ನಿರ್ಭೀತ ಅಭಿವ್ಯಕ್ತಿಗೆ ಪರ್ಯಾಯ ಹುಡುಕದ ಸಹಿಷ್ಣುತೆಯೆಡೆಗೆ ಸಾಹಿತ್ಯ ಸಮ್ಮೇಳನ

ಜಿ ಎನ್‌ ದೇವಿ ನೇತೃತ್ವದ ‘ದಕ್ಷಿಣಾಯನ’ ಪ್ರಸನ್ನ ಅವರ ‘ಗ್ರಾಮ ಸೇವಾ ಸಂಘ’ ಜಂಟಿಯಾಗಿ ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ ವೈರುಧ್ಯಗಳಿಂದ ಕೂಡಿತ್ತು. ಜನಪ್ರಿಯತೆ ಕೊಡವಿಕೊಂಡಿರುವ ದೇವಿ ಮತ್ತು ಸಂಭ್ರಮದ ಗುಂಗಿನಲ್ಲಿದ್ದ ಪ್ರಸನ್ನ ಅವರ ನಡೆ ಮತ್ತು ಕ್ರಿಯೆಗಳ ನಡುವಿ ಇರುವ ಸೂಕ್ಷ್ಮ ಫರಕುಗಳನ್ನು ಗಮನಿಸಬೇಕಾಗಿದೆ

ಈಚೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‍ನಲ್ಲಿ ಗ್ರಾಮ ಸೇವಾ ಸಂಘ ಮತ್ತು ದಕ್ಷಿಣಾಯನ ಒಡಗೂಡಿ 'ಸಹಿಷ್ಣತೆಯೆಡೆಗೆ ಸಾಹಿತ್ಯ ಸಮ್ಮೇಳನ' ಎನ್ನುವ ಕಾರ್ಯಕ್ರಮ ನಡೆಸಿತು. ಇದು ದಾಬೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಯನ್ನು ಒಳಗೊಂಡಂತೆ, ಈಚಿನ ಸಾಹಿತಿ ಚಿಂತಕರ ದಿಢೀರ್ ಬಂಧನವನ್ನು ಆಧರಿಸಿ ಬರಹ ಮಾಡುವವರ ಬಿಕ್ಕಟ್ಟುಗಳ ನೆಲೆಯಲ್ಲಿ ಕೂಡಿಕೊಂಡ ಸಭೆಯಾಗಿತ್ತು. ಪ್ರಶಾಂತ್ ಭೂಷಣ್, ಗಿರೀಶ್ ಕಾರ್ನಾಡ್, ರಾಮಚಂದ್ರ ಗುಹಾ, ಜಿ ಎನ್ ದೇವಿ, ಪ್ರಸನ್ನ, ಎಂ ಎಸ್ ಸತ್ಯು, ಜಿ ಕೆ ಗೋವಿಂದರಾವ್, ಕೆ ಮರುಳಸಿದ್ದಪ್ಪ, ಬೋಳುವಾರ್ ಮಹಮದ್ ಕುಂಯಿ, ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ಕೆ ಶರೀಫಾ, ವಿಜಯಮ್ಮ, ಪ್ರತಿಭಾ ನಂದಕುಮಾರ್ ಮೊದಲಾದ ಸಾಹಿತಿ ಗಣ್ಯರನೇಕರು ನೆರೆದಿದ್ದರು. ಈ ಎಲ್ಲರ ಜೊತೆಗೂಡುವಿಕೆಯೆ ದೇಶದಲ್ಲಿನ ಅಘೋಷಿತ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಸಂಕೇತವಾಗಿತ್ತು. ಈ ಅರ್ಥದಲ್ಲಿ ಇದೊಂದು ಗಮನಾರ್ಹ ಸಭೆ. ಇದು ಪ್ರಜಾಸಂಸತ್ತಿನ ಮಾದರಿಯಲ್ಲಿ ಆಯೋಜನೆಗೊಂಡಿದ್ದು, ಭಾಗಿದಾರರೆಲ್ಲ ಅಸಹಿಷ್ಣತೆ ಮತ್ತು ಸಹಿಷ್ಣತೆಯ ಬಗ್ಗೆ ಮುಕ್ತವಾಗಿ ಮಾತನಾಡುವಂಥದ್ದಾಗಿತ್ತು.

