ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ ೧೦ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಯ ಸಂಕ್ಷಿಪ್ತ ಸಾರ

ಬೆಂಗಳೂರಿನಲ್ಲಿ 82 ರುಪಾಯಿ ಸಮೀಪಿಸಿದ ಪೆಟ್ರೋಲ್ ದರ

ಸತತ ಏರುತ್ತಿರುವ ಪೆಟ್ರೋಲ್ ದರ ಸೋಮವಾರ ಮತ್ತೊಂದು ಸಾರ್ವತ್ರಿಕ ಗರಿಷ್ಠ ಪ್ರಮಾಣಕ್ಕೆ ಏರಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 81.72ಕ್ಕೆ ಏರಿದ್ದು, 82 ರುಪಾಯಿ ಸಮೀಪಿಸಿದೆ. ಡಿಸೇಲ್ ದರ ಕೂಡ 73.44 ರುಪಾಯಿಗೇರಿದ್ದು, ಸಾರ್ವಕಾಲಿಕ ಗರಿಷ್ಠಮಟ್ಟ ಮುಟ್ಟಿದೆ. ತಿಂಗಳಾಂತ್ಯಕ್ಕೆ ಡಿಸೇಲ್ 75 ರುಪಾಯಿ ಮತ್ತು ಪೆಟ್ರೋಲ್ 85 ರುಪಾಯಿಗೆ ಏರುವ ಅಂದಾಜು ಇದೆ. ಇದೇ ವೇಳೆ, ಭಾರತೀಯ ಕರೆನ್ಸಿ ರುಪಾಯಿ ಡಾಲರ್ ವಿರುದ್ಧ ಮತ್ತಷ್ಟು ಕುಸಿದಿದ್ದು 71.16ಕ್ಕಿಳಿದಿದೆ. ಇದೇ ಮೊದಲ ಬಾರಿಗೆ 71ರ ಗಡಿ ದಾಟಿ ವಹಿವಾಟು ಅಂತ್ಯಗೊಂಡಿದೆ. ಷೇರುಪೇಟೆ ಸಹ ಕುಸಿದಿದ್ದು, ಸೆನ್ಸೆಕ್ಸ್ 333 ಮತ್ತು ನಿಫ್ಟಿ 98 ಅಂಶ ಇಳಿದಿವೆ.

ಪುಣೆ ಪೊಲೀಸರನ್ನು ತರಾಟೆಗೆ ತಗೆದುಕೊಂಡ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಹಿಂಸಾತ್ಮಕ ಕೃತ್ಯಕ್ಕೆ ಕುಮ್ಮಕ್ಕು ಹಾಗೂ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತರಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಸದ್ಯ ಗೃಹಬಂಧನದಲ್ಲಿರುವ ಐವರು ಹೋರಾಟಗಾರರ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪುಣೆ ಪೊಲೀಸರನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಮಾನವ ಹಕ್ಕು ಹೋರಾಟಗಾರರ ಬಂಧನಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಪೊಲೀಸರು ಸುದ್ದಿಗೋಷ್ಠಿ ನಡೆಸುವುದು ಸರಿಯಲ್ಲ. ಅಲ್ಲದೆ, ಆ ವೇಳೆ ಮಾಹಿತಿ ಬಹಿರಂಗಪಡಿಸುವುದು ತಪ್ಪು,” ಎಂದು ಹೈಕೋರ್ಟ್  ವಿಭಾಗೀಯ ಪೀಠ ಹೇಳಿದೆ.

