ಬಿಜೆಪಿ ವಿರುದ್ಧ ‘ಧಿಕ್ಕಾರ’ ಕೂಗಿ ಸೆರೆಯಾಗಿದ್ದ ವಿದ್ಯಾರ್ಥಿನಿಗೆ ಜಾಮೀನು

“ಫ್ಯಾಸಿಸ್ಟ್ ಬಿಜೆಪಿ ಸರ್ಕಾರ” ಎಂದು ಘೋಷಣೆ ಕೂಗಿದ ಕಾರಣಕ್ಕೆ ಬಂಧಿಸಲಾದ ಲೂಯಿಸ್ ಸೂಫಿಯಾರನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಟೀಕಿಸುವ ಹಕ್ಕಿದೆ’ ಎಂಬ ಪ್ರಧಾನಿ ಮೋದಿ ಟ್ವೀಟ್ ಮತ್ತೆ ಚಾಲ್ತಿಗೆ ಬಂದಿದೆ

ವಿಮಾನದಲ್ಲಿ ಪಯಣಿಸುತ್ತಿದ್ದ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಎದುರು ‘ಫ್ಯಾಸಿಸ್ಟ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ’ ಎಂದು ಕೂಗಿದ 28 ವರ್ಷದ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದ್ದು 15 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ನಂತರ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷೆ ಮತ್ತು ವಿದ್ಯಾರ್ಥಿನಿ ವಿಮಾನನಿಲ್ದಾಣದಲ್ಲಿ ತಮ್ಮ ಬ್ಯಾಗ್‌ಗಳನ್ನು ಪಡೆದುಕೊಳ್ಳಲು ನಿಂತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಧಿಕ್ಕಾರ ಕೂಗಿದ್ದಾಳೆ. ಈ ಹಿನ್ನೆಲೆಯಲ್ಲಿ ವಾಕ್‌ಸ್ವಾತಂತ್ರ್ಯದ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆ ನಡೆದಿದೆ.

ಕೆನಡಾದಿಂದ ತಾಯ್ನಾಡಿಗೆ ಹಿಂತಿರುಗುತ್ತಿದ್ದ ಲೂಯಿಸ್ ಸೂಫಿಯಾ ಚೆನ್ನೈ ತಲುಪಿ ಅಲ್ಲಿಂದ ಇಂಡಿಗೊ ವಿಮಾನದ ಮೂಲಕ ಪಯಣಿಸಿ ತನ್ನ ಪೋಷಕರನ್ನು ಸೇರಿಕೊಳ್ಳುವವರಿದ್ದರು. ತಮಿಳುಸೈ ಅವರು ವಿಮಾನ ನಿಲ್ದಾಣದಲ್ಲಿ ದೂರು ಸಲ್ಲಿಸಿದ ಬಳಿಕ ಸೋಫಿಯಾವನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಫಿಯಾರನ್ನು ಮೊದಲು 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೋಫಿಯಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈಗ ಅವರಿಗೆ ಜಾಮೀನು ದೊರೆತಿದೆ. ತಮಿಳಿಸೈ ದೂರಿನ ಅನ್ವಯ ತೂತುಕುಡಿ ಅಖಿಲ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಚಾರ ನಡೆಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಮತ್ತು ಶಾಂತಿ ಕದಡಿದ ಆರೋಪ ಹಾಗೂ ತಮಿಳುನಾಡು ನಗರ ಪೊಲೀಸ್ ಕಾಯ್ದೆ 75ನೇ ವಿಧಿಯಡಿ ಆಕೆಯನ್ನು ಬಂಧಿಸಲಾಗಿದೆ,” ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಈ ನಡುವೆ ಸೋಫಿಯಾರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, “ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟೀಕಿಸುವ ಹಕ್ಕಿದೆ” ಎಂದು ಇದೇ ವರ್ಷ ಏಪ್ರಿಲ್‌ನಲ್ಲಿ ಮಾಡಿರುವ ಟ್ವೀಟ್ ಮತ್ತೆ ಚಾಲ್ತಿಗೆ ಬಂದಿದೆ. ಪತ್ರಕರ್ತರಾದ ಶಿಲ್ಪಾ ನಾಯರ್ ಅವರೂ ಪ್ರಧಾನಿ ಟ್ವೀಟನ್ನು ನೆನಪಿಸಿಕೊಂಡು, “ಸೋಫಿಯಾ ಎನ್ನುವ ವಿದ್ಯಾರ್ಥಿನಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿ ೧೫ ದಿನಗಳ ಕಾಲ ನ್ಯಾಯಾಲಯ ಬಂಧನಕ್ಕೆ ಒದಗಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್| ತೂತುಕುಡಿ ಬಗ್ಗೆ ಮೌನ ವಹಿಸಿದ ಪ್ರಧಾನಿ, ಭೇಟಿ ನೀಡದ ಸಿಎಂ!

