ದಲಿತ ಪದ ಬಳಕೆ ತಡೆಯುವ ಹುನ್ನಾರಕ್ಕೆ ಹೋರಾಟಗಾರ, ಚಿಂತಕರ ಪ್ರತಿಕ್ರಿಯೆ ಏನು?

ದಲಿತ ಪದ ಸಂವಿಧಾನದಲ್ಲಿ ಪ್ರಸ್ತಾಪವಾಗಿಲ್ಲ ಎನ್ನುವ ಕಾರಣಕ್ಕೆ ಅದನ್ನು ಸರ್ಕಾರಿ ಮತ್ತು ಮಾಧ್ಯಮ ಬಳಕೆಯಿಂದ ತಡೆದು, ‘ಪರಿಶಿಷ್ಟ ಜಾತಿ’ ಎಂದು ಬಳಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ‘ದಲಿತ’ ಅವಮಾನಕರ ಪದ ಎನ್ನುವ ಪಿಐಎಲ್‌, ಅದನ್ನಾಧರಿಸಿ ಕೋರ್ಟ್‌ ನೀಡಿದ ಆದೇಶ ಇದರ ಮೂಲ

ದಲಿತರ ಮೇಲಿನ ದೌರ್ಜನ್ಯ ಕಾಯಿದೆಗೆ ತಿದ್ದುಪಡಿ, ಕೋರೆಗಾಂವ್‌ ಹೋರಾಟ, ಗೋರಕ್ಷಕರ ಉಪಟಳ ಮುಂತಾದ ಪ್ರಕರಣಗಳಲ್ಲಿ ದಲಿತ ಸಮುದಾಯದ ವ್ಯಾಪಕ ಕೋಪಕ್ಕೆ ತುತ್ತಾಗಿರುವ ಕೇಂದ್ರ ಸರ್ಕಾರ, ನ್ಯಾಯಾಲಯಗಳ ಆದೇಶದ ನೆಪದಲ್ಲಿ ‘ದಲಿತ’ ಪದವನ್ನೇ “ಅಸಾಂವಿಧಾನಿಕ’’ಗೊಳಿಸಿ, ಸರ್ಕಾರಿ ಮತ್ತು ಸಾರ್ವಜನಿಕ ಸಂವಹನಗಳಿಂದ ತೆಗೆದು ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. “ಸುದ್ದಿಗಳಲ್ಲಿ ದಲಿತ ಪದ ಪ್ರಯೋಗ ಬೇಡ. ಸಾಂವಿಧಾನಿಕವಾದ ‘ಪರಿಶಿಷ್ಟಜಾತಿ’ ಪದವನ್ನಷ್ಟೆ ಬಳಸಿ,’’ ಎಂದು ಸುದ್ದಿ ಮಾಧ್ಯಮಗಳಿಗೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚನೆ ರವಾನಿಸಿರುವುದಕ್ಕೆ ದಲಿತ ಸಂಘಟನೆಗಳ ಮುಖಂಡರು, ದಲಿತ ಚಿಂತಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಭಾಗವಾಗಿರುವ ದಲಿತ ನಾಯಕರು ಕೂಡ ಪ್ರತಿರೋಧವನ್ನು ದಾಖಲಿಸಿದ್ದಾರೆ.