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಏರ್ಪಟ್ಟ ಈ ಸಂದರ್ಭ ತುಂಬಾ ಸೂಕ್ಷ್ಮವಾದುದು. ಭಯಗ್ರಸ್ತ ಸ್ಥಿತಿಯನ್ನು ಎದುರಿಸಲು ಬೇಕಾದ ಪರ್ಯಾಯಗಳ ಬಗೆಗೆ ದೇಶಮಟ್ಟದ ಪ್ರಾಯೋಗಿಕ ಯೋಜನೆಗಳು ರೂಪುಗೊಳ್ಳಬೇಕಿದೆ. ಅಂತೆಯೇ ಫ್ಯಾಸಿಸ್ಟ್ ಪ್ರಭುತ್ವದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿರುವ ವಿಚಾರವಂತರ ಪಡೆಯನ್ನು ಒಂದೆಡೆ ಸೇರಿಸುವುದು ಮತ್ತು ಅವರುಗಳ ಚರ್ಚೆ ಸಂವಾದಗಳ ಫಲಿತಗಳನ್ನಾಧರಿಸಿದ ಪ್ರಾಯೋಗಿಕ ಪರ್ಯಾಯಗಳನ್ನು ರೂಪಿಸುವ ತುರ್ತು ಈ ಕಾಲಕ್ಕಿದೆ. ಅಂತೆಯೇ ಈ ಪರ್ಯಾಯಗಳನ್ನು ದೇಶವ್ಯಾಪಿ ಜೀವಪರವಾಗಿ ತೊಡಗಿಸಿಕೊಂಡ ಚಳವಳಿಗಳಿಗಳ ಯುವ ಸಮುದಾಯಕ್ಕೆ ಹಂಚುವುದು, ಅವುಗಳು ಕ್ರಿಯೆಯಾಗುವಂತೆ ಚಟುವಟಿಕೆಗಳನ್ನು ಚುರುಕುಗೊಳಿಸಿ ಕೋಮುವಾದಿ ವಾತಾವರಣವನ್ನು ತಿಳಿಯಾಗಿಸುವ ಬಹುದೊಡ್ಡ ಜವಾಬ್ದಾರಿ ವಿಚಾರವಂತರ ಮೇಲಿದೆ. ಮೇಲುನೋಟಕ್ಕೆ ಇಂತಹ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ದಕ್ಷಿಣಾಯನ ಹಿಂದಿನ ಕೆಲವು ನಡೆಗಳಲ್ಲಿ ಸಣ್ಣ ಭರವಸೆಯನ್ನೂ ಹುಟ್ಟಿಸಿತ್ತು. ಬೆಂಗಳೂರಿನಲ್ಲಿ ಆಯೋಜನೆಗೊಂಡ 'ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ' ದ ಬಗೆಗೂ ಇಂಥಹದ್ದೊಂದು ಅಪೇಕ್ಷೆ ಇತ್ತು.