ಸೋಫಿಯಾ ತಂದೆ ಡಾ ಎ ಎ ಸಾಮಿ, ನಿವೃತ್ತ ಸರ್ಕಾರಿ ವೈದ್ಯರಾಗಿದ್ದು, “ವಿಮಾನ ತೂತುಕುಡಿಗೆ ಬಂದಿಳಿದ ನಂತರ ಘಟನೆ ನಡೆದಿದೆ,” ಎಂದು ತಿಳಿಸಿದರು.

“ಚೆನ್ನೈ ವಿಮಾನ ನಿಲ್ದಾಣದಲ್ಲಿ ನಾನು ಮತ್ತು ನನ್ನ ಹೆಂಡತಿ ಮಾಧುರಿ ಮಗಳನ್ನು ಬರಮಾಡಿಕೊಂಡ ಬಳಿಕ ತೂತುಕುಡಿಯತ್ತ ಪಯಣಿಸಿದೆವು. ವಿಮಾನ ನಿಲ್ದಾಣದಲ್ಲಿ ತಮಿಳಿಸೈ ಅವರನ್ನು ಕಂಡ ಇವಳು (ಸೂಫಿಯಾ) ‘ಫ್ಯಾಸಿಸ್ಟ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ’ ಎಂದು ಕೂಗಿದಳು. ಅದರಾಚೆಗೆ ಒಂದು ಪದವನ್ನೂ ಆಡಲಿಲ್ಲ. ಟರ್ಮಿನಲ್‌ಗೆ ಬಂದ ನಂತರ ತಮಿಳಿಸೈ ಮತ್ತು ಅವರನ್ನು ಸ್ವಾಗತಿಸಲು ಬಂದಿದ್ದ ಹತ್ತು ಮಂದಿ ನಮ್ಮನ್ನು ಸುತ್ತುವರಿದರು. ನನ್ನ ಮಗಳನ್ನು ಕೆಟ್ಟ ಪದಗಳಿಂದ ನಿಂದಿಸಿದರು. ನಂತರ ವಿಮಾನ ನಿಲ್ದಾಣದ ಪೊಲೀಸರು ನಮ್ಮ ಸಹಾಯಕ್ಕೆ ಬಂದು ಕೋಣೆಯೊಂದರಲ್ಲಿ ನಮ್ಮನ್ನು ಸುರಕ್ಷಿತವಾಗಿ ಇರಿಸಿದರು” ಎಂದು ಅವರು ಹೇಳಿದರು.

65 ವರ್ಷ ವಯಸ್ಸಿನ ಸಾಮಿ, “ಘಟನೆ ಬಳಿಕ ತಮಿಳಿಸೈ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿರುವುದು ಪೊಲೀಸರ ಮೂಲಕ ತಿಳಿಯಿತು. “ಜಾಮೀನು ಸಿಗಲಿದೆ ಪೊಲೀಸ್ ಠಾಣೆಗೆ ಬನ್ನಿ” ಎಂದು ಅಧಿಕಾರಿಗಳು ಕರೆದರು. ಆದರೆ, “ಮೇಲಿನಿಂದ ಕರೆಗಳು ಬಂದವು. ಮಗಳನ್ನು ಸೆರೆಮನೆಯಲ್ಲೇ ಇರಿಸುವ ಪ್ರಯತ್ನಗಳು ನಡೆಯುತ್ತಿವೆ,” ಎಂದರು. ತಮಿಳಿಸೈ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಲು ಸೋಮವಾರ ಮಧ್ಯಾಹ್ನದವರೆಗೂ ಡಾ ಸಾಮಿ ಯತ್ನಿಸಿದರು.