ಸರ್ಕಾರದ ಎಲ್ಲಾ ಹಂತದ ಸಂವಹನಗಳಲ್ಲಿ “ಪರಿಶಿಷ್ಟ ಜಾತಿ’’ ಪದ ಬಳಸುವಂತೆ ಕಳೆದ ಮಾರ್ಚ್‌ ತಿಂಗಳಲ್ಲೇ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತ್ತು. ಸಂವಿಧಾನದಲ್ಲಿ ಅಥವಾ ಯಾವುದೇ ಶಾಸನದಲ್ಲಿ ‘ದಲಿತ’ ಪದದ ಉಲ್ಲೇಖವಿಲ್ಲ ಎನ್ನುವುದನ್ನು ಈ ಆದೇಶ ಎತ್ತಿ ತೋರಿಸಿತ್ತು. ಸಾಮಾಜಿಕ ಕಾರ್ಯಕರ್ತ ಡಾ.ಮೋಹನ್ ಲಾಲ್ ಮೊಹರ್ ಎಂಬಾತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಕೈಗೆತ್ತಿಕೊಂಡ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್‌ ಪೀಠವು ಕಳೆದ ಜನವರಿಯಲ್ಲಿ, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಅಧಿಕೃತ ಪತ್ರಗಳಲ್ಲಿ ದಲಿತ ಎಂಬ ಪದದ ಬಳಕೆ ಮಾಡಬಾರದು,’’ಎಂದು ಆದೇಶ ನೀಡಿದ್ದು ಸರ್ಕಾರದ ಈ ಆದೇಶಕ್ಕೆ ಕಾರಣ. “ದಲಿತ ಅವಹೇಳನಕಾರಿ ಪದ. ಪರಿಶಿಷ್ಚ ಜಾತಿ, ವರ್ಗದ ಜನರನ್ನು ಹೀಗಳೆಯಲು ಅದನ್ನು ಬಳಸಲಾಗುತ್ತಿದೆ,’’ ಎನ್ನುವುದು ಮೋಹನ್‌ ವಾದವಾಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ,“ಸಂವಿಧಾನದಲ್ಲಿ ದಲಿತ ಪದದ ಉಲ್ಲೇಖ ಇಲ್ಲವಾದ್ದರಿಂದ ಅದರ ಬದಲು ಪರಿಶಿಷ್ಟ ಜಾತಿ ಎಂದು ಬಳಸಬೇಕು,’’ಎಂದು ಸೂಚಿಸಿತ್ತು.

ನಂತರ ಜೂನ್‌ ತಿಂಗಳಲ್ಲಿ ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠವು ಪ್ರಕರಣವೊಂದರ ವಿಚಾರಣೆ ಸಂದರ್ಭ ನೀಡಿದ ಆದೇಶವನ್ನು ಆಧಾರವಾಗಿಟ್ಟುಕೊಂಡು ಸುದ್ದಿ ಮಾಧ್ಯಮಗಳಲ್ಲಿ ‘ದಲಿತ’ ಪದ ಪ್ರಯೋಗವನ್ನು ತಡೆಯಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮುಂದಾಗಿದ್ದು, ಆ.೭ರಂದೇ ಈ ಸಂಬಂಧ ಆದೇಶ ಪ್ರಕಟಿಸಿದೆ. “ಬಾಂಬೆ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ದಲಿತ ಪದ ಬಳಕೆ ಬೇಡ. ಪರಿಶಿಷ್ಟ ಜಾತಿ ಪದವನ್ನಷ್ಟೆ ಬಳಸಬೇಕು,’’ ಎಂದು ಮಾಧ್ಯಮಗಳಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಸರ್ಕಾರದ ವ್ಯವಹಾರಗಳಲ್ಲಿ “ಪರಿಶಿಷ್ಟ ಜಾತಿ’’ ಪದ ಬಳಸಬೇಕೆಂದು ಹೇಳಿದ್ದಕ್ಕೆ ಯಾರದ್ದೂ ತಕರಾರಿರಲಿಲ್ಲ. ಈಗ, ಮಾಧ್ಯಮಗಳಿಗೂ ಈ ನಿರ್ಬಂಧವನ್ನು ವಿಸ್ತರಿಸುತ್ತಿರುವುದು ದಲಿತ ಸಂಘಟನೆಗಳು ಮತ್ತು ದಲಿತ ಚಿಂತಕರಲ್ಲಿ ಕೋಪ ತರಿಸಿದೆ.