ಆರಂಭಕ್ಕೆ ಜಿ ಎನ್ ದೇವಿ ಅವರು ಈ ಹೊತ್ತಿನ ಬಿಕ್ಕಟ್ಟುಗಳ ಬಗೆಗೆ ಮತ್ತು ನಾವುಗಳು ಕಂಡುಕೊಳ್ಳಬಹುದಾದ ಪರ್ಯಾಯಗಳ ಬಗೆಗೆ ಸೂಕ್ಷ್ಮಸಂಗತಿಗಳನ್ನು ಸಭೆಯ ಗಮನಕ್ಕೆ ತಂದರು. ಅಂತೆಯೇ ಈ ಹೊತ್ತು ಬುದ್ಧಗುರುವಿನ ಮೈತ್ರಿಯ ಪರಿಕಲ್ಪನೆ ನಮಗೆ ದಾರಿದೀಪವಾಗಬೇಕಿದೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು. ಈ ಮಧ್ಯೆ ಇಡೀ ದಿನದ ಆಶಯಕ್ಕೆ ಪಕ್ಕಾಗಿ ಪರಿಣಾಮಕಾರಿ ಆಕ್ಷನ್ ಪ್ಲಾನ್ ಕೊಟ್ಟದ್ದು ಸ್ವರಾಜ್ ಇಂಡಿಯಾ ಅಭಿಯಾನದ ಪ್ರಶಾಂತ ಭೂಷಣ ಅವರು. ಮೊದಲು ಜನರಿಗೆ ಮೋಸ ಮಾಡುತ್ತಿರುವ ಪ್ರಭುತ್ವ ಹೇಳುವ ಸುಳ್ಳುಗಳನ್ನು ಬಯಲುಗೊಳಿಸುವುದು, ದ್ವೇಷಕಾರುವ ಮತ್ತು ಅಹಿಂಸೆಯನ್ನು ಪ್ರಚೋದಿಸುವ ಬರಹ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಗುರುತಿಸಿ ದೂರು ಸಲ್ಲಿಸಿ ಇವುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು. ಎರಡನೆಯದಾಗಿ ಈ ಬಗೆಯ ಜಾಗೃತಿಯನ್ನು ಮೂಡಿಸಲು ನಿಷ್ಠಾವಂತ ಜಾಗೃತ ಬಳಗವನ್ನು ರೂಪಿಸುವುದು, ಈ ಬಳಗದ ಮೂಲಕ ಬಹುತ್ವ ಮತ್ತು ಬಹುಧಾರ್ಮಿಕತೆಯ ಸೌಹಾರ್ದತೆಯ ಕಥನಗಳನ್ನು ವ್ಯಾಪಕವಾಗಿ ಹರಡುವ ಕ್ರಿಯಾಯೋಜನೆ ರೂಪಿಸುವುದು, ಮೂರನೆಯದಾಗಿ ತಾಲೂಕು ಜಿಲ್ಲಾವಾರು ಸಂವಿಧಾನದ ಆಶಯಗಳಿಗೆ ಬದ್ಧರಾದ ಸದಸ್ಯರನ್ನು ಒಳಗೊಂಡ ಶಾಂತಿ ಸೌಹಾರ್ದತೆಯ ಸಮಿತಿಗಳನ್ನು ರಚಿಸುವುದು. ಈ ಸಮಿತಿಗಳು ಜನರೊಟ್ಟಿಗಿದ್ದು ಸೌಹಾರ್ದತೆಗಾಗಿ ದುಡಿಯುವುದು, ಎನ್ನುವ ಕ್ರಿಯಾಯೋಜನೆಯನ್ನು ಮುಂದಿಟ್ಟರು. ಉಳಿದಂತೆ ಮುಜಫರ್‌ ಅಸ್ಸಾದಿ, ದಿನೆಶ್‌ ಅಮೀನ್‌ಮಟ್ಟು, ಸಿದ್ದನಗೌಡ ಪಾಟೀಲ್‌ ಮೊದಲಾದವರು ಇದಕ್ಕೆ ಪೂರಕವಾದ ಚಿಂತನೆಗಳನ್ನು ಹಂಚಿಕೊಂಡರು. ಇಂತಹ ಕ್ರಿಯಾಯೋಜನೆಗಳನ್ನು ಬೇರೆ ಬೇರೆ ಹಿನ್ನೆಲೆಯವರು ಅವರದೇ ನೆಲೆಗಳಲ್ಲಿ ಮಂಡಿಸಿ, ಅದರ ಕ್ರೂಡೀಕೃತ ರೂಪ ಕಾರ್ಯಕ್ರಮದ ಕೊನೆಗೆ ಮಂಡನೆಯಾಗಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಇಡೀ ಸಮ್ಮೇಳನ ಎಡವಿದಂತೆ ಕಂಡಿತು.