ತಮಿಳುನಾಡಿನ ವಕೀಲರಾದ ಸುಚಿತ್ರಾ ವಿಜಯನ್ ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿ ಅಧ್ಯಕ್ಷೆ ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡಿ ವಿದ್ಯಾರ್ಥಿನಿ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ವಿಮಾನ ನಿಲ್ದಾಣದೊಳಗೆ ಸೋಫಿಯಾ “ಫ್ಯಾಸಿಸ್ಟ್ ಬಿಜೆಪಿಗೆ ಧಿಕ್ಕಾರ’ ಎನ್ನುವ ಘೋಷಣೆ ಕೂಗಿದ್ದಕ್ಕಾಗಿ ಬಿಜೆಪಿ ಅಧ್ಯಕ್ಷೆ ಆಕೆಯ ಮೇಲೆ ದೂರು ನೀಡಿದ್ದಾರೆ. ಆದರೆ ಎಲ್ಲೂ ದೈಹಿಕವಾಗಿ ಸ್ಪರ್ಶಿಸುವ ವಿಚಾರ ಉಲ್ಲೇಖವಾಗಿಲ್ಲ. ಹಾಗಿದ್ದರೂ ‘ತನ್ನ ಜೀವಕ್ಕೆ ಬೆದರಿಕೆ ಒಡ್ಡಲಾಗಿದೆ’ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ತಮಿಳಿಸೈ, “ಮುಗ್ಧವಾಗಿ ತೋರುತ್ತಿದ್ದ ಚಿಕ್ಕ ಹುಡುಗಿಯೊಬ್ಬಳು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದಳು. ನಾನು ಸೀಟ್ ಸಂಖ್ಯೆ 3ರಲ್ಲಿ ಮತ್ತು ಆಕೆ ಸೀಟ್ ಸಂಖ್ಯೆ 8ರಲ್ಲಿ ಕುಳಿತಿದ್ದೆವು. ನಿಲ್ದಾಣದಲ್ಲಿ ವಿಮಾನ ಇಳಿದ ನಂತರ ಆಕೆ ಇದ್ದಕ್ಕಿದ್ದಂತೆ ಫ್ಯಾಸಿಸ್ಟ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದಳು. ಆಕೆ ಕೂಡ ನನ್ನೊಟ್ಟಿಗೆ ಮಾತು ಬೆಳೆಸಿದಳು,” ಎಂದು ಹೇಳಿದ್ದಾರೆ.

“ಫ್ಯಾಸಿಸ್ಟ್ ಎನ್ನುವ ಪದ ಬಳಸುವ ವ್ಯಕ್ತಿ ಮುಗ್ಧೆಯಾಗಿರುವುದು ಸಾಧ್ಯವಿಲ್ಲ ಅನ್ನಿಸುತ್ತದೆ. ಯಾವುದೇ ಮುಗ್ಧ ಹುಡುಗಿ ಅಂತಹ ಪದ ಬಳಸುವುದಿಲ್ಲ. ಅದನ್ನು ಪ್ರಶ್ನಿಸಿದೆ. ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಆಕೆ ಹೇಳಿದಳು. ಮುಷ್ಠಿಯೆತ್ತಿ ಆಕೆ ಫ್ಯಾಸಿಸ್ಟ್ ಎಂದು ಕೂಗಿದಳು. ನಾನು ಈ ಭಯೋತ್ಪಾದಕಿಯನ್ನು ಸುಮ್ಮನೆ ಬಿಡಬಾರದು ಎಂದುಕೊಂಡು ದೂರು ದಾಖಲಿಸಿದೆ” ಎಂದು ಹೇಳಿದರು.