ಕೇಂದ್ರದ ಸಾಮಾಜಿಕ ನ್ಯಾಯ ಸಚಿವ ರಾಮದಾಸ್‌ ಅಠಾವಳೆ ಸಹಿತ ಅನೇಕರು ಕೇಂದ್ರದ ಸುತ್ತೋಲೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ದಲಿತ ಪದ ಬಳಕೆ ತಪ್ಪು ಎನ್ನುವ ಕೋರ್ಟ್ ಅಭಿಪ್ರಾಯವನ್ನು ವಿರೋಧಿಸುತ್ತೇವೆ. ಈ ಪದ ಬಳಕೆ ಅವಮಾನವಲ್ಲ, ಅದು ಹೆಮ್ಮೆ,’’ಎಂದು ದಲಿತ್‌ ಪ್ಯಾಂಥರ್ಸ್ ಜೊತೆಗಿರುವ ಅಠಾವಳೆ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಸಚಿವರು, ಹೋರಾಟಗಾರರು, ಚಿಂತಕರು ಸಹಿತ ಯಾರೊಬ್ಬರೂ ‘ದಲಿತ’ ಪದ ಅವಮಾನಕರ ಎನ್ನುವುದನ್ನು ಒಪ್ಪುವುದಿಲ್ಲ. ಬದಲು, “ಅದು ನಮ್ಮ ಐಡೆಂಟಿಟಿ’’ ಎಂದೇ ಹೆಮ್ಮೆಪಟ್ಟಿದ್ದಾರೆ. “ದಿ ಸ್ಟೇಟ್‌’’ ಜೊತೆ ಮಾತನಾಡಿದ ಕರ್ನಾಟಕದ ದಲಿತ ಪರ ಹೋರಾಟಗಾರರು, ಚಿಂತಕರು ಕೂಡ ಸಮುದಾಯದ ಆತ್ಮಗೌರವದ ಸಂಕೇತವಾದ ‘ದಲಿತ’ಪದವನ್ನು ಸಾರ್ವಜನಿಕ ಚರ್ಚೆಯಿಂದ ಇನ್ನಿಲ್ಲವಾಗಿಸುವ ಬಿಜೆಪಿ ಸರ್ಕಾರದ ರಾಜಕೀಯ ಷಡ್ಯಂತ್ರದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ದಲಿತ ಪದ ಬೇಡ ಎನ್ನುವುದು ಸಮ್ಮತವಲ್ಲ

“ಸರ್ಕಾರಿ ಸವಲತ್ತು ನೀಡುವ ಸಂದರ್ಭ ಪರಿಶಿಷ್ಟ ಜಾತಿ ಪದ ಬಳಸಿದರೆ ತಪ್ಪೇನಲ್ಲ. ಆದರೆ, ಸಾಂಸ್ಕೃತಿಕ, ಸಾಮಾಜಿಕ ಮತ್ತು ವ್ಯಾವಹಾರಿಕ ಸಂದರ್ಭಗಳಲ್ಲಿ ‘ದಲಿತ’ಪದವನ್ನು ಬಳಸುವುದು ಬೇಡ ಎನ್ನುವುದು, ಅದಕ್ಕೆ ಸಾಂವಿಧಾನಿಕ ಪದ ಅಲ್ಲ ಎನ್ನುವ ನೆಪವನ್ನು ಮುಂದೊಡ್ಡುವುದು ಸಮ್ಮತವಲ್ಲ. ಸಂವಿಧಾನದಲ್ಲಿಲ್ಲದ ಎಷ್ಟೋ ಪದಗಳು ನಮ್ಮ ನಡುವೆ ಬಳಕೆಯಲ್ಲಿವೆ,’’ಎನ್ನುತ್ತಾರೆ ‘ಗೌವರ್ಮೆಂಟ್ ಬ್ರಾಹ್ಮಣ’ ಕೃತಿಕಾರ, ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ. “ದಲಿತ ಪದ ಸಾಮಾಜಿಕ, ಸಾಂಸ್ಕೃತಿಕವಾಗಿ ಶಕ್ತಿಯುತವಾಗಿ ನೆಲೆಯೂರಿದೆ. ಸಲೀಸಾಗಿ ಬಳಕೆಯಾಗುತ್ತಿದೆ. ಇಂಥ ಪದವನ್ನು ನಿಯಂತ್ರಿಸುವ ಮೂಲಕ ಸಾಮಾಜಿಕವಾಗಿ ಬೆಳೆಯುತ್ತಿರುವ ದಲಿತ ಸಮುದಾಯವನ್ನೂ ನಿಯಂತ್ರಿಸುವ ಪರೋಕ್ಷ ಧೋರಣೆ ಇದ್ದಂತಿದೆ,’’ಎನ್ನುವುದು ಅವರ ಅನುಮಾನ.

