ಮಾರ್ನಿಂಗ್ ಡೈಜಿಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಆರೋಗ್ಯ ಕರ್ನಾಟಕ; ಸಿಎ‌ಂ ಕುಮಾರಸ್ವಾಮಿ ಸಭೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಹು ಚರ್ಚಿತ ‘ಆರೋಗ್ಯ ಕರ್ನಾಟಕ’ ಯೋಜನೆ ಕುರಿತು ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತ ಹಾಗೂ ಎಪಿಎಲ್ ಕುಟುಂಬದವರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಪ್ರಸಕ್ತ ವರ್ಷದಲ್ಲಿ ‘ಆರೋಗ್ಯ ಕರ್ನಾಟಕ’ ಜಾರಿಗೊಳಿಸಲಾಗಿದೆ.

ಇಂದು ಪಾಕಿಸ್ತಾನ ರಾಷ್ಟ್ರಪತಿ ಚುನಾವಣೆ

ಕಳೆದ ತಿಂಗಳಷ್ಟೇ ಸಾರ್ವತ್ರಿಕ ಚುನಾವಣೆ ಕಂಡ ಪಾಕಿಸ್ತಾನ ಮಂಗಳವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಿದ್ದವಾಗಿದೆ. ಅಧಿಕಾರದಲ್ಲಿರುವ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಭ್ಯರ್ಥಿ ಆರಿಫ್ ಅಲ್ವಿ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಚೌಧರಿ ಐತಾಜ್ ಹಸನ್ ಮತ್ತು ಜಮಿಯತ್-ಇ-ಉಲೀಮಾ ಪಕ್ಷದ ಮುಖ್ಯಸ್ಥ ಮೌಲಾನಾ ಫಾಜಲ್-ಉರ್-ರೆಹಮಾನ್ ಅವರು ಕೂಡ ಕಣದಲ್ಲಿದ್ದಾರೆ.ಈಗಿರುವ ರಾ‍ಷ್ಟ್ರಪತಿ ಮಮ್ನೂನ್ ಹುಸೇನ್ ಅವರ ಅಧಿಕಾರಾವಧಿ ಮುಂದಿನ ಸೆ.೮ ಕ್ಕೆ ಮುಗಿಯುತ್ತಿದೆ.

ಮಹಿಳಾ ಮೀಸಲಾತಿ: ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ ಪ್ರತಿಭಟನೆ

ಮಹಿಳಾ ಮೀಸಲಾತಿ ಕುರಿತಂತೆ ಕೇಂದ್ರ ಸರ್ಕಾರದ ನಡೆದುಕೊಳ್ಳುತ್ತಿರುವ ನಡೆ ವಿರುದ್ಧ ಸಿಪಿಐ ( ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮಂಗಳವಾರದಿಂದ ಎರಡು ದಿನಗಳ ಪ್ರತಿಭಟನೆಗೆ ಮುಂದಾಗಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಮಹಿಳೆ, ರೈತರು ಹಾಗೂ ಕಾರ್ಮಿಕರ ಬದುಕು ನರೇಂದ್ರ ಮೋದಿ ಸರ್ಕಾರದದಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿಪಿಐ ಆರೋಪಿಸಿದೆ.

ಹೈದರಾಬಾದ್ ಸ್ಫೋಟ ಪ್ರಕರಣದ ತೀರ್ಪು ಇಂದು

ಹೈದರಾಬಾದ್ನ ಲುಂಬಿಣಿ ಪಾರ್ಕ್‌ ಮತ್ತು ಗೋಕುಲ್ ಚಾಟ್ ಬಳಿ ನಡೆದ, ೪೪ ಜನರ ಬಲಿ ಪಡೆದಿದ್ದ ೨೦೦೭ರ ಅವಳಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಮಂಗಳವಾರ ಪ್ರಕಟವಾಗಲಿದೆ. ಹೆಚ್ಚುವರಿ ಮೆಟ್ರೊಪಾಲಿಟಿನ್ ಸೆಷೆನ್ಸ್ ನ್ಯಾಯಾಧೀಶ ಟಿ ಶ್ರೀನಿವಾಸ್ ರಾವ್ ಪ್ರಕರಣದ ತೀರ್ಪು ನೀಡಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮೊಹಮ್ಮದ ಅಕ್ಬರ್, ಇಸ್ಮಾಯಿಲ್ ಚೌಧರಿ, ಅನೀಕ್ ಶಫೀಕ್ ಸಯೀದ್, ಫಾರುಕ್ ಶರ್ಫುದ್ದೀನ್ ತರ್ಕಾಶ, ಮೊಹಮ್ಮದ್ ಸಾದಿಕ್ ಇಸ್ರಾರ್ ಅಹಮ್ಮದ ಶೇಖ್ ಹಾಗೂ ತಾರಿಕ್ ಅಂಜುಮ್‌ರನ್ನು ಬಂಧಿಸಿದ್ದಾರೆ.

ಡೆಲ್ ಪೊಟ್ರೊ ಮತ್ತು ಜಾನ್ ಇಸ್ನೆರ್ ಕಾದಾಟ ಇಂದು

ಟೆನಿಸ್ ಇತಿಹಾಸದಲ್ಲೇ ಕೆಲವು ಸುದೀರ್ಘ ಆಟದ ದಾಖಲೆ ಬರೆದಿರುವ ಅಮೆರಿಕ ಟೆನಿಸಿಗ ಜಾನ್ ಇಸ್ನೆರ್, ಇಂದು ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ವಿರುದ್ಧ ಸೆಣಸಲಿದ್ದಾರೆ. ರಾತ್ರಿ ೧೧.೦೦ಕ್ಕೆ ಆರಂಭವಾಗಲಿರುವ ಅಮೆರಿಕ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಈ ಇಬ್ಬರೂ ಕಾದಾಡಲಿದ್ದಾರೆ. ಏತನ್ಮಧ್ಯೆ, ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅಮೆರಿಕ ಆಟಗಾರ್ತಿ ಸ್ಲೊವಾನಿ ಸ್ಟೀಫನ್ಸ್ ವಿರುದ್ಧ ಲಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೋವಾ ವಿರುದ್ಧ ಸೆಣಸಲಿದ್ದಾರೆ. ಹಾಲಿ ಚಾಂಪಿಯನ್ ಸ್ಟೀಫನ್ಸ್ ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿದ್ದು, ಸತತ ಎರಡನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ರಫೇಲ್ ಟ್ವಿಸ್ಟ್ | ಮೋದಿ ಸರ್ಕಾರದ ‘ರಿಲಯನ್ಸ್’ ಸೂಚನೆ ಕುರಿತು ಬಾಯಿಬಿಟ್ಟ ಹೊಲಾಂದ್
ಯುವ ಮತದಾರರನ್ನು ಸೆಳೆಯುವ ಅಸ್ತ್ರ ಆಗಲಿದೆಯೇ ಸರ್ಜಿಕಲ್‌ ದಾಳಿ ದಿನಾಚರಣೆ?
ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು
Editor’s Pick More