ಸಹಭಾಗಿ ಪತ್ರಿಕೋದ್ಯಮ| ಜನಹಿತ ಸುದ್ದಿಗೆ ಕೈ ಜೋಡಿಸಿದ ‘ಪ್ರಜಾವಾಣಿ’

ಬೆಳಕು ಚೆಲ್ಲುವಂತಹ ವರದಿಗಳನ್ನು ಯಾವುದೇ ಮಾಧ್ಯಮ ಮಾಡಿದರೂ ಅದನ್ನು ಮತ್ತೊಂದು ಮಾಧ್ಯಮ ಅನುಕರಿಸುವುದು ಉತ್ತಮ ಬೆಳವಣಿಗೆ. ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರ ಸರಳತೆ ಕುರಿತು ‘ದಿ ಸ್ಟೇಟ್‌’ ಪ್ರಕಟಿಸಿದ ವರದಿಯನ್ನೇ ‘ಪ್ರಜಾವಾಣಿ’ ದೈನಿಕವೂ ಮುಂದುವರೆಸಿದೆ

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ತಾಂತ್ರಿಕ ಸಲಹೆಗಾರ ಎಂ ಕೆ ವೆಂಕಟರಾಮು ಅವರು ರಾಜ್ಯ ಸಚಿವರು ಪಡೆಯುತ್ತಿರುವ ವೇತನ, ಇತರೆ ಆರ್ಥಿಕ ಸೌಲಭ್ಯಗಳನ್ನು ವಿನಯವಾಗಿ ನಿರಾಕರಿಸಿದ್ದ ಸಂಗತಿ ಕುರಿತು ‘ದಿ ಸ್ಟೇಟ್’ ಸೆ.೩ರಂದು ‘ಕೇವಲ ೧೦೧ ರೂಪಾಯಿ ವೇತನ ಸಾಕೆಂದ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರು’ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.

ವೆಂಕಟರಾಮು ಅವರು ತಮಗೆ ಕೊಡಲ್ಪಡುವ ವೇತನ, ಇತರೆ ಭತ್ಯೆಗಳ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಲು ತಿಳಿಸಿದ್ದನ್ನು ಪತ್ರ ಸಮೇತ ಮೊದಲ ಬಾರಿಗೆ ‘ದಿ ಸ್ಟೇಟ್’ ಬಹಿರಂಗಗೊಳಿಸಿತ್ತಲ್ಲದೆ, ಇದೊಂದು ಉತ್ತಮ ಬೆಳವಣಿಗೆ ಎಂದೂ ವರದಿಯಲ್ಲಿ ಶ್ಲಾಘಿಸಿತ್ತು. ಅಲ್ಲದೆ, ವಿಧಾನಸೌಧ ಅಂಗಳದಲ್ಲಿ ಮತ್ತು ಸಾರ್ವಜನಿಕವಾಗಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳದೇ ಸರಳ ವ್ಯಕ್ತಿತ್ವ ಹೊಂದಿರುವ ವೆಂಕಟರಾಮು ಅವರು ಹೇಗಿದ್ದಾರೆ ಎಂಬುದನ್ನೂ ಭಾವಚಿತ್ರ ಸಮೇತ ಪ್ರಕಟಿಸಿತ್ತು.

ಇಂಥ ಮಾದರಿ ವ್ಯಕ್ತಿತ್ವದ ಕುರಿತಾದ ದಿ ಸ್ಟೇಟ್ ವರದಿಯನ್ನು ಪ್ರಜಾವಾಣಿ ದೈನಿಕವೂ ಪ್ರಕಟಿಸಿದೆ. ಈ ಮೂಲಕ ಸಹಭಾಗಿ ಪತ್ರಿಕೋದ್ಯಮವನ್ನು ಮುಂದುವರೆಸಿದಂತಾಗಿದೆ.

ತಾಂತ್ರಿಕ ಸಲಹೆಗಾರ ವೆಂಕಟರಾಮು ಅವರು ತಳೆದಿರುವ ನಿರ್ಧಾರ ಅಧಿಕಾರಿಗಳ ವಲಯ ಮಾತ್ರವಲ್ಲದೆ, ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆಗೆ ಕಾರಣವಾಗಿದೆ. ಸಾಮಾಜಿಕ ಜಾಲ ತಾಣ ಮತ್ತು ಟ್ವಿಟರ್‌ನಲ್ಲಿಯೂ ಚರ್ಚೆಗೆ ‘ದಿ ಸ್ಟೇಟ್‌’ ವರದಿ ಕಾರಣವಾಗಿದೆ.