ದಲಿತ ಮಾಂತ್ರಿಕ ಶಬ್ಧ, ಘನತೆಯ ಸಂಕೇತ

ಸರ್ಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಪದಗಳನ್ನು ಬಳಸಲಿ. ಆದರೆ, ಎಲ್ಲ ಸಾರ್ವಜನಿಕ ಸಂವಹನಗಳಲ್ಲಿ ದಲಿತ ಪದ ಬಳಕೆ ಬೇಡ ಎನ್ನುವುದು ತಪ್ಪು ಎನ್ನುವುದು ಕವಿ ಸಿದ್ದಲಿಂಗಯ್ಯ ಅವರ ಅಭಿಪ್ರಾಯ ಕೂಡ. “ದಲಿತರಿಗೆ ಐಡೆಂಟಿಟಿ, ಅನನ್ಯತೆ ಇರುವುದು ದಲಿತ ಪದದಿಂದ. ಗಾಂಧೀಜಿ ಬಳಸಿದ ‘ಹರಿಜನ’ ಪದ ಗೋವಿನಂತಹ ಮನುಷ್ಯ.ತಲೆಬಾಗಿ ನಿಲ್ಲುವವನು ಎನ್ನುವುದನ್ನು ಸೂಚಿಸುತ್ತಿತ್ತು. ಈ ಹರಿಜನ ಎನ್ನುವವನು ‘ದಲಿತ’ ಆಗಬೇಕು. ದಲಿತ ಆದಾಗ ಅದೇ ಮನುಷ್ಯ ತಲೆ ಎತ್ತಿ ನಿಲ್ಲುತ್ತಾನೆ, ಘೋಷಣೆ ಕೂಗುತ್ತಾನೆ, ಹೋರಾಟಕ್ಕೆ ಮುಂದಾಗುತ್ತಾನೆ. ಅಂದರೆ, ‘ದಲಿತ’ ಪದ ದಲಿತರನ್ನು ಸಾಮಾಜಿಕವಾದ ಬದಲಾವಣೆಗೆ ಸಜ್ಜುಗೊಳಿಸುವ ಮಾಂತ್ರಿಕ ಶಬ್ಧ. ದಲಿತರ ಘನತೆಯ ಸಂಕೇತ. ಸಾಮಾಜಿಕ ವ್ಯವಸ್ಥೆಯಿಂದ ಕುಗ್ಗಿ ಹೋಗಿರುವ ವ್ಯಕ್ತಿ ಹರಿಜನ. ಅದೇ ಕುಗ್ಗಿ ಹೋದ ವ್ಯಕ್ತಿ ತಲೆ ಎತ್ತಿ ನಿಂತರೆ ದಲಿತ. ಆದ್ದರಿಂದ ಹರಿಜನರ ನಡಿಗೆ ದಲಿತರಾಗುವ ಕಡೆಗೆ ಇರಬೇಕು. ದಲಿತ ಪದ ಬಳಸಬಾರದೆಂದಾದರೆ ದಲಿತ ಚಳವಳಿ ಕಳೆಗುಂದುತ್ತೆ. ಪರಿಶಿಷ್ಟ ಜಾತಿ, ವರ್ಗ ಪದಗಳು ಅಂಥ ಸ್ಫೂರ್ತಿಯನ್ನು ತುಂಬುವುದಿಲ್ಲ,’’ಎನ್ನುತ್ತಾರೆ “ದಲಿತರು ಬಂದರು ದಾರಿ ಬಿಡಿ,’’ಹೋರಾಟದ ಹಾಡನ್ನು ಕಟ್ಟಿದ ಕವಿ.