ಬಿಜೆಪಿ ಬೆಂಬಲಿಗರು ಸೋಫಿಯಾಗೆ ಬೆದರಿಕೆ ಒಡ್ಡಿದ್ದಾರೆ ಎಂದು ಸೂಫಿಯಾ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ “ನನ್ನನ್ನು ಕರೆದೊಯ್ಯಲು ಕೆಲವು ಕಾರ್ಯಕರ್ತರು ಕಾಯುತ್ತಿದ್ದರು. ಮಾತಿಗೆ ಮಾತು ಬೆಳೆದಂತೆ ಅವರು ಕೂಡ ಆಕೆಯನ್ನು ಪ್ರಶ್ನಿಸಿದರು. ನಮ್ಮ ಸರ್ಕಾರವನ್ನು ಆಕೆ ನಿಂದಿಸಿದ್ದು ನನಗೆ ಸರಿ ಎನಿಸಲಿಲ್ಲ. ಒಂದು ಹಂತದಲ್ಲಿ ಆಕೆ, ತಾನು ಘೋಷಣೆ ಕೂಗುತ್ತಿರುವುದು ಬಿಜೆಪಿ ಸರ್ಕಾರದ ವಿರುದ್ಧವೇ ಹೊರತು ನಿಮ್ಮ ವಿರುದ್ಧವಲ್ಲ ಎಂದಳು. ನಾನು ಅವಳೊಂದಿಗೆ ವಾಗ್ವಾದಕ್ಕಿಳಿದೆ. ಪೊಲೀಸರು ಕೂಡ ಮಧ್ಯಪ್ರವೇಶಿಸಿ ನನ್ನನ್ನು ಸಮಾಧಾನ ಮಾಡಿದರು. ನನ್ನ ಸರ್ಕಾರವನ್ನು ಈ ರೀತಿ ಪ್ರಶ್ನಿಸಿದರೆ ಸುಮ್ಮನೆ ಇರಲಾಗದು ಎಂದು ಅವರಿಗೆ ತಿಳಿಸಿದೆ,” ಎಂದು ಹೇಳಿದರು.