ರಂಗಕರ್ಮಿ ಪ್ರಸನ್ನ ಅವರ ಮುಂದಾಳತ್ವದ `ಗ್ರಾಮ ಸೇವಾ ಸಂಘ’ ದ ಚಟುವಟಿಕೆಗಳು ಮೇಲೆ ಹೇಳಿದ ಕಟಿಬದ್ಧತೆಗಿನ್ನೂ ಪಕ್ವವಾಗಿಲ್ಲ. ಇದಿನ್ನೂ ಮಧ್ಯಮವರ್ಗದ ಆರಾಮಾದಾಯಕ ಮೇಲ್‌ಸ್ತರದ ಚಟುವಟಿಕೆಗಳಲ್ಲಿ ಜೀವಂತವಾಗಿರುವ `ಜನಪ್ರಿಯ’ ನೆಲೆಯನ್ನು ಆಧರಿಸಿದೆ. ಹಾಗಾಗಿ ದಕ್ಷಿಣಾಯನದ ಒಡಲೊಳಗಳ ಕಿಚ್ಚಿನ ಕಾವು ಈ ಸಂಘಕ್ಕೆ ತಾಕುವುದು ಕಷ್ಟ. ಇದರ ಪರಿಣಾಮ ಕಾರ್ಯಕ್ರಮದ ಆಯೋಜನೆಯಲ್ಲಿಯೂ ಫಲಿತಗೊಂಡಿತು. ಎರಡನೆಯದಾಗಿ ಫ್ಯಾಸಿಸ್ಟ್ ಪ್ರಭುತ್ವದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿರುವ ಪ್ರಾಮಾಣಿಕ ವಿಚಾರವಂತರ ಸಂಖ್ಯೆ ಕೂಡ ಬೆರಳೆಣಿಕೆಯದಾಗಿತ್ತು. ಬದಲಿಗೆ ಈ ಹೊತ್ತು ದೊಡ್ಡದಾಗಿ ಪ್ರತಿರೋಧದ ಧ್ವನಿ ಎತ್ತದೆ ಗುನುಗಿಕೊಂಡಿರುವ ಸಿನಿಕರ ಸಂಖ್ಯೆಯೇ ಹೆಚ್ಚಾಗಿತ್ತು. ವಿಚಿತ್ರವೆಂದರೆ ಫ್ಯಾಸಿಸ್ಟ್‌ ಪ್ರಭುತ್ವವನ್ನು ಕೆಣಕದೆ ನವಿರು ಪದ್ಯಗಳ ಬರೆದುಕೊಂಡಿರುವವರೂ ಸಹ ಅಂತಹದ್ದೇ ಪದ್ಯಗಳನ್ನು ವೇದಿಕೆಯಲ್ಲಿ ಓದಿ ರಂಜಿಸಿದರು. ಎಂದೂ ಫ್ಯಾಸಿಸ್ಟ್ ಪ್ರಭುತ್ವದ ಆತಂಕವನ್ನು ತೋರಿಸದ ಹಲವರು ತೋರಿಕೆಯ ಮಾತುಗಳನ್ನು ಆಡಿ ಕಾಳಜಿಯ ಬಲೂನುಗಳನ್ನು ಉಬ್ಬಿಸಿದರು. ಮುಂದುವರೆದು ಮರೆಯಲ್ಲಿ ಬಲಪಂಥೀಯ ಸೆಳವಿನ ಜತೆ ಕೊಡುಕೊಳೆ ಮಾಡುವ ಸಾಹಿತಿಗಳು ಕೂಡ ಮುಸುಕೊದ್ದೆ ತಮ್ಮ ಧೀರೋದತ್ತ ಮಾತುಗಳನ್ನು ಆಡುವಂತಾಯಿತು. ಈ ಬಗೆಯ ವಿರುದ್ಧ ದಿಕ್ಕಿನ ದನಿಗಳು ಏಕರೂಪದ ಆಕಾರ ಪಡೆಯಲು ಪ್ರಯತ್ನಿಸಿ ಸೋತಂತೆ ಕಾಣುತ್ತಿತ್ತು.