“ಬಿಜೆಪಿ ಸರ್ಕಾರ ಅಂಬೇಡ್ಕರ್‌ ಹೆಸರಿನ ಜೊತೆ ಅವರ ತಂದೆ ರಾಮ್‌ ಜೀ ಹೆಸರನ್ನು ಸೇರಿಸಬೇಕು ಎನ್ನುತ್ತದೆ. ಅಯೋಧ್ಯೆಯ ರಾಮನ ಹೆಸರಿರುವುದರಿಂದ ಅಂಬೇಡ್ಕರ್‌ ಗಿಂತ ಅವರ ತಂದೆ ಹೆಸರಿಗೆ ಅವರು ಪ್ರಧಾನ್ಯತೆ ನೀಡುತ್ತಿದ್ದಾರೆ. ಈಗ ದಲಿತ ಪದದ ವಿಷಯದಲ್ಲೂ ಅಂಥದೇ ಧೋರಣೆ ಅನುಸರಿಸುತ್ತಿದೆ. ಅಂಬೇಡ್ಕರ್‌ ಅವರ ಹೆಸರಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಸ್ಥಾಪಿಸಿರುವ ಮತ್ತು ಅವರ ದೆಹಲಿಯ ಮನೆಯನ್ನು ಸ್ಮಾರಕವನ್ನಾಗಿ ರೂಪಿಸಿರುವಂತ ಶ್ಲಾಘನಾರ್ಹ ಕೆಲಸ ಮಾಡಿರುವ ಬಿಜೆಪಿ ಸರ್ಕಾರ, ದಲಿತ ಪದ ಬಳಕೆ ನಿರ್ಬಂಧಿಸಲು ಮುಂದಾಗಿರುವುದು ಸರಿಯಲ್ಲ. ದಲಿತರ ಬಗ್ಗೆ ತನ್ನ ಧೋರಣೆ ಏನೆನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು. ಜಾತಿ, ಉಪಜಾತಿಗಳನ್ನು ಒಡೆದು, ಸಾಮರಸ್ಯ ಕೆಡಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರಗಳನ್ನು ಎಲ್ಲಾ ರಾಜಕೀಯ ಪಕ್ಷಗಳೂ ಮಾಡುತ್ತಿವೆ. ಬಿಜೆಪಿ ಕೂಡ ಅದಕ್ಕೆ ಹೊರತಲ್ಲ. ಆ ಪಕ್ಷದ ಅಧ್ಯಕ್ಷ ಷಾ ಅಥವಾ ಪ್ರಧಾನಿ ಮೋದಿ ಜೊತೆ ಮತ್ತೊಮ್ಮೆ ಮಾತನಾಡುವ ಅವಕಾಶ ಒದಗಿದಲ್ಲಿ ಈ ವಿಷಯವನ್ನು ಚರ್ಚಿಸುತ್ತೇನೆ,’’ ಎಂದರು ಸಿದ್ದಲಿಂಗಯ್ಯ.

ಎಸ್ಸಿ ನನ್ನ ಐಡಿಂಟಿಟಿ ಅಲ್ಲ, ಅದು ಮುಜುಗರ

ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ, ಕತೆಗಾರ ಮೊಗಳ್ಳಿ ಗಣೇಶ್‌ ಅವರು ಪರಿಶಿಷ್ಟ ಜಾತಿ, ಪಂಗಡ ಎನ್ನುವ ಸರ್ಕಾರಿ ಪದ ಬಳಕೆಯ ಬಗ್ಗೆಯೇ ತಕರಾರು ವ್ಯಕ್ತಪಡಿಸಿದರು. “ಅನುಸೂಚಿತ ಜಾತಿ, ಪಂಗಡ ಎನ್ನುವಂತವು ಬ್ರಿಟೀಷರ ವಸಾಹತು ಶಾಹಿ ವ್ಯವಸ್ಥೆ ನಮಗೆ ಕೊಟ್ಟ ಪದಗಳು. ಸ್ವಾತಂತ್ರ್ಯ ನಂತರವೂ ಅವನ್ನೇ ಬಳಸುತ್ತಿದ್ದೇವೆ. ಮಾರ್ಕ್ಸ್, ಅಂಬೇಡ್ಕರ್ ಮತ್ತು ಸಮಾಜವಾದಿ ಚಿಂತನಾ ಕ್ರಮಗಳಲ್ಲಿ ಬೆಳೆದ ಸಮಾಜ ವಿಜ್ಞಾನಿಗಳು, ಲೇಖಕರು ಮತ್ತು ಸಂವಿಧಾನದ ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವವರಿಗೆ ಎಸ್ಸಿ,ಎಸ್ಟಿ ಪದ ಬಳಕೆಗಳು ಮುಜುಗರ ತರಿಸುತ್ತವೆ. ಈ ಬಗೆಯ ವಿಂಗಡಣೆಯಲ್ಲಿ ‘ಒಳಗೊಳ್ಳುವಿಕೆ’ ಯ ಆಶಯ ಇಲ್ಲ. ಇಡೀ ಭಾರತೀಯತೆ ಮತ್ತು ಇಡೀ ಸಾಮಾಜಿಕತೆಯಿಂದ ಬಿಡಿಸಿ ನೋಡುವ, ಒಡೆದು ನೋಡುವ, ಅನ್ಯಗೊಳಿಸುವ ಗುಣ ಈ ವರ್ಗೀಕರಣದಲ್ಲಿದೆ. ಇದು ಜಾತಿ ವ್ಯವಸ್ಥೆಯನ್ನು ನಿರಾಕರಿಸುವ ಬದಲು,ಜಾತಿ ಮತ್ತು ಶ್ರೇಣೀಕೃತ ವರ್ಣಾಶ್ರಮ ವ್ಯವಸ್ಥೆಯ ಕ್ರಮವನ್ನೇ ಹೊಂದಿದೆ. ಆದ್ದರಿಂದ ಎಸ್ಸಿ, ಎಸ್ಟಿ ಎಂದಾಕ್ಷಣ ಅವಮಾನ ಎನ್ನಿಸುತ್ತದೆ,’’ಎನ್ನುತ್ತಾರೆ ಮೊಗಳ್ಳಿ.