“ತೂತುಕುಡಿಯಲ್ಲಿ ಇತ್ತೀಚೆಗೆ ನಡೆದ ಸ್ಟೆರ್ಲೈಟ್ ಪ್ರತಿಭಟನೆಯಲ್ಲಿ (ಇತ್ತೀಚೆಗೆ ತೂತುಕುಡಿಯಲ್ಲಿ ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿ ಹಲವು ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದರು) ಭಾಗವಹಿಸಿದವರು ಪೊಲೀಸ್ ಠಾಣೆಗೆ ಧಾವಿಸಿ ಆಕೆಯ ಬೆಂಬಲಕ್ಕೆ ನಿಂತರು ಎಂದು ಸಂಜೆ ವೇಳೆಗೆ ಗೊತ್ತಾಯಿತು. ಅಲ್ಲದೆ ಆಕೆಗೆ ಕೆನಡಾದ ಕೆಲವು ಗುಂಪುಗಳೊಂದಿಗೆ ಸಂಪರ್ಕ ಇದೆ ಎಂದು ತಿಳಿದುಬಂತು,” ಎಂದು ತಮಿಳಿಸೈ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪರ ವಿರೋಧದ ಚರ್ಚೆಯಾಗಿದೆ. ಹಲವು ಬಿಜೆಪಿ ಬೆಂಬಲಿಗರು ತಮಿಳಿಸೈ ಅವರ ಕ್ರಮವನ್ನು ಬೆಂಬಲಿಸಿದ್ದಾರೆ. ಮುಖ್ಯವಾಗಿ ಉದ್ಯಮಿ ಮಾಧವನ್ ನಾರಾಯಣನ್, “ಸೋಫಿಯಾ ಅವರು ದೇಶದಲ್ಲಿ ಸಾಂಸ್ಕೃತಿಕ ಪ್ರಜಾಪ್ರಭುತ್ವವಿಲ್ಲ ಎನ್ನುವುದಕ್ಕೆ ಸಾಕ್ಷಿ” ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಹಾಗೂ ನಾರಾಯಣ್ ಲಕ್ಷ್ಮಣ್ ಮೊದಲಾದವರು ಸೋಫಿಯಾ ವಿರುದ್ಧ ಬಿಜೆಪಿ ದೂರು ದಾಖಲಿಸಿರುವುದನ್ನು ವಿರೋಧಿಸಿದ್ದಾರೆ. “ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದು ಯಾವಾಗಿನಿಂದ ಅಪರಾಧವಾಗಿದೆ? ತಮಿಳುನಾಡಿನ ಪೊಲೀಸರು ಮತ್ತು ಬಿಜೆಪಿ ಅಧ್ಯಕ್ಷರಿಗೆ ಸಂವಿಧಾನದ ಪ್ರತಿಯನ್ನು ಕಳುಹಿಸಿ” ಎಂದು ಟ್ವೀಟ್ ಮಾಡಿದ್ದಾರೆ ರಾಜ್‌ದೀಪ್ ಸರ್‌ದೇಸಾಯಿ. “ಧಿಕ್ಕಾರ ಕೂಗುವುದು ಬಿಜೆಪಿ ತಮಿಳುನಾಡನ್ನು ‘ಕೇಸರೀಕರಣ ಮಾಡಲಾಗಿದೆ” ಎಂದು ಹೇಳುವಷ್ಟು ಕೆಟ್ಟ ನಡವಳಿಕೆ ಆಗಲು ಸಾಧ್ಯವಿಲ್ಲ ಎಂದು ನಾರಾಯಣ್ ಲಕ್ಷ್ಮಣ್‌ ಟ್ವೀಟ್ ಮಾಡಿದ್ದಾರೆ.

ಹಾಗೆಯೇ ಕೆಲವರು ವಿಮಾನ ನಿಲ್ದಾಣದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

niyama

ಆದರೆ ಬಿಜೆಪಿಯ ಅಥವಾ ಇತರರ ಹೇಳಿಕೆಗಳಿಂದ ಅಥವಾ ಧಿಕ್ಕಾರ ಕೂಗುವುದರಿಂದ ಯಾರಿಗೂ ಯಾವುದೇ ತೊಂದರೆಯಾಗದು ಎಂದು ಸಾಮಿ ಪ್ರತಿಕ್ರಿಯಿಸಿದ್ದಾರೆ. “ಪರಿಸರವನ್ನು ಮಲಿನಗೊಳಿಸುವ ಅಪಾಯಕಾರಿ ಕಾರ್ಖಾನೆ ಇದ್ದಾಗ ಜನ ಅದನ್ನು ವಿರೋಧಿಸುತ್ತಾರೆ. ಅವರು ಹೇಗೆ ಬೇಕಾದರೂ ಕರೆಯಲಿ ನಾನದಕ್ಕೆ ಚಿಂತೆ ಮಾಡುವುದಿಲ್ಲ. ಬರೆಯುವುದರಲ್ಲಿ ಆಸಕ್ತಿ ಇರುವ ಅವಳು (ಸೂಫಿಯಾ) ಈ ಹಿಂದೆ ಕೂಡ ಸ್ಟೆರ್ಲೈಟ್ ವಿರುದ್ಧ ಲೇಖನಗಳನ್ನು ಬರೆದಿದ್ದಳು. ಅವಳ ಸಂಶೋಧನಾ ಕ್ಷೇತ್ರ ಭೌತ ವಿಜ್ಞಾನ ಮತ್ತು ಗಣಿತವಾದರೂ ಬರೆಯಲು ಆಕೆಗೆ ಆಸಕ್ತಿ,” ಎಂದು ಅವರು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More