ಪ್ರಜಾತಾಂತ್ರಿಕ ಸಭೆ ಎಂದಾಗಲೂ, ಈಗಾಗಲೇ ಫ್ಯಾಸಿಸ್ಟ್ ಪ್ರಭುತ್ವದ ವಿರುದ್ಧ ಪ್ರಾಮಾಣಿಕವಾಗಿ ಚಳವಳಿ ಮಾಡುವ ಸಂಘಟನೆಗಳ ಮುಂದಾಳುಗಳನ್ನು ಕರೆಸಿ, ಆಯಾ ಸಂಘಟನೆಗಳ ಪ್ರತಿನಿಧಿಯಾಗಿ ಅವರವರ ಕೆಲಸ ಮತ್ತು ಭವಿಷ್ಯದ ರೂಪುರೇಷೆಗಳನ್ನು ಹಂಚಿಕೊಳ್ಳುವ ವೇದಿಕೆಯಾಗಬೇಕಿತ್ತು. ಒಟ್ಟಾರೆ ಈ ಆಯಾಮದ ಗೈರು ಹಾಜರಿ ದೊಡ್ಡದಾಗಿ ಕಾಣುತ್ತಿತ್ತು. ಬದಲಾಗಿ ಬಿಡಿಬಿಡಿ, ವ್ಯಕ್ತಿಗಳು ಬಿಡಿಬಿಡಿ ಆತಂಕಗಳನ್ನು ಹಂಚಿಕೊಳ್ಳಲು ಬಳಕೆಯಾದಂತೆ ಕಂಡಿತು. ನಾವು ಭಯಪಡಬೇಕಿಲ್ಲ, ಯಾರಿಂದಲೂ ಏನನ್ನೂ ಮಾಡಲಿಕ್ಕಾಗದು, ಬಹುತ್ವವನ್ನು ನಾಶಮಾಡಲಿಕ್ಕಾಗದು ಎನ್ನುವಂತಹ ರಮ್ಯ ಮಾತುಗಳು ಹೇರಳವಾಗಿ ಕೇಳಲ್ಪಟ್ಟವು. ವಾಸ್ತವದಲ್ಲಿ ಈ ಮಾತುಗಳು ಸವೆದು ಚಲಾವಣೆ ಕಳೆದುಕೊಂಡು ನಿತ್ರಾಣವಾದ ನುಡಿಗಟ್ಟುಗಳು. ಇಂತಹ ನುಡಿಗಟ್ಟುಗಳ ಸರಪಣಿ ಹೆಣೆಯುವ ಅಗತ್ಯ ಈ ಕಾಲಕ್ಕಿಲ್ಲ.  ಈ ಎಲ್ಲಾ ಮಿತಿಗಳು 'ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ ದ ಬಗೆಗಿದ್ದ ಅಪೇಕ್ಷೆಗಳನ್ನು ನಿಧಾನಕ್ಕೆ ಮಣ್ಣಾಗಿಸಿದವು.