“ಎಸ್ಸಿ ನನ್ನ ಐಡೆಂಟಿಟಿ ಅಲ್ಲ. ನಮ್ಮನ್ನು ಗುರುತಿಸಲು ಬೇರೆಯವರು ಮಾಡಿಕೊಂಡ ವಿಂಗಡಣೆಯಷ್ಟೆ. ಈ ಪದ ಸಮಗ್ರ ದೃಷ್ಟಿಕೋನದ್ದೂ ಅಲ್ಲ. ಸಂಕುಚಿತವಾದುದು. ಹಾಗೆ ಕರೆಯುವ ಮೂಲಕ ಜಾತಿ ವ್ಯವಸ್ಥೆಯ ಕೊನೆಯವರು ಎನ್ನುವ ಸಂದೇಶ ನೀಡುತ್ತಿದ್ದಾರೆ. ಆದರೆ,ನಾವು ಕೊನೆಯವರಲ್ಲ. ಸಾಮಾಜಿಕ ವ್ಯವಸ್ಥೆಯ ಬುನಾದಿ, ತಳಪಾಯದವರು. ಆದ್ದರಿಂದ,ತಳ ಸಮುದಾಯ, ಆದಿಮ ಸಮುದಾಯ ನಮ್ಮ ಐಡೆಂಟಿಟಿ. ಜಾತಿ ವ್ಯವಸ್ಥೆಗೆ ಬೇರೊಂದು ಮಾನವೀಯ ಆಯಾಮ ಕೊಡಲು ಮತ್ತು ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನದಲ್ಲಿ ‘ದಲಿತ’ ಪದವನ್ನು ಬಳಸುತ್ತೇವೆ. ಸಾಮಾಜಿಕ ವ್ಯವಸ್ಥೆಯಲ್ಲಿರುವ ನೂರಾರು ಸಂಖ್ಯೆಯ ದಮನಿತರ ಪರ ಹೋರಾಟದ ಸಂಕೇತ ‘ದಲಿತ’ ಪದ. ಇದು ಎಚ್ಚೆತ್ತ ಸಮಾಜಗಳ ಸಂಕೇತ ಮತ್ತು ಧ್ವನಿಯೂ ಹೌದು. ದಲಿತ ಪದಕ್ಕೆ ಇರುವ ಈ ದೊಡ್ಡ ಅರ್ಥವನ್ನು ಸಂಕುಚಿತ ಗೊಳಿಸುವುದೆಂದರೆ ಅದಕ್ಕಿರುವ ಅರ್ಥ ಸಾಮರ್ಥ್ಯವನ್ನು ಕುಗ್ಗಿಸುವ, ಅದರ ಮೂಲಕ ಅದರ ರಾಜಕೀಯ ಶಕ್ತಿಯನ್ನು ಒಡೆಯುವ ತಂತ್ರ. ಹಿಂದುತ್ವದ ಉಪಾಯವಿದು. ಇಂಥ ಉಪಾಯಗಳಿಂದಲೇ ನಾವೀಗ ಅನೇಕ ಅಪಾಯಗಳನ್ನು ಎದುರಿಸುತ್ತಿದ್ದೇವೆ,’’ಎನ್ನುವುದು ಮೊಗಳ್ಳಿಯವರ ಆತಂಕ.