ತುಮಕೂರು ಮಹಾನಗರ ಪಾಲಿಕೆ ಚುನಾವಣೆ; ಸಂಭ್ರಮಾಚರಣೆ ವೇಳೆ ಆಸಿಡ್‌ ದಾಳಿ

ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಗರು ನಡೆಸುತ್ತಿದ್ದ ಸಂಭ್ರಮಾಚರಣೆ ವೇಳೆ ಆಸಿಡ್‌ ದಾಳಿ ನಡೆದಿದೆ. ದಾಳಿಯಲ್ಲಿ 10 ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ತುಮಕೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಂದಿದ್ದು, 16ನೇ ವಾರ್ಡ್‌ ಕಾಂಗ್ರೆಸ್‌ ಅಭ್ಯರ್ಥಿ ಆರೀಫ್‌ ಹುಸೇನ್‌ ಜಯ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನೂರಾರು ಬೆಂಬಲಿಗರು ನಗರದ ಎನ್‌ ಆರ್‌ ಕಾಲೋನಿಯ ರಸ್ತೆಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆಸಿಡ್‌ ದಾಳಿ ನಡೆಸಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಉತ್ತರಾಖಂಡದಲ್ಲಿ ಭಾರಿ ಮಳೆ; ೧೫ ಜನರ ಸಾವು

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಭೂಕುಸಿತವಾಗಿದ್ದು, ರಿಷಿಕೇಶ-ಗಂಗೋತ್ರಿ ಹೆದ್ದಾರಿಯಲ್ಲಿ ಗಂಗೋತ್ರಿಯಿಂದ ಹಿಂತಿರುಗುತ್ತಿದ್ದ ಟೆಂಪೋ ಟ್ರಾವೆಲರ್ ಅಪಘಾತಕ್ಕೀಡಾಗಿ ೧೫ ಜನ ಸಾವನ್ನಪ್ಪಿದ್ದಾರೆ. 15 ಜನ ಪ್ರಯಾಣಿಕರಿದ್ದ ಟೆಂಪೋ 200 ಮೀಟರ್ ಆಳದ ಪ್ರಪಾತಕ್ಕೆ ಉರುಳಿ ಮೂವರು ಮಹಿಳೆಯರು ಸೇರಿದಂತೆ 13 ಜನ ಪ್ರಯಾಣಿಕರು ಮೃತಪಟ್ಟಿದ್ದು, ಭಾಗೀರಥಿ ನದಿ ಹರಿಯುವ ಜಾಗಕ್ಕೆ ಸಮೀಪದಲ್ಲೇ ಭೂಕುಸಿತವಾಗಿದೆ, ಘಟನೆಯಲ್ಲಿ ಬದುಕುಳಿದು ಗಾಯಗೊಂಡಿರುವ 13 ಮತ್ತು 15 ವರ್ಷದ ಬಾಲಕಿಯರನ್ನು ಡೆಹ್ರಾಡೂನಿನ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಮುಖ್ಯಮಂತ್ರಿ ಆಗಲಿದ್ದಾರೆ ನಟ ವಿಜಯ್ ದೇವರಕೊಂಡ

ತೆಲುಗಿನಲ್ಲಿ ಮತ್ತೊಂದು ರಾಜಕೀಯ ಥ್ರಿಲ್ಲರ್ ಚಿತ್ರ ಸಿದ್ಧವಾಗುತ್ತಿದೆ. ‘ಇರುಮುಗನ್’ ಖ್ಯಾತಿಯ ನಿರ್ದೇಶಕ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಞಾನವೇಲು ರಾಜ್ ನಿರ್ಮಾಣದ ‘ನೋಟಾ’ ಈಗಾಗಲೇ ಸೆಟ್ಟೇರಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಚಿತ್ರಗಳ ಯಶಸ್ಸಿನಲ್ಲಿ ತೇಲುತ್ತಿರುವ ವಿಜಯ್ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ವೈಯಕ್ತಿಕವಾಗಿ ರಾಜಕಾರಣವನ್ನು ಇಷ್ಟಪಡದ ವಿಜಯ್, ಈ ಚಿತ್ರದ ಮೂಲಕ ತಮ್ಮನ್ನು ಹೊಸ ಪ್ರಯೋಗಕ್ಕೆ ಒಗ್ಗಿಸಿಕೊಂಡಿದ್ದಾರೆ.