ಮೇಲೆ ಹೇಳಿದಂತೆ ಈ ಸಮ್ಮೇಳನವನ್ನು ಆಯೋಜಿಸಿದ ಎರಡೂ ಸಂಘಟನೆಗಳಿಗೆ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಪ್ರಸನ್ನ ಅವರ ಗ್ರಾಮಸೇವಾ ಸಂಘವು ಸಮಸ್ಯೆಗಳನ್ನು ತುಂಬಾ ಮೇಲ್ ಸ್ತರದಲ್ಲಿ ಜನಪ್ರಿಯ ಮಾಧ್ಯಮ ಕೇಂದ್ರಿತ ನೆಲೆಯಲ್ಲಿ ಬಿಂಬಿಸುವ ಮಾದರಿಯದು. ಪ್ರಸನ್ನ ಅವರ ಯಂತ್ರಗಳನ್ನು ಕಳಚೋಣ ಬನ್ನಿ, ಶ್ರಮದಾಯಕ ಸರಳಬದುಕಿಗೆ ಗ್ರಾಮಕ್ಕೆ ಮರಳೋಣ ಎನ್ನುವುದನ್ನು ಮೊದಲುಗೊಂಡು ಮೂಲಭೂತವಾದಿಗಳ ಸಂಕೇತವಾಗಿ ವ್ಯಾಪಕತೆ ಪಡೆದ `ರಾಮ’ನನ್ನು ಸೆಕ್ಯುಲರ್ ಇಮೇಜಾಗಿ ರೂಪಾಂತರಿಸುವ ಪ್ರಕ್ರಿಯೆಗಳು ತುಂಬಾ ಆಳದ ತಿಳಿವು ಮತ್ತು ದೂರದೃಷ್ಠಿಯಿಲ್ಲದ ಜನಪ್ರಿಯ ಆಯ್ಕೆಗಳಂತೆ ಕಾಣುತ್ತವೆ. ಕಾರಣ ಇವುಗಳ ಬಗೆಗೆ ಪ್ರಸನ್ನ ಅವರ ಅಭಿಪ್ರಾಯಗಳು ಅದಕ್ಕೆ ಬೇಕಾದ ಸಿದ್ಧತೆಗಳು, ಒಳಗೊಳ್ಳುವ ಸಂಘಟನೆ ಮತ್ತು ಚಳವಳಿಗಾರರ ಆಯ್ಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಆದರೆ ದಕ್ಷಿಣಾಯನದ್ದು ಭಿನ್ನ ದಾರಿ. ಇದು ರೂಪಗೊಂಡದ್ದೆ ವಿಚಾರವಾದಿಗಳ ಹತ್ಯೆಯನ್ನು ವಿರೋಧಿಸಿ, ಲೇಖಕ ಕಲಾವಿದರಲ್ಲಿ ಭಯಮುಕ್ತ ಅಭಿವ್ಯಕ್ತಿಯನ್ನು ಸಾಧ್ಯವಾಗಿಸಲು. ಅಂತೆಯೇ ಈ ನೆಲೆಯಲ್ಲಿ ದೇಶದಾದ್ಯಾಂತ ಒಂದುಗೂಡುವ ಮನಸ್ಸುಗಳನ್ನು ಬಲಗೊಳಿಸಿ, ಭಯಹುಟ್ಟಿಸುವ ಶಕ್ತಿಗಳನ್ನು ಹಿಮ್ಮೆಟ್ಟಿಸುವುದಾಗಿದೆ. ದೂರದೃಷ್ಠಿಯ ಮತ್ತು ಪ್ರಾಯೋಗಿಕ ನೆಲೆ ಇದರದ್ದು. ಅಂತೆಯೇ ಪ್ರೊ.ಜಿ.ಎನ್.ದೇವಿ ಅವರು ಜನಪ್ರಿಯತೆಯ ಮೈಕೊಡವಿ ಬುಡಕಟ್ಟು ಸಮುದಾಯಗಳ ಜತೆ ಕಳೆದ ಇಪ್ಪತ್ತು ವರ್ಷಗಳ ಕಾಲ ಅವಿರತ ದುಡಿದವರು. ಹಾಗಾಗಿ ಪ್ರಸನ್ನ ಮತ್ತು ಪ್ರೊ.