ದಲಿತ ಹೋರಾಟವನ್ನು ಹತ್ತಿಕ್ಕುವ ದಮನ ನೀತಿ

ಕರ್ನಾಟಕದಲ್ಲಿ ದಲಿತ ಚಳವಳಿಯನ್ನು ಕಟ್ಟಿ, ಬೆಳೆಸಿದ ಕಟ್ಟಾಳುಗಳಲ್ಲಿ ಪ್ರಮುಖರಾದ ಕೋಲಾರದ ಎನ್‌. ವೆಂಕಟೇಶ್ ಅವರ ಪ್ರಕಾರ, ದೇಶವ್ಯಾಪಿ ಕಾವು ಪಡೆದಿರುವ ದಲಿತ ಚಳವಳಿಯನ್ನು ಹತ್ತಿಕ್ಕಲು ಕೇಂದ್ರದ ಬಿಜೆಪಿ ಸರ್ಕಾರ ನಡೆಸಿದ ಷಡ್ಯಂತ್ರವಿದು. “ಕೋರ್ಟ್‌ಗಳನ್ನು ಬಳಸಿಕೊಂಡು ದಲಿತರ ಮೇಲಿನ ದೌರ್ಜನ್ಯ ಕಾಯಿದೆಗೆ ತಿದ್ದುಪಡಿ ತಂದು, ಅದನ್ನು ದುರ್ಬಲಗೊಳಿಸಲು ಮುಂದಾದ ಬಿಜೆಪಿ ಸರ್ಕಾರದ ದಮನಕಾರಿ ನೀತಿ,ಷಡ್ಯಂತ್ರವನ್ನು ಖಂಡಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆದವು. ಜಾತಿ ಪದ್ಧತಿ ಕಾರಣಕ್ಕೆ ನಡೆಯುತ್ತಿರುವ ಕೋಮುವಾದಿ ದಬ್ಬಾಳಿಕೆಯನ್ನು ಪ್ರಶ್ನಿಸುವ ಚೈತನ್ಯವನ್ನು ದಲಿತರು ಬೆಳೆಸಿಕೊಂಡರು. ಸಾಭಿಮಾನಿ ಹೋರಾಟಗಳನ್ನು ರೂಪಿಸಿದರು. ಇದನ್ನೆಲ್ಲ ಸಹಿಸಿಕೊಳ್ಳದ ಕೇಂದ್ರ ಸರ್ಕಾರ, ಒಗ್ಗಟ್ಟಿಗೆ ಕಾರಣವಾದ ದಲಿತ ಪದಕ್ಕೆ ಕುತ್ತು ತರಲು ಹೊರಟಿದೆ,’’ ಎನ್ನುವುದು ಅವರ ನೇರ ಆರೋಪ.

“ದಲಿತ ಪದವನ್ನು ನಿರ್ಬಂಧಿಸಿದರೆ ಸಮುದಾಯ ಗೊಂದಲಕ್ಕೆ ಬೀಳುತ್ತದೆ. ಭೂಮಿ, ವಸತಿಯಂತಹ ಮೂಲ ಸೌಲಭ್ಯಗಳ ಬೇಡಿಕೆ, ದಬ್ಬಾಳಿಕೆ ವಿರುದ್ಧದ ಹೋರಾಟ, ಪ್ರಶ್ನಿಸುವ ಮನೋಧರ್ಮಗಳಿಂದ ವಿಮುಖವಾಗುತ್ತದೆ. ಆಗ ತಾವು ರಾಜಕೀಯ ಲಾಭ ಪಡೆಯಬಹುದು ಎನ್ನುವುದು ಬಿಜೆಪಿ ಪರಿವಾರದ ಹುನ್ನಾರ. ಇದನ್ನು ನಾವು ಖಂಡಿಸುತ್ತೇವೆ. ಇಂಥ ಎಲ್ಲ ದಮನಕಾರಿ ನೀತಿಗಳ ಕುರಿತಂತೆ ಚರ್ಚಿಸಿ, ಹೋರಾಟ ರೂಪಿಸಲೆಂದು ಸೆ.೬ ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ಮಟ್ಟದ ದಲಿತ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲಿ ಈ ವಿಷಯವನ್ನೂ ಚರ್ಚಿಸುತ್ತೇವೆ,’’ ಎಂದು ವೆಂಕಟೇಶ್ ಹೇಳಿದರು.

