ನಿವಾಸಿಗಳೇ ಕಲ್ಲು, ಹೆಂಚಿನ ಚೂರುಗಳನ್ನು ಬಳಸಿ ಮನೆಗೆ ತೆರಳಲು ರಸ್ತೆಗಳನ್ನು ಮಾಡಿಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More