ರೊಹಿಂಗ್ಯಾ ಹತ್ಯಾಕಾಂಡ: ತನಿಖಾ ವರದಿ ಮಾಡಿದ ಪತ್ರಕರ್ತರಿಗೆ ಜೈಲುಶಿಕ್ಷೆ

ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡವನ್ನು ತನಿಖೆ ನಡೆಸಿ ವರದಿ ಮಾಡಿದ ರಾಯ್ಟರ್ಸ್ ಸುದ್ದಿಸಂಸ್ಥೆಯ ಇಬ್ಬರು ವರದಿಗಾರರಿಗೆ ಮ್ಯಾನ್ಮಾರ್ ನ್ಯಾಯಾಲಯ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ರಹಸ್ಯ ಕಾಯಿದೆ ಉಲ್ಲಂಘನೆ ಆರೋಪದಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ವಾ ಲೋನ್ (೩೨), ಕ್ವಾ ಸೋ ಓ (೨೮) ಅವರನ್ನು ಕಳೆದ ವರ್ಷವೇ ಪೊಲೀಸರು ಬಂಧಿಸಿದ್ದರು. ಈಗಾಗಲೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಮ್ಯಾನ್ಮಾರ್ ಮಿಲಿಟರಿ ವಿರುದ್ಧ ಜನಾಂಗೀಯ ಹತ್ಯೆ ಆರೋಪ ಹೊರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಬ್ರೆಜಿಲ್ ವಸ್ತು ಸಂಗ್ರಹಾಲಯ ಬೆಂಕಿಗೆ ಆಹುತಿ

ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಭಾನುವಾರ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ಅಪಾರ ನಷ್ಟ ಸಂಭವಿಸಿದೆ. ಈ ಸಂಗ್ರಹಾಲಯದಲ್ಲಿ ಮಾನವ ವಿಜ್ಞಾನ, ಭೂವಿಜ್ಞಾನ ಮತ್ತು ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ೨೦ ದಶಲಕ್ಷ ಡಾಲರ್‌ಗೂ ಹೆಚ್ಚು ಮೌಲ್ಯದ ಕಲಾಕೃತಿ, ಮಾಹಿತಿ ಕೋಶಗಳು ಹಾಗೂ ಲ್ಯಾಟಿನ್ ಅಮೆರಿಕಕ್ಕೆ ಸಂಬಂಧಿಸಿದ ಮಾಹಿತಿ ಕೋಶಗಳು ಇದ್ದವೆಂದು ಹೇಳಲಾಗಿದೆ.

ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದ ವಿರಾಟ್

ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ದಿನದ ಹಿಂದಷ್ಟೇ ಮುಕ್ತಾಯ ಕಂಡ ನಾಲ್ಕನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ೪೬ ಮತ್ತು ೫೮ ರನ್ ಗಳಿಸಿದ ಕೊಹ್ಲಿ, ೯೩೭ ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಹತ್ತು ಅಗ್ರ ಬ್ಯಾಟ್ಸ್‌ಮನ್‌ಗಳ ಪೈಕಿಇರುವ ಮತ್ತೋರ್ವ ಭಾರತೀಯ ಬ್ಯಾಟ್ಸ್‌ಮನ್ ಎಂದರೆ ಅದು ಚೇತೇಶ್ವರ ಪುಜಾರ. ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಬಾರಿಸಿದ ಪುಜಾರ ಆರನೇ ಸ್ಥಾನದಲ್ಲಿದ್ದಾರೆ. ಇತ್ತ, ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಶಮಿ ಮೂರು ಸ್ಥಾನಗಳ ಜಿಗಿತದೊಂದಿಗೆ ಅಗ್ರ ೨೦ ಬೌಲರ್‌ಗಳ ಪಟ್ಟಿಗೆ ವಾಪಸಾಗಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಮೌಡ್ಗಿಲ್ ಮತ್ತು ಚಾಂಡೀಲಾ