ಅಭಿವ್ಯಕ್ತಿಯ ಹರಣ; ಕೋರ್ಟ್‌ ಮೆಟ್ಟಿಲೇರಲು ಚಿಂತನೆ

“ದಲಿತ ಪದ ಬಳಸಬಾರದು ಎಂದು ಮಾಧ್ಯಗಳಿಗೆ ಆದೇಶ ನೀಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ. ಅಷ್ಟಕ್ಕೂ ಸಂವಿಧಾನದಲ್ಲಿ ಇಲ್ಲದ ಪದಗಳನ್ನು ಸಾರ್ವಜನಿಕವಾಗಿ ಬಳಸಬಾರದು ಎನ್ನುವ ನಿಯಮ ಎಲ್ಲಿದೆ,’’ ಎನ್ನುವುದು ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮಿನಾರಾಯಣ ನಾಗವಾರ ಅವರ ಪ್ರಶ್ನೆ. “ದಲಿತ ಪದದ ಅರ್ಥವ್ಯಾಪ್ತಿ ದೊಡ್ಡದಿದೆ. ಎಲ್ಲಾ ಜಾತಿಯ ಬಡವರು,ದಮನಿತರನ್ನು ಒಳಗೊಳ್ಳುವ ವಿಶಾಲ ಅರ್ಥವ್ಯಾಪ್ತಿಯಲ್ಲಿ ದಲಿತ ಸಂಘಟನೆಯನ್ನು ಕಟ್ಟಿದ್ದೇವೆ. ಈ ಪದವನ್ನು ನಿರ್ಬಂಧಿಸುವ ಹಿಂದೆ ಜಾತೀಯ ಮನಸ್ಸುಗಳ ಕ್ರೂರ ದೃಷ್ಟಿಕೋನವಿದೆ. ಈ ವಿಷಯದಲ್ಲಿ ನ್ಯಾಯಾಲಯಗಳ ಆದೇಶ ಕೂಡ ಪ್ರಶ್ನಾರ್ಹ. ಎಲ್ಲಾ ದಲಿತಪರ ಸಂಘಟನೆಗಳು ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ಸರ್ಕಾರದ ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ತೀರ್ಮಾನ ಕೈಗೊಳ್ಳುತ್ತೇವೆ’’ ಎಂದರು ನಾಗವಾರ.

ದಲಿತ ಸಮುದಾಯವನ್ನು ಪದೇ ಪದೇ ಕೆಣಕಿ, ಪ್ರಬಲ ಪ್ರತಿರೋಧಗಳನ್ನು ಎದುರಿಸಿಯೂ ತನ್ನ ಕೆಣಕುವ ಮತ್ತು ಆ ಮೂಲಕವೇ ಲಾಭ ಪಡೆಯುವ ಚಾಳಿಯಿಂದ ಬಿಜೆಪಿ-ಪರಿವಾರ ಹಿಂದೆ ಸರಿಯುತ್ತಿಲ್ಲ. ‘ದಲಿತ’ ಪದ ಬಳಕೆಯನ್ನು ಇನ್ನಿಲ್ಲವಾಗಿಸುವ ಆದೇಶದ ಮೂಲಕ ಮತ್ತೊಮ್ಮೆ ಆ ಸಮುದಾಯದ ಆತ್ಮಗೌರವನ್ನು ಕೆಣಕಿದೆ. ಎಲ್ಲೆಡೆ ಪ್ರತಿರೋಧ ಮೊಳಗಲಾರಂಭಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More