ತಾಂತ್ರಿಕ ಸಲಹೆಗಾರರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ಒದಗಿಸಲಾಗಿದೆ. ವೇತನವೂ ಸೇರಿದಂತೆ ಇತರೆ ಭತ್ಯೆಗಳ ಮೊತ್ತವೇ ತಿಂಗಳಿಗೆ ೩ ಲಕ್ಷಕ್ಕೂ ಹೆಚ್ಚಿನದಾಗಿದೆ. ಆದರೆ ಎಂ ಕೆ ವೆಂಕಟರಾಮು ಅವರು ತಮಗೆ ಸಿಗುವ ಸಂಪುಟ ದರ್ಜೆ ವೇತನವೂ ಸೇರಿದಂತೆ ಇತರೆ ಎಲ್ಲಾ ಆರ್ಥಿಕ ಸೌಲಭ್ಯವನ್ನು ಪಡೆಯಲು ಗೌರವದಿಂದಲೇ ನಿರಾಕರಿಸಿದ್ದ ಸಂಗತಿಯನ್ನು ವರದಿ ಮೂಲಕ ಬೆಳಕಿಗೆ ಬಂದಿತ್ತು.

ರಾಜ್ಯ ಸಚಿವರ ವೇತನ ಸೇರಿದಂತೆ ಇನ್ನಿತರೆ ಸವಲತ್ತುಗಳನ್ನು ನಿರಾಕರಿಸಿ ಕೇವಲ ೧೦೧ ರೂ.ಗಳನ್ನು ಪಡೆಯಲು ನಿರ್ಧರಿಸಿದ್ದಾರೆ. ಈ ನಿದರ್ಶನ ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. ವೇತನ ರೂಪದಲ್ಲಿ ಸಾಂಕೇತಿಕವಾಗಿ ಕೇವಲ ೧೦೧ ರೂ.ಗಳನ್ನು ಪಡೆದು ರಾಜ್ಯ ಸಚಿವರ ಸ್ಥಾನಮಾನದಿಂದ ಸಿಗುವ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಜಮೆ ಮಾಡಲು ಪತ್ರ ಬರೆದಿದ್ದಾರೆ. ವೇತನ, ಇಂಧನ ಭತ್ಯೆ, ಅತಿಥೇಯ ಭತ್ಯೆ, ಮನೆ ಬಾಡಿಗೆ ಭತ್ಯೆಯೂ ಆರ್ಥಿಕ ಸೌಲಭ್ಯದಲ್ಲಿ ಒಳಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

“ನಾನು ಈ ಹಿಂದೆಯೇ ತಿಳಿಸಿರುವಂತೆ ನನಗೆ ಸಾಂಕೇತಿಕವಾಗಿ ರೂ.೧೦೧/-ಗಳನ್ನು ವೇತನ ರೂಪದಲ್ಲಿ ನೀಡಿ, ರಾಜ್ಯ ಸಚಿವರ ಸ್ಥಾನಮಾನದಿಂದ ಒದಗುವ ಮಿಕ್ಕ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಅಂದರೆ ವೇತನ, ಇಂಧನ ಭತ್ಯೆ, ಆತಿಥೇಯ ಭತ್ಯೆ, ಮನೆ ಬಾಡಿಗೆ ಭತ್ಯೆ ಇತ್ಯಾದಿಗಳನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಜಮೆ ಮಾಡುವಂತೆ ಮತ್ತೊಮ್ಮೆ ಕೋರುತ್ತೇನೆ. ಕಾರ್ಯಸ್ಥಾನದಿಂದ ಪ್ರವಾಸ ಮಾಡಿದ ಸಂದರ್ಭಗಳಲ್ಲಿ ಪ್ರವಾಸ ಭತ್ಯೆ ಮತ್ತು ದಿನಭತ್ಯೆಗಳನ್ನು ಮಾತ್ರ ಸ್ವೀಕರಿಸಲು ಸಮ್ಮತಿಸಿರುತ್ತೇನೆ,” ಎಂದು ವೆಂಕಟರಾಮು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಅಷ್ಟೇ ಅಲ್ಲ, ರಾಜ್ಯ ಸಚಿವರ ಸ್ಥಾನಮಾನಕ್ಕೆ ಲಭ್ಯವಾಗುವ ಎಲ್ಲಾ ಸವಲತ್ತುಗಳ ವಿವರಗಳನ್ನು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ(ಲೆಕ್ಕಪತ್ರ)ಶಾಖೆಗೆ ಒದಗಿಸಿ ಬಿಲ್‌ ನ್ನು ತಯಾರಿಸಿ ಪಾವತಿಸಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಿದ ಮೊತ್ತದ ವಿವರಗಳನ್ನು ಹಿಂಬರಹದ ಮೂಲಕ ಕಾಲಕಾಲಕ್ಕೆ ಒದಗಿಸಬೇಕು ಎಂದು ಪತ್ರದಲ್ಲಿ ಕೋರಿದ್ದರು.

ರಫೇಲ್ ಟ್ವಿಸ್ಟ್ | ಮೋದಿ ಸರ್ಕಾರದ ‘ರಿಲಯನ್ಸ್’ ಸೂಚನೆ ಕುರಿತು ಬಾಯಿಬಿಟ್ಟ ಹೊಲಾಂದ್
ಯುವ ಮತದಾರರನ್ನು ಸೆಳೆಯುವ ಅಸ್ತ್ರ ಆಗಲಿದೆಯೇ ಸರ್ಜಿಕಲ್‌ ದಾಳಿ ದಿನಾಚರಣೆ?
ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು
Editor’s Pick More