ದೇವಿ ಅವರ ನಡೆ ಮತ್ತು ಕ್ರಿಯೆಗಳಲ್ಲಿ ಸೂಕ್ಷ್ಮ ಫರಕುಗಳಿವೆ. ಈ ಕಾರಣಕ್ಕೆ ದಕ್ಷಿಣಾಯನದ `ಗ್ರಾಮಸೇವಾಸಂಘದ’ ಜತೆಗಿನ ಹೊಂದಾಣಿಕೆಯೆ ಹಲವರನ್ನು ಮೊದಲೆ ಹೊರಗಿರುವಂತೆ ಮಾಡಿತು. ಪ್ರಸನ್ನ ಅವರು ಕಾರ್ಯಕ್ರಮದ ಆರಂಭಕ್ಕೆ ಲೇಖಕರು `ಸಂಭ್ರಮದಿಂದ’ ಬರೆಯಬೇಕು ಎನ್ನುತ್ತಲೇ ಇಡೀ ದಿನದ ಗಂಭೀರತೆಗೆ ತೆಳುವಾದ ಪರದೆ ಎಳೆದು ಕುಳಿತರು. ಇಂತಹ ಕಾರಣಗಳು ಈ ಸಮ್ಮೇಳನ ಪಡೆಯಬೇಕಾಗಿದ್ದ ವ್ಯಾಪಕತೆಯನ್ನು ಗಂಭೀರತೆಯನ್ನು ಕುಬ್ಜಗೊಳಿಸಿದಂತೆ ಕಂಡಿತು.

ದೊಡ್ಡ ರಾಕ್ಷಸನಂತೆ ಬಿಂಬಿತವಾಗುತ್ತಿರುವ ಸಿಸ್ಟ್ ಶಕ್ತಿಯ ವಿರುದ್ಧ ಸಣ್ಣಪುಟ್ಟ ಸಂಘಟನೆಗಳೆಲ್ಲ ಭಿನ್ನತೆ ಮರೆತು ಕೂಡಿ ಬೃಹತ್ ಶಕ್ತಿಯಾಗಬೇಕಿರುವ ಅನಿವಾರ್ಯತೆ ಈ ಕಾಲಕ್ಕಿದೆ. ಆದರೆ ಈ ಕೂಡುವಿಕೆಗೂ ಎಚ್ಚರದ ಕಣ್ಣಿರಬೇಕು. ಕೂಡುವಿಕೆಯಂತೆ ಕಾಣುತ್ತಲೇ ಒಳಗಿಂದಲೆ ಶಕ್ತಿಯನ್ನು ದುರ್ಬಲಗೊಳಿಸಬಲ್ಲ ಆಯಾಮದ ಅಪಾಯಗಳನ್ನು ಗಮನಿಸಿ ಮುನ್ನಡೆಯಬೇಕಾಗುತ್ತದೆ. ಈ ನೆಲೆಯಲ್ಲಿ ದಕ್ಷಿಣಾಯನಕ್ಕೆ ಇದು ಪಾಠವಾಗುತ್ತದೋ, ತನ್ನ ಬಗೆಗಿನ ಕುಸಿದ ಅಪೇಕ್ಷೆಯನ್ನು ಮರುಕಟ್ಟಿಕೊಳ್ಳುತ್ತದೆಯೋ.. ಅದರ ಮುನ್ನಡೆಯನ್ನು ಕಾಯ್ದು ನೋಡಬೇಕಿದೆ.

ಈ ಬರಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ಸಂಸ್ಥೆಯದ್ದಲ್ಲ. ಈ ಸಂಬಂಧ ಚರ್ಚೆಯಲ್ಲಿ ಪಾಲ್ಗೊಳ್ಳಬಯಸುವವರು, ಆಸಕ್ತರು ತಮ್ಮ ಬರಹಗಳನ್ನು edit@thestate.news ಗೆ ಕಳುಹಿಸಿಕೊಡಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More