ಮುಂಬರುವ ೨೦೨೦ರ ಜಪಾನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಪ್ರಥಮ ಶೂಟರ್ಗಳೆಂಬ ಗೌರವಕ್ಕೆ ಅಂಜುಮ್ ಮೌಡ್ಗಿಲ್ ಮತ್ತು ಅಪೂರ್ವಿ ಚಾಂಡೀಲಾ ಭಾಜನರಾಗಿದ್ದಾರೆ. ಚಾಂಗ್ವೊನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ವನಿತೆಯರ ೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಮೌಡ್ಗಿಲ್ ಬೆಳ್ಳಿ ಪದಕ ಜಯಿಸಿದರೆ, ಅಪೂರ್ವಿ ನಾಲ್ಕನೇ ಸ್ಥಾನ ಗಳಿಸಿದರು. ೨೪ರ ಹರೆಯದ ಮೌಡ್ಗಿಲ್ ೨೪೮.೪ ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಪಡೆದರು.ಕೊರಿಯಾದ ಹನಾ ಇಮ್ (೨೫೧.೧) ಚಿನ್ನ ಗೆದ್ದರೆ, ಕೊರಿಯಾದ ಮತ್ತೋರ್ವ ಶೂಟರ್ ಯುನ್ಹಿಯಾ ಜಂಗ್ (೨೨೮.೦) ಕಂಚಿನ ಪದಕ ಜಯಿಸಿದರು. ಇತ್ತ, ೨೦೭ ಪಾಯಿಂಟ್ಸ್ ಪಡೆದ ಚಾಂಡೀಲಾ ನಾಲ್ಕನೇ ಸ್ಥಾನ ಪಡೆದರು.

ಇಂಗ್ಲೆಂಡ್ ಸರಣಿಯ ನಂತರ ನಿವೃತ್ತಿ ಹೇಳಲಿರುವ ಅಲೆಸ್ಟೈರ್ ಕುಕ್

ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟೈರ್ ಕುಕ್ ಪ್ರಸ್ತುತ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯ ನಂತರ ವೃತ್ತಿಬದುಕಿಗೆ ವಿದಾಯ ಹೇಳಲಿದ್ದಾರೆ. ೩೩ರ ಹರೆಯದ ಎಸೆಕ್ಸ್‌ನ ಈ ಎಡಗೈ ಆಟಗಾರ ಇಂಗ್ಲೆಂಡ್ ಪರ ಸಾರ್ವಕಾಲಿಕ ಸರ್ವಾಧಿಕ ಸ್ಕೋರರ್ ಎನಿಸಿಕೊಂಡಿದ್ದಾರೆ. ೪೪.೮೮ರ ಸರಾಸರಿಯಲ್ಲಿ ೩೨ ಶತಕ ಸೇರಿದ ೧೨,೨೫೪ ರನ್ ಗಳಿಸಿರುವ ಕುಕ್, ಸತತ ೧೫೯ ಟೆಸ್ಟ್‌ಗಳಲ್ಲಿ ಆಡುವುದರೊಂದಿಗೆ ವಿಶ್ವ ದಾಖಲೆ ಬರೆದವರು. ಭಾರತ ವಿರುದ್ಧದ ನಾಲ್ಕು ಟೆಸ್ಟ್‌ಗಳಲ್ಲಿ ಸಂಪೂರ್ಣ ವೈಫಲ್ಯವಾಗಿರುವ ಕುಕ್ ನಿವೃತ್ತಿ ನಿರೀಕ್ಷಿತವೇ ಆಗಿದೆ. "ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ಬಳಿಕ ಭಾರತ ವಿರುದ್ಧದ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದು ಸೂಕ್ತ ಎಂದೆನಿಸಿತ್ತು,'' ಎಂಬ ಕುಕ್ ನಿವೃತ್ತಿ ಮಾತಿನ ಒಕ್ಕಣೆಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More